ಕನಕಗಿರಿ ಉತ್ಸವ-2024 ಸಿದ್ಧತೆ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ

Get real time updates directly on you device, subscribe now.

ಕನಕಗಿರಿ ಉತ್ಸವ 2024ರ ಸಿದ್ಧತೆಗಳು ಜಿಲ್ಲಾ ಉಸ್ತುವಾರಿ ಸಚಿವರ ತವರು ಕ್ಷೇತ್ರ ಕನಕಗಿರಿಯಲ್ಲಿ ಭರ್ಜರಿಯಾಗಿ ನಡೆದಿವೆ.
ಫೆ.24ರಂದು ತವರು ಕ್ಷೇತ್ರ ಕನಕಗಿರಿ ಆಗಮಿಸಿದ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಉತ್ಸವ ಮೈದಾನ ಸೇರಿದಂತೆ ವಿವಿಧೆಡೆ ಸಂಚರಿಸಿ ಸಿದ್ಧತೆಯನ್ನು ಪರಿಶೀಲಿಸಿದರು.
ಮೊದಲಿಗೆ ಉತ್ಸವದ ಮೈದಾನಕ್ಕೆ ತೆರಳಿ ಅಲ್ಲಿ ಮುಖ್ಯ ವೇದಿಕೆಯ ನಿರ್ಮಾಣದ ಸಿದ್ಧತೆಯ ಮಾಹಿತಿ ಪಡೆದರು. ಮುಖ್ಯ ವೇದಿಕೆಯ ನಿರ್ಮಾಣ ಕಾರ್ಯವನ್ನು ಕೂಡಲೇ ಆರಂಭಿಸಲು ಹಾಗೂ ಧೂಳು ಆಗದಂತೆ ಕಾಲಕಾಲಕ್ಕೆ ನೀರುಣಿಸಿ ಮೈದಾನವನ್ನು ಅಚ್ಚುಕಟ್ಟಾಗಿ ಸಿದ್ಧಗೊಳಿಸಲು ಸೂಚನೆ ನೀಡಿದರು.
ಬಳಿಕ ಎಪಿಎಂಸಿ ಆವರಣದಲ್ಲಿನ ಕಲ್ಯಾಣ ಮಂಟಪದಲ್ಲಿ ಉತ್ಸವದ ವಿವಿಧ ಸಮಿತಿಗಳ ಅಧ್ಯಕ್ಷರು ಮತ್ತು ಕನಕಗಿರಿ ಪಟ್ಟಣದ ನಾಗರಿಕರು ಮತ್ತು ವಿವಿಧ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು.
ಇದೆ ವೇಳೆ ಸಚಿವರು ವಿವಿಧ ಸಮಿತಿಗಳ ಸಿದ್ಧತೆಯ ಬಗ್ಗೆ ಆಯಾ ಸಮಿತಿಗಳ ಅಧ್ಯಕ್ಷರಿಂದ ಸಮಗ್ರ ಮಾಹಿತಿ ಪಡೆದರು. ಉತ್ಸವಕ್ಕೆ ದಿನ ನಿಗದಿಯಾದ ದಿನದಿಂದ ಇಲ್ಲಿವರೆಗಿನ ಸಿದ್ಧತೆ ಬಗ್ಗೆ ಆಯಾ ಸಮಿತಿಗಳಿಂದ ನಡೆದ ನಾನಾ ಕಾರ್ಯಗಳ ಬಗ್ಗೆ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಉತ್ಸವ ಹಿನ್ನೆಲೆಯಲ್ಲಿ ಈಗಾಗಲೇ ನಿರ್ಣಯಿಸಿದಂತೆ ನಾನಾ ಕ್ರೀಡಾಕೂಟಗಳಿಗೆ ಫೆ.28ರಂದು ಅಧಿಕೃತವಾಗಿ ಚಾಲನೆ ನೀಡಲಾಗುವುದು. ಮಾರ್ಚ 1ರಂದು ಬೆಳಗ್ಗೆ ಮ್ಯಾರಾಥಾನ್ ಮತ್ತು ಮಧ್ಯಾಹ್ನ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಮಾ.2 ಮತ್ತು ಮಾ.3ರಂದು ಉತ್ಸವದ ಕಾರ್ಯಕ್ರಮಗಳು ಪೂರ್ವನಿಗದಿಯಂತೆ ನಡೆಯಲಿವೆ ಎಂದು ತಿಳಿಸಿದರು. ಕವಿಗೋಷ್ಠಿ ಮತ್ತು ವಿಚಾರಗೋಷ್ಠಿ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳು ನಿಗದಿಪಡಿಸಿದ ಅವಧಿಯಲ್ಲಿ ನಡೆಯುವಂತೆ ನೋಡಿಕೊಳ್ಳಲು ವೇದಿಕೆಯ ಸಮಿತಿಯ ಅಧಿಕಾರಿಗಳಿಗೆ ಸೂಚಿಸಿದರು. ಮೆರವಣಿಗೆಯು ಈ ಬಾರಿ ವಿಶೇಷತೆಯಿಂದ ನಡೆಯಬೇಕು. ಇದಕ್ಕೆ ಸಾರ್ವಜನಿಕರು ಸಹಕರಿಸಿ ಹಬ್ಬದಂತೆ ಆಚರಣೆ ಮಾಡಬೇಕು ಎಂದು ಮನವಿ ಮಾಡಿದರು.
ಸಾರ್ವಜನಿಕರಲ್ಲಿ ಮನವಿ: ಕನಕಗಿರಿ ಉತ್ಸವ ಬರೀ ಅಧಿಕಾರಿಗಳ ಉತ್ಸವ ಆಗಬಾರದು. ಇದರಲ್ಲಿ ಕನಕಗಿರಿ ಸೇರಿದಂತೆ ಜಿಲ್ಲೆಯ ಎಲ್ಲಾ ಜನರು ಸಕ್ರಿಯ ಭಾಗಿಯಾಗಬೇಕು. ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು. ಮಾರ್ಚ 2 ಮತ್ತು ಮಾರ್ಚ 3ರಂದು ಕನಕಗಿರಿ ಪಟ್ಟಣ ಸೇರಿದಂತೆ ಕ್ಷೇತ್ರದಲ್ಲಿ ಹಬ್ಬದ ಸಂಭ್ರಮ ಎಲ್ಲೆಡೆ ಕಾಣಬೇಕು. ಇದು ನಮ್ಮೆಲ್ಲರ ಉತ್ಸವವಾಗಿದೆ. ಯಾವುದೇ ರೀತಿಯ ಬೇಧ-ಭಾವ ಮಾಡದೇ ತಾರತಮ್ಯ ಮಾಡದೇ ಎಲ್ಲರೂ ಉತ್ಸವದಲ್ಲಿ ಭಾಗಿಯಾಗಿ ಇದು ಜನೋತ್ಸವವಾಗಲು ಸಹಕಾರ ನೀಡಬೇಕು ಎಂದು ಸಚಿವರು ಇದೆ ವೇಳೆ ಕನಕಗಿರಿ ಕ್ಷೇತ್ರದ ಸಾರ್ವಜನಿಕರಲ್ಲಿ ಮತ್ತು ಜಿಲ್ಲೆಯ ಜನರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಸೀಲ್ದಾರರಾದ ವಿಶ್ವನಾಥ ಮುರಡಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಬಿ ಕಂದಕೂರ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳಾದ ರುದ್ರೇಶಪ್ಪ ಟಿ.ಎಸ್., ಕೃಷ್ಣ ಉಕ್ಕುಂದ, ಚಿದಾನಂದ ಕುರಿ, ಸುಧಾಕರ ಮಾನೆ, ನಾಗರಾಜ ಕೆ., ಗವಿಸಿದ್ದಪ್ಪ ಹೊಸಮನಿ, ಮುಖಂಡರಾದ ಕೆ.ಗಂಗಾಧರ ಸ್ವಾಮಿ, ವೀರೇಶಪ್ಪ ಸಮಗಂಡಿ, ಶ್ರೀನಿವಾಸ ರೆಡ್ಡಿ, ಸಂಗಪ್ಪ ಸಜ್ಜನ, ರಾಜೇಸಾಬ್ ನಂದಾಪುರ, ಶರಣೇಗೌಡ ಪಾಟೀಲ, ಬಸವಂತಗೌಡ್ರ, ಮಲ್ಲಿಕಾರ್ಜುನಗೌಡ, ರಾಜಶೇಖರ ಪಾಟೀಲ ಸೇರಿದಂತೆ ಇನ್ನೀತರ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಇದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: