ಪ್ರಧಾನಮಂತ್ರಿಗಳಿಂದ ಗಂಗಾವತಿ ಕೇಂದ್ರಿಯ ವಿದ್ಯಾಲಯ ಲೋಕಾರ್ಪಣೆ
ಜಿಲ್ಲೆಯ ಗಂಗಾವತಿಯ ಆನೆಗುಂದಿ ರಸ್ತೆ ಸಾಯಿ ನಗರದ ವಿರುಪಾಪುರದಲ್ಲಿ ನೂತನವಾಗಿ ನಿರ್ಮಾಣಗೊಂಡ ಪಿ.ಎಂ ಶ್ರೀ ಕೇಂದ್ರಿಯ ವಿದ್ಯಾಲಯದ ನೂತನ ಶಾಲಾ ಕಟ್ಟಡಕ್ಕೆ ಪ್ರಧಾನಂತ್ರಿಗಳಾದ ನರೇಂದ್ರ ಮೋದಿಜಿ ಅವರು ವರ್ಚುವಲ್ ಮೂಲಕ ಫೆಬ್ರವರಿ ೨೦ರಂದು ಚಾಲನೆ ನೀಡಿದರು.
ಗಂಗಾವತಿಯ ಪಿ.ಎಂ ಶ್ರೀ ಕೇಂದ್ರಿಯ ವಿದ್ಯಾಲಯದ ನೂತನ ಶಾಲಾ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಮಾರಂಭವನ್ನು ಕೊಪ್ಪಳ ಸಂಸದರಾದ ಕರಡಿ ಸಂಗಣ್ಣ ಅವರು ಉದ್ಘಾಟಿಸಿ ಮಾತನಾಡಿ, ಪ್ರಧಾನ ಮಂತ್ರಿಗಳಿಂದ ಇಂದು ಗಂಗಾವತಿಯ ಕೇಂದ್ರಿಯ ವಿದ್ಯಾಲಯದ ನೂತನ ಕಟ್ಟಡ ಉದ್ಘಾಟನೆಯಾಗಿದ್ದು, ನಮ್ಮೆಲ್ಲರಿಗೂ ಹರ್ಷ ತಂದಿದೆ. ಇಂದು ನಮ್ಮ ದೇಶದಲ್ಲಿ ೧೨೪೭ ಕಾರ್ಯಕ್ರಮಗಳು ಉದ್ಘಾಟನೆಗೊಂಡಿವೆ. ಇದರಲ್ಲಿ ೨೫ ಕೇಂದ್ರಿಯ ವಿದ್ಯಾಲಯಗಳು ಸೇರಿದ್ದು, ಗಂಗಾವತಿ ಮತ್ತು ಚಿಕ್ಕಮಗಳೂರು ಸೇರಿ ನಮ್ಮ ರಾಜ್ಯದ ಎರಡು ಕೇಂದ್ರಿಯ ವಿದ್ಯಾಲಯಗಳು ಲೋಕಾರ್ಪಣೆಯಾಗಿವೆ. ದೇಶದಲ್ಲಿ ೧೭ ನವೋದಯ ವಿದ್ಯಾಲಯದ ಕಟ್ಟಡಗಳು, ಐಐಟಿ, ಐಐಎಂ ಸೇರಿದಂತೆ ಉಚ್ಛ ಶಿಕ್ಷಣ ಸಂಸ್ಥೆಗಳ ಉದ್ಘಾಟನೆಯಾಗಿದ್ದು ಈ ದಿನ ಸೌಭಾಗ್ಯದ ದಿನವಾಗಿದೆ ಎಂದು ತಿಳಿಸಿದರು.
ಗಂಗಾವತಿಯ ಕೇಂದ್ರಿಯ ವಿದ್ಯಾಲಯದ ಕಟ್ಟಡ ಸ್ಥಾಪನೆಗಾಗಿ ಅಂದಿನ ಜಿಲ್ಲಾಧಿಕಾರಿಗಳಾದ ಪಿ.ಸುನೀಲ್ ಕುಮಾರ್, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ ಹಾಗೂ ಹಲವು ಮುಖಂಡರು, ಮಾಧ್ಯಮದವರು ಸೇರಿದಂತೆ ಮತ್ತಿತರರ ಸಹಕಾರ ಪ್ರಮುಖವಾಗಿದೆ. ಇದರ ಪ್ರತಿಫಲವಾಗಿ ಕೇಂದ್ರಿಯ ವಿದ್ಯಾಲಯದ ದೊಡ್ಡಮಟ್ಟದ ಕಟ್ಟಡ ನಿರ್ಮಾಣ ಸಾಧ್ಯವಾಗಿದೆ. ಶಿಕ್ಷಣವು ಸರ್ವಾಂಗೀಣ ಬದುಕನ್ನು ಕಟ್ಟಿಕೊಡುತ್ತದೆ ಎಂದು ಮಹಾತ್ಮ ಗಾಂಧೀಜಿಯವರು ತಿಳಿಸಿದ್ದು, ಇಂತಹ ವಿದ್ಯಾಲಯಗಳಿಂದ ಹೆಚ್ಚಳದಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ಸುಲಭವಾಗಿ ಸಿಗಲಿದೆ. ಹಿಂದಿನ ಕಾಲದಲ್ಲಿ ಆಸ್ತಿ, ಬಂಗಾರ, ವಜ್ರಗಳನ್ನು ಸಂಪಾದಿಸುವ ಬಗ್ಗೆ ಹೆಚ್ಚು ಗಮನವಿತ್ತು. ಆದರೆ, ಇಂದಿನ ಕಾಲದಲ್ಲಿ ಪ್ರತಿಯೊಬ್ಬರಲ್ಲಿಯೂ ಸಹ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ತಿಳಿವಳಿಕೆ ಬಂದಿದೆ ಎಂದರು.
ಗಂಗಾವತಿಯಿಂದ ಅಯೋಧೆಗೆ ರೈಲು ಆರಂಭಿಸುವುದೇ ನಮ್ಮ ಗುರಿಯಾಗಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದರಿಂದ ಗಂಗಾವತಿಯು ಒಂದು ಪ್ರವಾಸೋದ್ಯಮ ಕ್ಷೇತ್ರವಾಗುತ್ತದೆ. ರಾಮಭಕ್ತ ಹನುಮನ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟ ಈ ಭಾಗದಲ್ಲಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ. ಗಂಗಾವತಿ ರೈಲ್ವೆ ನಿಲ್ದಾಣದಿಂದ ಅಂಜನಾದ್ರಿ ಬೆಟ್ಟದವರೆಗೆ ಕೇಬಲ್ ಕಾರ್ ವ್ಯವಸ್ಥೆಯಾಗಬೇಕು ಎಂಬುದು ನಮ್ಮ ಮುಖ್ಯ ಉದ್ದೇಶವಾಗಿದೆ. ಗಂಗಾವತಿ ನಗರಕ್ಕೆ ಅಮೃತ ನಗರ ಯೋಜನೆ ದೊರೆತಿದ್ದು, ಕೇಂದ್ರ ಸರ್ಕಾರದಿಂದ ರೂ. ೧೨೦ ಕೋಟಿ ಬಿಡುಗಡೆಯಾಗಿದ್ದು, ನಮ್ಮೆಲ್ಲರಿಗೂ ಖುಷಿ ತಂದಿದೆ. ಈ ಅನುದಾನದಿಂದ ಗಂಗಾವತಿ ನಗರವನ್ನು ಶುಚಿತ್ವಗೊಳಿಸುವ ಕೆಲಸವಾಗಿದೆ. ಅಲ್ಲದೆ ಮನೆ-ಮನೆಗೆ ಶುದ್ಧ ಕುಡಿಯುವ ನೀರು, ಪಾರ್ಕ್ಗಳ ನಿರ್ಮಾಣ, ರಸ್ತೆಗಳ ನಿರ್ಮಾಣ ಸೇರಿ ಇತರ ಅಭಿವೃದ್ಧಿ ಕಾರ್ಯಗಳು ಸಾಧ್ಯವಾಗಿವೆ. ಇದಕ್ಕೆ ಪ್ರಮುಖ ಕಾರಣವಾಗಿರುವ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಯವರಿಗೆ ಅಭಿನಂದಿಸುತ್ತೇನೆ ಎಂದು ಹೇಳಿದರು.
ಹುಲಿಗೆ ಮೇಲ್ಸೇತುವೆ ಭೂಮಿಪೂಜೆ: ಕೊಪ್ಪಳ ಜಿಲ್ಲೆಯ ಶ್ರೀಕ್ಷೇತ್ರ ಹುಲಿಗಿಗೆ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಇಲ್ಲಿಗೆ ಬರುವ ಜನರಿಗೆ ಸುಗಮ ಸಂಚಾರಕ್ಕಾಗಿ ರೈಲ್ವೆ ಮೇಲ್ಸೇತುವೆ ಅತ್ಯಗತ್ಯವಾಗಿತ್ತು. ಈ ನಿಟ್ಟಿನಲ್ಲಿ ಸಾರ್ವಜನಿಕರ ಬಹುದಿನಗಳ ಬೇಡಿಕೆಯಂತೆ ಇದೇ ಫೆ.೨೬ಕ್ಕೆ ಹುಲಿಗಿ ರೈಲ್ವೆ ಮೇಲ್ಸೇತುವೆಗಾಗಿ ಭೂಮಿ ಪೂಜೆ ನಡೆಸಲು ಯೋಜಿಸಲಾಗಿದೆ. ತಮ್ಮ ಅವಧಿಯಲ್ಲಿ ಈ ಕಾರ್ಯ ಸಾಕಾರವಾಗುತ್ತಿರುವುದು ಸಂತಸ ತಂದಿದೆ ಎಂದು ಸಂಸದರು ತಿಳಿಸಿದರು.
ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಮಾತನಾಡಿ, ನಾನು ಸಹ ಕೇಂದ್ರಿಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ. ನಾವು ಕಲಿಯುವ ಸಂದರ್ಭದಲ್ಲಿ ಕೇಂದ್ರಿಯ ವಿದ್ಯಾಲಯಕ್ಕೆ ಸ್ವಂತ ಕಟ್ಟಡ ಹಾಗೂ ಇತರ ಹೆಚ್ಚಿನ ಸೌಲಭ್ಯಗಳು ಇರಲಿಲ್ಲ. ಶಿಕ್ಷಣದಿಂದ ಎಲ್ಲಾ ರೀತಿಯ ಅಭಿವೃದ್ಧಿ ಸಾಧ್ಯ. ಶಿಕ್ಷಣವು ಬದುಕನ್ನು ಕಟ್ಟಿಕೊಡುತ್ತದೆ. ಎಲ್ಲಾ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನ ನೀಡಬೇಕು. ಕೇಂದ್ರಿಯ ವಿದ್ಯಾಲಯದ ಸೌಲಭ್ಯ ಪಡೆದು ದೇಶಕ್ಕೆ ಕೀರ್ತಿ ತರಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ ಹಾಗೂ ಜಿ.ವೀರಪ್ಪ, ಕೇಂದ್ರಿಯ ವಿದ್ಯಾಲಯದ ಹಿರಿಯ ಅಧಿಕಾರಿಗಳಾದ ಪಿ.ಜಿ.ರಾಜು, ಪ್ರಾಂಶುಪಾಲದಾರ ಉಮೇಶ ಪ್ರಜಾಪತಿ, ಗಣ್ಯರಾದ ತಿಪ್ಪೇರುದ್ರಸ್ವಾಮಿ, ಗಿರಿಗೌಡ್ರ, ವಿರುಪಾಕ್ಷಪ್ಪ ಸಿಂಗನಾಳ, ಹನುಮಂತಪ್ಪ ನಾಯಕ, ಸಿದ್ದರಾಯಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Comments are closed.