ಮಾಧವಿ ಭಂಡಾರಿ ಕೆರೆಕೋಣ ಅವರಿಗೆ ‘ನವಲಕಲ್ ಬೃಹನ್ಮಠ ಶಾಂತವೀರಮ್ಮ’ಮಹಾತಾಯಿ ಕಥಾ ಪ್ರಶಸ್ತಿ’
ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಕೆರೆಕೋಣ ಎಂಬ ಗ್ರಾಮದಲ್ಲಿ ಹುಟ್ಟಿದವರು ಮಾಧವಿ ಭಂಡಾರಿ ಕೆರೆಕೋಣ. ಪ್ರಖರ ವಿಚಾರವಾದಿ, ಸಾಹಿತಿ, ವಾಗ್ಮಿ, ಹೋರಾಟಗಾರರಾಗಿದ್ದ ತಂದೆ ಆರ್. ವಿ. ಭಂಡಾರಿ ಮತ್ತು ದಿಟ್ಟೆ, ನೇರ ನಡೆನುಡಿಯ ತಾಯಿ ಸುಬ್ಬಿಯವರ ಕೌಟುಂಬಿಕ ಆವರಣವು ಮಾಧವಿಯವರ ಬಾಲ್ಯದ ಬದುಕನ್ನು ರೂಪಿಸಿದವು. ಶಾಲೆಯಲ್ಲಿ, ಮನೆಯಲ್ಲಿ ಸರಿಯೆನಿಸದೆ ಇರುವುದನ್ನು ಪ್ರಶ್ನಿಸುವ ಯಾಕೆ ಯಾಕೆ ಹುಡುಗಿಯಾಗಿ ಬೆಳೆದರು. ತಮ್ಮ ವಿದ್ಯಾಭ್ಯಾಸವನ್ನು ಅರೆಅಂಗಡಿ, ಹೊನ್ನಾವರ, ಕುಮಟಾ, ಧಾರವಾಡಗಳಲ್ಲಿ ಮುಗಿಸಿದ ಬಳಿಕ ಶಿರಸಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿದರು. ತಮ್ಮ ರಂಗಚಟುವಟಿಕೆ, ವೈಚಾರಿಕತೆ, ಸ್ನೇಹಗುಣಗಳಿಂದ ವಿದ್ಯಾರ್ಥಿಗಳ ನೆಚ್ಚಿನ ಗುರುವಾಗಿದ್ದರು.
ಓದಿ ಬರೆಯುವ ಮನೆಯ ವಾತಾವರಣ ಎಳೆತನದಿಂದಲೇ ಮಾಧವಿಗೆ ಕವಿತೆ, ಕತೆಗಳನ್ನು ಬರೆಯಲು ಪ್ರೋತ್ಸಾಹಿಸಿತು. ಸಾಹಿತ್ಯದ ಜೊತೆಜೊತೆಗೆ ತಾಳಮದ್ದಲೆ ಅರ್ಥಧಾರಿಯಾಗಿ, ಯಕ್ಷಗಾನ-ರಂಗಭೂಮಿ ಕಲಾವಿದೆಯಾಗಿ ಬೆಳೆದ ಮಾಧವಿ ಸಂಘಟನೆಯ ಕೆಲಸಗಳಲ್ಲೂ ತೊಡಗಿಸಿಕೊಂಡರು. ಬರಹ, ಭಾಷಣ, ಸಂಘಟನೆಯ ಮೂಲಕ ಸಮಕಾಲೀನ ಆಗುಹೋಗುಗಳಿಗೆ ಸ್ಪಂದಿಸುವ ಸೂಕ್ಷ್ಮ ಲೇಖಕಿಯಾಗಿ ಕನ್ನಡ ಸಾಹಿತ್ಯ ಲೋಕ ಗುರುತಿಸುವಂತೆ ಬೆಳೆದರು. ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯೆಯಾಗಿ, ಹಲವಾರು ಸಾಹಿತ್ಯಿಕ, ಸಾಂಸ್ಕೃತಿಕ ಸಂಸ್ಥೆ-ಸಂಘಟನೆಗಳ ಸಹಭಾಗಿಯಾಗಿ ಕೆಲಸ ಮಾಡತೊಡಗಿದರು. ಇದುವರೆಗೆ ಮೂರು ಕವನ ಸಂಕಲನಗಳು, ಒಂದು ಸಂಪಾದಿತ ಮಹಿಳಾ ಕಾವ್ಯ, ಒಂದು ಲೇಖನ ಸಂಗ್ರಹ, ‘ಅಗೇರ ಮಹಿಳಾ ಸಂಸ್ಕೃತಿ’ ಎಂಬ ಜನಾಂಗೀಯ ಅಧ್ಯಯನ, ‘ಗುಲಾಬಿ ಕಂಪಿನ ರಸ್ತೆ’ ಎಂಬ ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ.
‘ಗುಲಾಬಿ ಕಂಪಿನ ರಸ್ತೆ’ ಅವರ ಮೊದಲ ಕಥಾ ಸಂಕಲನ. ಮಹಿಳಾ ಸಂಘಟನೆ, ರಂಗಭೂಮಿ, ಸಂಗೀತ, ಬೋಧನಾ ಕ್ಷೇತ್ರದ ಅವರ ಅನುಭವಗಳು ಪಾತ್ರಗಳಾಗಿ, ಘಟನೆಗಳಾಗಿ ಅಲ್ಲಿ ಹರಳುಗಟ್ಟಿವೆ. ಜನರ ನಡುವೆ ವೈಷಮ್ಯ ಹರಡುವುದನ್ನೇ ರಾಜಕಾರಣವನ್ನಾಗಿಸಿಕೊಂಡ ಕೋಮುವಾದಿಗಳ ಅಟ್ಟಹಾಸದ ಎದುರು ಹೇಗೆ ಸಮಾಜ, ಅದರಲ್ಲೂ ಮಹಿಳೆ ಮತ್ತು ಮಕ್ಕಳು ನಲುಗುವಂತಾಗಿದೆ ಎಂದು ಅವರ ಸಂಕಲನದ ಶೀರ್ಷಿಕೆಯ ಕತೆ ವಿವರಿಸುತ್ತದೆ. ಭಾರತೀಯ ಸಮಾಜದ ಜಾತಿ ಪ್ರಜ್ಞೆ-ತಾರತಮ್ಯ, ಎಲ್ಲ ಜಾತಿವರ್ಗಗಳಲ್ಲಿ ಹಾಸುಹೊಕ್ಕಾಗಿರುವ ಲಿಂಗ ತಾರತಮ್ಯ, ಬದುಕಿನ ವಿವಿಧ ಮಜಲುಗಳಲ್ಲಿ ಹೆಣ್ಣು ಎದುರಿಸುವ ಪ್ರತ್ಯಕ್ಷ, ಪರೋಕ್ಷ ದೌರ್ಜನ್ಯಗಳನ್ನು ಸೂಕ್ಷ್ಮವಾಗಿ, ಎಳೆ ಎಳೆಯಾಗಿ ಸಂಕಲನದ ಕತೆಗಳು ಚಿತ್ರಿಸಿವೆ. ದಿಟ್ಟ, ಸ್ವಾಯತ್ತ ಹೆಣ್ಣುಗಳು ಪಾತ್ರಗಳಾಗಿ ಕಂಡುಬರುತ್ತಾರೆ. ಸಂಕಲನ ಓದಿ ಮುಗಿಸುವ ಹೊತ್ತಿಗೆ ಉತ್ತರ ಕನ್ನಡದ ಪರಿಸರ, ವಿವಿಧ ಸಮುದಾಯಗಳ ಆಡುಭಾಷೆ, ಜಾನಪದ ವೈವಿಧ್ಯ, ಅಡುಗೆ, ದಿರಿಸು, ಜಾತಿ ಸಂಬಂಧಗಳು, ಅಭಿವೃದ್ಧಿಯ ಅನಾಹುತ, ಕೋಮು ಅಸಹಿಷ್ಣುತೆ, ಲಿಂಗಸೂಕ್ಷ್ಮತೆಗಳೆಲ್ಲ ಪಾತ್ರಗಳ ನಡೆನುಡಿಗಳಾಗಿ ಕಣ್ಣೆದುರು ಚಿತ್ರಣಗೊಳ್ಳುತ್ತವೆ.
ಬಂಡಾಯ ಸಾಹಿತಿಯಾಗಿದ್ದ ತಂದೆ ಆರ‍್ವಿ, ವಿದ್ಯಾರ್ಥಿ ಸಂಘಟನೆಯಲ್ಲಿದ್ದ ತಮ್ಮ ವಿಠ್ಠಲ ಭಂಡಾರಿ ಅವರ ಜೊತೆಗಿನ ಆರಂಭಿಕ ಒಡನಾಟ; ಬೆಳೆಯುತ್ತ ಹೋದಂತೆ ತೆರೆದುಕೊಂಡ ಜನಚಳುವಳಿಗಳ ಲೋಕ ಸಂಸಾರ; ಓದು, ರಂಗಭೂಮಿ ಒದಗಿಸಿದ ವಿಸ್ತೃತ ಚಿಂತನಾ ಲೋಕ – ಇವು ಮಾಧವಿ ಅವರ ಪ್ರಜ್ಞೆಯನ್ನು ಸೂಕ್ಷ್ಮವಾಗಿ, ನ್ಯಾಯಪರವಾಗಿ ವಿಕಾಸಗೊಳಿಸಿವೆ. ಜನ ಸಂಪರ್ಕದಿಂದ ತಮ್ಮ ಅನುಭವ ಲೋಕವನ್ನು ಶ್ರೀಮಂತಗೊಳಿಸಿಕೊಂಡಿರುವ ಕತೆಗಾರ್ತಿ ಮಾಧವಿ ಭಂಡಾರಿ ಕೆರೆಕೋಣ ಅವರಿಗೆ ೨೦೨೪ನೇ ಸಾಲಿನ ‘ನವಲಕಲ್ ಬೃಹನ್ಮಠ ಶಾಂತವೀರಮ್ಮ ಮಹಾತಾಯಿ ಕಥಾ ಪ್ರಶಸ್ತಿ’ ಪ್ರದಾನ ಮಾಡುತ್ತಿರುವುದು ‘ಮೇ ಸಾಹಿತ್ಯ ಮೇಳ ಬಳಗ’ಕ್ಕೆ ಹೆಮ್ಮೆಯ ಸಂಗತಿಯಾಗಿದೆ
ಈ ಪ್ರಶಸ್ತಿಯು ಹತ್ತು ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ.
ಈ ಪ್ರಶಸ್ತಿಯನ್ನು ಕಥೆಗಾರರಾದ ಮಹಾಂತೇಶ ನವಲಕಲ್ ಅವರು ಪ್ರಾಯೋಜಿಸಿದ್ದಾರೆ.
Madhavi Bhandari Yamuna Gaonkar
Comments are closed.