ಮೇ 7 ರಂದು ನರೇಗಾ ಕೂಲಿಕಾರರು ಕಡ್ಡಾಯವಾಗಿ ಮತದಾನ ಮಾಡಲು ಕರೆ
ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಮದ ಎಲ್ಲ ನರೇಗಾ ಕೂಲಿಕಾರರು ಮೇ 7 ರಂದು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕರಾದ ಹನಮಂತಗೌಡ ಪೊಲೀಸ್ ಪಾಟೀಲ್ ಹೇಳಿದರು.
2024 ರ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನವು ಮೇ 7 ರಂದು ನಡೆಯಲಿದ್ದು, ನರೇಗಾ ಕೂಲಿಕಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನದಿಂದ ಯಾರೂ ವಂಚಿತರಾಗಬಾರದು ಎಂದು ಸಲಹೆ ನೀಡಿದರು.
ದೇಶ ಕಟ್ಟುವವರು ಕಾರ್ಮಿಕರು. ಅವರ ಕೊಡುಗೆ ದೇಶಕ್ಕೆ ಅಮೂಲ್ಯವಾಗಿದೆ. ಹಾಗಾಗಿ ಮೇ 1 ರಂದು ಕಾರ್ಮಿಕ ದಿನಾಚರಣೆ ಆಚರಿಸಲಾಗುತ್ತದೆ. ನರೇಗಾ ಯೋಜನೆಯಡಿ ಕೆಲಸ ಮಾಡುವ ತಾವುಗಳೂ ಕಾರ್ಮಿಕರೇ ಆದ್ದರಿಂದ ಇಂದು ತಮ್ಮ ಜತೆ ಆಚರಿಸಲಾಗುತ್ತಿದೆ ಎಂದು ಶುಭಕೋರಿದರು.
ನರೇಗಾ ಯೋಜನೆಯಡಿ ಈಗ ವಲಸೆ ಯಾಕ್ರಿ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ಅಭಿಯಾನದಡಿ ಮೂರು ತಿಂಗಳ ಅಭಿಯಾನ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗ ಪಡೆದು ತಮಗಿರುವ 100 ಮಾನವ ದಿನಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಬಳಿಕ ಕೂಲಿಕಾರರಿಂದ ಮತದಾನ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಈ ವೇಳೆ ತಾಪಂ ತಾಂತ್ರಿಕ ಸಂಯೋಜಕರಾದ ಸಂತೋಷ ನಂದಾಪುರ, ಐಇಸಿ ಸಂಯೋಜಕರಾದ ಶರಣಪ್ಪ ಹಾಳಕೇರಿ, ಗ್ರಾ.ಪಂ ಪಿಡಿಒರಾದ ರತ್ನಮ್ಮ ಗುಂಡಣ್ಣನವರ್, ಬಿಎಫ್‌ಟಿ ಗುರುಬಸಯ್ಯ, ಜಿಕೆಎಂ ಶ್ರುತಿ ಗಾಣಿಗೇರ ಹಾಗೂ ಕಾಯಕ ಬಂಧುಗಳು, ಕೂಲಿಕಾರರು ಹಾಜರಿದ್ದರು.
Comments are closed.