ವಿದ್ಯಾರ್ಥಿಗಳ ಬದುಕು ಹಸನಾದರೆ : ಶಿಕ್ಷಕರ ಶ್ರಮ ಸಾರ್ಥಕ
“ಪ್ರತಿಯೊಬ್ಬರ ಬದುಕಿನಲ್ಲಿ ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದದು. ಬಾಲ್ಯದಲ್ಲಿದ್ದಾಗ ಶಿಕ್ಷಕರು ಕಲಿಸುವ ಪ್ರತಿಯೊಂದು ಅಕ್ಷರ, ಜ್ಞಾನ, ತಿಳುವಳಿಕೆಯನ್ನು ವಿದ್ಯಾರ್ಥಿಗಳಾದವರು ಕಲಿಯಬೇಕು. ಅಂದಾಗ ಮಾತ್ರ ಉತ್ತಮ ವ್ಯಕ್ತಿತ್ವದಿಂದ ಸಮಾಜಕ್ಕೆ ಮಹತ್ತರ ಕೊಡುಗೆ ಕೊಡಲು ಸಾಧ್ಯವಾಗುತ್ತದೆ. ಆಗ ಕಲಿಸಿದ ಶಿಕ್ಷಕರ ಶ್ರಮವು ಸಾರ್ಥಕವಾಗುತ್ತದೆ. ವಿದ್ಯಾರ್ಥಿಗಳಾದವರು ತಮ್ಮ ಬದುಕಿನಲ್ಲಿ ಶಿಸ್ತು, ಶ್ರಮ, ತಾಳ್ಮೆಯನ್ನು ರೂಢಿಸಿಕೊಂಡು ಪರಿಶ್ರಮದಿಂದ ಬದುಕನ್ನು ರೂಪಿಸಿಕೊಳ್ಳಬೇಕು.”
ಎಂದು ಕಿನ್ನಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕರಾದ ಶ್ರೀ ಶಂಭುಲಿಂಗಪ್ಪ ಹಾರೋಗೇರಿಯವರು ತಮ್ಮ ಹಳೆಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕುವೆಂಪು ಶತಮಾನೋತ್ಸವ ಮಾದರಿಯ ಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೌಲಪೇಟೆ ಮತ್ತು ಸರ್ಕಾರಿ ಪ್ರೌಢಶಾಲೆ ಕಿನ್ನಾಳ ಮೂರು ಶಾಲೆಗಳಲ್ಲಿ ಕಲಿತ 2005 ಮತ್ತು 2006ನೇ ಸಾಲಿನ ನೇ ಎಸ್ ಎಸ್ ಎಲ್ ಸಿ ಬ್ಯಾಚಿನ ವಿದ್ಯಾರ್ಥಿಗಳ ವತಿಯಿಂದ ನಡೆದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
20 ವರ್ಷಗಳ ಹಿಂದೆ ಕಿನ್ನಾಳ ಗ್ರಾಮದ ಈ ಮೂರು ಶಾಲೆಗಳಲ್ಲಿ ಕಲಿತ ಎಲ್ಲಾ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ‘ಗುರುವಂದನಾ’ ಮತ್ತು ‘ಸ್ನೇಹ ಸಮ್ಮಿಲನ’ ಕಾರ್ಯಕ್ರಮವನ್ನು ಹಮ್ಮಿಕೊಂಡು, ಅಂದಿನ ಬಾಲ್ಯದ ದಿನದ ನೆನಪುಗಳನ್ನು ಮಾಡಿಕೊಂಡರು. ನಂತರ ಕಾರ್ಯಕ್ರಮವನ್ನು ಉದ್ಘಾಟಿಸಿದ ಶರಣಪ್ಪ ಎ. ಜಿ. ನಿವೃತ್ತ ಪ್ರಾಚಾರ್ಯರು ಮಾತನಾಡಿ,
“ವಿದ್ಯಾರ್ಥಿಗಳಿಗೆ ಸಂಸ್ಕಾರಯುತವಾದ ಶಿಕ್ಷಣವನ್ನು ನೀಡಬೇಕು, ಅಂದಾಗ ಮಾತ್ರ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಜ್ಞಾನ ಮತ್ತು ಗುರು ಪರಂಪರೆಯನ್ನು ವಿದ್ಯಾರ್ಥಿಗಳಾದವರು ಸದಾ ಸ್ಮರಿಸಬೇಕೆಂದು ಅವರು ನುಡಿದರು. ಮುಂದುವರೆದು ಮಾತನಾಡಿದ ಅವರು, ಇಂತಹ ಸಂಸ್ಕಾರವುಳ್ಳ ವಿದ್ಯಾರ್ಥಿಗಳ ಬಳಗವು ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮೂರು ಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದು, ತಮ್ಮ ವಿದ್ಯಾರ್ಥಿಗಳಿಂದ ಗೌರವನ್ನು ಸ್ವೀಕರಿಸಿದರು. ನಂತರ ನಾಗರಾಜ ಸಿರಿಗೇರಿ, ಶ್ರೀಮತಿ ವಿಜಯಲಕ್ಷ್ಮಿ, ಶ್ರೀಮತಿ ನಮಶ್ರೀ, ಶ್ರೀ ಮಾರುತಿ ಹಂಚಿನಾಳ ಶ್ರೀ ವೀರೇಶ್ , ಶ್ರೀ ಗಾದಿನಿಂಗಜ್ಜ ,ರಫಿ ,ಶ್ರೀ ಕಾಂತ, ಮಂಜುಳಾ , ಮೊದಲಾದ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಪ್ರಸ್ತಾವಿಕವಾಗಿ, ಈ ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ, ಅಂತರಾಷ್ಟ್ರೀಯ ಜಾನಪದ ಕಲಾವಿದ ಮೆಹಬೂಬ್ ಕಿಲ್ಲೇದಾರ್ ಮಾತನಾಡಿದರು.
ಶ್ರೀಮತಿ ಶೃತಿ ಮೇಣೆದಾಳ ಹಾಗೂ ತಂಡದವರು ಪ್ರಾರ್ಥನೆ ಮಾಡಿದರು.
ವೇದಿಕೆಯ ಮೇಲಿರುವ ಅತಿಥಿಗಳಿಗೆ ಶ್ರೀಮತಿ ಸಾವಿತ್ರಿ ಶಿಕ್ಷಕಿಯರು ಸ್ವಾಗತಿಸಿದರೆ, ಕಾರ್ಯಕ್ರಮದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ ಶಂಕರ್ ದೇವಿ ,ನಾಗರಾಜ ಶೆಲ್ಲೆದ ಹಾಗೂ ಶ್ರೀಮತಿ ಆಶಾ ಅವರು ನಿರೂಪಿಸಿದರು. ಕೊನೆಯಲ್ಲಿ ವಂದನಾರ್ಪಣೆಯನ್ನು ಶ್ರೀಮತಿ ಗಿರಿಜಾ ಉಪನ್ಯಾಸಕಿಯವರು ಅರ್ಪಿಸಿದರು.