ಪೋಲಿಯೋ ಲಸಿಕೆಯಿಂದ ಯಾವುದೇ ಮಗು ಹೊರಗುಳಿಯದಿರಲಿ: ನಲಿನ್ ಅತುಲ್

Get real time updates directly on you device, subscribe now.

ಪೋಲಿಯೋ ರಾಷ್ಟ್ರೀಯ ರೋಗನಿರೋಧಕ ದಿನದ ಅಂಗವಾಗಿ ಮಾರ್ಚ್ 3ರಂದು ನಡೆಯುವ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಯಾವುದೇ ಅರ್ಹ ಮಗು ಪೋಲಿಯೋ ಲಸಿಕೆಯಿಂದ ಹೊರಗುಳಿಯದಂತೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜನವರಿ 24ರಂದು ಹಮ್ಮಿಕೊಂಡಿದ್ದ ಪೋಲಿಯೋ ಲಸಿಕಾ ಕಾರ್ಯಕ್ರಮ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ದೇಶದಲ್ಲಿ 2011ರ ನಂತರ ಪೋಲಿಯೋ ಪ್ರಕರಣಗಳು ಕಂಡುಬಂದಿಲ್ಲವಾದರೂ, ನಾವು ಮೈಮರೆಯುವಂತಿಲ್ಲ. ಪೋಲಿಯೋಗೆ ಕಾರಣವಾಗುವ ವೈರಸ್‌ಗಳು ನೆರೆಯ ಪಾಕಿಸ್ತಾನ, ಅಪಘಾನಿಸ್ತಾನ ದೇಶದಿಂದ ವಾತಾವರಣದಲ್ಲಿ ಸೇರಿಕೊಂಡು, ದೇಶದೊಳಗೆ ಬರುವ ಸಾಧ್ಯತೆಗಳಿರುತ್ತವೆ ಎಂಬುದಾಗಿ ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.  ಹೀಗಾಗಿ ಜಗತ್ತಿನಿಂದಲೇ ಈ ಪೋಲಿಯೋ ವೈರಸ್ ನಿರ್ಮೂಲನೆಯಾಗುವವರೆಗೂ ಪಲ್ಸ್ ಪೋಲಿಯೋ ಲಸಿಕೆಯನ್ನು ತಪ್ಪದೆ ಮಕ್ಕಳಿಗೆ ಹಾಕಿಸುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಲಸಿಕಾ ದಿನ ಎಲ್ಲಾ ಅಂಗನವಾಡಿ ಕೇಂದ್ರವನ್ನು ತೆರೆದಿಟ್ಟು ಮಕ್ಕಳಿಗೆ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಬೇಕು. ತಾಯಂದಿರ ಸಭೆ, ಬಾಲ ವಿಕಾಸ ಸಮಿತಿ ಸಭೆಗಳಲ್ಲಿ ಲಸಿಕಾ ದಿನಾಂಕದ ಕುರಿತು, ಪಲ್ಸ್  ಪೋಲಿಯೋ ಲಸಿಕಾ ಕಾರ್ಯಕ್ರಮದ ಮಹತ್ವದ ಬಗ್ಗೆ ತಿಳಿಸಬೇಕು. ಲಸಿಕಾ ಕಾರ್ಯಕ್ರಮದಲ್ಲಿ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಚಾರಕರು, ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರು, ಇಲಾಖೆಯ ಅಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಬೇಕು. ಅನಾಥಾಶ್ರಮಗಳಲ್ಲಿ ಇರುವ ಎಲ್ಲಾ ಮಕ್ಕಳಿಗೂ ಕೂಡ ಲಸಿಕೆ ಹಾಕಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಜಿಲ್ಲೆಯ ಎಲ್ಲಾ ಶಾಲೆಗಳು ಪಲ್ಸ್ ಪೋಲಿಯೋ ಕಾರ್ಯಕ್ರಮದ ಬಗ್ಗೆ ಪೋಲಿಯೋ ದಿನದ ಮುನ್ನಾ ದಿನವಾದ ಮಾರ್ಚ್ 02ರಂದು ಕೋವಿಡ್-19 ಮುನ್ನೆಚ್ಚರಿಕೆಯೊಂದಿಗೆ ಜಾಥಾ ಮಾಡಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಮಾ.03ರ ಭಾನುವಾರದಂದು ಬೆಳಗ್ಗೆ 8 ಗಂಟೆಗೆ ಲಸಿಕಾ ಕಾರ್ಯಕ್ರಮವನ್ನು ಕೈಗೊಳ್ಳಲು ಶಾಲಾ ಕೊಠಡಿಗಳನ್ನು ತೆರೆದಿಡಬೇಕು. ಖಾಸಗಿ ಶಾಲೆಗಳಲ್ಲಿ ಪ್ಲೇ ಸ್ಕೂಲ್, ಎಲ್‌ಕೆಜಿ, ಯುಕೆಜಿ ಒಳಗೊಂಡಂತೆ 5 ವರ್ಷದೊಳಗಿನ ಮಕ್ಕಳಿದ್ದಲ್ಲಿ ಪಲ್ಸ್ ಪೋಲಿಯೋ ಲಸಿಕೆ ಹಾಕಲು ಪೋಷಕರನ್ನು ಪ್ರೇರೇಪಿಸುವಂತೆ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಲಸಿಕಾ ಕಾರ್ಯಕ್ರಮಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ, ಕಾರ್ಮಿಕ ಇಲಾಖೆ, ಸಾರಿಗೆ, ವೈದ್ಯಕೀಯ ಶಿಕ್ಷಣ, ಭಾರತೀಯ ಮಕ್ಕಳ ತಜ್ಞರ ಸಂಘ ಮತ್ತು ಭಾರತೀಯ ವೈದ್ಯಕೀಯ ಸಂಘ, ಕೆ.ಪಿ.ಟಿ.ಸಿ.ಎಲ್., ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬಿ.ಎಸ್.ಎನ್.ಎಲ್., ರೈಲ್ವೆ ಇಲಾಖೆ, ಆಯುಷ್ ಸೇರಿದಂತೆ ಇತರ ಇಲಾಖೆಗಳು ಅಗತ್ಯ ಸಹಕಾರ ನೀಡಿ, ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ ಟಿ.ಲಿಂಗರಾಜು, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ ಪ್ರಕಾಶ ವಿ., ಜಿಲ್ಲಾ ಸರ್ವೇಕ್ಷಣಾಧಿಕಾರಿ  ಡಾ ನಂದಕುಮಾರ, ಜಿಲ್ಲಾ ಶಸ್ತçಚಿಕಿತ್ಸಕ ಡಾ. ಸುಶೀಲ್ ಕುಮಾರ ಕಲಾಲ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ ಪ್ರಕಾಶ ಹೆಚ್., ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ ಶಶೀಧರ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ ವೆಂಕಟೇಶ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಆರೋಗ್ಯ ಇಲಾಖೆ ಯೋಜನೆ ಅನುಷ್ಠಾನಾಧಿಕಾರಿಗಳು, ವಿವಿಧ ತಾಲ್ಲೂಕುಗಳ ಆರೋಗ್ಯಾಧಿಕಾರಿಗಳು, ಇನ್ನರ್‌ವಿಲ್ ಕ್ಲಬ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: