ಆನೆಗೊಂದಿ ಉತ್ಸವ: ಸಿದ್ಧತಾ ಸಭೆ
ಆನೆಗೊಂದಿ ಉತ್ಸವದ ಸಿದ್ಧತೆಗೆ ಸಂಬಂಧಿಸಿದಂತೆ ಚರ್ಚಿಸಲು ಶಾಸಕರಾದ ಜನಾರ್ಧನ ರೆಡ್ಡಿ ಅವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರ ಅಧ್ಯಕ್ಷತೆಯಲ್ಲಿ ಮಾರ್ಚ 06ರಂದು ಮತ್ತೊಂದು ಸುತ್ತಿನ ಸಿದ್ಧತಾ ಸಭೆ ನಡೆಯಿತು.
ವಿರುಪಾಪುರ ಗಡ್ಡಿಯ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಈಗಾಗಲೇ ಜವಾಬ್ದಾರಿ ಹಂಚಿಕೆ ಮಾಡಿದಂತೆ ಆಯಾ ಸಮಿತಿಯ ಅಧ್ಯಕ್ಷರು ಮತ್ತು ಸಮಿತಿಯ ಸದಸ್ಯ ಕಾರ್ಯದರ್ಶಿಗಳು ತಮ್ಮ ತಮ್ಮ ತಂಡದೊಂದಿಗೆ ಕಾರ್ಯತತ್ಪರರಾಗಿ ತಿಳಿಸಿದ ಕಾರ್ಯವನ್ನು ಬೇಗನೇ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಶಾಸಕರಾದ ಜನಾರ್ಧನ ರೆಡ್ಡಿ ಅವರು ಮಾತನಾಡಿ, ಆನೆಗೊಂದಿ ಉತ್ಸವ ವೇದಿಕೆಯಲ್ಲಿ ಮುಖ್ಯ ವೇದಿಕೆಯ ಸಿದ್ಧತಾ ಕಾರ್ಯಗಳು ಜೋರಾಗಿ ನಡೆದಿದೆ. ಅತಿಥಿ ಗಣ್ಯರಿಗೆ ಆಸನ, ಮಾಧ್ಯಮ ಪ್ರತಿನಿಧಿಗಳು ಮತ್ತು ಪ್ರೇಕ್ಷಕರ ಗ್ಯಾಲರಿ ನಿರ್ಮಾಣ ಕಾರ್ಯಗಳು, ವಾಹನಗಳಿಗೆ ಪಾರ್ಕಿಂಗ್, ಜನರಿಗೆ ಕುಡಿಯುವ ನೀರು ಸೇರಿದಂತೆ ಎಲ್ಲಾ ಕಾರ್ಯಗಳು ವೇಗವಾಗಿ ನಡೆಯಬೇಕು ಎಂದು ತಿಳಿಸಿದರು.
ಹವ್ಯಾಸಿ ಛಾಯಾಗ್ರಾಹಕರ ಐತಿಹಾಸಿಕ ಸ್ಥಳಗಳ ಫೋಟೊಗಳ ಪ್ರದರ್ಶನಕ್ಕೆ, ಐತಿಹಾಸಿಕ ಸ್ಥಳಗಳ ಪರಿಚಯದ ವಸ್ತು ಪ್ರದರ್ಶನ ಮಳಿಗೆಯ ನಿರ್ಮಾಣದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಮೈದಾನಕ್ಕೆ ಭೇಟಿ: ಸಭೆಯ ಬಳಿಕ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು, ಅಧಿಕಾರಿಗಳೊಂದಿಗೆ ಆನೆಗೊಂದಿ ಉತ್ಸವ ಮೈದಾನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಸೀಲ್ದಾರ ನಾಗರಾಜ, ತಾಪಂ ಇಓ ಲಕ್ಷ್ಮೀದೇವಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
Comments are closed.