ಹಾಲವರ್ತಿ ಘಟನೆ ಸಹಿಸಲ್ಲ: ಜಿಲ್ಲಾ ಉಸ್ತುವಾರಿ ಸಚಿವ ತಂಗಡಗಿ
ಬೆಂಗಳೂರು, ಫೆ.14
ಕೊಪ್ಪಳ ಜಿಲ್ಲೆಯ ಹಾಲವರ್ತಿ ಗ್ರಾಮದಲ್ಲಿ ದಲಿತರಿಗೆ ಹೋಟೆಲ್ ಪ್ರವೇಶ ನಿಷೇಧ ಮಾಡಿದ್ದಾರೆ ಎನ್ನುವುದನ್ನು ಸಹಿಸಲು ಸಾಧ್ಯವಿಲ್ಲ. ಸಂಬಂಧಪಟ್ಟವರ ವಿರುದ್ಧ ಕೂಡಲೇ ಕ್ರಮ ಜರುಗಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರೂ ಆದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದ್ದಾರೆ.
ವಿಧಾನಸೌಧದಲ್ಲಿ ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಹಾಲವರ್ತಿ ಗ್ರಾಮದಲ್ಲಿನ ಘಟನೆ ನನ್ನ ಗಮನಕ್ಕೆ ಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಭೇಟಿ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ನಾನು ಒಬ್ಬ ದಲಿತ ಮಂತ್ರಿಯಾಗಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ. ಈ ಸಂಬಂಧ ಅಲ್ಲಿನ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಜಾಗೃತಿ ಬಳಿಕವೂ ಅದೇ ರೀತಿ ಮುಂದುವರೆದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.
ಕೂಡಲೇ ಗ್ರಾಮಸ್ಥರೊಂದಿಗೆ ಸಭೆ ನಡೆಸುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಜಿಲ್ಲೆಯಲ್ಲಿ ಇಂತಹ ಪ್ರಕರಣ ಮತ್ತೊಮ್ಮೆ ಮರುಕಳಿಸುವ ಪ್ರಶ್ನೆಯೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಪ್ರತಿಕ್ರಿಯಿಸಿದರು.
Comments are closed.