ನಾಡಿನ ಪತ್ರಕರ್ತರ ಸಾಂಘಿಕ ಧ್ವನಿಯಾಗಿ ಕೆಯುಡಬ್ಲ್ಯೂಜೆ ಕಾರ್ಯ: ಗಣ್ಯರ ಶ್ಲಾಘನೆ
ಕೆಯುಡಬ್ಲ್ಯೂಜೆ ನವೀಕೃತ ವೆಬ್ಸೈಟ್ ಅನಾವರಣಗೊಳಿಸಿದ ತ್ಯಾಗರಾಜ್ಗೆ ಸನ್ಮಾನ
ದತ್ತಿನಿಧಿಗೆ ಒಂದು ಲಕ್ಷ ರೂ. ದೇಣಿಗೆ; ಚಿನಿವಾರ ಅವರಿಗೆ ದತ್ತಿನಿಧಿ ಪ್ರಶಸ್ತಿ ಪ್ರದಾನ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ನಾಡಿನ ಪತ್ರಕರ್ತರ ಸಾಂಘಿಕ ಧ್ವನಿಯಾಗಿ, ಪತ್ರಕರ್ತರ ಹಿತಾಸಕ್ತಿ ಮತ್ತು ಕಲ್ಯಾಣಕ್ಕಾಗಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಗಣ್ಯರು ಶ್ಲಾಘಿಸಿದರು.

ಕೆಯುಡಬ್ಲ್ಯೂಜೆಯ ನೂತನವಾಗಿ ಚುನಾಯಿತ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡು ಒಂದು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಗುರುವಾರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಸಚಿವರಾದ ಅಜಯ್ ಸಿಂಗ್ ಮತ್ತು ಬಸವಂತಪ್ಪ ಅವರು ಮಾತನಾಡಿ, ಸಮಾಜದಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ನಾಡಿನ ಅಭಿವೃದ್ಧಿ ಹಾಗೂ ಜನಪರ ವಿಚಾರಗಳನ್ನು ಸಮಾಜದ ಮುಂದಿಡುವಲ್ಲಿ ಪತ್ರಕರ್ತರ ಕೊಡುಗೆ ಅನನ್ಯವಾದದ್ದು ಎಂದು ಅಭಿಪ್ರಾಯಪಟ್ಟರು.
ಇದಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಪಿ. ತ್ಯಾಗರಾಜ್, ಪತ್ರಕರ್ತರ ಶಕ್ತಿಯುತ ಸಂಘಟನೆಯಾಗಿರುವ ಕೆಯುಡಬ್ಲ್ಯೂಜೆ ಸಂಘಟನಾತ್ಮಕವಾಗಿ ಮತ್ತು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೆಯುಡಬ್ಲ್ಯೂಜೆಯ ನವೀಕೃತ ವೆಬ್ಸೈಟ್ ಅನ್ನು ಅನಾವರಣಗೊಳಿಸಿದ ಪಿ. ತ್ಯಾಗರಾಜ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ವಾರ್ತಾ ಇಲಾಖೆಯ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಎಚ್.ಬಿ. ದಿನೇಶ್ ಅವರು ಹಿರಿಯ ಪತ್ರಕರ್ತ ಶ್ರೀಧರ್ ಆಚಾರ್ ಅವರ ಹೆಸರಿನಲ್ಲಿ ಕೆಯುಡಬ್ಲ್ಯೂಜೆ ದತ್ತಿನಿಧಿ ಸ್ಥಾಪಿಸಲು ಒಂದು ಲಕ್ಷ ರೂಪಾಯಿಗಳ ಚೆಕ್ ಹಸ್ತಾಂತರಿಸಿದರು. ಕೆಯುಡಬ್ಲ್ಯೂಜೆ ಶಿಸ್ತುಬದ್ಧ ಹಾಗೂ ವೃತ್ತಿಪರ ಚಟುವಟಿಕೆಗಳ ಮೂಲಕ ಪತ್ರಕರ್ತರ ಸಂಘಟನೆಯಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಕೆಯುಡಬ್ಲ್ಯೂಜೆ ದತ್ತಿನಿಧಿ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಅನಂತ ಚಿನಿವಾರ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಶಿವಾನಂದ ತಗಡೂರು ಅವರ ನೇತೃತ್ವದ ತಂಡ ಪತ್ರಕರ್ತರಿಗಾಗಿ ಶ್ಲಾಘನೀಯ ಕೆಲಸಗಳನ್ನು ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪೂರ್ಣಿಮಾ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ (IFWJ) ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಹಾಗೂ ಕೆಯುಡಬ್ಲ್ಯೂಜೆ ರಾಜ್ಯ ಸಮಿತಿ ಸದಸ್ಯ ರವಿಕುಮಾರ್ ಟೆಲೆಕ್ಸ್ ಅವರುಗಳು ಮಾತನಾಡಿ ಕೆಯುಡಬ್ಲ್ಯೂಜೆ ನಡೆದು ಬಂದಿರುವ ದಾರಿಯನ್ನು ಮೆಲುಕು ಹಾಕಿದರು. ಸಂಘಟನೆ ಘನತೆ ಜೊತೆಗೆ ಪತ್ರಕರ್ತರ ಸಮುದಾಯದ ಬಗ್ಗೆ ಸದಾ ಬದ್ದತೆಯನ್ನು ಪ್ರದರ್ಶಿಸುತ್ತಾ ಬಂದಿದೆ ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಕಾರ್ಯದರ್ಶಿ ಸೋಮಶೇಖರ ಕೆರಗೋಡು, ಖಜಾಂಚಿ ವಾಸುದೇವ ಹೊಳ್ಳ ಸೇರಿದಂತೆ ಹಲವು ಪದಾಧಿಕಾರಿಗಳು ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.
ಕೆಯುಡಬ್ಲ್ಯೂಜೆ ವೆಬ್ ಸೈಟ್ ಸಿದ್ದಪಡಿಸಿದ ರವಿಕಾಂತ ಕುಂದಾಪುರ, ರಮಾಕಾಂತಗುಗ್ರಿ, ಶ್ಯಾಮ್ಬಹೆಬ್ಬಾರ್ ಅವರಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.