ಮುಟ್ಟಿನ ನೋವು ತೀರಾ ವಯಕ್ತಿಕ ಸಂಗತಿ -ಜ್ಯೋತಿ ಗೊಂಡಬಾಳ
ಕೊಪ್ಪಳ: ಋತುಮತಿ ಆದ ಪ್ರತಿಯೊಬ್ಬ ಹೆಣ್ಣುಮಗಳಿಗೆ ಪ್ರಕೃತಿದತ್ತವಾಗಿ ಬರುವ ಮುಟ್ಟು ಮತ್ತು ಅದರ ಜೊತೆಗೇ ಇರುವ ನೋವು ತೀರಾ ಖಾಸಗಿ ಸಂಗತಿಯಾಗಿದ್ದು ಕೇಂದ್ರ ಸಚಿವೆಯ ಉಢಾಫೆ ಹೇಳಿಕೆಗೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ಬೇಸರ ವ್ಯಕ್ತಪಡಿಸಿದ್ದಾರೆ.
ಇಂಗ್ಲೀಷ್‌ನ ಮೆನ್ಸ್ಟ್ರುಯಲ್ ಎಂಬ ಪದವೇ ಹೆಣ್ಣು ಗಂಡಾಗುವ ಸಮಯ ಎಂಬ ಭಾವ ನೀಡುತ್ತದೆ, ಪ್ರತಿ ತಿಂಗಳು ಮೂರರಿಂದ ನಾಲ್ಕು ದಿನ ಸಣ್ಣ ನೋವಿನಿಂದ ಹಿಡಿದು ವಿಪರೀತ ನೋವು ಅನುಭವಿಸುವ ಹೆಣ್ಣು ಸಾಕ್ಷಾತ್ ಶಕ್ತಿರೂಪಿಣಿ ಎಂಬುದಕ್ಕೆ ಸಾಕ್ಷಿ. ಅದೇ ನೋವು ಗಂಡಿಗೆ ಆಗಿದ್ದರೆ ಬಹುಷಃ ಇಂದಿನ ಪುರುಷ ಪ್ರಧಾನ ವ್ಯವಸ್ಥೆ ಇರುತ್ತಿರಲಿಲ್ಲ, ಮುಟ್ಟಿನ ನೋವು ಎಷ್ಟು ಹೇಗೆ ಸಹಿಸಿಕೊಳ್ಳಬೇಕು ಹಾಗೂ ಅದಕ್ಕಾಗಿ ಆಕೆಗೆ ಬಿಡುವು, ರಜೆ ಬೇಕಾ ಬೇಡವಾ ಎಂಬುದನ್ನು ಆಕೆಯೇ ನಿರ್ಧರಿಸಬೇಕೇ ಹೊರತು ಎರಡನೆ ವ್ಯಕ್ತಿಯಲ್ಲ. ಇನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಕೊಟ್ಟಿರುವ ಅಸಂಭದ್ದ ಹೇಳಿಕೆಯಿಂದ ಬಿಜೆಪಿಯಲ್ಲಿರುವ ಮಹಿಳೆಯರು ಸಹ ಮಹಿಳಾ ವಿರೋಧಿಗಳು ಎಂದು ತಿಳಿಯುವ ಸಂದರ್ಭ ಬಂದಿದೆ, ಅವರದ್ದೇ ಸರಕಾರದ ಸಚಿವರೊಬ್ಬರು ತಾವು ಈರುಳ್ಳಿ ತಿನ್ನುವದಿಲ್ಲವಂತೆ ಅದಕ್ಕೆ ಅದು ತಮ್ಮ ಸರಕಾರಕ್ಕೆ ಸಂಬಂಧವಿಲ್ಲ ಎಂದು ಹೇಳುತ್ತಾರೆ, ಈಗ ತಮ್ಮ ಮುಟ್ಟು ನಿಂತಿದೆ ಎನ್ನುವ ಕಾರಣಕ್ಕೆ ಸಚಿವೆ ಇರಾನಿ ಅವರು ಮುಟ್ಟಿನ ರಜೆ ಬೇಕಿಲ್ಲ ಎಂದು ಹೇಳುವದು ಅಸಂಮಜಸವಾದದ್ದು, ಇವರಿಗೆ ಅದ್ಯಾವ ತಜ್ಞವೈದ್ಯರು ಹೇಳಿದರು ಅಥವಾ ಇವರು ಅದ್ಯಾರ ಸಲಹೆ ಪಡೆದಿದ್ದಾರೆ ಎಂದು ಜನರಿಗೆ ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಲ್ಲದೇ ಹೆಣ್ಗರುಳಿನ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ. ಕೆ. ಶಿವಕುಮಾರ ಅವರು ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರೊಡಗೂಡಿ ಕೇರಳ ಮಾದರಿಯಲ್ಲಿ ರಾಜ್ಯದ ವಿದ್ಯಾರ್ಥಿ ಹಾಗೂ ಉದ್ಯೋಗಸ್ಥರಿಗೆ ವರ್ಷಕ್ಕೆ ೩೦ ದಿನ ಮುಟ್ಟಿನ ರಜೆ ಕೊಡಲು ಕಾನೂನು ಮಾಡಬೇಕು. ವಿದ್ಯಾರ್ಥಿಗಳ ಹಾಜರಾತಿಗೆ ಮತ್ತು ನೌಕರಸ್ಥರಿಗೆ ಸಂಬಳಸಹಿತ ರಜೆ ನೀಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು, ಖಾಸಗಿ ಸಂಸ್ಥೆಗಳಿಗೂ ಇದನ್ನು ಒಳಪಡಿಸಬೇಕು ಎಂದು ಮನವಿ ಮಾಡಿದ್ದಾರೆ.
Comments are closed.