ಬಿಜೆಪಿ ನಾಯಕರಿಂದ ಒಕ್ಕಲೆಬ್ಬಿಸುವ ಹುನ್ನಾರ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ

- ಕ್ಷೇತ್ರದ ಸಮಗ್ರ ನೀರಾವರಿಗೆ ಆದ್ಯತೆ  - ಐದು ವರ್ಷದಲ್ಲಿ ಎಲ್ಲ ಏತ ನೀರಾವರಿ ಯೋಜನೆ ಪೂರ್ಣ

Get real time updates directly on you device, subscribe now.

ಅಕ್ಟೋಬರ್ ಅಂತ್ಯಕ್ಕೆ ಬಹದ್ದೂರ್ ಬಂಡಿ-ನವಲಕಲ್ ಏತ ನೀರಾವರಿ ಯೋಜನೆ ಪೂರ್ಣ


ಕೊಪ್ಪಳ:
ಅಕ್ಟೋಬರ್ ಅಂತ್ಯಕ್ಕೆ ಬಹದ್ದೂರ್ ಬಂಡಿ-ನವಲಕಲ್ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ, ರೈತರ ಜಮೀನುಗಳಿಗೆ ನೀರು ಪೂರೈಕೆ ಮಾಡಲಾಗುವುದು ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.

ತಾಲೂಕಿನ ಹ್ಯಾಟಿ-ಮುಂಡರಗಿ ರಸ್ತೆಯಲ್ಲಿ ನಿರ್ಮಿಸಿರುವ ಪಂಪ್ ಹೌಸ್ ಗೆ ಸೋಮವಾರ ಭೇಟಿ ನೀಡಿ, ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಕೊಪ್ಪಳ ಕ್ಷೇತ್ರ ಒಣ ಬೇಸಾಯದಿಂದ ಕೂಡಿದ್ದು, ಹತ್ತಿರದಲ್ಲೇ ತುಂಗಭದ್ರಾ ಜಲಾಶಯ ಇದ್ದರೂ ನೀರಿನ ಸದ್ಬಳಕೆಯಾಗುತ್ತಿಲ್ಲ ಎಂಬ ಕೊರಗು ಇತ್ತು. ಈ ನಿಟ್ಟಿನಲ್ಲಿ ಕ್ಷೇತ್ರದ ರೈತರ ಜಮೀನುಗಳಿಗೆ ನೀರು ಒದಗಿಸುವ ಉದ್ದೇಶದಿಂದ ಬಹದ್ದೂರ್ ಬಂಡಿ ಮತ್ತು ನವಲಕಲ್ ಏತ ನೀರಾವರಿ ಯೋಜನೆಗೆ ಸುಮಾರು 188 ಕೋಟಿ ರೂ., ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದು, ಮೊದಲ ಹಂತದಲ್ಲಿ 54 ಕೋಟಿ ರೂ., ಅನುದಾನದಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ. ಇನ್ನೂ ಬಾಕಿಯಿರುವ ಅನುದಾನವನ್ನು ಸರಕಾರದಿಂದ ತ್ವರಿತವಾಗಿ ಬಿಡುಗಡೆಗೊಳಿಸಿ ಅಕ್ಟೋಬರ್ ಅಂತ್ಯಕ್ಕೆ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸುವೆ. ಈ ಯೋಜನೆಯಿಂದ ಸುಮಾರು 15ರಿಂದ 20 ಸಾವಿರ ಹೆಕರೆ ಭೂಮಿ
ನೀರಾವರಿಯಾಗಿ ಪರಿವರ್ತನೆಯಾಗಲಿದೆ ಎಂದರು.

ಬೆಟಗೇರಿ-ಅಳವಂಡಿ ಏತ ನೀರಾವರಿಗೆ 88 ಕೋಟಿ ರೂ. ಅನುದಾನ ಹಾಗೂ ಸಿಂಟಾಲೂರು ಏತ ನೀರಾವರಿ ಯೋಜನೆಯ ಕಾಲುವೆ 73 ಕಿ.ಮೀ ವರೆಗೆ 48 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಚೆಕ್ಡ್ಯಾಂ ನಿರ್ಮಾಣ, ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಿದ್ದು, ಇದರಿಂದ ಕ್ಷೇತ್ರದ ಸುಮಾರು 30 ಸಾವಿರ ಎಕರೆ ಭೂಮಿಯು ನೀರಾವರಿಯಾಗಿದೆ. ಒಣ ಬೇಸಾಯದ ರೈತರಿಗೆ ಹೆಚ್ಚು ಸಹಕಾರಿಯಾಗಲಿದೆ
ಎಂದರು.

ಸಿಎಂ ಸಿದ್ಧರಾಮಯ್ಯ ಅವರು ಹಿಂದಿನ ತಮ್ಮ ಅಧಿಕಾರದ ಅವಧಿಯಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಿ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ, ರೈತರು ಸಹಕಾರಿ ಸಂಘಗಳಲ್ಲಿ ಮಾಡಿದ ಸಾಲ ಮನ್ನಾ, ಕೃಷಿ ಭಾಗ್ಯ ಯೋಜನೆ ಅಡಿ ಕೃಷಿಹೊಂಡಗಳ ನಿರ್ಮಾಣ ಹೀಗೆ ಹತ್ತು ಹಲವು ಅನುಕೂಲತೆಗಳನ್ನು ಒದಗಿಸಿ, ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ನಮ್ಮ ಅಧಿಕಾರವಧಿಯ ಈ ಐದು ವರ್ಷದಲ್ಲಿ ಕ್ಷೇತ್ರದಲ್ಲಿ ಬಾಕಿ ಉಳಿದ ಎಲ್ಲ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ, ಕ್ಷೇತ್ರದ ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ ಎಂದರು.

ಬಿಜೆಪಿಗೆ ತಕ್ಕಪಾಠ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿವರಿಗೆ ಕ್ಷೇತ್ರದ ಅಭಿವೃದ್ಧಿಗೆ, ನೀರಾವರಿ ಯೋಜನೆಗಳಿಗೆ ಅನುದಾನ ನೀಡುವಂತೆ ಅಂಗಲಾಚಿದರೂ ಅನುದಾನ ನೀಡದೇ ತಾರತಮ್ಯ ಎಸಗಿದರು. ರಾಜ್ಯದಲ್ಲಿ ಎಲ್ಲಿ ಕಾಂಗ್ರೆಸ್ ಶಾಸಕರಿದ್ದರೋ ಅಲ್ಲಿ ಅನುದಾನಕ್ಕೆ ಕತ್ತರಿ ಹಾಕಿದರು. ಆದರೆ, ಸಿದ್ದರಾಮಯ್ಯನವರ ತಮ್ಮ ಹಿಂದಿನ ಸರಕಾರದಲ್ಲಿ ಯಾವ ಪಕ್ಷದ ಶಾಸಕರೆಂದು ನೋಡದೇ ಎಲ್ಲರಿಗೂ ಸಮಾನವಾಗಿ ಅನುದಾನ ನೀಡಿ, ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದರು. ಅನುದಾನದಲ್ಲಿ ಮಲತಾಯಿ ಧೋರಣೆ ಹೊಂದಿದ್ದ ಬಿಜೆಪಿ ಸರಕಾರಕ್ಕೆ ಈ ಬಾರಿ ಕ್ಷೇತ್ರ ಮತ್ತು ರಾಜ್ಯದ ಜನರೇ ತಕ್ಕಪಾಠ ಕಲಿಸಿ, ಅವರನ್ನು ಮನೆಗೆ ಕಳಿಸುವ ಕೆಲಸ ಮಾಡಿದ್ದಾರೆ ಎಂದರು.

ನಗರಾಭಿವೃದ್ಧಿ ಹೆಚ್ಚಿನ ಆದ್ಯತೆ:
ಕೊಪ್ಪಳ ನಗರದ ಜನತೆಗೆ 24*7 ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಸುಮಾರು 150 ಕೋಟಿ ರೂ., ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿದೆ. ಶೀಘ್ರದಲ್ಲೇ ಜನರಿಗೆ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುವೆ ಎಂದರು.

ಮಳೆ ಮಲ್ಲೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಚಾಲನೆ:
ಐತಿಹಾಸಿಕ ಹಿನ್ನೆಲೆಯುಳ್ಳ ಮಳೆ ಮಲ್ಲೇಶ್ವರ ದೇವಸ್ಥಾನಕ್ಕೆ ಮೂಲಭೂತ ಸೌಕರ್ಯದ
ಹಿತದೃಷ್ಟಿಯಿಂದ ಸುಮಾರು ಒಂದು ಕೋಟಿ ರೂ., ಅನುದಾನದಲ್ಲಿ ಭಕ್ತರಿಗೆ ಶುದ್ಧ ಕುಡಿಯುವ ನೀರಿನ ಘಟಕ, ಶೌಚಾಲಯ, ಹೈಮಾಸ್ಕ್ ಲೈಟ್ ಅಳವಡಿಕೆ ಮತ್ತು ರಸ್ತೆ ದುರಸ್ತಿ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಬರುವ ದಿನದಲ್ಲಿ ಮತ್ತಷ್ಟು ಅನುದಾನ ಬಿಡುಗಡೆಗೊಳಿಸಲಾಗುವುದು.

ಬಿಜೆಪಿ ನಾಯಕರಿಂದ ಒಕ್ಕಲೆಬ್ಬಿಸುವ ಹುನ್ನಾರ:
ರಾಜ್ಯ ಸರಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿಗಳ ಬಗ್ಗೆ ಜನರಿಗೆ ಅಪನಂಬಿಕೆ ಹುಟ್ಟಿಸಿ ಜನರನ್ನು ಒಕ್ಕಲೆಬ್ಬಿಸುವ ಹುನ್ನಾರವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಗ್ಯಾರಂಟಿ ಜಾರಿಯಿಂದ ಬಿಜೆಪಿಯವರಿಗೆ ಭಯ ಶುರುವಾಗಿದೆ. ಹೀಗಾಗಿ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಶಕ್ತಿ ಯೋಜನೆಯಿಂದ ಈಗಾಗಲೇ ಕೋಟ್ಯಾಂತರ ಮಹಿಳೆಯರಿಗೆ ಅನುಕೂಲವಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮಗೆ ರಾಜ್ಯದ ಅಭಿವೃದ್ಧಿ ಮತ್ತು ಜನರ ಹಿತ ಮುಖ್ಯವಾಗಿದೆ. ಚುನಾವಣೆಯಲ್ಲಿ ಘೋಷಣೆ ಮಾಡಿದ ಎಲ್ಲ ಪ್ರಣಾಳಿಕೆ ಜತೆಗೆ ಐದು ಗ್ಯಾರಂಟಿಗಳನ್ನು ಖಂಡಿತವಾಗಿ ಈಡೇರಿಸುತ್ತೇವೆ. ಇದರಲ್ಲಿ ಯಾವುದೇ ಸಂಶಯಬೇಡ ಎಂದರು.

ಈ ಸಂಧರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಸ್. ಬಿ ನಾಗರಳ್ಳಿ, ಮಾಜಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಜುಲ್ಲು ಖಾದ್ರಿ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಗೂಳಪ್ಪ ಹಲಿಗೇರಿ, ಪ್ರಸನ್ನ ಗಡದ, ನಗರಸಭೆಯ ಅಧ್ಯಕ್ಷರಾದ ಶಿವಗಂಗ ಶಿವರಡ್ಡಿ ಭೂಮಕ್ಕನನವರ್, ನಗರಸಭೆಯ ಸದಸ್ಯರಾದ ಮುತ್ತುರಾಜ್ ಕುಷ್ಟಗಿ, ಮಹೇಂದ್ರ ಚೋಪ್ರಾ,ತೋಟಪ್ಪ ಕಾಮನೂರು, ಶರಣಪ್ಪ ಸಜ್ಜನ,ಗುರುರಾಜ್ ಹಲಿಗೇರಿ, ಅಕ್ಬರ್, knnl ಇಇ ಶಿವಶಂಕರ, AEE ಧರ್ಮರಾವ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: