ಮೂಲ ಜಾನಪದ ಸಾಹಿತ್ಯವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ : ಡಾ. ಹನುಮಂತಪ್ಪ ಅಂಡಗಿ

Get real time updates directly on you device, subscribe now.

ಕೊಪ್ಪಳ : ಮೂಲ ಜಾನಪದ ಸಾಹಿತ್ಯವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಕರ್ನಾಟಕದ ಪ್ರಪ್ರಥಮ ಜಾನಪದ ಗೀತೆಗಳ ಸಂಕಲನ `ಗರತಿಯ ಹಾಡು’. ಈ ಸಂಕಲನದಲ್ಲಿರುವ ತ್ರಿಪದಿಗಳನ್ನು ಹಾಡುವುದನ್ನು ರೂಢಿಸಿಕೊಂಡರೆ, ಯಾವುದೇ ಜಾನಪದಗೀತೆ ಸ್ಪರ್ಧೆಯಲ್ಲಿ ಬಹುಮಾನ ಪಡೆಯಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಧಾರವಾಹಿಗಳ ದಾಸರಾಗಬಾರದು. ಒಳ್ಳೆಯ ಸ್ನೇಹಿತರ ಸಹವಾಸ ಮಾಡಬೇಕು. ಸಮಯವನ್ನು ಸದುಪಯೋಗಪಡಿಸಿಕೊಂಡರೆ ಜೀವನದಲ್ಲಿ ಅಸಾಧ್ಯವಾದುದ್ದನ್ನು ಸಾಧಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಪ್ರಯತ್ನವಾದಿಗಳಾಗಬೇಕು. ಪ್ರಯತ್ನಕ್ಕೆ ಫಲ ಉಂಟು. ಸಾಧನೆಯು ಸಾಧಕನ ಸ್ವತ್ತೇ ವಿನ: ಸೋಮಾರಿಯ ಸ್ವತ್ತಲ್ಲ. ಹೀಗಾಗಿ ವಿದ್ಯಾರ್ಥಿಗಳು ಉನ್ನತ ಗುರಿಗಳನ್ನು ಇಟ್ಟುಕೊಂಡು, ಆ ಗುರಿ ಈಡೇರಿಕೆಗಾಗಿ ಪ್ರಾಮಾಣಿಕ ಪ್ರಯತ್ನಪಟ್ಟರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಜಾನಪದ ಹಾಡುಗಾರರಾದ ಡಾ. ಹನುಮಂತಪ್ಪ ಅಂಡಗಿ ಚಿಲವಾಡಗಿ ಹೇಳಿದರು.

ಅವರು ಶುಕ್ರವಾರ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಂಡ ೨೦೨೩ -೨೪ನೇ ಸಾಲಿನ ಸಾಂಸ್ಕೃತಿಕ ,ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ,ಎನ್ .ಎಸ್. ಎಸ್. , ಕ್ರೀಡೆ, ರೆಡ್ ಕ್ರಾಸ್, ಪ್ಲೇಸ್ ಮೆಂಟ್ ಸೆಲ್, ಐಕ್ಯೂ ಎಸಿ ಮತ್ತು ಇತರ ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಮತ್ತು ಬಿಎ, ಬಿಕಾಂ, ಬಿ ಎಸ್. ಸಿ, ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಹಿರಿಯ ಸಾಹಿತಿಗಳಾದ ಪ್ರೊ.ಅಲ್ಲಮಪ್ರಭು ಬೆಟ್ಟದೂರು ಅವರು ಅವರು ಮಾತನಾಡುತ್ತಾ, ವಿದ್ಯಾರ್ಥಿಗಳು ಶ್ರಮಜೀವಿಗಳಾಗಬೇಕು. ಡಾ. ಹನುಮಂತಪ್ಪ ಅಂಡಗಿ ಅವರು ನನ್ನ ವಿದ್ಯಾರ್ಥಿಯಾಗಿರುವುದು ಹೆಮ್ಮೆಯ ಸಂಗತಿ. ಎಸ್ .ಎಸ್. ಎಲ್ .ಸಿಯಲ್ಲಿ ಅನುತ್ತೀರ್ಣರಾಗಿದ್ದ ಇವರು ಮುಂದೆ ಪ್ರಯತ್ನಪಟ್ಟು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪಡೆದಿರುವುದು ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ಎಲ್ಲ ವಿದ್ಯಾರ್ಥಿನಿಯರು ವೈಜ್ಞಾನಿಕವಾದ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ನೀವು ಹೋರಾಟದ ಬದಕನ್ನು ಅಳವಡಿಸಿಕೊಳ್ಳಬೇಕು. ಮಹಿಳೆಯರು ಬಹಳ ಶ್ರೇಷ್ಠರು ಎಂದು ಹೇಳಿದರು.

ನಿವೃತ್ತ ಪ್ರಾಚಾರ್ಯರಾದ ಬಿ. ಜಿ. ಕರಿಗಾರ ಅವರು ಮಾತನಾಡುತ್ತಾ, ಡಾ. ಹನುಮಂತಪ್ಪ ಅಂಡಗಿ ಅವರು ನನ್ನ ನೆಚ್ಚಿನ ಶಿಷ್ಯ. ಇಂದು ಇವರು ಜಾನಪದ ಹಾಡುಗಾರಿಕೆ, ಹಾಸ್ಯ ಭಾಷಣ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಸಂಘಟನೆ ಹೀಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವುದು ಸಂತಸದ ಸಂಗತಿ ಎಂದರು.

ಕಾಲೇಜಿನ ಪ್ರಾಚಾರ್ಯರಾದ ಡಾ. ಗಣಪತಿ ಲಮಾಣಿಯವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ, ಮಹಿಳೆಯರು ಉನ್ನತ ಶಿಕ್ಷಣವನ್ನು ಪಡೆಯಬೇಕು. ಜೀವನದಲ್ಲಿ ಮುಂದೆ ಬರಬೇಕು. ಸರಕಾರದ ಸೌಲಭ್ಯಗಳನ್ನು ಉಪಯೋಗ ಮಾಡಿಕೊಳ್ಳಬೇಕು. ನಮ್ಮ ಕಾಲೇಜಿನಲ್ಲಿ ಅನುಭವದ ಉಪನ್ಯಾಸಕರು ಇದ್ದಾರೆ. ಅವರ ಜ್ಞಾನವನ್ನು ನೀವು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಜ್ಞಾನ ವಿಜ್ಞಾನ ಸಮಿತಿಯ ಅಮರೇಶ ಕಮ್ಮಾರ ಅವರು ಪವಾಡ ಬಯಲು ಕಾರ್ಯಕ್ರಮ ನೀಡಿ ಮಾತನಾಡುತ್ತಾ, ವಿದ್ಯಾರ್ಥಿಗಳು ಪವಾಡಗಳನ್ನು ಮಾಡುವ ಪವಾಡ ಪುರುಷರನ್ನು ನಂಬಿ ಮೋಸ ಹೋಗಬಾರದು. ವೈಜ್ಞಾನಿಕ ಸತ್ಯವನ್ನು ಮನಗಾಣಬೇಕು. ಮೂಢನಂಬಿಕೆಗಳನ್ನು ನಂಬಬಾರದು ಎಂದರು.

ಇದೇ ಸಂದರ್ಭದಲ್ಲಿ `ಮಹಿಳಾ ಟೈಮ್ಸ್’ ಕನ್ನಡ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.

ಪ್ರೊ. ವಿಠೋಬ, ಡಾ. ಪ್ರದೀಪಕುಮಾರ ಯು., ಡಾ. ಮಲ್ಲಿಕಾರ್ಜುನ, ಡಾ. ಅಶೋಕಕುಮಾರ ರಾಠೋಡ, ಸುಮಿತ್ರಾ ಎಸ್. ವೈ, ನಾಗರತ್ನ ತಮ್ಮಿನಾಳ, ಸೌಮ್ಯ ಹಿರೇಮಠ, ಶಿವಪ್ರಸಾದ ಹಾದಿಮನಿ, ಶಿ.ಕಾ.ಬಡಿಗೇರ, ರಾಜು ಬಿ. ಆರ್. ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಡಾ. ಹನುಮಂತಪ್ಪ ಅಂಡಗಿ ಚಿಲವಾಡಗಿ, ಕಾಲೇಜಿನ ಗ್ರಂಥಾಪಾಲಕರಾದ ಡಾ. ಮಲ್ಲಿಕಾರ್ಜುನ ಅವರನ್ನು ಸನ್ಮಾನಿಸಲಾಯಿತು.

ರತ್ನ ಸಂಗಡಿಗರು ಪ್ರಾರ್ಥಿಸಿದರು. ಕಾಲೇಜಿನ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಡಾ. ಹುಲಿಗೆಮ್ಮ ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕರಾದ ಡಾ. ನರಸಿಂಹ ಗುಂಜಳ್ಳಿ ನಿರೂಪಿಸಿದರು. ಶ್ರೀಕಾಂತ ಸಿಂಗಾಪುರ ಸ್ವಾಗತಿಸಿದರು. ಡಾ. ಪ್ರಕಾಶ ಹುಲ್ಲೂರು ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!