ಪತ್ರಿಕಾ ವಿತರಕರಿಗೆ ಸ್ಪಂದಿಸಿದ ಸರ್ಕಾರ… ಅಪಘಾತದಲ್ಲಿ ಮೃತ ವಿತರಕರಿಗೆ 2ಲಕ್ಷ ವೈದ್ಯಕೀಯ ನೆರವಿಗೆ 1 ಲಕ್ಷ ರೂ ನೆರವಿನ ಯೋಜನೆ ಜಾರಿ

Get real time updates directly on you device, subscribe now.

ಅಪಘಾತದಲ್ಲಿ ಮೃತ ವಿತರಕರಿಗೆ 2ಲಕ್ಷ ವೈದ್ಯಕೀಯ ನೆರವಿಗೆ 1 ಲಕ್ಷ ರೂ ನೆರವಿನ ಯೋಜನೆ ಜಾರಿ ಮಾಡಿದ ಕಾರ್ಮಿಕ ಇಲಾಖೆ

ಬೆಂಗಳೂರು:
ಪತ್ರಿಕಾ ವಿತರಕರ ಸಮಸ್ಯೆಗೆ ಸ್ಪಂದಿಸಿರುವ ಸರ್ಕಾರ ಅಪಘಾತದಲ್ಲಿ ಮೃತಪಟ್ಟವರಿಗೆ 2 ಲಕ್ಷ ರೂ ನೆರವು ನೀಡಲು ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ 1 ಲಕ್ಷ ರೂ ನೆರವು ಕೊಡಲು ಕ್ರಮಕೈಗೊಂಡಿದೆ. ಇದಕ್ಕಾಗಿ ಕರ್ನಾಟಕ ರಾಜ್ಯ ದಿನಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆಯನ್ನು ಅನುಷ್ಠಾನಗೊಳಿಸಿರುವ ಆದೇಶವನ್ನು ಕಾರ್ಮಿಕ ಇಲಾಖೆ ಹೊರಡಿಸಿದೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಮತ್ತು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಕಾರ್ಮಿಕ ಸಚಿವ ಸಂತೋಷ್ ಲಾಡ್‌ ಅವರನ್ನು ಭೇಟಿ ಮಾಡಿ‌ಸಲ್ಲಿಸಿದ ಮನವಿ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ಈ ಬಗ್ಗೆ ಆದೇಶ ಹೊರಡಿಸಿದೆ.

ಪತ್ರಿಕಾ ವಿತರಕರು ಕಾರ್ಮಿಕರಾಗಿದ್ದು, ಅವರಿಗೆ ಕನಿಷ್ಠ ಸೌಲಭ್ಯ ಒದಗಿಸುವಂತೆ ತುಮಕೂರು ಮತ್ತು ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರಿಗೆ ಒತ್ತಾಯಿಸಲಾಗಿತ್ತು. ಅಂದು ಪ್ರಭಾಕರ್ ಅವರು ಸಭೆಯಲ್ಲಿ ನೀಡಿದ ಭರವಸೆ ಶೀಘ್ರವಾಗಿ ಈಡೇರಿರುವುದು
ಬಹಳ ವರ್ಷಗಳ ಕನಸು ನನಸಾಗಿದೆ.

ಪತ್ರಿಕಾ ವಿತರಕರ ಬೇಡಿಕೆ ಈಡೇರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮತ್ತು ಎಲ್ಲಾ ಹಂತದಲ್ಲಿಯೂ ಜೊತೆಯಾಗಿ ಸಹಕಾರ ನೀಡಿದ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರಿಗೆ ಕರ್ನಾಟಕ ಪತ್ರಿಕಾ ವಿತರಕರ ಒಕ್ಕೂಟ ಅಭಿನಂದನೆಗಳನ್ನು ಸಲ್ಲಿಸಿ ಅವರ ಸೇವೆ ಸ್ಮರಿಸಿದೆ.

ಹೋರಾಟದ ಮೊದಲ ಹೆಜ್ಜೆ…

ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ದಿನಾಂಕ 2.7.2022 ರಂದು ಬೆಳಿಗ್ಗೆ ಸೈಕಲ್ ನಲ್ಲಿ ಪತ್ರಿಕೆ ಹಂಚುತ್ತಿದ್ದಾಗ ಸಾರಿಗೆ ಸಂಸ್ಥೆ
ಬಸ್ ಡಿಕ್ಕಿ ಹೊಡೆದ ಪರಿಣಾಮವಾಗಿ ವಿತರಕ
ಗಣೇಶ್ ಮೃತಪಟ್ಟಿದ್ದ. ಈ ಕುಟುಂಬಕ್ಕೆ ಪರಿಹಾರ ಕೊಡಿಸಲು ಆಗ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ನೇತೃತ್ವದಲ್ಲಿ ಅವಿರತ ಹೋರಾಟ ಮಾಡಿದ ಪರಿಣಾಮವಾಗಿ ಕಾರ್ಮಿಕ ಇಲಾಖೆಯಿಂದ ಮೊಟ್ಟ ಮೊದಲ ಬಾರಿಗೆ 2 ಲಕ್ಷ ರೂ ಪರಿಹಾರವನ್ನು ಗಣೇಶ್ ಕುಟುಂಬಕ್ಕೆ ಕೊಡಿಸಲು ಸಾಧ್ಯವಾಗಿತ್ತು. ಈ ಪ್ರಕರಣ ಮಹತ್ವದ ಮತ್ತು ಭರವಸೆಯ ಮೆಟ್ಟಿಲಾಯಿತು ಎಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಶಂಭುಲಿಂಗ ಅವರು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!