ಬಿಜೆಪಿಯಿಂದ ನಿಷ್ಠಾವಂತ ಮುಖಂಡರ ಕಡೆಗಣನೆ: ಸಂಗಣ್ಣ
ಕೊಪ್ಪಳ: ಪಕ್ಷಕ್ಕೆ ದುಡಿದ ನಿಷ್ಠಾವಂತ ಮುಖಂಡರ ಹಾಗೂ ಕಾರ್ಯಕರ್ತರನ್ನು ಬಿಜೆಪಿ ಕಡೆಗಣಿಸುತ್ತಿದೆ. ಆದರೆ, ಕಾಂಗ್ರೆಸ್ ಮನೆ ಮಕ್ಕಳಂತೆ ಪ್ರೀತಿಸುತ್ತದೆ. ಇದು ಬಿಜೆಪಿ- ಕಾಂಗ್ರೆಸ್ ನ ವ್ಯತ್ಯಾಸ ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ನಾಯಕ ಸಂಗಣ್ಣ ಕರಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪ್ರಚಾರ ನಿಮಿತ್ತ ಬುಧವಾರ ನಗರದ ಹಮಾಲರ ಕಾಲೋನಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಸಿ.ಟಿ.ರವಿ ಸೇರಿ ಇನ್ನಿತರೆ ನಾಯಕರು ನನ್ನ ಬಗ್ಗೆ ಮಾತನಾಡುವುದನ್ನು ನೋಡಿದರೆ ಹಾಸ್ಯಸ್ಪದ ಅನಿಸುತ್ತದೆ. ಬಿಜೆಪಿ ಪಕ್ಷ ಸಂಘಟನೆಯನ್ನು ನಿಷ್ಠೆಯಿಂದ ಮಾಡಿದ್ದೇನೆ. ಪ್ರತಿಯೊಬ್ಬ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೇನೆ. ಆದರೆ, ನನಗೆ ಟಿಕೆಟ್ ಕೈ ತಪ್ಪಿಸಿದರು. ನಿಷ್ಠಾವಂತರಿಗೆ ಬಿಜೆಪಿಯಲ್ಲಿ ಬೆಲೆ ಇಲ್ಲ. ನನ್ನ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಗುಡುಗಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕಾಯಕ- ದಾಸೋಹ ಕಲ್ಪನೆಯಲ್ಲಿ ಆಡಳಿತ ನಡೆಸುತ್ತಿದೆ. ಪ್ರತಿಯೊಂದು ಮನೆಗೂ ಗ್ಯಾರೆಂಟಿ ಯೋಜನೆ ಲಾಭ ದೊರೆತಿದೆ. ಬಡತನ ರೇಖೆಯಲ್ಲಿದ್ದ 1.10 ಕೋಟಿ ಕುಟುಂಬಗಳ ಜೀವನ ಮಟ್ಟ ಸುಧಾರಣೆ ಕಂಡಿದೆ. ಕಾಂಗ್ರೆಸ್ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಮಧ್ಯವರ್ತಿಗಳು ಇಲ್ಲದೇ 5 ಯೋಜನೆಗಳು ನೇರ ಫಲಾನುಭವಿಗಳ ಕೈ ಸೇರುತ್ತಿವೆ ಎಂದು ಆಡಳಿತದ ವೈಖರಿ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ್, ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಎಸ್.ಶ್ರೀನಾಥ್, ಕಾಂಗ್ರೆಸ್ ಯುವ ನಾಯಕ ಅಮರೇಶ್ ಕರಡಿ, ಮುಖಂಡರಾದ ಕಾಟನ್ ಪಾಷಾ, ಅಮ್ಜದ್ ಪಟೇಲ್, ರಾಜಶೇಖರ ಆಡೂರು ಸೇರಿ ಹಲವರು ಉಪಸ್ಥಿತರಿದ್ದರು.
ಧರ್ಮದ ಹೆಸರಿನಲ್ಲಿ ಬಿಜೆಪಿ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಜಾತಿ, ಧರ್ಮ ಬೇಧ ಇಲ್ಲದೇ ಎಲ್ಲ ಮಹಿಳೆಯರಿಗೂ ಗ್ಯಾರೆಂಟಿ ಯೋಜನೆ ಅನುಷ್ಠಾನಗೊಳಿಸಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಗೆ ಮತ ನೀಡಿ ಗೆಲ್ಲಿಸಿ.
ಬಸವರಾಜ ರಾಯರೆಡ್ಡಿ, ಸಿಎಂ ಆರ್ಥಿಕ ಸಲಹೆಗಾರ.
Comments are closed.