ಅಂಬಿಗರ ಚೌಡಯ್ಯನವರು ವಚನಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದರು: ಶಾಸಕ ಕೆ.ರಾಘವೇಂದ್ರ ಹಿಟ್ನಾಳ

Get real time updates directly on you device, subscribe now.

ಶ್ರೀ ಅಂಬಿಗರ ಚೌಡಯ್ಯ ಜಯಂತಿ

ನಿಜಶರಣ ಅಂಬಿಗರ ಚೌಡಯ್ಯನವರು ತಮ್ಮ ನೇರ ಹಾಗೂ ನಿಷ್ಠುರ ವಚನಗಳಿಂದ ಸಮಾಜವನ್ನು ತಿದ್ದುವ ಕೆಲಸ ಮಾಡಿದರು ಎಂದು ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಹೇಳಿದರು.
ರವಿವಾರದಂದು ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಲಿತದ ವತಿಯಿಂದ ಆಯೋಜಿಸಲಾಗಿದ್ದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದ ಬಸವಣ್ಣನವರ ಸಮಕಾಲೀನರಾದ ಅಂಬಿಗರ ಚೌಡಯ್ಯನವರು ತಮ್ಮ ಬದುಕಿನಂತೆ ತಮ್ಮ ವಚನಗಳಲ್ಲೂ ನಿಷ್ಠುರವಾಗಿ ಸಮಾಜದ ಓರೆ ಕೋರೆಗಳನ್ನು, ಆಡಂಬರ, ಢಂಬಾಚಾರಗಳನ್ನು, ಲೌಕಿಕ ಬದುಕಿನ ಅನಿಶ್ಚಿತತೆಯನ್ನು ಟೀಕಿಸುತ್ತಾ, ಬದುಕಿನ ನಿಜವಾದ ಸನ್ಮಾರ್ಗವನ್ನು ಹೊಂದಲು ತಿಳಿಸಿದರು. ಬದುಕಿನ ಪ್ರತಿ ವಿಷಯವನ್ನು ತಾರ್ಕಿಕ ದೃಷ್ಟಿಕೋನದಿಂದ ನೋಡುತ್ತಿದ್ದರು. ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಶ್ರಮಿಸಿದರು. ಅವರಂತೆ ನಾವು ಕೂಡ ಮೂಢನಂಬಿಕೆಯಿAದ ಯಾವುದನ್ನೂ ನಂಬದೇ, ತಾರ್ಕಿಕವಾಗಿ ಯೋಚಿಸಬೇಕು. ಸತ್ಯ ನಿಷ್ಠೆಯಿಂದ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಅವರ ಬದುಕನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಕೂಡ್ಲಿಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಹಾಗೂ ಸಂಶೋಧಕರಾದ ಡಾ.ಇಮಾಮ್ ಸಾಹೇಬ್ ಹಡಗಲಿ ಅವರು ಮಾತನಾಡಿ, ಅಂಬಿಗರ ಚೌಡಯ್ಯನವರು ಗಂಗೆಯ ಪುತ್ರರು. ಆದ್ದರಿಂದಲೇ ಅಂಬಿಗ ಸಮುದಾಯವನ್ನು ಗಂಗಾಪುತ್ರರು ಎಂದು ಕರೆಯಲಾಗುತ್ತದೆ. 12ನೇ ಶತಮಾನದ ಪ್ರಮುಖ ವಚನಕಾರರಾದ ಅಲ್ಲಮಪ್ರಭು ಅವರೊಂದಿಗೆ ನಿಷ್ಠುರತೆಯಿಂದ ಚರ್ಚಿಸಿದ ನಿಷ್ಠುರವಾದಿಯಾಗಿದ್ದರು. ಅವರು ರಚಿಸಿದ 333 ವಚನಗಳು ಲಭ್ಯವಿದ್ದು, ಅವುಗಳನ್ನು ಅಧ್ಯಯನ ಮಾಡಿ, ಅದರಲ್ಲಿರುವ ಜೀವನ ಮಾರ್ಗವನ್ನು ನಾವು ಅರಿಯಬೇಕು. ಕ್ಷಣಿಕ ಬದುಕನ್ನು, ಲೌಕಿಕ ಆಸೆಗಳನ್ನು ಮೀರಿ ಆಧ್ಯಾತ್ಮದಿಂದ ದೈವತ್ವ ಪಡೆಯುವ ದಾರಿಯನ್ನು ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲರಾದ ಸಿ.ವ್ಹಿ ಜಡಿಯವರು ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಯಂಕಪ್ಪ ಬಾರಕೇರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಬಿನ್ನಾಳ ಹಾಗೂ ತಂಡದವರು ನಾಡಗೀತೆ, ಸುಗಮ ಸಂಗೀತ ಕಾರ್ಯಕ್ರಮದ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ತಹಶೀಲ್ದಾರರಾದ ವಿಠ್ಠಲ್ ಚೌಗಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೊಟ್ರೇಶ ಮರಬನಳ್ಳಿ, ನಗರಸಭೆ ಸದಸ್ಯರಾದ ವಿರುಪಾಕ್ಷಪ್ಪ, ಬಸಯ್ಯ ಹಿರೇಮಠ, ವಿರುಪಾಕ್ಷಪ್ಪ ಮೊರಬ, ಗಂಗಾಮತ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷರಾದ ಸೋಮಣ್ಣ ಬಾರಕೇರ, ಉಪಾಧ್ಯಕ್ಷರಾದ ವಿರುಪಾಕ್ಷಪ್ಪ ಬಾರಕೇರ, ತಾಲ್ಲೂಕು ಅಧ್ಯಕ್ಷರಾದ ಹುಲುಗಪ್ಪ ಬಾರಕೇರ, ಸಮಾಜದ ಮುಖಂಡರಾದ ಗಂಗಾಧರ ಕಬ್ಬೇರ, ಯಮನಪ್ಪ ಕಬ್ಬೇರ, ನಾಗರತ್ನ ಪೂಜಾರ, ದುರ್ಗಪ್ಪ ಬಾರಕೇರ, ರಮೇಶ ಕಬ್ಬೇರ, ರಾಜು, ಮಾರ್ಕಂಡೆಪ್ಪ ಪೂಜಾರ, ಮಾಜಿ ಜಿ.ಪಂ. ಉಪಾಧ್ಯಕ್ಷರಾದ ಯಮನಪ್ಪ ಕಬ್ಬೇರ, ಸೇರಿದಂತೆ ಸಮುದಾಯದ ಪ್ರಮುಖರು, ಸಾರ್ವಜನಿಕರು ಉಪಸ್ಥಿತರಿದ್ದರು.
ಮೆರವಣಿಗೆ: ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಸಿರಸಪ್ಪಯ್ಯನಮಠದಿಂದ ಸಾಹಿತ್ಯ ಭವನದವರೆಗೆ ಶ್ರೀ ಅಂಬಿಗರ ಚೌಡಯ್ಯ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು.
ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ.ಕಡಿ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭ ತಹಶೀಲ್ದಾರರಾದ ವಿಠ್ಠಲ್ ಚೌಗಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೊಟ್ರೇಶ ಮರಬನಳ್ಳಿ, ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು. ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

Get real time updates directly on you device, subscribe now.

Comments are closed.

error: Content is protected !!