ಬಸವಣ್ಣನವರಿಗೆ ಅಪಮಾನ: ‘ಬಸವ ಮಂಟಪ’ ಪುಸ್ತಕದ ಹಿಂದಿರುವವರ ವಿರುದ್ಧವೂ ಕಾನೂನು ಕ್ರಮ: ಸಿಎಂ ಡಿ ಕೆ ಶಿವಕುಮಾರ್

ರಾಜ್ಯದಲ್ಲಿಯೇ ಕುಡಿಯಲು ನೀರಿಲ್ಲದ ಪರಿಸ್ಥಿತಿ ಇದೆ : ಎಲ್ಲ ಪಕ್ಷದ ಶಾಸಕರಿಗೂ ಆಹ್ವಾನ ನೀಡಿದ್ದೆ
ಬೆಂಗಳೂರು, ನ.20: “ಬಸವಣ್ಣನವರಿಗೆ ಅಪಮಾನ ಮಾಡಿರುವ ‘ಬಸವ ಮಂಟಪ’ ಪುಸ್ತಕದ ಹಿನ್ನೆಲೆಯಲ್ಲಿ ಯಾರೇ ಇದ್ದರೂ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈಗಾಗಲೇ ಪುಸ್ತಕದ ಪ್ರತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಮಾರ್ಗದರ್ಶನ ನೀಡಲಾಗಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ವಿಧಾನಸೌಧದಲ್ಲಿ ಶುಕ್ರವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
“ಬಸವಣ್ಣನವರಿಗೆ ಅಪಮಾನವಾಗಿರುವುದು ಕರ್ನಾಟಕಕ್ಕೆ ದೊಡ್ಡ ಅಗೌರವದ ಸಂಗತಿ. ಬಸವಣ್ಣನವರನ್ನು ನಾವು ಸಾಂಸ್ಕೃತಿಕ ನಾಯಕರೆಂದು ಗೌರವಿಸುತ್ತೇವೆ. ಅವರ ಆಚಾರ-ವಿಚಾರ ಹಾಗೂ ತತ್ವಾದರ್ಶಗಳನ್ನು ನಮ್ಮ ಸರ್ಕಾರ ಅಳವಡಿಸಿಕೊಳ್ಳುತ್ತಿದೆ. ಬಸವಣ್ಣನವರ ಹೆಜ್ಜೆ ಗುರುತುಗಳು ಇಡೀ ದೇಶಕ್ಕೆ ಮಾದರಿಯಾಗಿವೆ” ಎಂದರು.
ದೆಹಲಿಯಲ್ಲಿಯೂ ಬಸವಣ್ಣನವರ ಪ್ರತಿಮೆ ಸ್ಥಾಪಿಸಲಾಗಿದೆ. ರಾಜ್ಯದ ಪ್ರತಿಯೊಂದು ಊರು, ಮನೆ, ಶಾಲೆ ಹಾಗೂ ಕಚೇರಿಗಳಲ್ಲಿ ಅವರ ವಿಚಾರಗಳನ್ನು ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಅವರ ಭಾವಚಿತ್ರ ಅಳವಡಿಸಿ, ಅವರ ಆಚಾರ-ವಿಚಾರಗಳಿಗೆ ಅನುಗುಣವಾಗಿ ಸರ್ಕಾರ ಮುನ್ನಡೆಯುತ್ತಿದೆ” ಎಂದು ಹೇಳಿದರು.
“ಜಾತಿ ವಿಚಾರವಾಗಿ ಸಮಾಜದಲ್ಲಿ ಪರಸ್ಪರ ವೈಷಮ್ಯ ಮೂಡಿಸುವ ಕೆಲಸವನ್ನು ಕೆಲವು ಮಾಧ್ಯಮ ಹಾಗೂ ಕಿಡಿಗೇಡಿಗಳು ಮಾಡುತ್ತಿದ್ದಾರೆ. ಈ ವಿಚಾರವನ್ನು ಸಚಿವ ಸಂಪುಟದಲ್ಲಿ ಗಂಭೀರವಾಗಿ ಚರ್ಚಿಸಲಾಗಿದೆ. ಸಚಿವರಾದ ಈಶ್ವರ್ ಖಂಡ್ರೆ, ಎಂ.ಬಿ. ಪಾಟೀಲ್, ಶಿವಾನಂದ ಪಾಟೀಲ್, ಬಸವರಾಜ ರಾಯರೆಡ್ಡಿ, ಯತೀಂದ್ರ ಸಿದ್ದರಾಮಯ್ಯ, ಕೆ.ಎಚ್. ಮುನಿಯಪ್ಪ ಸೇರಿದಂತೆ ಇಡೀ ಸಚಿವ ಸಂಪುಟ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಿದೆ. ಬಸವ ಸಮಿತಿಯವರೂ ಈ ಸಂಬಂಧ ನನಗೆ ಪತ್ರ ಬರೆದಿದ್ದಾರೆ. ಈ ವಿಚಾರವಾಗಿ ಇನ್ನಷ್ಟು ಸುದೀರ್ಘ ಚರ್ಚೆ ನಡೆಸಬೇಕಿದೆ” ಎಂದರು.
“ಈ ವಿಚಾರವಾಗಿ ವಿವಿಧ ಪಕ್ಷಗಳ ಮುಖಂಡರೂ ತಮ್ಮೊಂದಿಗೆ ಮಾತನಾಡಿದ್ದಾರೆ. ರಾಜ್ಯದಲ್ಲಿ ಪ್ರತಿಭಟನೆಗಳು ನಡೆದು ಶಾಂತಿ ಭಂಗ ಉಂಟಾಗುವ ಸಾಧ್ಯತೆಗಳಿದ್ದ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳುತ್ತಿದೆ” ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿಯೇ ಕುಡಿಯಲು ನೀರಿಲ್ಲದ ಪರಿಸ್ಥಿತಿ ಇದೆ
ಕಾವೇರಿ ನೀರಿನ ವಿಚಾರವಾಗಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿರುವ ಕುರಿತು ಕೇಳಿದಾಗ, “ರಾಜ್ಯದಲ್ಲಿ ನೀರಿದ್ದರೆ ಖಂಡಿತವಾಗಿಯೂ ತಮಿಳುನಾಡಿಗೆ ನೀರು ನೀಡುತ್ತೇವೆ. ಆದರೆ, ಪ್ರಸ್ತುತ ನಮ್ಮ ರಾಜ್ಯದಲ್ಲಿಯೇ ಕುಡಿಯಲು ನೀರಿಲ್ಲದ ಪರಿಸ್ಥಿತಿ ಇದೆ. ರಾಜ್ಯದ ಹಿತಾಸಕ್ತಿ ಹಾಗೂ ರೈತರನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ” ಎಂದರು.
“ನಮ್ಮ ರೈತರಿಗೆ ಪರಿಸ್ಥಿತಿಯ ಗಂಭೀರತೆಯನ್ನು ತಿಳಿಸಿ ಎಚ್ಚರಿಕೆಯಿಂದ ಇರುವಂತೆ ಹೇಳಿದ್ದೇನೆ. ಈ ವರ್ಷ ಕಾವೇರಿಗೆ ಬಾಗಿನ ಅರ್ಪಿಸಲೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಎಷ್ಟು ನೀರಿದೆ ಎಂಬ ವಾಸ್ತವಾಂಶ ತಮಿಳುನಾಡಿನವರಿಗೂ, ನಮಗೂ ಹಾಗೂ ಇಡೀ ಜಗತ್ತಿಗೂ ಗೊತ್ತಿದೆ. ಸುಪ್ರೀಂಕೋರ್ಟ್ನಲ್ಲಿ ತಮಿಳುನಾಡಿನ ಅರ್ಜಿ ವಜಾಗೊಂಡಿರುವುದು ವಾಸ್ತವಾಂಶವಾಗಿದೆ. ಈ ಸಂಬಂಧದ ನ್ಯಾಯಾಲಯದ ಆದೇಶದಲ್ಲಿರುವ ಅಂಶಗಳನ್ನು ನಮ್ಮ ಪಕ್ಷದ ಅಧ್ಯಕ್ಷರಿಗೂ ತಿಳಿಸುತ್ತಿದ್ದೇನೆ” ಎಂದು ಹೇಳಿದರು.
ಹಿರಿಯೂರು ಚುನಾವಣೆಯ ವಿಚಾರವಾಗಿ ಸಚಿವರೊಂದಿಗೆ ಸಭೆ ನಡೆಸಿದ್ದೀರಾ ಎಂದು ಕೇಳಿದಾಗ, “ಎಲ್ಲ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಿದ್ದೇವೆ. ಹೊಸ ಮನೆಗೆ ‘ಗಂಗಾ’ಕ್ಕೆ ಬಂದ ಹಿನ್ನೆಲೆಯಲ್ಲಿ ಎಲ್ಲರಿಗೂ ಊಟಕ್ಕೆ ಆಹ್ವಾನ ನೀಡಿದ್ದೆ. ನಿನ್ನೆ ಎಲ್ಲರಿಗೂ ಆಹ್ವಾನ ನೀಡಲಾಗಿತ್ತು. ನಾನು ರಾಜ್ಯದ 224 ಶಾಸಕರಿಗೂ ಮುಖ್ಯಮಂತ್ರಿ. ಹೀಗಾಗಿ ಎಲ್ಲರನ್ನೂ ಆಹ್ವಾನಿಸಿದ್ದೆ” ಎಂದು ತಿಳಿಸಿದರು.