ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ : ನವ ದಾಂಪತ್ಯಕ್ಕೆ ಹೆಜ್ಜೆ ಹಾಕಿದ ೨೧ ವಿಶೇಷಚೇತನ ನವ ಜೋಡಿಗಳು
ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ-೨೦೨೪ರ ಪ್ರಯುಕ್ತ ಈ ವರ್ಷ ಸಂಸ್ಥಾನ ಶ್ರೀ ಗವಿಮಠವು ವಿಶೇಷ ಚೇತನರ ಬದುಕಿಗೆ ವಿಶೇಷ ಚೈತನ್ಯ ಒದಗಿಸುವ ದೃಷ್ಠಿಯಿಂದ ದಿನಾಂಕ: ೨೧-೦೧-೨೦೨೪ ರಂದು ರವಿವಾರ ಶ್ರೀಮಠದ ಯಾತ್ರಿ ನಿವಾಸ ಆವರಣದ ಶಾಂತವನದಲ್ಲಿ ಬೆಳಗ್ಗೆ ೧೧:೩೦ಗಂಟೆಗೆ ಉಚಿತ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ೨೧ ಜೋಡಿಗಳು ನೊಂದಾಯಿಸಿದ್ದರು. ನವ ವಿವಾಹಿತ ಜೋಡಿಗಳು ಹರ್ಷ ಮತ್ತು ಉತ್ಸಾಹದಿಂದ ತಮ್ಮ ಸ್ನೇಹಿತ ಸಂಬಂಧಿಕರೊಂದಿಗೆ ಭಾಗವಹಿಸಿ ಮಾಂಗಲ್ಯಧಾರಣೆಯೊಂದಿಗೆ ನವದಾಂಪತ್ಯಕ್ಕೆ ಹೆಜ್ಜೆ ಇರಿಸಿದರು. ಈ ನೊಂದಾಯಿತ ನವದಂಪತಿಗಳಿಗೆಜೀವನ ಸಂಗಾತಿ ಜೊತೆಗೆ ಜೀವನೋಪಾಯ ಹಾಗೂ ಉತ್ತಮ ಜೀವನ ನಿರ್ವಹಣೆಗೆ ಅನುಕೂಲವಾಗಲು ೧ ಝರಾಕ್ಸ್ ಯಂತ್ರ, ಪೆಟ್ಟಿ ಶಾಪ್ (ಸಣ್ಣ ಅಂಗಡಿ) ಸೆಲ್ಕೋ ಫೌಂಡೇಶನ್ ಬೆಂಗಳೂರು ಇವರ ಸಹಯೋಗದಲ್ಲಿ ವ್ಯವಸ್ಥೆ ಕಲ್ಪಿಸಲಾಯಿತು.
ನವಜೋಡಿಗಳಿಗೆ ಶುಭ ಹಾರೈಸಿ ಆಶಿರ್ವಚನ ನೀಡಿದ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ದೇಹಕ್ಕೆ ವಿಕಲತೆ ಇರಬಹುದು ಮನಸ್ಸಿಗೆ ಅಲ್ಲ. ನಿಮ್ಮಲ್ಲಿರುವ ಸಾಮರ್ಥ್ಯವನ್ನು ಪರಿಗಣಿಸಿ ಆದರೆ ಅಸಾಮರ್ಥ್ಯವನ್ನಲ್ಲ ಎಂದು ಹೇಳಿದ ಅವರು ಮಠದ ಇತಿಹಾಸದಲ್ಲಿ ಇದೇ ಮೊದಲ ಸಾಮೂಹಿಕ ವಿವಾಹ ಕಾರ್ಯಕ್ರವಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ ವಹಿಸಿದ ಪರಮ ಪೂಜ್ಯ ಶ್ರೀ ಮ.ನಿ.ಪ್ರ. ಶಿವಲಿಂಗ ಮಹಾಸ್ವಾಮಿಗಳು, ವಿರಕ್ತಮಠ ಬಿಜಕಲ್ ಆಶೀರ್ವಚನವನ್ನು ನೀಡಿ ಈ ಸುದಿನ ಸಂಭ್ರಮದ ದಿನವಾಗಿದೆ. ಶ್ರೀ ಗವಿಮಠವು ವಿಶೇಷ ಚೇತನರಿಗೆ ವಿವಾಹ ನಡೆಸಿಕೊಡುವದಲ್ಲದೆ ಜೀವನೋಪಾಯಕ್ಕೆ ನೆಲೆಯೂ ಕಲ್ಪಿಸಿಕೊಡುತ್ತಿರುವದು ಶ್ರೀ ಮಠದ ಕಾರ್ಯ ಬಹಳ ಸ್ತುತ್ಯಾರ್ಹ ಎಂದರು.
ಹಾಗೂ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಶ್ರೀ ಘನಶ್ಯಾಮ ಬಾಂಡಗೆಯವರು ಮಾತನಾಡುತ್ತಾ ದೈಹಿಕ ಸವಾಲು ನಮಗೆ ಬಂಡವಾಳ ಆಗಬಾರದು. ಅದನ್ನು ನಾವು ಸವಾಲಾಗಿ ಸ್ವೀಕರಿಸಬೇಕು. ಸಂಸ್ಥಾನ ಗವಿಮಠವು ವಿಶೇಷ ಚೇತನರಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿರುವದು ಶ್ಲಾಘನೀಯ. ಕರ್ನಾಟಕದಲ್ಲಿ ಇದೊಂದು ವಿನೂತನ ವಿಭಿನ್ನಾತ್ಮಕ ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮವಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಶಾಂತಿಯುತ ಜೀವನ ನಡೆಸಿದಾಗ ಮಾತ್ರ ಈ ಶ್ರೀ ಮಠದ ಈ ಕಾರ್ಯಕ್ರಮ ಯಶಸ್ವಿ ಎನಿಸುವದು ಎಂದರು.
ಸೆಲ್ಕೋ ಕಂಪನಿ ವಲಯ ವ್ಯವಸ್ಥಾಪಕರಾದ ಶ್ರೀ ಮಂಜುನಾಥ ಭಾಗವತರು ಮಾತನಾಡುತ್ತಾ ವ್ಯಕ್ತಿಯ ಜೀವನದಲ್ಲಿ ಮದುವೆ ಎನ್ನುವದು ಪ್ರಮುಖ ಕಾರ್ಯ, ಅಂತಹ ಕಾರ್ಯಕ್ಕೆ ಇಂದು ನಾವೆಲ್ಲಾ ಸಾಕ್ಷಿಯಾಗಿದ್ದೆವೆ. ಸೆಲ್ಕೋ ಕಂಪನಿಯು ಸೌರಶಕ್ತಿಯ ಮೂಲಕ ಇಂಧನ ಉತ್ಪಾದನೆ ಮಾಡುವುದರ ಜೊತೆಗೆ ಬಡತನ ನಿರ್ಮೂಲನೆಗೆ ಅದರ ಸಂಪನ್ಮೂಲವನ್ನು ಬಳಸಿಕೊಳ್ಳುವದು ನಮ್ಮ ಸಂಸ್ಥೆಯ ಧ್ಯೇಯ. ಸಾಮಾಜಿಕ ಕಾರ್ಯಗಳಾದ ಶಿಕ್ಷಣ, ಆರೋಗ್ಯ ಚಟುವಟಿಕೆಗಳಿಗೆ ನಮ್ಮ ಸಂಸ್ಥೆ ಸೇವೆ ಸಲ್ಲಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ವಿಶೇಷ ಚೇತನ ಹಾಗೂ ಕಲ್ಯಾಣ ಯೋಜನಾ ಅಧಿಕಾರಿ ಶ್ರೀಮತಿ ಶ್ರೀದೇವಿ ನಿಡಗುಂದಿ ಅವರು ಮಾತನಾಡಿ ನವದಂಪತಿಗಳಿಗೆ ಶುಭ ಕೋರಿ ಇದೊಂದು ಅವಿಸ್ಮರಣಿಯ ಕ್ಷಣವಾಗಿದು ತಾವು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ತಾವೆಲ್ಲಾ ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದು ಬಹಳ ಸಂತೋಷದ ಕ್ಷಣವಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಶ್ರೀಯುತ ತಿಪ್ಪಣ್ಣ ಶೃಂಗೇರಿಯವರು ಮಾತನಾಡಿದರು.
ಆರಂಭದಲ್ಲಿ ಸಾಮೂಹಿಕ ವಿವಾಹ ಮಹೋತ್ಸವದ ಸಾಂಪ್ರದಾಯಿಕ ವಿಧಿವಿದಾನಗಳು ಜರುಗಿದವು. ನಂತರ ೧೧.೩೦ ಕ್ಕೆ ಮಾಂಗಲ್ಯಧಾರಣ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಶ್ರೀ ಷ.ಬ್ರ. ಗುರುಶಾಂತ ಶಿವಚಾರ್ಯ ಮಹಾಸ್ವಾಮಿಗಳು ಭೂ ಕೈಲಾಸ ಮೇಲುಗದ್ದಿಗೆ ಹಿರೇಮಠ, ಇಟಗಿ ಮತ್ತು ನವ ಜೋಡಿಗಳ ಸಂಬಂಧಿಕರು ಸಹಸ್ರಾರು ಭಕ್ತರು ಭಾಗವಹಿಸಿ, ನವ ವಧು-ವರರಿಗೆ ಶುಭ ಹಾರೈಸಿದರು. ಕು. ಶಕುಂತಲಾ ಬಿನ್ನಾಳಹಾಗೂ ಗವಿಮಠದ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಅವರಿಂದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀ ಮಠದ ಮಹಾದಾಸೋಹದಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಪ್ರೀತಿಗೆ ಅಡ್ಡಿಯಾಗದ ವಿಶೇಷ ಚೇತನ : ಇಂದು ನಡೆದ ವಿಶೇಷ ಚೇತನ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ವರನಿಗೆ ಯಾವುದೇ ವಿಶೇಷ ಚೇತನವಿಲ್ಲದಿದ್ದರೂ ವಿಶೇಷ ಚೇತನವುಳ್ಳ ಪ್ರೀತಿಸಿದ ವಧುವನ್ನೆ ಮನಪೂರ್ವಕವಾಗಿ ವರಿಸಿದ್ದು ಗಮನ ಸೆಳೆಯಿತು.
Comments are closed.