ಕೊಪ್ಪಳ ಜಿಲ್ಲೆಯ ‘ಸಮಗ್ರ ಶೈಕ್ಷಣಿಕ ವಲಯ’ ಸ್ಥಾಪನೆ ಹಾಗೂ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ

ಕೊಪ್ಪಳ,ನ.20: ಜಿಲ್ಲೆಯ ಸರ್ಕಾರಿ ಶಾಲೆಗಳ ಸಬಲೀಕರಣ, ಶೈಕ್ಷಣಿಕ ಗುಣಮಟ್ಟದ ಸುಧಾರಣೆ ಹಾಗೂ ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಸಮಗ್ರ ಶೈಕ್ಷಣಿಕ ವಲಯ ಸ್ಥಾಪನೆಗೆ ಆಗ್ರಹಿಸಿ ಶಾಲಾ-ಕಾಲೇಜುಗಳ ಹಿತರಕ್ಷಣಾ ಹೋರಾಟ ಸಮಿತಿ ವತಿಯಿಂದ ಶುಕ್ರವಾರ ಸಂಜೆ ಜಿಲ್ಲಾ ಪ್ರವಾಸದಲ್ಲಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸಲ್ಲಿಸಿದ ಮನವಿಯಲ್ಲಿ ಸಮಿತಿಯ ಪ್ರಮುಖ ಬೇಡಿಕೆಗಳು ಮತ್ತು ಆಕ್ಷೇಪಣೆಗಳ ಮುಖ್ಯಾಂಶಗಳು ಹೀಗಿವೆ:
ಸಮಗ್ರ ಶೈಕ್ಷಣಿಕ ವಲಯಕ್ಕೆ ಆಗ್ರಹ: ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ 50 ರಿಂದ 100 ಎಕರೆ ಸರ್ಕಾರಿ ಭೂಮಿಯನ್ನು ಮೀಸಲಿಟ್ಟು ಡಿಡಿಪಿಐ, ಬಿಇಒ ಕಚೇರಿಗಳು, ಕೊಪ್ಪಳ ವಿಶ್ವವಿದ್ಯಾಲಯ ಮತ್ತು ವಿಸ್ತರಣಾ ಕೇಂದ್ರ, ಡಿಜಿಟಲ್ ಗ್ರಂಥಾಲಯ, ಸ್ಟೆಮ್ (STEM) ಪ್ರಯೋಗಾಲಯಗಳು, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಒಳಗೊಂಡ ‘ಸಮಗ್ರ ಶೈಕ್ಷಣಿಕ ವಲಯ’ ಸ್ಥಾಪಿಸಿ, ಮುಂಬರುವ ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡಬೇಕು.
ಶಾಲೆಗಳ ದತ್ತು ನೀತಿಗೆ ವಿರೋಧ:
‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಯೋಜನೆಯಡಿ ಸರ್ಕಾರಿ ಶಾಲೆಗಳನ್ನು ಖಾಸಗಿ ಸಂಸ್ಥೆಗಳಿಗೆ ದತ್ತು ನೀಡುವ ಮೂಲಕ ಪರೋಕ್ಷ ಖಾಸಗೀಕರಣಕ್ಕೆ ಮುಂದಾಗಿರುವ ನೀತಿಯನ್ನು ತಕ್ಷಣ ಕೈಬಿಡಬೇಕು. ಸಂವಿಧಾನದ 21(ಎ) ವಿಧಿ ಮತ್ತು ಆರ್‌ಟಿಇ ಕಾಯ್ದೆಯಡಿ ಸರ್ಕಾರವೇ ಪೂರ್ಣ ಜವಾಬ್ದಾರಿ ವಹಿಸಿ ಮೂಲಸೌಕರ್ಯ ಹಾಗೂ ಶಿಕ್ಷಕರ ಕೊರತೆ ನೀಗಿಸಬೇಕು.
ಕಲಿಕಾ ಗುಣಮಟ್ಟ ಸುಧಾರಣೆಗೆ ಒತ್ತಾಯ:
ಜಿಲ್ಲೆಯಲ್ಲಿ ಕಲಿಕಾ ಮಟ್ಟ ಕುಸಿಯುತ್ತಿರುವ ಬಗ್ಗೆ ತಜ್ಞರ ಕಾರ್ಯಪಡೆಯಿಂದ ತನಿಖೆ ನಡೆಸಿ, ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ಬೋಧನೆ (Remedial Teaching) ಆಯೋಜಿಸಿ, 371(ಜೆ) ಅಡಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಎಸ್.ಎ. ಗಫಾರ್,ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಮುಖ್ಯ ಸಂಚಾಲಕ ಬಸವರಾಜ್ ಶೀಲವಂತರ್, ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್ ಹಾಗೂ ಹೋರಾಟಗಾರ ಧರ್ಮರಾಜ ಗೋನಾಳ ಉಪಸ್ಥಿತರಿದ್ದರು.