ಮುಂಬೈನಲ್ಲಿ ಕನ್ನಡ ಪತ್ರಿಕೋದ್ಯಮ, ಹೆಮ್ಮೆಯ ಸಂಗತಿ ಎಂದು ಶ್ಲಾಘನೆ…
ಮುಂಬಯಿ:
ರಾಜ್ಯದ ಸಾವಿರಾರು ಜನರು ಉದ್ಯೋಗ ಅರಸಿ ಮುಂಬೈಗೆ ಬಂದು ನೆಲೆನಿಂತಿದ್ದಾರೆ. ಮುಂಬೈನಲ್ಲಿ ಕನ್ನಡ ಪತ್ರಿಕೆಗಳು ಸಾಕಷ್ಟು ಪ್ರಸಾರ ಹೊಂದಿವೆ. ಇಲ್ಲೇ ಹಲವು ಪತ್ರಿಕೆಗಳು ಹುಟ್ಟಿ ಬೆಳೆದು ನಮ್ಮ ಕನ್ನಡ ಭಾಷೆ, ಸಂಸ್ಕೃತಿ ಉಳಿವಿಗೂ ದೊಡ್ಡ ಕೊಡುಗೆ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಪ್ರಂಶಸೆ ವ್ಯಕ್ತಪಡಿಸಿದರು.
ಮುಂಬೈನ ಸ್ವರ್ಗೀಯ ರಾಧಾ ಭೋಜನಶೆಟ್ಟಿ ಸುರತ್ಕಲ್ ವೇದಿಕೆಯಲ್ಲಿ ಶನಿವಾರ ನಡೆದ ಕರ್ನಾಟಕ ಮಹಾರಾಷ್ಟ್ರ ಪತ್ರಕರ್ತರ ಸಮ್ಮಿಲನ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಹಾರಾಷ್ಟ್ರ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವೆ ಶತಶತಮಾನಗಳ ಅವಿನಾಭಾವ ಬಂಧವಿದೆ. ವ್ಯಾಪಾರ, ವಹಿವಾಟು, ಶಿಕ್ಷಣ, ಕಲೆ, ವಿಜ್ಞಾನ, ಉದ್ಯೋಗ, ಸಿನಿಮಾ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಉಬಯ ರಾಜ್ಯಗಳ ನಡುವೆ ಕೊಡುಕೊಳ್ಳುವಿಕೆ ಇದೆ. ಇಲ್ಲಿ ಕನ್ನಡ ಪತ್ರಿಕೋದ್ಯಮ ಕೂಡ ಬೆಳದಿದೆ ಇದಕ್ಕೆ ಅಭಿನಂದನೆಗಳು ಎಂದರು.
ರಾಜ್ಯದ ಪತ್ರಕರ್ತರ ಸಂಘದ ಘಟಕ ಹೊರ ರಾಜ್ಯದಲ್ಲಿ ಪ್ರಾರಂಭವಾಗುವುದು ವಿಶೇಷ. ಇದರಿಂದ ವೈಚಾರಿಕ, ಸಾಂಸ್ಕೃತಿಕ ವಿನಿಮಯಕ್ಕೆ ಅನುಕೂಲವಾಗುವ ಜೊತೆಗೆ ವಾಣಿಜ್ಯ ನಗರಿಯಲ್ಲಿ ಇರುವ ನಮ್ಮ ರಾಜ್ಯದ ಪತ್ರಕರ್ತರ ಒಗ್ಗೂಡುವಿಕೆ, ಸಂಘಟನೆ ಪತ್ರಕರ್ತರ ಹಿತ ಸಂರಕ್ಷಣೆಗೂ ಸಹಕಾರಿಯಾಗುತ್ತದೆ ಎಂದರು.
ಮಾಧ್ಯಮಗಳು ಜನಸಾಮಾನ್ಯರ ಧ್ವನಿಯಾಗಬೇಕು, ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲುಗಾರನಂತೆ ಕೆಲಸಮಾಡಬೇಕು. ದೇಶದ ಸ್ವಾತಂತ್ರ್ಯಾ ಚಳುವಳಿಯಲ್ಲಿ ಪತ್ರಿಕೋದ್ಯಮದ ಪಾತ್ರ ಬಹಳ ಮಹತ್ವದ್ದು, ಆದರೆ ಈಗ ಮಾಧ್ಯಮ ಕ್ಷೇತ್ರ ಕೇವಲ ವೃತ್ತಿ, ಪವೃತ್ತಿಯಾಗಳಾಗಿರದೆ ಉದ್ಯಮದ ಸ್ವರೂಪ ಪಡೆದಿದೆ. ಇದರಲ್ಲಿ ಪತ್ರಿಕೋದ್ಯಮದ ಅಶಯಗಳ ಏಳಿಗೆಗಿಂತ ಬಂಡವಾಳ ಶಾಹಿಗಳ ಹಿತಾಸಕ್ತಿ ಸಂರಕ್ಷಣೆ ಹೆಚ್ಚುತ್ತಿರುವುದು ಕಳವಳಕಾರಿ ಇದರಿಂದ ಪತ್ರಕರ್ತರಿಗೂ ಕಷ್ಟ ಜನಸಾಮಾನ್ಯರಿಗೂ ನಷ್ಟ ಎಂದರು.
ಪತ್ರಿಕೋದ್ಯಮದ ಮೂಲ ಆಶಯ ಬದಲಾಗಬಾರದು ಅದು ಎಂದಿಗೂ ಜನರ ದಾರಿ ದೀಪ, ಧ್ವನಿಯಾಗೇ ಇರಬೇಕು. ಎಲ್ಲಾ ಸಂದರ್ಭದಲ್ಲಿಯೂ ತಪ್ಪು, ಅಕ್ರಮಗಳ ವಿರುದ್ಧವೇ ಇರಬೇಕು ಎಂದಿಗೂ ಅಕ್ರಮದ ಭಾಗವಾಗದೇ, ಅಕ್ರಮಗಳ ಪೋಷಣೆ ಮಾಡದೆ ಇರಬೇಕು. ಜನಸಾಮಾನ್ಯರ ಧ್ವನಿಯಾಗಬೇಕು ಎಂದು ಹೇಳಿದರು.
ಇದು ಆಧುನಿಕ ಯುಗ, ನವ ಮಾಧ್ಯಮ ಯುಗ. ಮುದ್ರಣ ಮಾಧ್ಯಮ ಹಾಗೂ ಟಿವಿ ಚಾನಲ್ ಗಳಿಗೆ ಸಾಮಾಜಿಕ ಜಾಲತಾಣಗಳು ದೊಡ್ಡ ಸವಾಲಾಗಿವೆ ಸ್ಪರ್ಧಿಗಳಿಗೆ ತೆರೆದುಕೊಂಡು ಬದಲಾದ ಸಂದರ್ಭಕ್ಕೆ ಅಪ್ಲೇಟ್ ಅಗುತ್ತಾ ಸಾಗಿ. ನೈಜ ಪತ್ರಿಕೋದ್ಯಮಕ್ಕೆ ಸದಾ ಗೆಲುವು ಇರಲಿ ಎಂದು ಹಾರೈಸುತ್ತೇನೆ ಎಂದರು.
ಇದು ದಾವಂತದ ಯುಗ. ಸುದ್ದಿಗಳ ಬ್ರೇಕಿಂಗ್ ಆತುರದಲ್ಲಿ ಅಮಾಯಕರ ಬದುಕುಗಳು ಬ್ರೇಕ್ ಅಗದಿರಲಿ. ಅಸತ್ಯಗಳ ಪ್ರತಿಪಾದನೆಯಾಗದಿರಲಿ. ಜನಸಾಮಾನ್ಯರ ಬದುಕು, ಖಾಸಗಿ ಜೀವನ ಟಿ ಆರ್.ಪಿ ಸರಕಾಗದಿರಲಿ ಎಂದು ಸಚಿವರು ತಿಳಿಸಿದರು.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ತನ್ನ ಕ್ರಿಯಾ ಶೀಲತೆ ಸಂಘಟನೆ ಹಾಗೂ ಮಾಧ್ಯಮ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ವಿಚಾರದಲ್ಲಿ ರಾಷ್ಟ್ರಕ್ಕೆ ಮಾದರಿಯಾಗಿರುವುದು ಹೆಮ್ಮೆಯ ಸಂಗತಿ. ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ತಂಡ ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಮತ್ತು ಇತರೆ ಸಂದರ್ಭದಲ್ಲಿ ಸಂಕಷ್ಟಕ್ಕೆ ಈಡಾದ ಪತ್ರಕರ್ತರ ಹಿತಕ್ಕೆ ಶ್ರಮಿಸಿದ ಪರಿ ಅನನ್ಯ. ಇದಕ್ಕಾಗಿ ಇಡೀ ತಂಡವನ್ನು ವಿಶೇಷವಾಗಿ ಶಿವಾನಂದ ತಗಡೂರ್ ಅವರನ್ನು ಅಭಿನಂದಿಸುತ್ತೇನೆ ಎಂದರು.
ನಿವೃತ್ತರಾದ ಪತ್ರಕರ್ತರ ಮನೆಗೆ ತೆರಳಿ ಅವರನ್ನು ಗೌರವಿಸುವ ಕೆಲಸ ಕೂಡ ಶ್ಲಾಘನೀಯ. ಇನ್ನಷ್ಟು ರಾಜ್ಯಗಳಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ಘಟಕಗಳು ಪ್ರಾರಂಭವಾಗಲಿ ಎಂದು ಹಾರೈಸಿ ಪತ್ರಕರ್ತರ ಸಂಘಕ್ಕೆ ಗೆಲುವಾಗಲಿ ಎಂದರು.
ವಾಸ್ತವಕ್ಕೆ ಕನ್ನಡಿ ಹಿಡಿಯಲು ಸ್ಪೀಕರ್ ಯು.ಟಿ.ಖಾದರ್ ಕರೆ:
ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ ಖಾದರ್ ಮಾತನಾಡಿ,
ಪತ್ರಕರ್ತರು ವಾಸ್ತವಕ್ಕೆ ಕನ್ನಡಿ ಹಿಡಿಯಬೇಕು. ಆಗ ಮಾತ್ರ ವೃತ್ತಿ ಬದ್ಧತೆ ಕಾಪಾಡಿಕೊಂಡು ವಿಶ್ವಾಸಾರ್ಹತೆ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಕರ್ನಾಟಕ ಮತ್ತು ಮಹಾರಾಷ್ಟ್ರ ಬಾಂಧವ್ಯ ಬೆಸೆಯುವ ಕೆಲಸವನ್ನು ಮುಂಬಯಿ ಕನ್ನಡಿಗರು ಮಾಡುತ್ತಾ ಬಂದಿದ್ದಾರೆ. ಹೊರನಾಡಿನ ಘಟಕವಾಗಿ ಮುಂಬಯಿ ಘಟಕಕ್ಕೆ ಚಾಲನೆ ನೀಡಿರುವುದು ಸಂತೋಷದ ಸಂಗತಿ ಎಂದರು.
ಮಹಾರಾಷ್ಟ್ರ ಘಟಕದ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ.ಆರ್ ಕೆ ಶೆಟ್ಟಿ, ಮಹಾರಾಷ್ಟ್ರ ಕನ್ನಡಿಗರ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್, ಉಪಾಧ್ಯಕ್ಷ ಡಾ.ಶಿವು ಮೂಡಿಗೆರೆ, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಉಪಾಧ್ಯಕ್ಷರಾದ ಅಜ್ಜಮಾಡು ರಮೇಶ್ ಕುಟ್ಟಪ್ಪ, ಭವಾನಿಸಿಂಗ್ ಠಾಕೂರ್, ಪುಂಡಲೀಕ ಭೀ ಬಾಳೋಜಿ, ಕಾರ್ಯದರ್ಶಿಗಳಾದ ಮತ್ತೀಕೆರೆ ಜಯರಾಮ್, ಸೋಮಶೇಖರ್ ಕೆರಗೋಡು, ನಿಂಗಪ್ಪ ಚಾವಡಿ ಖಜಾಂಚಿ ವಾಸುದೇವ ಹೊಳ್ಳ ಸೇರಿದಂತೆ ಇನ್ನಿತರ ಗಣ್ಯರು ಹಾಗೂ ಪತ್ರಕರ್ತರ ಹಾಜರಿದ್ದರು.
ಇದೇ ಸಂದರ್ಭದಲ್ಲಿ ಸಂಘದ ಹಿರಿಯರನ್ನು ಗೌರವಿಸಲಾಯಿತು.
Comments are closed.