ಸ್ಥಳೀಯ ಪತ್ರಿಕೆಗಳ ಬಲವರ್ಧನೆಗೆ ಅವಿರತ ಶ್ರಮ: ರಾಜ್ಯಾಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ

Get real time updates directly on you device, subscribe now.

ಕೊಪ್ಪಳ ಜಿಲ್ಲಾ ಘಟಕಕ್ಕೆ ಎನ್.ಎಂ. ದೊಡ್ಡಮನಿ ಅಧ್ಯಕ್ಷ

ಕೊಪ್ಪಳ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಸ್ಥಳೀಯ ಜಿಲ್ಲಾ ಮಟ್ಟದ ದಿನಪತ್ರಿಕೆಗಳ ಆರ್ಥಿಕ ಬಲವರ್ಧನೆಗೆ ಸಂಘಟಿತ ಹೋರಾಟದ ಅಗತ್ಯವಿದ್ದು, ಈ ಮೂಲಕ ನಮ್ಮ ಹಕ್ಕು ಪಡೆದುಕೊಳ್ಳಲು ಎಲ್ಲಾ ಜಿಲ್ಲಾ ಘಟಕಗಳು ನಮ್ಮೊಂದಿಗೆ ಕೈ ಜೋಡಿಸಲು ಮುಂದೆ ಬರಬೇಕು ಎಂದು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ ಕರೆ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಬೆಳಿಗ್ಗೆ ನಡೆದ ಕೊಪ್ಪಳ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ನಾನಾ ಇಲಾಖೆ ಸೇರಿದಂತೆ ಸಚಿವರು, ಶಾಸಕರು, ಸ್ಥಳೀಯ ಸುದ್ದಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸ್ಥಳೀಯ ಜಿಲ್ಲಾ, ಪ್ರಾದೇಶಿಕ ಪತ್ರಿಕೆಗಳು ಪ್ರಕಟಿಸುತ್ತವೆ.
ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಸ್ಥಳೀಯ ಪತ್ರಿಕೆಗಳು ಪ್ರಮುಖ ಸಂಪರ್ಕ ಸೇತುವೆಗಳಾಗಿವೆ. ಆದರೆ ಪತ್ರಿಕೆಗಳಿಗೆ ಸರ್ಕಾರ ನೀಡುವ ಜಾಹೀರಾತಿನಲ್ಲಿ ತಾರತಮ್ಯವಾಗುತ್ತಿದ್ದು, ರಾಜ್ಯಮಟ್ಟದ ದಿನಪತ್ರಿಕೆಗಳಿಗೆ ಮಾತ್ರ ದೊಡ್ಡ ಪ್ರಮಾಣದ ಜಾಹೀರಾತು ಹೋಗುತ್ತಿವೆ.
ಆದರೆ ಸ್ಥಳೀಯ ಜಿಲ್ಲಾಮಟ್ಟದ ಪತ್ರಿಕೆಗಳು ಆರ್ಥಿಕವಾಗಿ ಸೊರಗುತ್ತಿರುವ ಹಿನ್ನೆಲೆ ನಮ್ಮ ನ್ಯಾಯೋಚಿತ ಬೇಡಿಕೆ ಈಡೇರಿಸಿಕೊಳ್ಳಲು ಇಡೀ ರಾಜ್ಯದಲ್ಲಿ ಒಂದು ಬಲವಾದ ಸಂಘಟನೆ ಕಟ್ಟುವ ಉದ್ದೇಶಕ್ಕೆ ಕಳೆದ ಮೂರು ತಿಂಗಳಿಂದ ರಾಜ್ಯದಾದ್ಯಂತ ಪ್ರವಾಸ ಮಾಡಿ ಜಿಲ್ಲಾ ಘಟಕಗಳನ್ನು ರಚಿಸಲಾಗುತ್ತಿದೆ.

ಈ ಮೂಲಕ ರಾಜ್ಯಮಟ್ಟದಲ್ಲಿ ಸಂಘಟನೆಯು ಸಂಪಾದಕರಿಗೆ ಗಟ್ಟಿ ಧ್ವನಿಯಾಗಿ ಪ್ರತಿನಿಧಿಸುತ್ತದೆ. ಸರ್ಕಾರದಿಂದ ಹೆಚ್ಚು ಜಾಹೀರಾತು ಬಿಡುಗಡೆ, ದರ ಪರಿಷ್ಕರಣೆ, ಎರಡು ಪುಟಕ್ಕಾಗಿ ಐದು ವರ್ಷದ ಕಾಲಾವಧಿ ತೆಗೆದು ಹಾಕುವುದು, ಮಾಧ್ಯಮ ಪಟ್ಟಿಯಲ್ಲಿರುವ ಎಲ್ಲಾ ಸಮುದಾಯದ ಪತ್ರಿಕೆಗಳಿಗೆ ತಕ್ಷಣ ಒಂದು ಪುಟದ ಜಾಹೀರಾತು ಕೊಡುವುದು, ವಿಶೇಷ ಸಂದರ್ಭದಲ್ಲಿ ಪ್ರೋತ್ಸಾಹದ ರೂಪದ ಜಾಹೀರಾತು ಸೇರಿದಂತೆ ಹತ್ತಾರು ಬೇಡಿಕೆ ಈಡೇರಿಕೆಗಾಗಿ ನಿರಂತರ ಹೋರಾಟ ಮಾಡಲಾಗುವುದು ಎಂದರು.

ರಾಜ್ಯ ಉಪಾಧ್ಯಕ್ಷ ಮಂಜುನಾಥ ಅಬ್ಬಿಗೇರಿ ಮಾತನಾಡಿ, ಪತ್ರಿಕೆಗಳ ಸಂಪಾದಕರ ಸಾಕಷ್ಟು ಸಂಘಟನೆಗಳಿವೆ. ಇದೀಗ ಬಹುತೇಕ ಸಂಘಟನೆಗಳು ನಿಷ್ಕ್ರೀಯವಾಗಿ ಇರುವುದರಿಂದ ಸಂಪಾದಕರ ಮತ್ತು ಪತ್ರಿಕೆಗಳ ಸಮಸ್ಯೆಗಳನ್ನು ರಾಜ್ಯಮಟ್ಟದಲ್ಲಿ ಪ್ರತಿನಿಧಿಸುವ ಸಂಘಟನೆ ಕೊರತೆ ಹಿನ್ನೆಲೆ ನಮ್ಮ ಸಂಘಟನೆ ಅಸ್ತಿತ್ವಕ್ಕೆ ಬಂದಿದೆ. ಈಗಾಗಲೆ ರಾಜ್ಯದ 20ಕ್ಕೂ ಹೆಚ್ಚು ಜಿಲ್ಲಾ ಘಟಕ ರಚನೆಯಾಗಿದ್ದು, ಮುಂದಿನ ಜೂನ್ ಅಥವಾ ಜುಲೈ ತಿಂಗಳಲ್ಲಿ ಗದಗದಲ್ಲಿ ಸಂಘಟನೆಯಿಂದ ರಾಜ್ಯ ಮಟ್ಟದ ಸಮ್ಮೇಳನ ಮಾಡಿ ನಮ್ಮ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯುವ ಯತ್ನ ಮಾಡಲಾಗುವುದು ಎಂದರು.

ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚನ್ನಬಸವ ಬಾಗಲವಾಡ ಮಾತನಾಡಿ, ಸಂಘಟನೆ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸ್ಥಳೀಯ ಪತ್ರಿಕೆಗಳ ಸಂಪಾದಕರ ಸಮಸ್ಯೆಗಳ ಕುರಿತು ಈಗಾಗಲೇ ವಾರ್ತಾ ಇಲಾಖೆಯ ಆಯುಕ್ತರಿಗೆ,ಸರ್ಕಾರಕ್ಕೆ,
ಮುಖ್ಯಮಂತ್ರಿಯವರಿಗೆ ಹಲವು ಮನವಿ ಮಾಡಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಬಲವಾಗಿ ಕಟ್ಟೋಣ ಎಂದರು.

ಕೊಪ್ಪಳ ಜಿಲ್ಲಾ ಘಟಕದ ಪರವಾಗಿ ಗಿರೀಶ್ ಕುಲಕರ್ಣಿ, ಎಚ್.ಎಸ್. ಹರೀಶ್ ಮಾತನಾಡಿದರು. ಹಿರಿಯ ಪತ್ರಕರ್ತರಾದ ಸಾಧಿಕ್ ಅಲಿ, ಸಿರಾಜ್ ಬಿಸರಳ್ಳಿ , ರಾಜ್ಯ ಸಂಘದ ಕಾರ್ಯದರ್ಶಿ ಮಿಯಾಸಾಬ್ ಕೊಡಗಲಿ ಸೇರಿದಂತೆ ನಾನಾ ಜಿಲ್ಲೆಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.

ಕೊಪ್ಪಳ ಘಟಕ ರಚನೆ:

ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಕೊಪ್ಪಳ ಜಿಲ್ಲಾ ಘಟಕವನ್ನು ಇದೇ ಸಂದರ್ಭದಲ್ಲಿ ರಚಿಸಲಾಯಿತು.

ಎನ್.ಎನ್. ದೊಡ್ಡಮನಿ ಅಧ್ಯಕ್ಷ, ಎಸ್.ಎಂ. ಪಟೇಲ್, ಉಪಾಧ್ಯಕ್ಷ, ಶ್ರೀನಿವಾಸ ಎಂ.ಜೆ. ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.

ಎಚ್.ಎಸ್. ಹರೀಶ್ ರಾಜ್ಯ ಪರಿಷತ್ತಿನ ಗೌರವ ಸಲಹೆಗಾರ, ವಿಶ್ವನಾಥ ಬೆಳಗಲ್ಮಠ ರಾಜ್ಯ ಪರಿಷತ್ತಿನ ಸದಸ್ಯ, ಗಿರೀಶ್ ಕುಲಕರ್ಣಿ ಕಲ್ಯಾಣ ಕರ್ನಾಟಕದ ವಿಭಾಗೀಯ ಕಾರ್ಯದರ್ಶಿ, ಬಸವರಾಜ ಗುಡ್ಲಾನೂರು ಕಲ್ಯಾಣ ಕರ್ನಾಟಕದ ವಿಭಾಗೀಯ ಸಂಚಾಲಕರನ್ನಾಗಿ ಇದೇ ಸಂದರ್ಭದಲ್ಲಿ ಆವಿರೋಧವಾಗಿ ಆಯ್ಕೆ ಮಾಡಲಾಯಿತು.

ಜಿಲ್ಲಾ ಘಟಕಕ್ಕೆ ವೀರಣ್ಣ ಕಳ್ಳಿಮನಿ ಖಜಾಂಚಿ, ಮಹಮ್ಮದ್ ಖಲೀಲ್ ಸಂಘಟನಾ ಕಾರ್ಯದರ್ಶಿ, ವೈ. ನಾಗರಾಜ್ ಸಹ ಕಾರ್ಯದರ್ಶಿ, ವೈ.ಬಿ. ಜೂಡಿ ಹಾಗೂ ಮೊಹಮ್ಮದ್ ಅಖಿಲ್ ಅವರನ್ನು ಜಂಟಿ ಕಾರ್ಯದರ್ಶಿಗಳನ್ನಾಗಿ ಆಯ್ಕೆ ಮಾಡಲಾಯಿತು.

ಮುಂದಿನ ದಿನಗಳಲ್ಲಿ ಜಿಲ್ಲಾ ಘಟಕದ ಪದಾಧಿಕಾರಿಗಳು ಸಭೆ ಸೇರಿ ಇತರೆ ಬಾಕಿ ಇರುವ ಪದಾಧಿಕಾರಿಗಳನ್ನು ಆಯ್ಕೆ ಮಾಡುವುದು ಹಾಗೂ ಜಿಲ್ಲೆಯಲ್ಲಿ ಸಂಘಟನೆ ಬಲಗೊಳಿಸಲು ರಚನಾತ್ಮಕ ಚಟುವಟಿಕೆಯಲ್ಲಿ ತೊಡಗುವಂತೆ ರಾಜ್ಯಾಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ ಸಲಹೆ ನೀಡಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: