ಸಮರ್ಪಕ ಕುಡಿವ ನೀರು ಪೂರೈಕೆಗೆ ಜಿಲ್ಲಾಧಿಕಾರಿಗಳಿಂದ ಕಟ್ಟುನಿಟ್ಟಿನ ನಿರ್ದೇಶನ
ಜಿಲ್ಲೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಯಾವುದೇ ರೀತಿಯ ತೊಂದರೆಯಾಗದಂತೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಗೆ ವಿಶೇಷ ಗಮನ ಹರಿಸುವಂತೆ ಬರ ಪರಸ್ಥಿತಿ ನಿರ್ವಹಣೆಯ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಬರ ಪರಸ್ಥಿತಿ ನಿರ್ವಹಣೆ ಕುರಿತು ಜನವರಿ 16ರಂದು ಜಿಲ್ಲಾಡಳಿತ ಭವನದ ಕೇಶ್ವಾನ್ ಸಭಾಂಗಣದಲ್ಲಿ ವಿಡಿಯೋ ಸಂವಾದ ಮೂಲಕ ಹಮ್ಮಿಕೊಂಡಿದ್ದ ಜಿಲ್ಲಾ ಟಾಸ್ಕ್ ಫೋರ್ಸ್ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಬರ ಪರಿಸ್ಥಿತಿಯಲ್ಲಿ ಜಿಲ್ಲೆಯ ಎಲ್ಲಾ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಯಾವುದೇ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ಅಥವಾ ಈ ಕುರಿತು ಸಾರ್ವಜನಿಕರಿಂದ ದೂರು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಸ್ಪಂದನೆ ನೀಡಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಯಾಗಿಸಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಎಲ್ಲ ತಾಲ್ಲೂಕುಗಳ ತಹಶೀಲ್ದಾರರು ಜಾಗೃತೆಯಿಂದ ಕಾರ್ಯನಿರ್ವಹಿಸಬೇಕು. ಈ ಹಿನ್ನೆಲೆಯಲ್ಲಿ ನಿಯಮಿತವಾಗಿ ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆ ನಡೆಸಿ, ಕುಡಿಯುವ ನೀರಿನ ಅಭಾವವಾಗುವಂತಹ ಗ್ರಾಮಗಳು ಅಥವಾ ನಗರ ಪ್ರದೇಶಗಳ ಮಾಹಿತಿಯನ್ನೊಳಗೊಂಡ ವರದಿ ಸಲ್ಲಿಸಬೇಕು. ಈಗಾಗಲೇ ಚಾಲ್ತಿಯಲ್ಲಿರುವ ಎಲ್ಲ ಬೋರ್ವೆಲ್‌ಗಳ ಸ್ಥಿತಿಗತಿ ಬಗ್ಗೆಯೂ ಸಹ ಮಾಹಿತಿ ಸಲ್ಲಿಸಬೇಕು. ಅವಶ್ಯವಿದ್ದಲ್ಲಿ ಖಾಸಗಿ ಬೋರ್ವೆಲ್‌ಗಳ ಮೂಲಕ ನೀರು ಪೂರೈಕೆಗೆ ಖಾಸಗಿ ಬೋರ್ವೆಲ್‌ಗಳನ್ನು ಗುರುತಿಸಿಡಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಯಾವುದೇ ತೊಂದರೆಯಾಗದಂತೆ ಸಮರ್ಪಕ ನೀರು ಪೂರೈಕೆಗೆ ವಿಶೇಷ ಗಮನ ಹರಿಸುವಂತೆ ಎಲ್ಲ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
*ಜಾನುವಾರುಗಳಿಗೆ ಮೇವಿನ ಕೊರತೆಯಾಗದಿರಲಿ:*
ಜಾನುವಾರುಗಳು ರೈತರ ಬೆನ್ನೆಲಬಾಗಿದ್ದು, ಅವುಗಳನ್ನು ಕೃಷಿಕರು ಪ್ರಮುಖ ಆಧಾರವಾಗಿಟ್ಟುಕೊಂಡು ಹಾಗೂ ಆದಾಯದ ಮೂಲವಾಗಿಯೂ ಸಾಕಾಣಿಕೆ ಮಾಡಿಕೊಂಡಿದ್ದಾರೆ. ಪ್ರಸ್ತುತದ ಬರ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮುಂಜಾಗೃತೆ ವಹಿಸಬೇಕು. ಜಾನುವಾರುಗಳಿಗೆ ಸಮರ್ಪಕ ಮೇವು ಪೂರೈಕೆಗೆ ಕೃಷಿ, ಪಶು ಇಲಾಖೆ ಹಾಗೂ ತಹಶೀಲ್ದಾರರು ಸೇರಿ ತಾಲ್ಲೂಕುವಾರು ಜಂಟಿ ಸರ್ವೇ ಕೈಗೊಂಡು ಜಿಲ್ಲೆಯ ರೈತರಲ್ಲಿರುವ ಮೇವಿನ ಲಭ್ಯತೆ, ಅವಶ್ಯಕತೆ ಹಾಗೂ ಉಳಿಕೆ ಮೇವಿನ ವಿವರದ ಮಾಹಿತಿ ಪಡೆದು ರೈತರ ಪಟ್ಟಿ ತಯಾರಿಸಬೇಕು. ರೈತರ ಬೇಡಿಕೆಗನುಸಾರ ಮೇವು ಪೂರೈಕೆಗೆ ಹಾಗೂ ಮೇವು ಬ್ಯಾಂಕ್ ಸ್ಥಾಪನೆಗೆ ತ್ವರಿತ ಕ್ರಮ ಕೈಗೊಳ್ಳಬೇಕು. ಇಲಾಖೆಗೆ ರೈತರಿಂದಲೂ ಮೇವು ಖರೀದಿಸಲು ಅವಕಾಶವಿದ್ದು, ಈ ಕುರಿತು ರೈತರಿಗೆ ಜಾಗೃತಿ ಮೂಡಿಸಿ, ಮೇವು ಖರೀದಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಮಾತನಾಡಿ, ಆದ್ಯತೆಯ ಮೇರೆಗೆ ಜಲಜೀವನ್ ಮಿಷನ್ ಮತ್ತು ಡಿಬಿಓಟಿ ದುರಸ್ತಿಗೆ ಒತ್ತು ಕೊಡಬೇಕು. ಜನರಿಗೆ ಸಾಕಷ್ಟು ಅನುಕೂಲಕರವಾದ ಜೆಜೆಎಂ ಮತ್ತು ಡಿಬಿಓಟಿ ಮೂಲಕವೇ ಕುಡಿಯುವ ನೀರು ಪೂರೈಕೆಗೆ ಆಯಾ ತಾಲ್ಲೂಕು ಪಂಚಾಯತ್ ಇಒಗಳು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ, ಉಪ ವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ್ ಮಾಲಗತ್ತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Comments are closed.