ಎಎಪಿ ಪಕ್ಷವನ್ನು ಬೇರು ಮಟ್ಟದಲ್ಲಿ ಸಂಘಟಿಸುತ್ತೇವೆ : ಮುಖ್ಯಮಂತ್ರಿ ಚಂದ್ರು
ಕೊಪ್ಪಳ :
ದೆಹಲಿ ಮಾದರಿಯಂತೇ ಕರ್ನಾಟಕದಲ್ಲಿಯು ಸಹ ಅಮ್ ಆದ್ಮಿ ಪಕ್ಷವನ್ನು ಬೇರು ಮಟ್ಟದಲ್ಲಿ ಸಂಘಟನೆ ಮಾಡುತ್ತೇವೆ ಎಂದು ಎಎಪಿ ರಾಜ್ಯಾಧ್ಯಕ್ಷ, ಸಿನಿಮಾ ನಟ, ಕಲಾವಿದ ಮುಖ್ಯಮಂತ್ರಿ ಚಂದ್ರು ಹೇಳಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಥಿಯನ್ನು ಉದ್ದೇಶಿಸಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, ರಾಜ್ಯದಲ್ಲಿ ಮೂರು ಪಕ್ಷಗಳನ್ನು ಜನರು ಆಂತರಿಕವಾಗಿ ನಿರಾಕರಿಸುತ್ತಿದ್ದಾರೆ. ಬಿಜೆಪಿ ಅವರದ್ದು 40% ಆದರೆ, ಕಾಂಗ್ರೆಸ್ನವರದ್ದು 50% ಆಗಿದೆ ಎಂದು ಅವರವರೇ ಭ್ರಷ್ಟಾಚಾರದ ಮಾತುಗಳನ್ನು ಹೊರ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಉಚಿತ, ಉಚಿತ ಎನ್ನುತ್ತಲೇ ಖಚಿತತೆಯನ್ನು ಪಡೆಯುತ್ತಿಲ್ಲ. ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಬಡವರ, ಕಾರ್ಮಿಕರ, ರೈತರ ಬಗೆಗೆ ಕಾಳಜಿ ಇಲ್ಲ. ಇನ್ನು ಜೆಡಿಎಸ್ ಕೋಮವಾದ ಪಕ್ಷದಲ್ಲಿ ವಿಲೀನಗೊಂಡಿದೆ. ಇವುಗಳಿಗೆ ಪರ್ಯಾಯವಾಗಿ ಅಮ್ ಆದ್ಮಿ ಪಕ್ಷವು ಸ್ಥಳಿಯ ಮಟ್ಟದಿಂದ ಬಲಿಷ್ಠವಾಗಿ ಸಂಘಟನೆಗೊಳ್ಳಲಿದೆ. ರಾಜ್ಯದ ಜನತೆಯ ಸಮಸ್ಯೆಗಳಿಗೆ ಎಎಪಿ ಸದಾ ಅವರ ಜೊತೆಗೆ ಇದ್ದು, ಸರ್ಕಾರಗಳ ವಿರುದ್ಧ ಪ್ರತಿಭಟಿಸಲಾಗುವುದು. ನಮ್ಮ ಪಕ್ಷದ ವಿರುದ್ಧ ಎಷ್ಟೇ ದೂರು ದಾಖಲಾದರೂ ಕೂಡ ಪ್ರತಿಭಟನೆ ಮಾಡಲು ಹಿಂಜರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಹಿಂದಿನ ಚುನಾವಣೆಯಲ್ಲಿ ಪಕ್ಷದಲ್ಲಿ ಆದ ತಪ್ಪುಗಳನ್ನು ಆತ್ಮಾವಲೋಕನ ಮಾಡಿಕೊಂಡು ಮುಂದಿನ ದಿನಗಳಲ್ಲಿ ಸ್ಥಳೀಯ, ತಾಲೂಕು, ಜಿಲ್ಲಾ ಮಟ್ಟದಲ್ಲಿ ವಿನೂತನ ಪದಾಧಿಕಾರಿಗಳನ್ನು ನೇಮಿಸಲಾಗುವುದು ಎಂದರು. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ವಿನೂತನ ಸಭೆಗಳ ಮೂಲಕ ಪಕ್ಷದ ಬಲವರ್ಧನೆಗಾಗಿ ಸಾಮೂಹಿಕವಾಗಿ ಶ್ರಮಿಸುತ್ತೇವೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕೊಪ್ಪಳ ಜಿಲ್ಲಾಧ್ಯಕ್ಷ ಜಿ.ಕನಕಪ್ಪ ಹನುಮಂತಪ್ಪ ಮಳಗಾವಿ, ರಾಜ್ಯ ಎಎಪಿ ಕಾರ್ಯದರ್ಶಿ ರುದ್ರಯ್ಯ ನವಲಿ ಹಿರೇಮಠ, ರಾ.ಸಂ.ಕಾ, ಅರ್ಜುನ್ ಹಲಗಿಗೌಡರ್, ಬಸವರಾಜ ಮುದ್ದಿಗೌಡರ್, ಯಮನೂರಪ್ಪ ಬಿಳೆಗುಡ್ಡ, ಶರಣಪ್ಪ ಸಜ್ಜಿಹೊಲ, ಹುಸೇನ್ ಸಾಹೇಬ್ ಗಂಗನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.
Comments are closed.