ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ: ಜ.21ರಿಂದ 29ರವರೆಗೆ ನಾನಾ ಕಾರ್ಯಕ್ರಮಗಳು

Get real time updates directly on you device, subscribe now.

  ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ-2024ರ ಅಂಗವಾಗಿ ಜನವರಿ 21ರಿಂದ 29ರ ವರೆಗೆ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

*ವಿಶೇಷ ಚೇತನರ ಉಚಿತ ಸಾಮೂಹಿಕ ವಿವಾಹ:* ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಗವಿಸಿದ್ದೇಶ್ವರ ಮಠ ಹಾಗೂ ಬೆಂಗಳೂರಿನ ಸೆಲ್ಕೊ ಫೌಂಡೇಶನ್ ವತಿಯಿಂದ ವಿಶೇಷ ಚೇತನರ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಜ.21ರಂದು ಬೆಳಿಗ್ಗೆ 11ಕ್ಕೆ ಶ್ರೀ ಗವಿಮಠ ಯಾತ್ರಿ ನಿವಾಸ ಆವರಣದ ಶಾಂತವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಬಾಗಲಕೋಟೆಯ ಘನಶ್ಯಾಮ ಬಾಂಡಗೆ ಅವರು ಅತಿಥಿಗಳಾಗಿ ಆಗಮಿಸುವರು.
ಜ.23ರಂದು ಸಂಜೆ 5 ಗಂಟೆಗೆ ಬಸವ ಪಟ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ದೇವಿಗೆ ಉಡಿತುಂಬುವ ಕಾರ್ಯಕ್ರಮ ನಡೆಯಲಿದೆ.
*ಜ.24ರಂದು ಕಾಯಕ ದೇವೋಭವ-ಜಾಗೃತಿ ಅಭಿಯಾನ, ತೆಪ್ಪೋತ್ಸವ:* ಜಾತ್ರೆಯ ನಿಮಿತ್ತ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಾಗೂ ಸ್ಥಳೀಯ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ಕಾಯಕ ಸ್ವಾವಲಂಬಿ ಬದುಕು, ಸಮೃದ್ಧ ಬದುಕು, ಸಂತೋಷದ ಬದುಕು ಎಂಬ ಘೋಷ ವಾಕ್ಯದೊಂದಿಗೆ “ಕಾಯಕ ದೇವೋಭವ-ಜಾಗೃತಿ ಅಭಿಯಾನ’’ ಕಾರ್ಯಕ್ರಮವನ್ನು ಜ.24ರಂದು ಬೆಳಿಗ್ಗೆ 8.30 ಗಂಟೆಗೆ ನಗರದ ಬಾಲಕೀಯರ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನ (ಪಬ್ಲಿಕ್ ಗ್ರೌಂಡ್)ದಿಂದ ಅಶೋಕ ವೃತ್ತ, ಗಡಿಯಾರ ಕಂಬದ ಮೂಲಕ ಗವಿಮಠದ ವರೆಗೆ ಹಮ್ಮಿಕೊಳ್ಳಲಾಗಿದೆ.
ಅಂದು ಸಂಜೆ 5 ಗಂಟೆಗೆ ಶ್ರೀಮಠದ ಕೆರೆಯಲ್ಲಿ ತೆಪ್ಪೋತ್ಸವ ಹಾಗೂ ಧಾರವಾಡದ ಅಯ್ಯಪ್ಪಯ್ಯ ಹಲಗಲಿಮಠ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
*ಪಲ್ಲಕ್ಕಿ, ಲಘು ರಥೋತ್ಸವ:* ಜ.25ರಂದು ಸಂಜೆ 4ಗಂಟೆಗೆ ಜಂಗಮೋತ್ಸವ (ಪಲ್ಲಕ್ಕಿ ಉತ್ಸವ), ಶ್ರೀ ಗವಿಸಿದ್ದೇಶ್ವರ ಮೂರ್ತಿಯ ಕಳಸದ ವಿವಿಧ ಜನಪದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಯಲಿದೆ.
ಜ.26ರಂದು ಸಂಜೆ 5 ಗಂಟೆಗೆ ಉಚ್ಛಾಯ (ಲಘು ರಥೋತ್ಸವ), 6ಗಂಟೆಗೆ ಕೈಲಾಸ ಮಂಟಪದಲ್ಲಿ ಸಂಸ್ಥಾನ ಶ್ರೀಗವಿಮಠದ ಗವಿಸಿದ್ದೇಶ್ವರ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.
*ಪೊಲೀಸ್ ಶ್ವಾನಗಳ ಸಾಹಸ ಪ್ರದರ್ಶನ, ವಿವಿಧ ಕಾರ್ಯಕ್ರಮ ಜ.27ಕ್ಕೆ:* ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಜ.27ರಂದು ಬೆಳಿಗ್ಗೆ 11ಕ್ಕೆ ಶ್ರೀಮಠದ ಆವರಣದಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ  ಪೊಲೀಸ್ ಶ್ವಾನಗಳ ಸಾಹಸ ಪ್ರದರ್ಶನ, ಭೂಮಿ ಕರಾಟೆ ಫೌಂಡೇಶನ್ ಕೊಪ್ಪಳ ತಂಡದಿಂದ ಕರಾಟೆ ಪ್ರದರ್ಶನ ಮತ್ತು ದಾಲ್‌ಪಟ ಪ್ರದರ್ಶನ ಏರ್ಪಡಿಸಲಾಗಿದೆ.
*ಜ.27ರಂದು ಮಹಾರಥೋತ್ಸವ:* ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವವು ಜನವರಿ 27ರಂದು ಸಂಜೆ 5.30ಕ್ಕೆ ನಡೆಯಲಿದ್ದು, ಮೈಸೂರಿನ ಸುತ್ತೂರು ಕ್ಷೇತ್ರದ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ವೀರಸಿಂಹಾಸನ ಜಗದ್ಗುರು 1008 ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಮಹಾರಥೋತ್ಸವಕ್ಕೆ ಚಾಲನೆ ನೀಡುವರು.
*ಉದ್ಘಾಟನಾ ಸಮಾರಂಭ:* ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಉದ್ಘಾಟನಾ ಸಮಾರಂಭವು ಜ.27ರಂದು ಸಂಜೆ 6 ಗಂಟೆಗೆ ಕೈಲಾಸ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದು, ಜಮಖಂಡಿಯ ಓಲೇಮಠದ ಡಾ ಅಭಿನವ ಕುಮಾರ ಚನ್ನಬಸವ ಮಹಾಸ್ವಾಮಿಗಳು ಹಾಗೂ ಹಿರೇಸಿಂಧೋಗಿಯ ಕಪ್ಪತ್ತೇಶ್ವರ ಮಠದ ಚಿದಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಶ್ವಸಂಸ್ಥೆಯ ಯುನೆಸ್ಕೋ (ಪ್ಯಾರಿಸ್)ಗೆ ಭಾರತ ಮಾಜಿ ರಾಯಭಾರಿಗಳಾದ ಚಿರಂಜೀವಿ ಸಿಂಘ್, ಇಸ್ರೋದ ಚಂದ್ರಯಾನ-3ರ ಯೋಜನಾ ನಿರ್ದೇಶಕರು ಹಾಗೂ ಖ್ಯಾತ ಖಗೋಳ ವಿಜ್ಞಾನಿಗಳಾದ ಪಿ.ವೀರಮುತ್ತುವೇಲ್ ಮತ್ತು ಬೆಂಗಳೂರಿನ ಅದಮ್ಯ ಚೇತನ ಫೌಂಡೇಶನ್ ಅಧ್ಯಕ್ಷರು ಹಾಗೂ ಸಹಸಂಸ್ಥಾಪಕರಾದ ತೇಜಸ್ವಿನಿ ಅನಂತಕುಮಾರ್ ಅವರು ಪಾಲ್ಗೊಳ್ಳುವರು.
ಬೆಂಗಳೂರಿನ ಪಂಡಿತ್ ಬಸವಕುಮಾರ ಮರದೂರು ಹಾಗೂ ಹುಬ್ಬಳ್ಳಿಯ ಪಂಡಿತ್ ಕೃಷ್ಣೇಂದ್ರ ವಾಡೇಕರ್  ಹಾಗೂ ಸಂಗಡಿಗರಿಂದ ಸ್ವರಸಂಘಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅಂದು ರಾತ್ರಿ 9.30ಕ್ಕೆ ಗವಿಮಠದ ಜಾತ್ರಾ ಮೈದಾನದಲ್ಲಿ ಲೇಸರ್ ಶೋ ಏರ್ಪಪಡಿಸಲಾಗಿದೆ.
*ಜ.27ರಿಂದ ಅನ್ವೇಷಣೆ (ಆತ್ಮಚಿಂತನ):* ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಬೆನಕನಹಳ್ಳಿಯ ದೇವಾನಂದ ಶರಣರು ಮತ್ತು ಕಜ್ಜಿಡೋಣಿಯ ಕೃಷ್ಣಾನಂದ ಶಾಸ್ತ್ರೀಗಳಿಂದ ಅನ್ವೇಷಣೆ (ಆತ್ಮಚಿಂತನ) ಕಾರ್ಯಕ್ರಮವನ್ನು ಜನವರಿ 27 ರಿಂದ 29ರ ವರೆಗೆ ಬೆಳಗ್ಗೆ 11 ರಿಂದ 1.30 ಗಂಟೆಯ ವರೆಗೆ ಶ್ರೀಮಠದ ಯಾತ್ರಿ ನಿವಾಸ ರಸ್ತೆಯ ಶಾಂತವನದಲ್ಲಿ ನಡೆಯಲಿದೆ.
*ಜ.27, 28ರಂದು ನಾಟಕ ಪ್ರದರ್ಶನ:* ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಗವಿಸಿದ್ದೇಶ್ವರ ಸೇವಾ  ನಾಟ್ಯ ಸಂಘ ಬಗನಾಳ ಇವರಿಂದ `ಶ್ರೀ ಗವಿಸಿದ್ದೇಶ್ವರ ಮಹಾತ್ಮೆ’ ನಾಟಕ ಪ್ರದರ್ಶನವು ಜನವರಿ 27 ಮತ್ತು 28ರಂದು ಎರಡು ದಿನಗಳ ಕಾಲ  ರಾತ್ರಿ 10.30ಕ್ಕೆ ಶ್ರೀ ಶಾಂತವೀರ ಪಬ್ಲಿಕ್ ಸ್ಕೂಲ್ ಮುಂಭಾಗದ ಪಾದಗಟ್ಟಿ ಹತ್ತಿರ ನಡೆಯಲಿದೆ.
*ಜ.28ರಂದು ಕುಸ್ತಿ ಪಂದ್ಯಾವಳಿ, ವಿವಿಧ ಕಾರ್ಯಕ್ರಮ:* ಜಾತ್ರಾ ಮಹೋತ್ಸವ ಪ್ರಯುಕ್ತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಹ್ವಾನಿತ ಮಹಿಳಾ ಮತ್ತು ಪುರುಷರ ತಂಡಗಳಿಂದ ಕುಸ್ತಿ ಪಂದ್ಯಾವಳಿಗಳನ್ನು ಜನವರಿ 28ರಂದು ಬೆಳಿಗ್ಗೆ 10 ಗಂಟೆಗೆ ನಗರದ ಶ್ರೀ ಗವಿಮಠದ ಆವರಣದಲ್ಲಿ ಏರ್ಪಡಿಸಲಾಗಿದೆ.
ಅಂದು ಸಂಜೆ 4 ಗಂಟೆಗೆ ಶ್ರೀ ಶಿವಶಾಂತ ಶರಣರ ದೀರ್ಘದಂಡ ನಮಸ್ಕಾರ ಹಾಗೂ ಸಿದ್ದೇಶ್ವರ ಮೂರ್ತಿಯ ಮೆರವಣಿಗೆ ನಡೆಯಲಿದೆ ಹಾಗೂ ರಾತ್ರಿ 10ಕ್ಕೆ ಮದ್ದು ಸುಡುವ ಕಾರ್ಯಕ್ರಮ ಜರುಗಲಿದೆ.
*ಭಕ್ತ ಹಿತಚಿಂತನ ಸಭೆ ಜ.28ಕ್ಕೆ:* ಗವಿಸಿದ್ದೇಶ್ವರ ಜಾತ್ರೆಯ ನಿಮಿತ್ತ ಭಕ್ತ ಹಿತಚಿಂತನ ಸಭೆಯನ್ನು ಜ28 ರಂದು  ಸಾಯಂಕಾಲ 5.30 ಗಂಟೆಗೆ ಶ್ರೀ ಗವಿಮಠದ ಕೈಲಾಸ ಮಂಟಪದಲ್ಲಿ ಆಯೋಜಿಸಲಾಗಿದೆ. ಮುದ್ದೇನಹಳ್ಳಿ ಆಶ್ರಮದ ಸಾಮಾಜಿಕ ಮತ್ತು ಆಧ್ಯಾತ್ಮಿಕ ಗುರುಗಳಾದ ಮಧುಸೂದನ ಸಾಯಿಯವರು ಹಾಗೂ ಕುಷ್ಟಗಿ-ನಿಡಸೇಸಿಯವರಾದ ಅಭಿನವ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಸಿದ್ಧಾಪುರ ಶಿರಳಗಿಯ ಶ್ರೀ ಚೈತನ್ಯ ರಾಜಾರಾಮ ಆಶ್ರಮದ ಬ್ರಹ್ಮಾನಂದ ಭಾರತೀ ಮಹಾಸ್ವಾಮಿಗಳು ಉಪದೇಶಾಮೃತ ನೀಡುವರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಣ್ಯರಾದ ಮಿಲ್ಲೆಟ್ ಮ್ಯಾನ್ ಆಫ್ ಇಂಡಿಯಾ, ಮೈಸೂರಿನ ಆಹಾರ ವಿಜ್ಞಾನದ ಸಂತ ಡಾ.ಖಾದರ್ ವಲಿ ದೊದೇಕುಲ ಹಾಗೂ ಅಹಮದ್‌ನಗರದ ಹೀವರೆ ಬಜಾರ ಗ್ರಾಮ ಪಂಚಾಯತ್ ಸರಪಂಚ ಪೋಪಟ್ ರಾವ್ ಪವಾರ್ ಅವರು ಪಾಲ್ಗೊಳ್ಳಲಿದ್ದಾರೆ. ಮುಂಬೈನ ಅನುರಾಧಾ ಪಾಲ್ ಹಾಗೂ ತಂಡದವರಿಂದ ಸ್ತ್ರೀ ಶಕ್ತಿ ವಾದ್ಯ ಸಂಗೀತ ಕಾರ್ಯಕ್ರಮ ಹಾಗೂ ಧಾರವಾಡದ ಬಸವರಾಜ ವಂದಲಿ ಹಾಗೂ ಸಂಗಡಿಗರಿಂದ ಸ್ವರ ಮಂದಾರ ಸುಗಮ ಸಂಗೀತ ಕಾರ್ಯಕ್ರಮ ನೆಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.
*ಕಬಡ್ಡಿ ಪಂದ್ಯಾವಳಿಗಳು ಜ.29ಕ್ಕೆ:* ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಆಹ್ವಾನಿತ ಮಹಿಳಾ ಮತ್ತು ಪುರುಷರ ತಂಡಗಳಿಂದ ಕಬಡ್ಡಿ ಪಂದ್ಯಾವಳಿಗಳನ್ನು ಜನವರಿ 29ರಂದು ಬೆಳಿಗ್ಗೆ 10 ಗಂಟೆಗೆ ನಗರದ ಶ್ರೀ ಗವಿ ಮಠದ ಆವರಣದಲ್ಲಿ ಏರ್ಪಡಿಸಲಾಗಿದೆ.
*ಜ.29ರಂದು ಸಮಾರೋಪ ಸಮಾರಂಭ:* ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭವು ಜನವರಿ 29ರಂದು ಸಾಯಂಕಾಲ 5.30 ಗಂಟೆಗೆ ಗವಿಮಠದ ಕೈಲಾಸ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದು, ಶಿವಗಂಗಾಕ್ಷೇತ್ರದ ಮೇಲಣಗವಿ ವೀರಸಿಂಹಾಸನ ಸಂಸ್ಥಾನ ಮಠದ ಮಹಾಸ್ವಾಮಿಗಳಾದ ಮಲಯಾ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಮೈಸೂರಿನ ವಿಶ್ವ ವಿಖ್ಯಾತ ಪರಿಸರ ಮತ್ತು ವನ್ಯಜೀವಿ ಛಾಯಾಗ್ರಾಹಕ ಹಾಗೂ ಗ್ರೀನ್ ಆಸ್ಕರ್ ಪ್ರಶಸ್ತಿ ಪುರಸ್ಕೃತರಾದ ಕೃಪಾಕರ ಸೇನಾನಿ ಅವರು ವಹಿಸುವರು.
ಬೆಂಗಳೂರಿನ ಖ್ಯಾತ ಕನ್ನಡ ಚಲನಚಿತ್ರ ಕಲಾವಿದರಾದ ದೊಡ್ಡಣ್ಣ ಅವರು ಸಮಾರೋಪ ನುಡಿಗಳನ್ನು ಆಡುವರು. ಉಡುಪಿ ಕರ‍್ಸ್ ಕನ್ನಡ ಖ್ಯಾತಿಯ ಕಲಾಸಿಂಧು ಕಲಾವತಿ ದಯಾನಂದ ಬಳಗದಿಂದ ಸ್ವರ-ಚಿತ್ತಾರ ಸಂಗೀತ ಕಾರ್ಯಕ್ರಮ ಮತ್ತು ಗಂಗಾವತಿಯ ಬಿ.ಪ್ರಾಣೇಶ ಅವರಿಂದ ಹಾಸ್ಯೋತ್ಸವ ಕಾರ್ಯಕ್ರಮ ಜರುಗಲಿದೆ.
*ವಿಶೇಷ ಆಕರ್ಷಣೆಗಳು:* ಜಾತ್ರೆಯಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಕರ-ಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳಿಗೆ, ಕೃಷಿ ಮೇಳ, ತಾರಸಿ ತೋಟ (ಟೆರೇಸ್ ಗಾರ್ಡನ್), ಫಲ-ಪುಷ್ಪ ಪ್ರದರ್ಶನ, ರಕ್ತದಾನ, ರಂಗೋಲಿ ಪ್ರರ್ದಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

Get real time updates directly on you device, subscribe now.

Comments are closed.

error: Content is protected !!