ಶ್ರೀರಾಮನಂತೆ ಮೋದಿ ಆಡಳಿತ: ಸಂಸದ ಸಂಗಣ್ಣ ಕರಡಿ
ಕೊಪ್ಪಳ: ಶತಮಾನಗಳ ಕನಸು ಇಂದು ನನಸಾಗಿದೆ. ಶ್ರೀರಾಮನ ಆಡಳಿತದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಕಿನ್ನಾಳ ಗ್ರಾಮದ ಶ್ರೀ ರಾಮ ಮಂದಿರದಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ನಗರದ ಕೋಟೆ ರಸ್ತೆಯಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶ್ರೀರಾಮನ ಆಡಳಿತ ಅವಧಿಯಲ್ಲಿ ಅಯೋಧ್ಯೆ ಯು ರಾಮರಾಜ್ಯವಾಗಿತ್ತು. ಜನತೆ ಸುಭೀಕ್ಷೆಯಾಗಿದ್ದರು ಎಂದು ಪುರಾಣಗಳು ಹೇಳುತ್ತಿವೆ. ಅಂತೆಯೇ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ವಿಶ್ವಗುರು ಸ್ಥಾನ ಪಡೆಯುತ್ತಿದೆ. ವಿಶ್ವದ ಎಲ್ಲ ದೇಶಗಳು ಭಾರತದತ್ತ ತಿರುಗಿ ನೋಡುತ್ತಿವೆ ಎಂದರು.
ಅಯೋಧ್ಯೆ ಮತ್ತು ಕನ್ನಡಿಗರಿಗೆ ಅವಿನಾಭಾವ ಸಂಬಂಧವಿದೆ. ಪ್ರತಿಯೊಬ್ಬ ಕನ್ನಡಿಗರೂ ಇಂದು ಹೆಮ್ಮೆ ಪಡುತ್ತಿದ್ದಾರೆ. ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಕಾರ್ಯ ನೆರವೇರಿದೆ. ಇದು ಅತ್ಯಂತ ಹೆಮ್ಮೆಯ ಮತ್ತು ಸಂತೋಷದ ವಿಚಾರ ಎಂದು ತಿಳಿಸಿದರು.
ಹಿಂದೂಗಳನ್ನು ಒಂದುಗೂಡಿಸುವ ಪವಿತ್ರ ಘಳಿಗೆ ಇಂದಿನದು. ಅಯೋಧ್ಯೆಯು ಪ್ರಭು ಶ್ರೀರಾಮಚಂದ್ರನ ಜನ್ಮಸ್ಥಳ. ಶ್ರೀರಾಮನ ಪರಮ ಭಕ್ತ ಹನುಮನ ಜನ್ಮಸ್ಥಳ ಕಿಷ್ಕಿಂಧೆಯು ನಾನು ಪ್ರತಿನಿಧಿಸುವ ಲೋಕಸಭೆಯಲ್ಲಿರುವುದು ನನ್ನ ಸೌಭಾಗ್ಯ. ಬಲರಾಮನ ವಿಗ್ರಹಕ್ಕೆ ಶಿಲೆ ಕೂಡ ಕರ್ನಾಟಕದಿಂದ ಲಭಿಸಿದೆ. ಅದರ ಶಿಲ್ಪಿಗಳು ಕನ್ನಡನಾಡಿನವರು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.
Comments are closed.