ಹಾಸನದಲ್ಲಿ ರಂಗಸಿರಿ ಕಾಲೇಜು ನಾಟಕೋತ್ಸವಕ್ಕೆ ಚಾಲನೆ…

Get real time updates directly on you device, subscribe now.

ಚಳವಳಿ, ಹೋರಾಟ ಇಲ್ಲದೆ ಸಾಹಿತ್ಯವೂ ಸೊರಗುತ್ತಿದೆ: ಇಂದ್ರಜಿತ್ ಲಂಕೇಶ್

ಹಾಸನ:
ಹಾಸನದ ಕಲಾಭವನದಲ್ಲಿ ರಂಗಸಿರಿ ತಂಡ‌ ನಾಲ್ಕು ದಿನಗಳ ಕಾಲ ಆಯೋಜಿಸಿರುವ ಕಾಲೇಜು ನಾಟಕೋತ್ಸವಕ್ಕೆ ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ತಬಲ ನುಡಿಸುವ ಮೂಲಕ ಭಾನುವಾರ ಚಾಲನೆ ನೀಡಿದರು.

ಅವರು ಮಾತನಾಡಿ, ಹಾಸನದಂತ ನಗರದಲ್ಲಿ ನಾಟಕೋತ್ಸವ ಅಯೋಜಿಸಿರುವುದು ವಿಶೇಷ. ಆ ಕಾರಣಕ್ಕಾಗಿ ಈ ನಾಟಕೋತ್ಸವಕ್ಕೆ ಬಂದಿದ್ದು ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ ಎಂದರು.

ಎಂಬತ್ತರ ದಶಕದಲ್ಲಿ ಚಳವಳಿಗಳ ಕಾಲಘಟ್ಟದಲ್ಲಿ ಹುಟ್ಟಿಕೊಂಡ ಸಾಹಿತ್ಯ, ನಾಟಕಗಳು ಗುಣಾತ್ಮಕವಾಗಿವೆ. ಯಾವುದೇ ಚಳವಳಿ, ಹೋರಾಟವಿಲ್ಲದ ಕಾಲಘಟ್ಟದ ಸಾಹಿತ್ಯ, ತನ್ನದೇ ಆದ ಸೊಗಡು ರೂಪಿಸಿಕೊಳ್ಳುವಲ್ಲಿ ಸೋತಿದೆ
ಎಂದು ಅರ್ಥೈಯಿಸಿದರು.

ಲಂಕೇಶ್ ಅವರ ಸಂಕ್ರಾಂತಿ, ಗುಣಮುಖ ಸೇರಿದಂತೆ ಹಲವು ನಾಟಕ ರಚನೆ ಮಾಡಿದ್ದು ಅವೆಲ್ಲವೂ ಇಂದಿಗೂ ಪ್ರಸ್ತುತವಾಗಿವೆ.‌ ಲಂಕೇಶ್ ರಚನೆಯ
ನನ್ನ ತಂಗಿಗೊಂದು ಗಂಡು ಕೊಡಿ ನಾಟಕವನ್ನು ರಂಗಸಿರಿ ಇಲ್ಲಿ ಪ್ರಸ್ತುತಪಡಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಬದಲಾವಣೆ ಅನ್ನುವುದಕ್ಕೆ ರಂಗಭೂಮಿಯೇ ಮೂಲ. ಇಲ್ಲಿಂದಲೇ ಕಿರುತೆರೆ, ಬೆಳ್ಳಿತೆರೆಗೆ ಹೊಸ ಕಲಾವಿದರು ಬರಲು ಸಾಧ್ಯ.‌ ಹೃದಯ ಮುಟ್ಟುವ ನಾಟಕಗಳಿಗೆ ಎಲ್ಲರ ಪ್ರೋತ್ಸಾಹ ಮತ್ತು ಸಹಕಾರ ಅಗತ್ಯ ಎಂದರು.

ಪತ್ರಕರ್ತರ ಸಂಘವನ್ನು ನಿಜವಾದ ಕಾರ್ಯನಿರತ ಪತ್ರಕರ್ತರ ಸಂಘವಾಗಿ ರೂಪಿಸಿದ ಕೀರ್ತಿ ಹೆಗ್ಗಳಿಕೆ ಶಿವಾನಂದ ತಗಡೂರು ಅವರಿಗೆ ಸಲ್ಲಬೇಕು. ಕೋವಿಡ್ ಸಂದರ್ಭದಲ್ಲಿ ಅವರು ಈ ಸಮುದಾಯಕ್ಕೆ ಸಲ್ಲಿಸಿದ ಸೇವೆ ಅನನ್ಯ ಎಂದು ಶ್ಲಾಘಿಸಿದರು.
ನಾಟಕೋತ್ಸವ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರಿಸಿದರು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಎನ್.ಆರ್. ನಂಜುಂಡೇಗೌಡ ಮಾತನಾಡಿ, ರಂಗಸಿರಿಗೂ ನನಗೂ ಅವಿನಾಭಾವ ನಂಟಿದೆ. ನಾಟಕೋತ್ಸವ ಆಯೋಜನೆ ಮೂಲಕ ಹೊಸ ಪ್ರತಿಭೆಗಳ ಹುಟ್ಟಿಗೆ ಪ್ರೇರಣೆ ಸಿಗಲಿ ಎಂದು ಹೇಳಿದರು.

ರಂಗಸಿರಿ ಗೌರವಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಕಳೆದ ಮೂರು ದಶಕಗಳಿಂದ ರಂಗಸಿರಿ ನಿರಂತರವಾಗಿ ಚಟುವಟಿಕೆ ನಡೆಸಿಕೊಂಡು ಬರುತ್ತಿದೆ ಅನೇಕ ಹೊಸ ಪ್ರತಿಭೆ ಹುಟ್ಟಿಗೆ ಕಾರಣವಾಗಿದೆ ಎಂದರು. ಹಾಸನದಲ್ಲಿ ನಾಟಕೋತ್ಸವಕ್ಕೆ ಸಹಕಾರ ನೀಡಿದವರನ್ನು ನೆನೆದು ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

ರಂಗಸಿರಿ ಕಾರ್ಯದರ್ಶಿ ಪಿ.ಶಾಡ್ರಾಕ್ ಮಾತನಾಡಿ, ರಂಗಸಿರಿ ಭಾಗವಾಗಿದ್ದ ವಿ.ಸತೀಶ್, ಕೊಟ್ಟೂರು ಶ್ರೀನಿವಾಸ್, ಹನುಮಂತ ನಾಯಕ ಮತ್ತು ಎಚ್.ಡಿ.ಗುರುಪ್ರಸಾದ್ ಅವರ ಹೆಸರಿನಲ್ಲಿ ನಾಟಕೋತ್ಸವ ಆಯೋಜಿಸಲಾಗಿದೆ ಎಂದರು.

ವೇದಿಕೆಯಲ್ಲಿ ಪ್ರಾಂಶುಪಾಲರಾದ ಡಾ.ಕೆ.ಜೆ.ಕವಿತ, ರಂಗಸಿರಿ ಅಧ್ಯಕ್ಷ ಕೆ.ರಂಗಸ್ವಾಮಿ, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ರವಿ ನಾಕಲಗೋಡು ಹಾಜರಿದ್ದರು. ರಂಗಸಿರಿ ಸಂಚಾಲಕ ಬಿ.ಆರ್.ಉದಯಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ವಿ.ಸತೀಶ್ ಅವರ ಪತ್ನಿ ಕುಸುಮಾವತಿ, ಶಿಬಿರದ‌ ಹನ್ನೊಂದು ಜನ ನಿರ್ದೇಶಕರುಗಳನ್ನು ಗೌರವಿಸಲಾಯಿತು.

ಸಂತೋಷ್ ದಿಂಡಗೂರು ನಿರ್ದೇಶನದ ಸಂಕವ್ವನ ಸಾಲು ನಾಟಕವನ್ನು ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಅಭಿನಯಿಸಿದ ಜನಮನ ಗೆದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: