ವ್ಯಸನಗಳಿಂದ ದೂರವಿದ್ದು, ಗುರಿಯತ್ತ ಗಮನವಿರಲಿ: ರವಿಕುಮಾರ
ಜನಸ್ನೇಹಿ ಪೇದೆ ಮಾರುತಿ ಪೂಜಾರ್ಗೆ ಗೌರವ ಸನ್ಮಾನ
//ಅಳವಂಡಿ ಕಾಲೇಜಿನಲ್ಲಿ ಮಾದಕ ದ್ರವ್ಯ ವಿರೋಧಿ ದಿನಾಚರಣೆ//
–
ಕೊಪ್ಪಳ: ಇಂದಿನ ಯುವಜನತೆ ವ್ಯಸನಗಳಿಂದ ದೂರವಿರಬೇಕು. ಸಾಧನೆಯ ಗುರಿಯ ಕಡೆಗೆ ಗಮನ ಕೊಡಬೇಕು. ಬೀಡಿ, ಸಿಗರೇಟ್, ಗುಟ್ಕಾ, ಗಾಂಜಾಗಳಂಥ ಮಾದಕ ವಸ್ತುಗಳು ಬದುಕನ್ನು ಸರ್ವನಾಶ ಮಾಡುತ್ತವೆ ಎಂದು ಪ್ರೊಬೇಷನರಿ ಡಿವೈಎಸ್ಪಿ ರವಿಕುಮಾರ.ಕೆ. ಹೇಳಿದರು.
ಕೊಪ್ಪಳ ತಾಲೂಕಿನ ಅಳವಂಡಿಯ ಶ್ರೀ ಶಿವಮೂರ್ತಿಸ್ವಾಮಿ ಇನಾಂದಾರ ಕಟ್ಟಿಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವ್ಯಾಸಂಗದ ಮಹತ್ವದ ಘಟ್ಟ ಎಸ್ಎಸ್ಎಲ್ಸಿ. ಹತ್ತನೇ ತರಗತಿ ಮುಗಿಯುತ್ತಿದ್ದಂತೆ ವಿದ್ಯಾರ್ಥಿಗಳು ಬೇರೊಂದು ಲೋಕಕ್ಕೆ ತೆರೆದುಕೊಳ್ಳುತ್ತಾರೆ. ಅಧ್ಯಯನದ ಲೋಕ ಪ್ರವೇಶಿಸಿದವರು ಗುರಿಯ ಕಡೆಗೆ ಗಮನ ಹರಿಸುತ್ತಾರೆ. ಇನ್ನೊಂದು ಲೋಕದತ್ತ ಆಕರ್ಷಿತರಾದವರು ಹೆತ್ತವರಿಗೆ ಹೊರೆಯಾಗುತ್ತಾರೆ ಎಂದು ತಿಳಿ ಹೇಳಿದರು.
ಮಾದಕ ವಸ್ತುಗಳು ಬದುಕನ್ನು ನಾಶ ಮಾಡುತ್ತವೆ. ಮಾದಕ ವ್ಯಸನಕ್ಕೊಳಗಾದವರು ಗುರಿಯತ್ತ ಹೊರಳುವುದು ಕಷ್ಟಸಾಧ್ಯ. ವಿದ್ಯಾರ್ಥಿ ಜೀವನ ಕಳೆದರೆ ಮತ್ತೇ ದೊರಕದು. ಈ ಜೀವನವನ್ನು ವೃಥಾ ವ್ಯರ್ಥ ಮಾಡಬೇಡಿ. ಒಳ್ಳೇಯದನ್ನು ಕಲಿಯಿರಿ, ಕೆಟ್ಟದ್ದನ್ನು ಬಿಟ್ಟು ಬಿಡಿ ಎಂದು ಕರೆ ನೀಡಿದರು.
ಬದುಕಿನಲ್ಲಿ ಗುರಿ ಇರಬೇಕು. ಗುರಿ ಸಾಧಿಸಲು ಸದಾ ಕ್ರಿಯಾಶೀಲವಾಗಿರಬೇಕು. ಓದು ಎಲ್ಲವೂ ಅಲ್ಲ ನಿಜ, ಆದರೆ ಓದಿಲ್ಲದೇ ಏನೂ ಇಲ್ಲ. ಓದುವುದರಿಂದ ಕಳೆದುಕೊಳ್ಳುವುದೇನಿಲ್ಲ, ಬದಲಾಗಿ ಬದುಕಿನ ಒಂದಲ್ಲ ಒಂದು ಹಂತದಲ್ಲಿ ನಮ್ಮ ನೆರವಿಗೆ ಬರುತ್ತದೆ. ವಿದ್ಯಾರ್ಥಿಗಳ ಚಿತ್ತ ಅಧ್ಯಯನದತ್ತ ಇರಬೇಕೇ ಹೊರತು ವ್ಯಸನಗಳತ್ತ ಅಲ್ಲ, ವ್ಯಸನಗಳಿಂದ ವ್ಯಕ್ತಿ ಮಾತ್ರವಲ್ಲ, ಎಷ್ಟೋ ಕುಟುಂಬಗಳು ಬೀದಿಗೆ ಬಿದ್ದ ನಿದರ್ಶನಗಳಿವೆ ಎಂದು ಕೆಲ ದೃಷ್ಟಾಂತಗಳನ್ನು ವಿವರಿಸಿದರು.
ಮುಖ್ಯಪೇದೆ ಮಾರುತಿ ಪೂಜಾರ ಮಾತನಾಡಿ, ನನ್ನ ಸೇವೆಯುದ್ದಕ್ಕೂ ಮದ್ಯ, ಸಿಗರೇಟ್, ಗಾಂಜಾ ವ್ಯಸನಕ್ಕೆ ಒಳಗಾದವರನ್ನು ಸರಿ ದಾರಿಗೆ ತರುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಇದಕ್ಕಾಗಿ ಎಷ್ಟೋ ಸಲ ವರ್ಗಾವಣೆಯಾಗಿದ್ದೂ ಉಂಟು, ಹಾಗೆಯೇ ಸಾರ್ವಜನಿಕರ ಒತ್ತಾಯದ ಮೇರೆಗೆ ವರ್ಗಾವಣೆ ರದ್ದಾಗಿದ್ದು ಉಂಟು ಎಂದು ಸಾರ್ವಜನಿಕರ ಸಹಕಾರ ಸ್ಮರಿಸಿದರು.
ಪೊಲೀಸರೆಂದರೆ ಅವರು ಸಹ ಮನುಷ್ಯರೇ. ಅವರೇನು ಪ್ರತ್ಯೇಕ ಲೋಕದಿಂದ ಇಳಿದು ಬಂದವರಲ್ಲ. ಎಷ್ಟೋ ಜನ ಪೊಲೀಸರು, ಅಧಿಕಾರಿಗಳು ಬಡತನದ ಬೇಗೆಯಲ್ಲೇ ಬೆಂದು ಜನಸೇವೆಗೆ ಹೆಸರಾದವರಿದ್ದಾರೆ. ಬಹುತೇಕ ಪೊಲೀಸ್ ಇಲಾಖೆ ಸಾರ್ವಜನಿಕ ಸೇವೆಗೆ ಮುಡಿಪಾಗಿದೆ. ಕೆಲವರು ಸರಿ ಇಲ್ಲ ಎಂದ ಮಾತ್ರಕ್ಕೆ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ಸರಿಯಲ್ಲ. ಪೊಲೀಸರೆಂದರೆ ಕೀಳರಿಮೆ ಬೇಡ, ಭಯ ಬೇಡ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಸಹಾಯಕರು ಎಂದು ಭಾವಿಸಿ ಸಹಕರಿಸಿ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಗವಿಸಿದ್ದಪ್ಪ ಮುತ್ತಾಳ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿನ ಘನತೆ, ಗೌರವವನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು. ನಿಮ್ಮ ಸಾಧನೆಯನ್ನು ಕಂಡು ನಾವು ಸಂಭ್ರಮಿಸಬೇಕು. ವ್ಯಸನಗಳ ದಾಸರಾಗಿ ಹೆತ್ತವರು ಸೇರಿದಂತೆ ನಿಮ್ಮ ಪ್ರೀತಿಪಾತ್ರರು ಸಂಕಟಪಡುವಂತೆ ಆಗಬಾರದು ಎಂದು ಕಿವಿ ಮಾತು ಹೇಳಿದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಹಾಗೂ ಉಪನ್ಯಾಸಕ ಬಸವರಾಜ ಕರುಗಲ್ ಮಾತನಾಡಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಹಾಗೂ ಸಹಾಯಕ ಪ್ರಾಧ್ಯಾಪಕ ಮಲ್ಲಿಕಾರ್ಜುನ ಬ್ಯಾಲಹುಣಸಿ ಸ್ವಾಗತಿಸಿ, ನಿರೂಪಿಸಿದರು. ದೀಪಾ, ಭಾರ್ಗವಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಸಹಾಯಕ ಪ್ರಾಧ್ಯಾಪಕ ಇಮಾಮ್ಸಾಬ್ ಪ್ರಾಸ್ತಾವಿಕ ಮಾತನಾಡಿದರು. ದೈಹಿಕ ನಿರ್ದೇಶಕ ಸಿದ್ದಾಚಾರಿ.ಬಿ.ವಂದಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ ಸಿಬ್ಬಂದಿ ಹಸೀನಾ ಬಾನು, ಗೋಣಿಬಸಪ್ಪ.ಬಿ, ವೀರಭದ್ರಪ್ಪ, ಈಶಪ್ಪ ಮೇಟಿ, ಸಿದ್ದು ಕಡ್ಲಿಕೊಪ್ಪ, ಬೋರಯ್ಯ, ವೆಂಕಟೇಶ.ಎಸ್., ಗ್ರಂಥಪಾಲಕಿ ಗೌತಮಿ, ಬೋಧಕೇತರ ಸಿಬ್ಬಂದಿ ವೀರಣ್ಣ ಪೂಜಾರ, ದುರ್ಗಪ್ಪ, ಹನುಮವ್ವ ಹಾಗೂ ಕಾಲೇಜಿನ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಇದ್ದರು.
ರವಿಕುಮಾರ-ಮಾರುತಿಯವರಿಗೆ ಸನ್ಮಾನ:
ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಉದ್ಘಾಟಕರಾಗಿ ಕಾಲೇಜಿಗೆ ಆಗಮಿಸಿದ್ದ ಪ್ರೊಬೇಷಸರಿ ಡಿವೈಎಸ್ಪಿ ರವಿಕುಮಾರ.ಕೆ. ಹಾಗೂ ಜನಸ್ನೇಹಿ ಪೊಲೀಸ್ ಎಂದೇ ಗುರುತಿಸಿಕೊಂಡಿರುವ ಮುಖ್ಯಪೇದೇ ಮಾರುತಿ ಪೂಜಾರ ಅವರನ್ನು ಕಾಲೇಜಿನ ಸಿಬ್ಬಂದಿ ಸತ್ಕರಿಸಿ, ಗೌರವಿಸಿದರು
Comments are closed.