ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಧರಣಿ ಆರಂಭ
-ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಭೇಟಿ
ಕೊಪ್ಪಳ: ಸೇವಾ ಕಾಯಂಗೆ ಆಗ್ರಹಿಸಿ ರಾಜ್ಯಾದ್ಯಂತ ಆರಂಭಗೊಂಡಿರುವ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಕೊಪ್ಪಳದಲ್ಲಿ ಬೆಂಬಲ ವ್ಯಕ್ತವಾಗಿದೆ.
ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಜಿಲ್ಲಾ ಸಂಘಟನೆಯ ನೇತೃತ್ವದಲ್ಲಿ ಗುರುವಾರ ಸೇವಾ ಕಾಯಂಗೆ ಆಗ್ರಹಿಸಿ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿಗೆ ಚಾಲನೆ ನೀಡಲಾಯಿತು. ಸುತ್ತಮುತ್ತಲಿನ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ವೀರಣ್ಣ ಸಜ್ಜನರ್ ಮಾತನಾಡಿ, ಸುಮಾರು ಹತ್ತು-ಹದಿನೈದು ವರ್ಷಗಳಿಂದ ಸರಕಾರಿ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರೂ ಅತಿಥಿ ಪಟ್ಟ ಸಿಕ್ಕಿದೆ. ನಮಗೆ ಅತಿಥಿಯ ಹಣೆಪಟ್ಟಿ ಬೇಕಿಲ್ಲ. ಸೇವೆ ಪರಿಗಣಿಸಿ ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಾ.ಸಣ್ಣದೇವೇಂದ್ರಸ್ವಾಮಿ ಮಾತನಾಡಿ, ಸರಕಾರ ವಿವಿಧ ಇಲಾಖೆ, ವಲಯಗಳ ಗುತ್ತಿಗೆ, ಹೊರಗುತ್ತಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಸೇವಾಭದ್ರತೆ ಕಲ್ಪಿಸಿದೆ. ಈ ನಿಟ್ಟಿನಲ್ಲಿ ನಮ್ಮನ್ನು ಕಡೆಗಣಿಸಿರುವುದು ಅಸಮಂಜಸ. ಕೂಡಲೇ ನಮ್ಮ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಹಿರಿಯ ಮುಖಂಡ ಎಂ.ಶಿವಣ್ಣ ಮಾತನಾಡಿ, ಸುಮಾರು ಇಪ್ಪತ್ತು ವರ್ಷಗಳಿಂದ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದು, ಇನ್ನೆರಡು ವರ್ಷ ಕಳೆದರೆ ಅತಿಥಿ ಪಟ್ಟವೂ ಕಳಚುತ್ತದೆ. ಇಷ್ಟು ವರ್ಷ ಸೇವೆ ಸವೆಸಿದರೂ ನಮ್ಮ ಕುಟುಂಬದ ಭವಿಷ್ಯ ಅಭದ್ರವಾಗಿದೆ. ಸರಕಾರ ನಮ್ಮ ಸಮಸ್ಯೆಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಸಂಘಟನೆಯ ಮಹಿಳಾ ಮುಖಂಡರಾದ ಸಂತೋಷಿ ಬೆಲ್ಲದ್, ವಿದ್ಯಾರ್ಥಿಗಳ ಕಣ್ಣೀರೊರೆಸಬೇಕಾದ ನಾವೇ ಇಂದು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದೇವೆ. ಸರಕಾರ ನಮ್ಮ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಸ್ಪಂದಿಸಿ, ನ್ಯಾಯ ಒದಗಿಸಬೇಕು ಎಂದು ಅಳಲು ತೋಡಿಕೊಂಡರು.
ಡೊಳ್ಳು ಬಾರಿಸುವ ಮೂಲಕ ಅತಿಥಿ ಉಪನ್ಯಾಸಕರ ಕಾಯಂಗೆ ಸಂಬಂಧಿಸಿದಂತೆ ಸರಕಾರದ ವಿಳಂಬ ನೀತಿ ವಿರೋಧಿಸಿ ಪ್ರತಿಭಟನಾನಿರತರು ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಡಾ.ಜ್ಞಾನೇಶ್ವರ ಪತ್ತಾರ, ಗಿರಿಜಾ ತುರುಮುರಿ, ಬಸವರಾಜ ಕರುಗಲ್, ಶಿವಬಸಪ್ಪ ಮಸ್ಕಿ, ಡಾ.ಪ್ರಕಾಶ್ ಬಳ್ಳಾರಿ, ಡಾ.ತುಕಾರಾಂ ನಾಯಕ್, ಅಕ್ಕಮಹಾದೇವಿ, ಪ್ರದೀಪ ಪಲ್ಲೇದ್, ಮಹೇಶ ಪೂಜಾರ, ಗೋಣಿಬಸಪ್ಪ, ಮಾರುತಿ, ನವೀನ್, ಗೋಣಿಬಸಪ್ಪ, ಬಿಷ್ಠಪ್ಪ, ವಿಜಯಕುಮಾರ್ ಕೆಂಚಪ್ಪನವರ್, ಪ್ರಕಾಶ ಜಡಿಯವರ್, ವಾಸುದೇವ ಬುರ್ಲಿ, ಸಂತೋಷ್, ಅಮರೇಶ್, ಉಷಾ, ಬಗಾಡೆ, ನಜ್ಮ ಮತ್ತಿತರರು ಇದ್ದರು.
ಬಾಕ್ಸ್-1
ವಿಧಾನ ಪರಿಷತ್ ಸದಸ್ಯೆ ಹೇಮಲತಾ ಭೇಟಿ:
ಅತಿಥಿ ಉಪನ್ಯಾಸಕರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಪ್ರತಿಭಟನಾಕಾರರ ಮನವಿ ಆಲಿಸಿ, ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಅತಿಥಿ ಉಪನ್ಯಾಸಕರ ಗೌರವ ಧನವನ್ನು ದುಪ್ಪಟ್ಟು ಹೆಚ್ಚಿಸಿತ್ತು. ಬರಲಿರುವ ಚಳಿಗಾಲದ ಅಧಿವೇಶನದಲ್ಲಿ ಅತಿಥಿ ಉಪನ್ಯಾಸಕರ ಬೇಡಿಕೆಯನ್ನು
ಈಗಿನ ಸರಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಬೆಂಬಲ ನೀಡಿದ ಬೆಟ್ಟದೂರು:
ನಿವೃತ್ತ ಪ್ರಾಚಾರ್ಯ, ಬಂಡಾಯ ಸಾಹಿತಿ ಹಾಗೂ ಪಠ್ಯ ಪುಸ್ತಕ ರಚನಾ ಸಮಿತಿ ಮುಖಂಡ ಅಲ್ಲಮಪ್ರಭು ಬೆಟ್ಟದೂರು ಅತಿಥಿ ಉಪನ್ಯಾಸಕರ ಪ್ರತಿಭಟನೆಯನ್ನು ಬೆಂಬಲಿಸಿ, ಬೇಡಿಕೆಯನ್ನು ಸರಕಾರದ ಗಮನಕ್ಕೆ ತರಲಾಗುವುದು ಎಂದರು.
Comments are closed.