ಚುನಾವಣಾ ಆಯೋಗದ ಮಾರ್ಗಸೂಚಿಯನುಸಾರ ಕಾರ್ಯನಿರ್ವಹಿಸಿ: ನಲಿನ್ ಅತುಲ್
ಎಲ್ಲಾ ಸೆಕ್ಟರ್ ಅಧಿಕಾರಿಗಳು ಮಾಸ್ಟರ್ ಟ್ರೇನರ್ಸ್‍ಗಳು ಹಾಗೂ ಮತಗಟ್ಟೆ ಅಧಿಕಾರಿಗಳು ಚುನಾವಣಾ ಆಯೋಗದ ಮಾರ್ಗಸೂಚಿಯನುಸಾರ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ನಲಿನ್ ಅತುಲ್ ಅವರು ಹೇಳಿದರು.
ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಸಂಬಂಧ ಜಿಲ್ಲೆಯಲ್ಲಿ ಎಲ್ಲಾ ಸೆಕ್ಟರ್ ಅಧಿಕಾರಿಗಳಿಗೆ ಮತ್ತು ವಿಧಾನಸಭಾ ಕ್ಷೇತ್ರದ ಮಾಸ್ಟರ್ ಟ್ರೇನರ್ಸ್(ಎ.ಎಲ್.ಎಂ.ಟಿ)ಗಳಿಗೆ ಚುನಾವಣಾ ಕರ್ತವ್ಯದ ಪ್ರಯುಕ್ತ ವಿವಿಧ ವಿಷಯಗಳ ಕುರಿತು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ನಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಹಿನ್ನೆಯಲ್ಲಿ 8-ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆಯಲಿದ್ದು, ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಹಾಗೂ ಕೊಪ್ಪಳ, ಈ ಐದು ವಿಧಾನಸಭಾ ಕ್ಷೇತ್ರಗಳು ಒಳಗೊಂಡಂತೆ ಜಿಲ್ಲೆಯಲ್ಲಿ ಒಟ್ಟು 1317 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ 10 ರಂತೆ ಒಟ್ಟು 50 ಮಾಸ್ಟರ್ ಟ್ರೇನರ್ಸ್(ಎ.ಎಲ್.ಎಂ.ಟಿ) ಹಾಗೂ 108 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಚುನಾವಣೆ ಪ್ರಕ್ರಿಯೆಯಲ್ಲಿ ಎಲ್ಲಾ ಸೆಕ್ಟರ್ ಅಧಿಕಾರಿಗಳು ಮತ್ತು ಮಾಸ್ಟರ್ ಟ್ರೇನರ್ಸ್‍ಗಳು ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಸೆಕ್ಟರ್ ಅಧಿಕಾರಿಗಳು ಮತ್ತು ಮಾಸ್ಟರ್ ಟ್ರೇನರ್ಸ್‍ಗಳ ಕಾರ್ಯ ಪ್ರಮುಖವಾಗಿದ್ದು, ಚುನಾವಣಾ ಆಯೋಗ ನೀಡಿರುವ ಮಾರ್ಗಸೂಚಿ ಹಾಗೂ ನಿರ್ದೇಶನಗಳ ಬಗ್ಗೆ ಅರಿವು ಹೊಂದಿರಬೇಕು. ಫ್ಲೈಯಿಂಗ್ ಸ್ಕ್ವಾಡ್ಸ್, ಎ ಆರ್.ಓ ಹಾಗೂ ಇತರೆ ಅಧಿಕಾರಿಗಳಿಗೆ ಅಗತ್ಯ ಸಹಕಾರ ನೀಡಬೇಕು. ಚುನಾವಣಾ ಕರ್ತವ್ಯದ ಹಾಗೂ ಇವಿಎಂ ವಿವಿಪ್ಯಾಟ್‌ಗಳ ನಿರ್ವಹಣೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಿ.ಆರ್.ಓ ಹ್ಯಾಂಡ್ ಬುಕ್‌ನಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು ಓದಿಕೊಳ್ಳಬೇಕು. ಕರ್ತವ್ಯದಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಂಡು ಚುನಾವಣಾ ಕರ್ತವ್ಯವನ್ನು ತೀವ್ರ ಕಟ್ಟೆಚ್ಚರದಿಂದ ನಿರ್ವಹಿಸಬೇಕು ಎಂದು ಹೇಳಿದರು.
ನಮೂನೆ 12 ಹಾಗೂ 12ಎ ಯಾರಿಗೆ ನೀಡಬೇಕು ಎಂಬುವುದು ಎರಡನೇ ರ‍್ಯಾಂಡಮೇಷನ್ ಮಾಡಿದ ನಂತರ ತಿಳಿಯುತ್ತದೆ. ಮತದಾನ ಪ್ರಕ್ರಿಯೆಗೆ ಮುಂಚೆ 50 ಮತಗಳನ್ನು ಏಜೆಂಟರ ಸಮ್ಮುಖದಲ್ಲಿ ಮ್ಯಾಕ್ ಪೋಲ್ ಮಾಡಿಸಿ ನಂತರ ಮ್ಯಾಕ್ ಪೋಲ್‍ನ್ನು ಅಳಿಸಬೇಕು. ಮತದಾನ ಪ್ರಕ್ರಿಯೆ ಮುಗಿದ ನಂತರ ಡಿಮಸ್ಟರಿಂಗ್ ಮಾಡಿ, 17ಎ ಮತ್ತು ಇತರೆ ಫಾರಂ ಗಳನ್ನು ಭರ್ತಿ ಮಾಡಿ ನೀಡಬೇಕು. ಎಂದರು.
ಎಲ್ಲಾ ಮತಗಟ್ಟೆ ಗಳಲ್ಲಿ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ರ್ಯಾಂಪ್ ಮತ್ತು ವೀಲ್‍ಚೇರ್ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಈ ಬಗ್ಗೆ ಸೆಕ್ಟರ್ ಅಧಿಕಾರಿಗಳು ಮತ್ತೊಮ್ಮೆ ಗಮನ ಹರಿಸಬೇಕು ಎಂದು ಸೂಚನೆ ನೀಡಿದರು.
ಕುಷ್ಟಗಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ರೇಷ್ಮಾ ಹಾನಗಲ್ ಅವರು ಡಿಮಸ್ಟರಿಂಗ್ ವರೆಗೆ ಸೆಕ್ಟರ್ ಅಧಿಕಾರಿಗಳು ಮತ್ತು ಪೋಲಿಂಗ್ ಅಧಿಕಾರಿಗಳ ಮತದಾನ ದಿನದ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಿದರು.
ಕನಕಗಿರಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಮಲ್ಲಪ್ಪ ತೊದಲಬಾಗಿ ಅವರು ಮಾಕ್ ಪೋಲ್ ಮತ್ತು ಅದರ ಕಾರ್ಯವಿಧಾನಗಳು ಮತ್ತು ನಿಜವಾದ ಮತದಾನದ ಆರಂಭ ಬಗ್ಗೆ ತಿಳಿಸಿದರು.
ಗಂಗಾವತಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರು ನಮೂನೆ-12, 12ಎ ಮತ್ತು 12ಡಿ ವಿತರಣೆ ಮತ್ತು ಸಂಗ್ರಹಣೆ, ಅಂಚೆ ಮತಪತ್ರಗಳ ವಿತರಣೆ, ಮನೆ ಮತದಾನ, ಸೆಟಪ್ ಆಫ್ ಪಿವಿಸಿ & ವಿ.ಎಫ್.ಸಿ ಹಾಗೂ ಇತರೆ ವಿಷಯಗಳ ಕುರಿತು ವಿವರಿಸಿದರು.
ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಟಿ.ಎಸ್.ರುದ್ರೇಶಪ್ಪ ಅವರು ಮತದಾನದ ಮುಕ್ತಾಯ ಬಗ್ಗೆ ಮಾಹಿತಿ ನೀಡಿದರೆ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ ಅವರು ಮತದಾನದ ದಿನದಂದು ಸಂಭವನೀಯ ಸವಾಲುಗಳು ಹಾಗೂ ಇವಿಎಂಗಳು ಮತ್ತು ವಿವಿಪ್ಯಾಟ್‌ಗಳ ಬದಲಾವಣೆ ಕುರಿತು ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ತರಬೇತಿ ಕಾರ್ಯಕ್ರಮದ ನೋಡಲ್ ಅಧಿಕಾರಿಗಳು ಹಾಗೂ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ, ಜಿಲ್ಲಾ ಚುನಾವಣಾ ಶಾಖೆಯ ತಹಶೀಲ್ದಾರರಾದ ರವಿಕುಮಾರ ವಸ್ತ್ರದ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಎಲ್ಲಾ ಸೆಕ್ಟರ್ ಅಧಿಕಾರಿಗಳು ಮತ್ತು ಮಾಸ್ಟರ್ ಟ್ರೇನರ್ಸ್(ಎ.ಎಲ್.ಎಂ.ಟಿ)ಗಳು ಉಪಸ್ಥಿತರಿದ್ದರು.
Comments are closed.