ಹ್ಯಾಟ್ರಿಕ್ ಗೆಲುವು ಖಚಿತ, ಕೇಂದ್ರದಲ್ಲಿ ಅಧಿಕಾರ ನಿಶ್ಚಿತ-ಸಂಸದ ಸಂಗಣ್ಣ ವಿಶ್ವಾಸ
ನಮ್ಮ ಸಂಕಲ್ಪ ವಿಕಸಿತ ಭಾರತ ಕಾರ್ಯಕ್ರಮ | ಸಂಸದ ಸಂಗಣ್ಣ ವಿಶ್ವಾಸ
ಕುಷ್ಟಗಿ: ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹ್ಯಾಟ್ರಿಕ್ ಗೆಲುವು ಖಚಿತ. ಕೇಂದ್ರದಲ್ಲಿ ಮೂರನೇ ಅವಧಿಗೆ ಅಧಿಕಾರ ನಿಶ್ಚಿತ ಎಂದು ಸಂಸದ ಸಂಗಣ್ಣ ಕರಡಿ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ನಡೆದ ನಮ್ಮ ಸಂಕಲ್ಪ ವಿಕಸಿತ ಭಾರತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಂದಿನ ಅವಧಿಯಲ್ಲಿ ಕೃಷ್ಣಾದಿಂದ ನೀರು ತಂದು ಕುಷ್ಟಗಿ ಸೇರಿದಂತೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಕೆರೆ ತುಂಬಿಸಲಾಗುವುದು. ಇನ್ನು ತಾಲೂಕಿಗೆ ರೈಲ್ವೆ ಸಂಚಾರ ಆರಂಭಿಸಲಾಗುವುದು ಎಂದು ತಿಳಿಸಿದರು.
ಗದಗ-ವಾಡಿ ರೈಲ್ವೆ ಯೋಜನೆಯಡಿ ಕುಷ್ಟಗಿ ಗೆ ರೈಲ್ವೆ ಸಂಪರ್ಕ ಕಲ್ಪಿಸಲಾಗುವುದು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಕಳೆದ ಒಂಬತ್ತುವರೆ ವರ್ಷದಲ್ಲಿ ಪ್ರತಿ ತಾಲೂಕಿಗೂ ರೈಲು ಹಳಿ ಹಾಕುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಆದಂತಹ ಕೆಲಸಗಳು ಯಾವ ಸರ್ಕಾರದ ಅವಧಿಯಲ್ಲೂ ಆಗಿಲ್ಲ ಎಂದರು.
ಜನರ ಆಶೀರ್ವಾದದಿಂದ ಎರಡು ಬಾರಿ ಸಂಸದನಾಗಿದ್ದೇನೆ. ಕೊಪ್ಪಳ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಕೆಲಸ ಗಮನಿಸಿದ ಕೇಂದ್ರದ ಬಿಜೆಪಿ ನಾಯಕರು ಮೂರನೇ ಬಾರಿಗೆ ಪಕ್ಷ ಅವಕಾಶ ಕೊಡುವ ವಿಶ್ವಾಸವಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರು ಮತ್ತೊಮ್ಮೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಡವರ, ಮಹಿಳೆಯರ ಹಾಗೂ ಯುವಕರ ಸ್ವಾವಲಂಬಿ ಜೀವನಕ್ಕೆ ಜಾರಿ ತಂದ ಯೋಜನೆ ಪ್ರಚಾರ ಹಾಗೂ ಸದುಪಯೋಗಕ್ಕೆ ಶ್ರಮಿಸಬೇಕು. ಜನತೆ ಲೋಕಸಭಾ ಚುನಾವಣೆ ಯಲ್ಲಿ ಎಂದೂ ಬಿಜೆಪಿಯನ್ನು ಬಿಟ್ಟುಕೊಟ್ಟಿಲ್ಲ. ಈ ಬಾರಿಯೂ ಬಿಜೆಪಿ ಬೆಂಬಲಿಸುವ ಮೂಲಕ ಮೂರನೇ ಬಾರಿಗೆ ಗೆಲ್ಲಿಸಬೇಕು ಎಂದರು.
ಈ ಸಂದರ್ಭದಲ್ಲಿ ದಿಶಾ ಸಮಿತಿ ಸದ್ಯಸ ವಿಜಯ ಕುಮಾರ, ನಗರಸಭೆ ಸದಸ್ಯ ಜುಣ್ಣ ಆಚಾರ,ರಾಜೇಶ ಪತ್ತಾರ, ಚಂದ್ರ, ಸಾಹಿತಿ ರವೀಂದ್ರ ಬಾಕಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿತಂದ ಪ್ರತಿಯೊಂದು ಯೋಜನೆಯನ್ನು ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ಜಾತಿ, ಧರ್ಮ ಎಂಬುದಿಲ್ಲದೇ ಎಲ್ಲರಿಗೂ ಯೋಜನೆ ಮುಟ್ಟಿಸಲಾಗಿದೆ. ಇದನ್ನು ಸರ್ಕಾರ ಹಾಗೂ ಕೇಂದ್ರದ ನಾಯಕರು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.– ಸಂಗಣ್ಣ ಕರಡಿ, ಸಂಸದರು.
Comments are closed.