ಮುದ್ದಾಬಳ್ಳಿಯಲ್ಲಿ ಸಣ್ಣ ಮಾರುತೇಶ್ವರ, ದ್ಯಾಮವ್ವದೇವಿ ಜಾತ್ರೋತ್ಸವ
ಕೊಪ್ಪಳ: ತಾಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ ಫೆ.೧೩ ರಿಂದ ಫೆ.೧೬ರ ವರೆಗೂ ನಾಲ್ಕು ದಿನಗಳ ಕಾಲ
ಶ್ರೀ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ, ಸಣ್ಣ ಮಾರುತೇಶ್ವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಅನ್ನಪೂರ್ಣೇಶ್ವರಿ, ಮುದ್ದಾಂಬಿಕ ದೇವಿಯ ಕುಂಬಾಭೀಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ
ಜರುಗಲಿವೆ.
ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳು, ಶ್ರೀ ಸಿದ್ದಲಿಂಗ ಶಿವಾಚಾರ್ಯರು, ಫಕಿರೇಶ್ವರ ಶಿವಾಚಾರ್ಯರ ಸಾನಿಧ್ಯದಲ್ಲಿ ವೇ.ಮೂ. ಶೇಖರಯ್ಯ ಹಿರೇಮಠ, ವೇ.ಮೂ.ಗುರುನಾಥ ಸ್ವಾಮಿಗಳು, ವೇ.ಮೂ ಪದ್ಮನಾಭ ದಿಕ್ಷಿತರು ಹಾಗೂ ವೇ.ಮೂ. ವಿನಾಯಕ ಜೋಶಿ ಅವರ ನೇತೃತ್ವದಲ್ಲಿ ಈ ಜಾತ್ರಾ ಮಹೋತ್ಸವ ನಡೆಯಲಿದೆ. ಫೆ.೧೩ ರಂದು ಬೆಳಗ್ಗೆ ಗ್ರಾಮದ ಸೀಮಾ ಅಷ್ಟ ದಿಗ್ಭಂಧನ ಕಾರ್ಯವು ಜರುಗುವುದು. ಅಂದು ಸಂಜೆ ಧಾರ್ಮಿಕ ಗೋಷ್ಠಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗುವವು.
ಫೆ.೧೪ ರಂದು ಶ್ರೀ ದ್ಯಾಮವ್ವ ದೇವಿ ಗಂಗಾ ಪೂಜೆಗೆ ಹೊರಡುವುದು, ಗಣಪತಿ ಪೂಜೆ ನಡೆಯಲಿದೆ. ಸಣ್ಣ ಮಾರುತೇಶ್ವರ ಮೂರ್ತಿಯೊಂದಿಗೆ ರಾಜ ಬೀದಿಯಲ್ಲಿ ಮುತ್ತೈದೆಯರ ಕುಂಭದ ಮೆರವಣಿಗೆಯು ಸಾಗಲಿದೆ. ಶ್ರೀ ದ್ಯಾಮವ್ವ ದೇವಿಯು ಚೌಕಿ ಕಟ್ಟಿಗೆ ಕೂಡಿಸುವುದು ನಂತರ ಮಹಾ ಪ್ರಸಾದ ನಡೆಯಲಿದೆ. ಅಂದು ರಾತ್ರಿ ೧೦.೩೦ಕ್ಕೆ ಕನಕಾಂಗಿ ಕಲ್ಯಾಣ ಎಂಬ ಬಯಲಾಟ ಪ್ರದರ್ಶನಗೊಳ್ಳಲಿದೆ.
ಫೆ.೧೫ ರಂದು ಸಣ್ಣ ಮಾರುತೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ಗಣಪತಿ ಪೂಜೆ, ನವಗ್ರಹ ಪೂಜೆ, ಪಂಚಬ್ರಹ್ಮ ಪೂಜೆ, ಪವಮಾನ ಪೂಜೆ ನಂತರ ಸಣ್ಣ ಮಾರುತೇಶ್ವರ ಮೂರ್ತಿ ಪ್ರತಿಷ್ಟಾಪನೆ ನಡೆಯಲಿದೆ. ನೇತ್ರೋನ್ಮಿಲನ, ಪೂರ್ಣ ಕುಂಭಾಭಿಷೇಕ, ಅಷ್ಠೋತ್ಥರ ಶತನಾಮಾವಳಿ ನಂತರ ಸಣ್ಣ ಮಾರುತೇಶ್ವರ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಅಂದು ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಯುವ ಸೌರಭ ಕಾರ್ಯಕ್ರಮ, ವೈವಿದ್ಯಮಯ ಜಾನಪದ ಕಾರ್ಯಕ್ರಮವೂ ಜರುಗಲಿದೆ.
ಫೆ.೧೬ ರಂದು ಗ್ರಾಮದಲ್ಲಿ ಬೆಳಗ್ಗೆ ಶ್ರೀ ದ್ಯಾಮವ್ವ ದೇವಿಯ ಮೆರವಣಿಗೆ ಚೌಕಿ ಕಟ್ಟಿಯಿಂದ ರಾಜ ಬೀದಿಯಲ್ಲಿ ಮೆರವಣಿಗೆ ಹೊರಡುವುದು, ನಂತರ ದೇವಿಯನ್ನು ಭದ್ರಪೀಠದಲ್ಲಿ ಪ್ರತಿಷ್ಠಾಪಿಸಿ ಗಣಹೋಮ, ನವಗ್ರಹ ಹೋಮ, ದುರ್ಗಾ ಹೋಮದ ನಂತರ ದೇವಿಗೆ ಪ್ರಾಣಪ್ರತಿಷ್ಠಾಪನೆ, ನೇತ್ರೋನ್ಮಿಲನ, ಕದಳಿ ಛೇದನ, ಪೂರ್ಣಾಹುತಿ ನಂತರ ದೈವದವರಿಂದ ದೇವಿಗೆ ಉಡಿ ತುಂಬುವ ಕಾರ್ಯವು ನಡೆಯಲಿದೆ. ಬಳಿಕ ಮಹಾ ಪ್ರಸಾದ ನಡೆಯಲಿದೆ. ಅಂದು ರಾತ್ರಿ ೧೦.೩೦ಕ್ಕೆ ಸಾವಿರ ಹಳ್ಳಿಯ ಸರದಾರ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಸಕಲ ಸದ್ಭಕ್ತರು ಪಾಲ್ಗೊಳ್ಳುವಂತೆ ಮುದ್ದಾಬಳ್ಳಿ ಸದ್ಭಕ್ತ ವೃಂದ ಮನವಿ ಮಾಡಿದೆ.
Comments are closed.