ಅನ್ನದಾತ ರೈತರಿಗೆ ಸರ್ಕಾರ ವಿಶೇಷ ಯೋಜನೆಗಳು ರೂಪಿಸಬೇಕು: ನೇತ್ರಾಜ್ ಗುರುವಿನ ಮಠ

0

Get real time updates directly on you device, subscribe now.

ಗಂಗಾವತಿ: ರೈತ ದಿನಾಚರಣೆ ಭಾರತದ ಆಧಾರಸ್ತಂಭಗಳನ್ನು ಗೌರವಿಸುವ ದಿನ. ಭಾರತದ ರೈತರು ದೇಶದ ಆಹಾರ ಭದ್ರತೆಗೆ ಬಹಳ ಮುಖ್ಯ. ಅವರ ಕಠಿಣ ಪರಿಶ್ರಮದಿಂದಲೇ ನಾವು ಪ್ರತಿದಿನ ಆಹಾರ ಸೇವಿಸುತ್ತೇವೆ. ಅವರ ಕೊಡುಗೆಯನ್ನು ಗೌರವಿಸುವ ಸಲುವಾಗಿ ಪ್ರತಿ ವರ್ಷ ಡಿಸೆಂಬರ್-೨೩ ರಂದು ರಾಷ್ಟ್ರೀಯ ರೈತ ದಿನವನ್ನು ಆಚರಿಸಲಾಗುತ್ತದೆ. ರೈತ ದಿನಾಚರಣೆ ಎಂದರೆ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನ. ಭಾರತದ ೫ನೇ ಪ್ರಧಾನ ಮಂತ್ರಿಯಾಗಿದ್ದ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವನ್ನು ರೈತ ದಿನವಾಗಿ ಆಚರಿಸಲಾಗುತ್ತದೆ. ಅವರು ರೈತರ ಹಿತದೃಷ್ಟಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ದೇಶಕ್ಕೆ ಅನ್ನ ನೀಡುವ ರೈತ, ಪ್ರಸ್ತುತ ದಿನಮಾನಗಳಲ್ಲಿ ಬೆಂಬಲ ಬೆಲೆ ಇಲ್ಲದೆ, ಸಂಕಷ್ಟದಲ್ಲಿದ್ದು, ಆಹಾರ ಭದ್ರತೆ ಕಲ್ಪಿಸುವ ರೈತಾಪಿ ವರ್ಗಕ್ಕೆ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸುವುದರ ಮೂಲಕ ರೈತರ ಹಿತ ಕಾಪಾಡಬೇಕಿದೆ ಎಂದು ನೇತ್ರಾಜ್ ಗುರುವಿನ ಮಠ ಹೇಳಿದರು.

ಅವರು ಸೋಮವಾರದಂದು ಜಯನಗರದ ಮಹಾನ್ ಕಿಡ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ ರಾಷ್ಟ್ರೀಯ ರೈತರ ದಿನಾಚರಣೆಯ ಸಾಧಕ ರೈತರ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ದಿನಂಪ್ರತಿ ಸೇವಿಸುವ ಆಹಾರದ ಉತ್ಪಾದನೆಯಲ್ಲಿ ಸಾವಿರಾರು ಕೈಗಳ ಶ್ರಮವಿದೆ. ಅಲ್ಲಿ ಇಲ್ಲಿ ಸಾಲ ಮಾಡಿ ಬೆಳೆ ಕೈಗೆ ಬರುವ ಸಂದರ್ಭದಲ್ಲಿಯೇ ಅತಿವೃಷ್ಟಿ ಇಲ್ಲವೇ ಅನಾವೃಷ್ಟಿಯಿಂದ ಬೆಳೆ ನಷ್ಟಗೊಂಡು ಕೊನೆಗೆ ಆತ್ಮಹತ್ಯೆಯಂತಹ ದಾರಿ ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಇನ್ನೋರ್ವ ರೈತ ಮುಖಂಡ ಜೋಗದ ನಾರಾಯಣಪ್ಪ ನಾಯಕ ಮಾತನಾಡಿ ಗೋ ಹತ್ಯೆ ನಿಷೇಧ ಕಾಯ್ದೆ ಒಂದೆಡೆ ವರ ಆದರೆ ಮತ್ತೊಂದೆಡೆ ಶಾಪವಾಗಿದೆ. ವಯಸ್ಸಾದ ಹಸುಗಳಿಗೆ ಸಮರ್ಪಕವಾಗಿ ಮೇವು ನೀರು ಇಲ್ಲದೆ ಗೋ ಶಾಲೆಗಳಿಗೆ ಕಳುಹಿಸಬೇಕಾದ ಪರಿಸ್ಥಿತಿ ಇದೆ. ಇದಕ್ಕೆ ಸರ್ಕಾರ ಯಾವುದೇ ಪರಿಹಾರ ಸಹ ನೀಡದೇ ಇರುವುದು ರೈತರಿಗೆ ಶಾಪವಾಗಿ ಪರಿಣಮಿಸಿದೆ ಎಂದು ತಿಳಿಸಿದ ಅವರು ರೈತಾಪಿ ವರ್ಗದ ಸರ್ವತೋಮುಖ ಅಭಿವೃದ್ಧಿಗೆ, ಸರ್ಕಾರ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ, ಸಮರ್ಪಕವಾಗಿ ರಸಗೊಬ್ಬರ ವಿತರಣೆ, ಬೆಳೆ ನಷ್ಟದ ಸಂದರ್ಭದಲ್ಲಿ ಸಮರ್ಪಕವಾದ ಪರಿಹಾರ ಧನ ವಿತರಣೆ ಕಲ್ಪಿಸಲು ಮುಂದಾಗಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಸ್ವಾವಲಂಬಿ ರೈತರಾದ ರಮೇಶ್ ಸಾಲಿಗನೂರ್, ಶಿವರಾಜ ಸಾಲಿಗನೂರ್, ಜೋಗದ ನಾರಾಯಣಪ್ಪ ನಾಯಕ, ದುರ್ಗಪ್ಪ ಮಳ್ಳಿಕೇರಿ, ಸುರೇಶ್ ಮುರುಡಿ, ಈರಪ್ಪ ಗಾಡಿಮನೆ, ಹುಲುಗಪ್ಪ ಚೌಡಕಿ, ಮುಕುಂದ, ಚಿಕ್ಕಬೆಳಕಲ್ ದೊಡ್ಡಯ್ಯ ಶಾಸ್ತ್ರೀಮಠ, ಹನುಮಂತಪ್ಪ ಸಾಲಿಗನೂರು ಸೇರಿದಂತೆ ಇತರರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭಕ್ಕೂ ಮುನ್ನ ನಾಡಗೀತೆ ಹಾಗೂ ರೈತ ಗೀತೆಯನ್ನು ಹಾಡಲಾಯಿತು. ಈ ಸಂದರ್ಭದಲ್ಲಿ ಶಾಲೆ ಮುಖ್ಯಗುರುಗಳಾದ ಶ್ರೀಮತಿ ಸವಿತಾ ಗುರುವಿನಮಠ ಸೇರಿದಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!