ಹೋರಾಟಗಾರರ ಆಶ್ರಯದಾತೆಯಾದ ಅಭಿನೇತ್ರಿ ರೆಹಮಾನವ್ವ ಕಲ್ಮನಿ,ನಾಟಕಕಾರ ಧುತ್ತರಗಿ
ದನಕಾಯುವ ಹುಡುಗಿ ರೆಹಮಾನವ್ವ ನಟಿಯಾದ ಕಥೆ ಅದೊಂದು ಚರಿತ್ರೆ ಎಂದೇ ಬಾಸವಾಗುವ ವಿದ್ಯಮಾನ. ಅದೊಮ್ಮೆ ಕಿತ್ತೂರ ಚೆನ್ನಮ್ಮ ಪಾತ್ರ ನಿರ್ವಹಿಸುವ ನಟಿ ಕೈಕೊಟ್ಟು ಪ್ರದರ್ಶನದ ದಿನ ಬಾರದಿದ್ದಾಗ, ರೆಹಮಾನವ್ವ ಕಲ್ಮನಿ ಆ ಪಾತ್ರ ಅಭಿನಯಿಸಿ ಸೈ ಎನಿಸಿಕೊಂಡಿದ್ದು ಇತಿಹಾಸ.
ಬಡತನ, ಹಸಿವು ಒಡಲಲ್ಲಿ ಕಟ್ಟಿಕೊಂಡು ರಂಗಭೂಮಿಯಲ್ಲಿ ಹೆಜ್ಜೆಯೂರಿದ ರೆಹಮಾನವ್ವ ರಂಗಭೂಮಿ ತಂದೊಡ್ಡಿದ ಸಂಕಟಗಳನ್ನು ದಿನ ದಿನಾ ಮೀರುತ್ತ ನಡೆದರು.
ಹೈದರಾಬಾದ ಕರ್ನಾಟಕ ವಿಮೋಚನೆ ಹೋರಾಟ ಮಾಡುತ್ತಿದ್ದ ಹೋರಾಟಗಾರರಿಗೆ ಮಹಾಮ್ಮಾಯಾ ನಾಟ್ಯ ಸಂಘ ಕುಕನೂರು ಹೆಸರಿನಲ್ಲಿ ಕಟ್ಟಿ ಅವರಿಗೆ ಆಶ್ರಯ ನೀಡಿದ್ದು ಕಡಿಮೆ ಸಾಹಸದ ಕೆಲಸವೇನು? ಅವರಿಗಿದ್ದ ನೆಲದ ಪ್ರೇಮ ಅಗಾಧವಾಗಿತ್ತು. ಮಹಾಮ್ಮಾಯಾ ನಾಟ್ಯ ಸಂಘ ಮುಂದೆ ಅವರ ಮಗಳ ಹೆಸರಿನೊಂದಿಗೆ ಲಲಿತಾ ಕಲಾ ನಾಟ್ಯ ಸಂಘ ಕುಕನೂರು ಅಂತಾಗಿ ಒಳ್ಳೆಯ ಹೆಸರು ಪಡೆಯಿತು
ಚಿಕ್ಕೇನಕೊಪ್ಪದ ಹವ್ಯಾಸಿ ಕಲಾತಂಡದಿಂದ ಶಿವಯೋಗಿ ಸಿದ್ಧರಾಮ ನಾಟಕ ಸೊಲ್ಲಾಪುರದಲ್ಲಿ ಪ್ರಯೋಗ ಮಾಡಿದ್ದು ಇದೇ ರೆಹಮಾನವ್ವ.
ತಳಕಲ್ ವೆಂಕರೆಡ್ಡಿ ನಾಟಕ ಕಂಪನಿ, ಶಾರದಾ ಸಂಗೀತ ನಾಟಕ ಮಂಡಳಿ ಗೋಕಾಕ, ಕಲಾವೈಭವ ನಾಟ್ಯ ಸಂಘ ಏಣ್ಗಿ , ನಾಟ್ಯಸಂಘ ಹಂದಿಗನೂರ ಸಿದ್ಧರಾಮಪ್ಪನವರ ಕಂಪನಿ, ಧುತ್ತರಗಿ ನಾಟಕ ಸಂಘ, ಹೀಗೆ ಅಂದಿನ ರಂಗಭೂಮಿಯ ದಿಗ್ಗಜ್ಜರ ನಾಟಕ ಕಂಪನಿಗಳಲೆಲ್ಲಾ ಅಭಿನಯಿಸಿದ ಅಭಿನೇತ್ರಿ ಇವರು
ಅವರ ರಂಗಭೂಮಿ ಸೇವೆಗೆ 1991 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಸಿಕ್ಕಿತು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಉರ್ದು ಪ್ರಭಾವವಿರುವ ಅಂದಿನ ಹೈದರಾಬಾದ ಕರ್ನಾಟಕದಲ್ಲಿ ನಾಟಕ ಕಂಪನಿ ಆರಂಭಿಸಿ, ಆ ನಾಟಕ ಸಂಘ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತ ಈ ನೆಲದ ಹೋರಾಟಗಾರರಿಗೆ ಆಶ್ರಯ ಕಲ್ಪಿಸಿದ್ದು ನಿಜಕ್ಕೂ ಚರಿತ್ರೆಯಲ್ಲಿ ಉಳಿಯಬೇಕಾದ ಮಹತ್ವದ ಸಂಗತಿ.
ಅಂತರ್ಧರ್ಮಿಯ ಮದುವೆಯಾಗಿದ್ದ ರೆಹಮಾನವ್ವ ಪತಿ ನಂದಪ್ಪ ಚಿಕ್ಕೇನಕೊಪ್ಪ ಹಿರಿಯ ಮಗ ಬಾಬಣ್ಣ ಕಲ್ಮನಿ, ಹಿರಿಯ ಮಗಳು ಲಲಿತಾ ಕಲ್ಮನಿ, ಎರಡನೇ ಮಗ ಉಮೇಶ ಕಲ್ಮನಿ, ಕಿರಿಯ ಮಗ ಮಂಜುಳಾ ಕಲ್ಮನಿ, ಕಿರಿಯ ಮಗ ಮಹ್ಮದ ರಫಿ ಮುನ್ನಾ ಕಲ್ಮನಿ, ಹೀಗೆ ಇಡೀ ಕುಟುಂಬವೇ ರಂಗಭೂಮಿಯಲ್ಲಿ ಕಲಾಸೇವೆ ಮಾಡಿದ್ದೊಂದು ವಿಶೇಷ ಸಂಗತಿ..
ಯಲಬುರ್ಗಾ ತಾಲೂಕ ಬೋರ್ಡ ಸದಸ್ಯರಾಗಿ, ಕರ್ನಾಟಕ ನಾಟಕ ಅಕಾಡಮಿಯಿಂದ ಗೌರವ ಪ್ರಶಸ್ತಿ ಪಡೆದಿದ್ದ ರೆಹಮಾನವ್ವ ಕಲ್ಮನಿ 1993 ರಲ್ಲಿ ಕೊನೆಯುಸಿರೆಳೆದರು.
ನಾಟಕಕಾರ ಧುತ್ತರಗಿ
ಪುಂಡಲೀಕಪ್ಪ ಬಸನಗೌಡ ಧುತ್ತರಗಿ ಅಂದರೆ ಯಾರು ಅನ್ನಬಹುದು ಆದರೆ ಪಿ.ಬಿ.ಧುತ್ತರಗಿ ಅಂದರೆ ಸಾಕು ಕರ್ನಾಟಕದುದ್ದಕ್ಕೂ ಚಿರಪರಿಚಿತ ಹೆಸರು.
ರವೀಂದ್ರ ನಾಟ್ಯ ಸಂಘವನ್ನು ಕಟ್ಟಿ, ಕುಂಕುಮ ಹಾಗೂ ಕುವೆಂಪು ಅವರ ರಕ್ತಾಕ್ಷಿ ನಾಟಕದಿಂದ ಪ್ರಾರಂಭವಾದ ಪಯಣ, ನಟರಾಗಿ, ನಾಟಕಕಾರರಾಗಿ, ನಿರ್ದೇಶಕರಾಗಿ, ಕಂಪನಿ ಮಾಲೀಕರಾಗಿ ಬದುಕಿನುದ್ದಕ್ಕೂ ರಂಗಭೂಮಿಯ ನಂಟು.
ವರ್ಗ ಸಂಘರ್ಷದ ಹಿನ್ನೆಲೆಯಲ್ಲಿ ರಚನೆಯಾದ ಸಂಪತ್ತಿಗೆ ಸವಾಲ್ ನಾಟಕವನ್ನು ಶ್ರೀ ತ್ರಿಪುರಸುಂದರಿ ನಾಟ್ಯ ಸಂಘ ಸೂಳೇಬಾವಿಯಿಂದ ಪ್ರದರ್ಶಿಸಿ ಯಶಸ್ವಿಯಾಯಿತು. ಇದರ ಯಶಸ್ಸನ್ನು ಕಂಡು ಕರ್ನಾಟಕದ ವರನಟ ಡಾ.ರಾಜಕುಮಾರ ಅವರು ಇದೇ ನಾಟಕವನ್ನು ಸಿನಿಮಾವನ್ನಾಗಿ ಪದ್ಮಶ್ರೀ ಪಿಕ್ಚರ್ಸ್ ಲಾಂಛನದಡಿಯಲ್ಲಿ ನಿರ್ಮಿಸಿ ಏಕಕಾಲಕ್ಕೆ ಕನ್ನಡ, ತಮಿಳು, ತೆಲುಗು, ಮತ್ತು ಮಲಯಾಳಂನಲ್ಲಿ ಬಿಡುಗಡೆಗೊಂಡು ದಾಖಲೆ ಬರೆದದ್ದು ಎಲ್ಲರಿಗೂ ಗೊತ್ತಿರುವುದೇ.
ಈಗಲೂ ಸಂಪತ್ತಿಗೆ ಸವಾಲ್ ನಾಟಕ ಪ್ರದರ್ಶನ ಕರ್ನಾಟಕದಲ್ಲಿ ಪ್ರದರ್ಶನಗಳು ಕಾಣುತ್ತಿರುತ್ತವೆ. ಶಿವಸಂಚಾರ ತಂಡ ಆಧುನಿಕ ರಂಗಭೂಮಿಯಲ್ಲಿ ಈ ನಾಟಕವನ್ನು ಪ್ರದರ್ಶನ ಮಾಡಿತ್ತು. ಕೊಪ್ಪಳದ ಮೀಡಿಯಾ ಕ್ಲಬ್ ಸದಸ್ಯರು ಸೇರಿ ಎರಡು ಬಾರಿ ಪತ್ರಿಕಾ ದಿನಾಚರಣೆ ದಿನ ಇದೇ ನಾಟಕ ಪ್ರದರ್ಶಿಸಿರುವುದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು.
ತಾಯಿ ಕರಳು ನಾಟಕ ಪ್ರಸಿದ್ಧವಾಯಿತು, ವೀರ ಸಿಂಧೂರ ಲಕ್ಷ್ಮಣ ಇನ್ನು ಮುಂತಾದವುಗಳು ಪಿ.ಬಿ.ಧುತ್ತರಗಿ ರಚನೆಯ ನಾಟಕಗಳು. ಅವರಿಗೆ ದೊಡ್ಡ ಹೆಸರು ತಂದುಕೊಟ್ಟ ನಾಟಕಗಳು. ಪತ್ನಿ ಸರೋಜಮ್ಮ ಧುತ್ತರಗಿ ರಂಗಭೂಮಿಯ ದೊಡ್ಡ ಕಲಾವಿದೆ. ಅವರಿಬ್ಬರ ಹೆಸರು ಕರ್ನಾಟಕದ ರಂಗಭೂಮಿಯಲ್ಲಿ ಅಚ್ಚಳಿಯದ ಹೆಸರುಗಳಾಗಿವೆ.
ಅವರು ಹುಟ್ಟಿದ್ದು ಬಾಗಲಕೋಟೆ ಜಿಲ್ಲೆಯ ಸೂಳೆಬಾವಿಯಾದರೂ ರಂಗಭೂಮಿಯಲ್ಲಿ ತೊಡಗಿಕೊಂಡು ನೆಲೆ ನಿಂತದ್ದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ. ಅದು ಇಂದಿಗೂ ಈ ಜಿಲ್ಲೆಗೆ ಹೆಮ್ಮೆ ತರುವ ಸಂಗತಿಯಾಗಿದೆ.
ರೆಹಮಾನವ್ವ ಕಲ್ಮನಿ ಮತ್ತು ಪಿ. ಬಿ. ದುತ್ತರಗಿ ಅವರ ಕೊಡುಗೆ ಸ್ಮರಸಿಕೊಳ್ಳುತ್ತ 10ನೇ ಮೇ ಸಾಹಿತ್ಯ ಮೇಳವು ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಗೆ ಇವರಿಬ್ಬರ ಹೆಸರು ಇಟ್ಟು ಗೌರವಿಸುತ್ತದೆ .
Comments are closed.