ಡಾ.ಶರಣಬಸಪ್ಪ ಕೋಲ್ಕಾರ ನನ್ನ ಮಾರ್ಗದರ್ಶಕರು- ಕೊಟ್ನೆಕಲ್
(ಡಾ.ಶರಣಬಸಪ್ಪ ಕೋಲ್ಕರ್ ಇವರ ಸರ್ವಾಧ್ಯಕ್ಷತೆಯಲ್ಲಿ ಕಾರಟಗಿಯಲ್ಲಿ ನವಂಬರ್ 21 ಮತ್ತು 22ರ ಎರಡು ದಿನಗಳ ಕಾಲ ನಡೆಯುವ 15ನೇ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಿಮಿತ್ಯ ವಿಶೇಷ ಲೇಖನ)
2010ರ ಮಾರ್ಚ್ ದಲ್ಲಿ ‘ಕೊಪ್ಪಳ ಜಿಲ್ಲೆಯ ಶಾಸನಗಳು ಮತ್ತು ಸಾಂಸ್ಕೃತಿಕ ಇತಿಹಾಸ’ ನನ್ನ ಪಿಎಚ್,ಡಿ ಸಂಶೋಧನಾ ಕೃತಿ ಬಿಡುಗಡೆಗಾಗಿ ಬಹಳ ಗೊಂದಲದಲ್ಲಿದ್ದೆ. ಸಮಯದ ಹೊಂದಾಣಿಕೆ ಕಷ್ಟವಿತ್ತು, ಆ ದಿನಗಳು ತಪ್ಪಿದರೆ ಬಹಳ ಕಷ್ಟಕರವಿತ್ತು. ಯಾಕೆಂದರೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ದಿನಾಂಕಗಳು ನಿಗಧಿಯಾಗಿತ್ತು ಮತ್ತು ಮುಖ್ಯವಾಗಿ ನನ್ನ ಮಗ ಶಶಾಂಕನ ನಾಮಕರಣ ಮಾಡಬೇಕಿತ್ತು. ಅವನಿಗೆ ಆಗಲೇ ಐದು ತಿಂಗಳಾಗಿತ್ತು. ಆ ದಿನಾಂಕ ಬಿಟ್ಟರೆ ಅವನಿಗೂ ಆರು ತಿಂಗಳು ಪ್ರಾರಂಭವಾಗಿ ನಾಮಕರಣ ಮಾಡಲು ಸೂಕ್ತವಾಗುತ್ತಿರಲಿಲ್ಲ. ಹೀಗಾಗಿ ಸಮಯ ಹೊಂದಾಣಿಕೆ ಎನ್ನುವುದು ಬಹಳ ಕಷ್ಟಸಾಧ್ಯವಾಗಿತ್ತು. ನಮ್ಮ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದ ಅಂದಿನ ಪ್ರಾಚಾರ್ಯರಾಗಿದ್ದ ಪ್ರೊ.ಅಲ್ಲಮಪ್ರಭು ಬೆಟ್ಟದೂರುರವರು ನನ್ನ ಕೃತಿ ಬಿಡುಗಡೆಗಾಗಿ ಅನೇಕ ವಿದಾಂಸರನ್ನು ಫೋನ್ ಮೂಲಕ ಸಂಪರ್ಕ ಮಾಡಿದರೂ ಅನಾನುಕೂಲದ ಬಗ್ಗೆ


ಮಾತನಾಡಿದರು. ನನಗೆ ಬಹಳ ಭಯವಾಯಿತು. ಪುಸ್ತಕ ಬಿಡುಗಡೆ ಹೇಗೆ ಮಾಡಿ ಮುಗಿಸುವುದು ಎಂಬ ಚಿಂತೆಯಲ್ಲಿದ್ದೆ. ಮಗನ ನಾಮಕರಣವೂ ಹೇಗೆ ಎಂಬುದು ಮತ್ತಷ್ಟು ಕಾಡಿತು. ಬೆಟ್ಟದೂರುರವರು ಹೇಗೋ ಹೊಂದಿಸಿ ಕೊನೆಗೆ ಖ್ಯಾತ ಕಥೆಗಾರರಾದ ಕುಂ.ವೀರಭದ್ರಪ್ಪನವರನ್ನು ನನ್ನ ಕೃತಿ ಬಿಡುಗಡೆ ಮಾಡಲು ಒಪ್ಪಿಸಿದರು. ಆದರೆ ಕೃತಿಯ ಕುರಿತು ಮಾತನಾಡಲು ಒಬ್ಬ ವಿದ್ವಾಂಸರು ಬೇಕಲ್ಲ, ಅದು ಕೊಪ್ಪಳದ ಪರಿಸರದವರೇ ಇರಬೇಕು, ಯಾಕೆಂದರೆ ಕೊಪ್ಪಳ ಜಿಲ್ಲೆಯ ಇತಿಹಾಸ, ಸಂಸ್ಕೃತಿ ಮತ್ತು ಮುಖ್ಯವಾಗಿ ಶಾಸನಗಳ ಕುರಿತು ಮಾತನಾಡುವ ಒಬ್ಬ ವಿದ್ವಾಂಸರು ಬೇಕಿತ್ತು. ಅಂತಹ ವಿದ್ವಾಂಸರ ಹುಡುಕಾಟದಲ್ಲಿ ತೊಡಗಿದೆವು. ಇದು ಮತ್ತೊಂದು ಸವಾಲೆನಿಸಿತ್ತು. ಆಗ ಯಾರೋ ಒಬ್ಬರು ಡಾ.ಶರಣಬಸಪ್ಪ ಕೋಲ್ಕಾರ್ ಅವರ ಹೆಸರು ಸೂಚಿಸಿದರು. ಇಂದು ನನಗೆ ಅವರ ಹೆಸರು ಸೂಚಿಸಿದವರು ನೆನಪಿಲ್ಲ. ಆಗ ಬೆಟ್ಟದೂರುರವರು ಡಾ.ಶರಣಬಸಪ್ಪ ಕೋಲ್ಕಾರ್ರವರಿಗೆ ಕೃತಿಯ ಕುರಿತು ಮಾತನಾಡಲು ಫೋನ್ ಮೂಲಕ ಕೇಳಿದರು. ಅದಕ್ಕೆ ಅವರು ಒಂದೇ ಮಾತಿಗೆ ಒಪ್ಪಿಗೆ ಸೂಚಿಸಿದರು. ಆಗ ನನಗಾದ ಸಂತೋಷ ಅಷ್ಟಿಷ್ಟಲ್ಲ. ಅಂದೇ ಪುಸ್ತಕ ಬಿಡುಗಡೆಯಾದಷ್ಟು ಸಂತೋಷವಾಯಿತು. ಈ ಕೃತಿ ಬಿಡುಗಡೆ ಸಂದರ್ಭದಲ್ಲೇ ನನ್ನ ಮಗ ಶಶಾಂಕನ ನಾಮಕರಣವೂ ಅಂದೇ ಮಾಡುವುದಾಗಿ ನಮ್ಮ ಮನೆಯಲ್ಲಿ ಸಮ್ಮತಿಸಿದರು. ನಿಗಧಿಯಂತೆ ದಿನಾಂಕ 17-03-2010ರಂದು ಕಾಲೇಜಿನಲ್ಲಿ ಪುಸ್ತಕ ಬಿಡುಗಡೆ ಮಾಡಿ ಮತ್ತು ನಂತರ ನಮ್ಮ ಮನೆಯಲ್ಲಿ ಮಗನ ನಾಮಕರಣದ ಶುಭಕಾರ್ಯ ನಡೆಯಿತು. ಅಂದಿನ ಕಾರ್ಯಕ್ರಮದಲ್ಲಿಯೇ ಡಾ.ಶರಣಬಸಪ್ಪ ಕೋಲ್ಕಾರ್ರವನ್ನು ನಾನು ಮುಖತಃ ಭೇಟಿಯಾಗಿದ್ದು. ನಂತರ ದಿನಗಳಲ್ಲಿ ಅವರ ಮತ್ತು ನಮ್ಮ ಬಾಂಧವ್ಯ ಗೆಳೆತನವೆಂದೆನಿಸಿದರೂ ಕೂಡಾ ಅವರು ‘ನನ್ನ ಮಾರ್ಗದರ್ಶಕ’ರೆಂದು ನಾನು ಭಾವಿಸಿದ್ದೇನೆ.
ಕೊಪ್ಪಳ ಜಿಲ್ಲೆಯಲ್ಲಿ ಸಂಶೋಧಕರ ಸಂಖ್ಯೆ ಬಹಳ ಕಡಿಮೆ. ಪಾಶ್ಚಿಮಾತ್ಯ ವಿದ್ವಾಂಸರ ನಂತರ ಮೂಲತಃ ಕೊಪ್ಪಳ ಅಥವಾ ಕೊಪ್ಪಳದಲ್ಲಿಯೇ ನೆಲೆಸಿರುವ ಸಂಶೋಧಕರ ಸಂಖ್ಯೆ ಬೆರಳೆಣಿಕೆಯೆನ್ನುವಷ್ಟಿದೆ. ಪ್ರಾರಂಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೂ ಹಾಗೂ ಡಾ.ಶರಣಬಸಪ್ಪ ಕೋಲ್ಕಾರ್ರವರ ಎಂ.ಎ ಇತಿಹಾಸ ಪ್ರಾಧ್ಯಾಪಕರು ಹಾಗೂ ಎಂ.ಫಿಲ್ ಮಾರ್ಗದರ್ಶಕರೂ ಆದ ಸಾಗರದ ಡಾ.ಅ.ಸುಂದರ ಮತ್ತು ಕೊಪ್ಪಳದವರೇ ಆದ ಪಿ.ಬಿ.ದೇಸಾಯಿ, ನಾ.ಭ.ಶಾಸ್ತ್ರೀ, ಬಿ.ವ್ಹಿ.ಶಿರೂರು, ಬಿ.ಸಿ.ಪಾಟೀಲ್, ಎಚ್.ಎಸ್.ಪಾಟೀಲ್, ಹನುಮಾಕ್ಷಿ ಗೋಗಿ, ಡಾ.ಶರಣಪ್ಪ ಕೋಲ್ಕಾರ್ ಮತ್ತು ಕೊಪ್ಪಳಕ್ಕೆ ಉದ್ಯೋಗಕ್ಕಾಗಿ ಬಂದು ಇಲ್ಲಿ ನೆಲೆಸಿದ ಡಾ.ಡಿ.ಕೆ.ಮಾಳೆ, ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್, ಡಾ.ರವಿ ಎನ್. ಚವ್ಹಾಣ ಮುಂತಾದ ಕೆಲವೇ ಕೆಲವು ಸಂಶೋಧಕರಿದ್ದಾರೆ. ಕೊಪ್ಪಳದಲ್ಲಿ ಸಾಹಿತಿಗಳು ಸಾಕಷ್ಟಿದ್ದಾರೆ ಅದು ನಮ್ಮ ಭಾಗದ ಹೆಮ್ಮೆ. ಆದರೆ ಸಂಶೋಧಕರು ಬೆರಳೆಣಿಕೆಯಷ್ಟಿದ್ದಾರೆ ಮತ್ತು ಅದರಲ್ಲಿ ಪುರಾತತ್ವ ಇತಿಹಾಸದ ಬಗ್ಗೆ ತಿಳಿದವರೆಂದರೆ ಡಾ.ಶರಣಬಸಪ್ಪ ಕೋಲ್ಕಾರ್ ಒಬ್ಬರೇ ಎಂದೆನಿಸುತ್ತದೆ. ಪುರಾತತ್ವ ಅಧ್ಯಯನಕಾರರು ಕೊಪ್ಪಳದಲ್ಲಷ್ಟೇ ಅಲ್ಲದೇ ಕರ್ನಾಟಕದಲ್ಲಿರುವವರ ಸಂಖ್ಯೆಯೂ ಸಹ ಅತೀ ಕಡಿಮೆ. ಕಾರಣ ಈ ಅಧ್ಯಯನದ ಮಾರ್ಗ ಅಷ್ಟು ಸುಲಭದ್ದಲ್ಲ.
ಡಾ. ಶರಣಬಸಪ್ಪನವರು ಪ್ರಾಗಿತಿಹಾಸ, ಚರಿತ್ರೆ, ಶಾಸನ, ವಾಸ್ತು-ಶಿಲ್ಪ, ಸಂಸ್ಕೃತಿ, ಪೌರಾಣಿಕ ಹಿನ್ನೆಲೆ ಮುಂತಾದ ವಿಷಯಗಳಲ್ಲಿ ಅಧ್ಯಯನ ಮಾಡಿದವರಾಗಿದ್ದಾರೆ. ಚರಿತ್ರೆ, ಶಾಸನ ಮತ್ತು ವಾಸ್ತುಶಿಲ್ಪಗಳ ಬಗ್ಗೆ ಸುಲಭವಾಗಿ ಅಧ್ಯಯನ ಮಾಡಬಹುದೇನೋ ಅನಿಸುತ್ತದೆ. ಆದರೆ ಪುರಾತತ್ವ ಮತ್ತು ಶಿಲಾಯುಗ ಸಂಸ್ಕೃತಿಯ ಬಗ್ಗೆ ಅಧ್ಯಯನ ಮಾಡುವುದು ಅಷ್ಟು ಸುಲಭವಲ್ಲ. ಈ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದವರು ಮಾತ್ರ ಅಧ್ಯಯನ ಮಾಡಬಲ್ಲರು. ಹೀಗಾಗಿಯೇ ಈ ಪುರಾತತ್ವದ ಕಡೆ ಮುಖ ಮಾಡುವವರ ಸಂಖ್ಯೆ ಅತಿ ವಿರಳ. ಆದರೂ ಅದರಲ್ಲಿ ಡಾ.ಶರಣಬಸಪ್ಪ ಕೋಲ್ಕಾರ್ರವರು ಯಶಸ್ವಿಯಾಗಿದ್ದಾರೆ, ಕೊಪ್ಪಳ, ಕನಕಗಿರಿ, ಕುಮ್ಮಟದುರ್ಗ, ಅಂಜನಾದ್ರಿ, ಹಂಪಿ, ಅನೆಗೊಂದಿ ಪರಿಸರ ಇತಿಹಾಸದ ಮಹತ್ವ ತಿಳಿದ ಸಂಶೋಧಕರು. ವಿಶೇಷವಾಗಿ ಈ ಭಾಗದ ಪುರಾತತ್ವದ ಬಗ್ಗೆ ವಿಶೇಷ ಅಧ್ಯಯನ ಮಾಡಿದವರು. ಡಾ.ಶರಣಬಸಪ್ಪ ಕೋಲ್ಕಾರ್ರವರು ಕೊಪ್ಪಳದ ಪ್ರಮುಖ ಸಂಶೋಧಕರೆಂಬುದು ಎಲ್ಲರಿಗೂ ಒಪ್ಪಿತವಾದ ಮಾತು. ಇದನ್ನು ಯಾರೂ ಅಲ್ಲಗಳಿಯುವುದಿಲ್ಲ, ಈ ಮಾತುಗಳು ಅವರ ಅಧ್ಯಯನಶೀಲತೆಯನ್ನು ಎತ್ತಿತೋರುತ್ತವೆಯೇ ಹೊರತು ಅವರ ಹೊಗಳಿಕೆಯಂತೂ ಅಲ್ಲವೇ ಅಲ್ಲ.
ನಾನಿಂದು ಕೊಪ್ಪಳ ಜಿಲ್ಲೆಯಲ್ಲಿ ಇತಿಹಾಸದ ಅಧ್ಯಯನ ಮಾಡುವುದಕ್ಕೆ ಸಾಕಷ್ಟು ಪ್ರೇರಣೆ ಡಾ.ಶರಣಬಸಪ್ಪ ಕೋಲ್ಕಾರ್ರವರು ಮತ್ತು ಅವರ ಸದಾ ಮಾರ್ಗದರ್ಶನವೇ ಕಾರಣ ಎಂಬುವುದು ನನಗೆ ಹೆಮ್ಮೆಯ ಸಂಗತಿ. ಈ ಜಿಲ್ಲೆಯ ಇತಿಹಾಸ ತಿಳಿದವರು ಬಹಳ ಕಡಿಮೆ. ಅದರಲ್ಲಿ ನನಗೆ ಅಗತ್ಯ ಬಿದ್ದಾಗ; ಲೇಖನ ರಚನೆ, ಕೃತಿ ರಚನೆ, ಉಪನ್ಯಾಸ ಮುಂತಾದ ಸಂದರ್ಭದಲ್ಲಿ ಮಾಹಿತಿ ನೀಡುವವರೆಂದರೆ ಡಾ.ಶರಣಬಸಪ್ಪ ಕೋಲ್ಕಾರ್ ಮತ್ತು ಹಿರಿಯರಾದ ಎಚ್.ಎಸ್.ಪಾಟೀಲ್ ಇಬ್ಬರೇ ಅಧೀಕೃತ ಮಾಹಿತಿ ನೀಡಬಲ್ಲರು. ಅದರಲ್ಲಿ ಡಾ.ಶರಣಬಸಪ್ಪ ಕೋಲ್ಕಾರ್ ಅತಿ ಹೆಚ್ಚಿನ ರೀತಿಯಲ್ಲಿ ಮಾಹಿತಿ ಒದಗಿಸುವ ಮತ್ತು ನನ್ನ ಸಂಶೋಧನೆಯ ಅರ್ಧಪಾಲು ಅವರದೂ ಎಂದರೂ ನಡೆಯುತ್ತೆ. ಇಂತಹ ಮಾಹಿತಿ ನೀಡುವ, ಪಡೆಯುವ ಪ್ರಕ್ರಿಯೆ ನಿರಂತವಾಗಿರುತ್ತದೆ. ನಾಲ್ಕಾರು ದಿನ ಯಾವುದೂ ವಿಷಯಗಳಿಲ್ಲದೇ ಅಥವಾ ಅಗತ್ಯವಿಲ್ಲದೆ ಮಾತನಾಡದಿದ್ದರೆ “ಯಾಕ್ರೀ ನಾಪತ್ತೆಯಾಗಿರೀ? ಐದಾರು ದಿನ ಆಯ್ತು ಮಾತಾಡಿಲ್ಲಾ?” ಎಂದು ಡಾ.ಕೋಲ್ಕಾರ್ ಪ್ರೀತಿಯಿಂದ ಕೇಳುತ್ತಿರುತ್ತಾರೆಂದರೆ ಇದು ನಮ್ಮ ಮತ್ತು ಅವರ ನಡುವಿನ ಬಾಂಧವ್ಯವನ್ನು ತಿಳಿಸುತ್ತದೆ.
ಶೋಧಗಳ ಬಗ್ಗೆ ನನಗೆ ಅನುಮಾನವಿದ್ದಾಗ ಅಥವಾ ಯಾವುದೋ ಕಾರಣಕ್ಕೆ ನಾನು ಡಾ.ಶರಣಬಸಪ್ಪ ಕೋಲ್ಕಾರ್ರವರಿಗೆ ಯಾವಾಗ ಫೋನ್ ಮಾಡಿದರೂ ಸಹ ಕಡ್ಡಾಯವಾಗಿ ಫೋನ್ ರಿಸೀವ್ ಮಾಡಿ ಮಾತನಾಡುತ್ತಾರೆ. ಸಭೆ-ಸಮಾರಂಭ, ಕಾರ್ಯಕ್ರಮ, ಮೀಟಿಂಗ್ನಲ್ಲಿ ಎಲ್ಲೇ ಇರಲಿ ರಿಸೀವ್ ಮಾಡೇ ಮಾಡುತ್ತಾರೆ. ಕೆಲವೊಂದು ಸಲ ತಮ್ಮ ಅತ್ಯಂತ ಬಿಜಿ ಶ್ಯೆಡ್ಯೂಲ್ನಲ್ಲಿಯೂ ಸಹ ನನ್ನ ಫೋನ್ ರಿಸೀವ್ ಮಾಡಿ ಪರಿಸ್ಥಿತಿ ಬಗ್ಗೆ ಹೇಳಿ ನಂತರ ಕರೆ ಮಾಡುತ್ತೇನೆಂದು ಹೇಳುತ್ತಾರೆ. ಡಾ.ಶರಣಬಸಪ್ಪ ಕೋಲ್ಕರ್ರವರ ವ್ಯಕ್ತಿತ್ವ ಎಷ್ಟು ಸೌಮ್ಯ ಎಂದರೆ ಮಗುವಿನಂತೆ ಮಾತನಾಡುತ್ತಾರೆ. ನಾನು ಬಿಜಿ ಇದ್ದಾಗ ಯಾರಾದರೂ ನನಗೆ ಫೋನ್ ಮಾಡಿದರೆ ನಾನು ರಿಸೀವ್ ಮಾಡುವುದಿಲ್ಲ. ಅಥವಾ 2-3 ಸಲ ಅನಗತ್ಯ ಫೋನ್ ಮಾಡಿದರೆ ಸಿಟ್ಟಿನಿಂದ ಬೈದು ಕಾಲ್ಕಟ್ ಮಾಡುವ ಸ್ವಭಾವ ನನ್ನದು. ಇದನ್ನು ಗಮನಿಸಿದರೆ ಕೋಲ್ಕರ್ರವರಿಂದ ನಾನು ಬಹಳ ಕಲಿಯಬೇಕಿದೆ ಎಂದುಕೊಳ್ಳುತ್ತೇನೆ. ಬಹಳ ಸಮಾಧಾನದಿಂದ ನನ್ನ ವಿಷಯದ ಬಗ್ಗೆ ಪೂರ್ಣ ಮಾಹಿತಿ ನೀಡುತ್ತಾರೆ. ಸ್ವಲ್ಪವೂ ಕೋಪಗೊಳ್ಳುವುದಿಲ್ಲ, ಮುಜುಗರ ಮಾಡಿಕೊಳ್ಳುವುದಿಲ್ಲ, ಬೇಜಾರಂತೂ ನಾನು ಗಮನಿಸಿಯೇ ಇಲ್ಲ ಎನ್ನಬಹುದು. ಹೀಗಾಗಿಯೇ ನಾನು ಹೆಚ್ಚು-ಹೆಚ್ಚು ವಿಷಯಗಳ ತಿಳುವಳಿಕೆಗಾಗಿ ಅವರೊಂದಿಗೆ ಮಾತನಾಡುತ್ತಿರುತ್ತೇನೆ. ಅದಕ್ಕಾಗಿಯೇ ನನ್ನ ಸಂಶೋಧನೆಯ ಮಾರ್ಗ ಸುಗಮವಾಗುವಲ್ಲಿ ಡಾ.ಶರಣಬಸಪ್ಪ ಕೋಲ್ಕಾರ್ರ ಪಾತ್ರ ಬಹಳ ಮಹತ್ವದಿದೆ. ಹೀಗಾಗಿ ನಾನು ಅವರ ಬಗ್ಗೆ ಹೆಚ್ಚು-ಹೆಚ್ಚು ಗೌರವ ಹೊಂದಿದವನಾಗಿದ್ದೇನೆ.
ನಮ್ಮ ಊರು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಹಿರೇಕೊಟ್ನೆಕಲ್ ಗ್ರಾಮ. ಆಗಾಗ ನಮ್ಮ ಊರಿಗೆ ಹೋಗುತ್ತಿರುತ್ತೇವೆ. ಹೋಗುವಾಗ ಅಥವಾ ಬರುವಾಗ ನನಗೆ ಗಂಗಾವತಿ ಒಂದು ಸ್ಟಾಪ್ ಕಡ್ಡಾಯವಾಗಿ ಇದ್ದೇ ಇರುತ್ತದೆ. ಅಲ್ಲಿನ ಹಿರಿಯ ಗೆಳೆಯರಾದ ವಿದ್ವಾಂಸರಾದ ಡಾ.ಜಾಜಿ ದೇವೇಂದ್ರಪ್ಪ, ಜನಕವಿ ರಮೇಶ ಗಬ್ಬೂರು, ಸಂಶೋಧಕರಾದ ಡಾ.ರವಿ ಚವ್ಹಾಣ, ಪ್ರಾಧ್ಯಾಪಕರಾದ ಬಸಪ್ಪ ನಾಗೋಲಿ ಮತ್ತು ಡಾ.ಶರಣಬಸಪ್ಪ ಕೋಲ್ಕಾರ್ ಇವರುಗಳಲ್ಲಿ ಕೆಲವರನ್ನಾದರೂ ಭೇಟಿಯಾಗಿಯೇ ನಮ್ಮ ಪಯಣ ಮುಂದೆ ಸಾಗುತ್ತದೆ. ಹೋಗುವಾಗಲೋ ಅಥವಾ ಬರುವಾಗಲೋ ನಾನು ಮತ್ತು ನನ್ನ ಗೆಳೆಯ ಆದೇಶರವರು ಅವರಲ್ಲಿ ಯಾರದರೂ ಸಮಯ ಕೊಟ್ಟರೆ ಭೇಟಿಯಾಗುತ್ತೇವೆ. ಅದರಲ್ಲಿ ಡಾ.ಶರಣಬಸಪ್ಪ ಕೋಲ್ಕಾರ್ ಮನೆಗಂತೂ ಕಡ್ಡಾಯವಾಗಿ ಅವರನ್ನು ಭೇಟಿಯಾಗಿ ಒಂದೆರಡು ಮಾತನಾಡಿ ಬರುತ್ತೇವೆ. ಒಂದುವೇಳೆ ಅವರು ಊರಲ್ಲಿ ಇಲ್ಲದಿದ್ದರೂ ಸಹ ನಮ್ಮ ಪ್ರಯಾಣದ ಬಗ್ಗೆ ಅವರಿಗೆ ತಿಳಿಸಿ, ಫೋನ್ದಲ್ಲೇ ನಾಲ್ಕು ಮಾತನಾಡಿ ನಾವು ಮುಂದೆ ಪ್ರಯಾಣ ಬೆಳೆಸುತ್ತೇವೆ. ಇದು ಅವರ ಮತ್ತು ನಮ್ಮ ಅನನ್ಯವಾದ ಪ್ರೀತಿ.
ಮಾನ್ವಿ ತಾಲ್ಲೂಕಿನ ಪೋತ್ನಾಳ್ ಗ್ರಾಮದಲ್ಲಿ ನನ್ನ ತಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರಿಚಾರಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದವರು. 2017ರ ನವಂಬರ್ 30ರಂದು ಅವರ ನಿವೃತ್ತಿ ಕಾರ್ಯಕ್ರಮದಲ್ಲಿ ನಾನು ಮತ್ತು ರಾಯಚೂರಿನ ಖ್ಯಾತ ವಿದ್ವಾಂಸರಾದ ಡಾ.ಚನ್ನಬಸವಯ್ಯ ಹಿರೇಮಠರು ಇಬ್ಬರು ಸೇರಿ ರಚಿಸಿದ ‘ಮಾನ್ವಿ ತಾಲೂಕಿನ ಇತಿಹಾಸ ಮತ್ತು ಸಂಸ್ಕೃತಿ’ ಹಾಗೂ ನನ್ನ ಪರೀಷ್ಕೃತ ದ್ವಿತೀಯ ಮುದ್ರಣ ‘ಸಂಸಾರ ಸಗ್ಗ’ ಎರಡೂ ಕೃತಿಗಳ ಬಿಡುಗಡೆಗಾಗಿ ಡಾ.ಶರಣಬಸಪ್ಪ ಕೋಲ್ಕಾರ್ ಅವರು ಅಲ್ಲಿಗೂ ಬಂದಿದ್ದರು. ಇವು ಅವರ ಮತ್ತು ನಮ್ಮ ಒಟನಾಟದ ಮಹತ್ವದ ಸಂಗತಿಗಳು. ಮತ್ತೊಂದು ಮಹತ್ವದ ಸಂಗತಿ ಎಂದರೆ ನಮ್ಮ ಯಾವುದೇ ಕಾರ್ಯಕ್ರಮಗಳಿಗೆ ಬಂದಾಗ ಅವರು ಗೌರವಧನ ಪಡೆಯುದಿಲ್ಲ. ಕೊಡಲೋದರೆ ಅವರು “ನಾನು ಹೊರಗಿನವನೇ?” ಎಂದು ನಿರಾಕರಿಸಿ ಬರೀ ಕೈಯಲ್ಲಿ ಮರಳುತ್ತಾರೆ.
ಮುಖ್ಯವಾಗಿ ಡಾ.ಶರಣಬಸಪ್ಪ ಕೋಲ್ಕಾರ್ ನನಗೆ ಮಹತ್ವದ ಜವಾಬ್ಧಾರಿ ಮತ್ತು ಅವಕಾಶ ನೀಡಿದ್ದರು. ಕರ್ನಾಟಕ ರಾಜ್ಯ ಸರಕಾರದ ಗ್ಯಾಸೆಟಿಯರ್ ಇಲಾಖೆಯಿಂದ ‘ಕೊಪ್ಪಳ ತಾಲ್ಲೂಕಿನ ಗ್ಯಾಸೆಟಿಯರ್’ ರಚನೆಯ ಅವಕಾಶವನ್ನು ನನಗೆ ಕೊಡಿಸಿದ್ದರು. ಈ ಗ್ಯಾಸೆಟಿಯರ್ ರಚನಾ ಕಾರ್ಯ ಅವರ ಸಹಾಯ, ಸಹಕಾರ ಮತ್ತು ಅವರ ಮಾರ್ಗದರ್ಶನದಿಂದಲೇ ರಚಿಸಿ ಇಲಾಖೆಗೆ ನೀಡಿದೆ. ಆ ಗ್ರಂಥ ಪ್ರಕಟವಾಗಿ ನನಗೆ ಒಳ್ಳೆಯ ಹೆಸರು ತಂದುಕೊಟ್ಟಿತು ಮತ್ತು ಇಲಾಖೆಯಿಂದ ಒಂದಿಷ್ಟು ಗೌರವಧನದ ಸಹಾಯ ಕೂಡ ದೊರಕಿತ್ತು. ಇದು ಅವರು ನನಗೆ ಒದಗಿಸಿ ಕೊಟ್ಟ ಅವಕಾಶ. ಸಹಾಯ ಮಾಡಿದವರನ್ನು ಮರೆಯದೇ ನೆನಪಿಸಲೇಬೇಕಲ್ಲಾ. ಅವರೂ ಸಹ ಗಂಗಾವತಿ ತಾಲ್ಲೂಕಿನ ಗ್ಯಾಸೆಟಿಯರ್ ರಚಿಸಿದ್ದಾರೆ. ಅವರಂತೆ ಡಾ.ರವಿ ಚವ್ಹಾಣ ‘ಕುಷ್ಟಗಿ ತಾಲ್ಲೂಕಿನ ಗ್ಯಾಸೆಟಿಯರ್’ ಮತ್ತು ಡಾ.ಶರಣಬಸಪ್ಪ ಕೋಲ್ಕರ್ ಹಾಗೂ ಡಾ.ರವಿ ಚವ್ಹಾಣ ಇಬ್ಬರು ಸೇರಿ ‘ಯಲಬುರ್ಗಾ ತಾಲ್ಲೂಕಿನ ಗ್ಯಾಸೆಟಿಯರ್’ ರಚಿಸಿಕೊಟ್ಟರು. ಈ ನಾಲ್ಕೂ ಗ್ಯಾಸೆಟಿಯರ್ಗಳು ಕೊಪ್ಪಳ ಜಿಲ್ಲೆಯ ಅಧ್ಯಯನಕ್ಕೆ ಪ್ರಮುಖ ಆಕರ ಗ್ರಂಥಗಳಾಗಿವೆ.
ಡಾ.ಶರಣಬಸಪ್ಪ ಕೋಲ್ಕಾರ್ರು ಶಿಲಾಯುಗದ ಗವಿಚಿತ್ರಗಳು, ಪ್ರಾಚ್ಚಾರಿತ್ರಿಕ ಶಿಲಾ ಚಿತ್ರಕಲೆ, ಕೊಪ್ಪಳ-ಹಂಪಿ ಪ್ರದೇಶದ; ಚರಿತ್ರೆ ಮತ್ತು ಪುರಾತತ್ವ, ಕೊಪ್ಪಳ ಜಿಲ್ಲೆಯ ಪ್ರಾಗೈತಿಹಾಸಿಕ ಕಾಲದ ಕಲೆ, ವಿಜಯನಗರ ಪರಿಸರ; ಚರಿತ್ರೆ, ಕಲೆ ಮತ್ತು ಸಂಸ್ಕೃತಿ, ವಿಜಯನಗರ ಮಾತೃಸ್ಥಾನ ಆನೆಗೊಂದಿ, ಭವ್ಯ ಪರಂಪರೆ ತಾಣ ಆನೆಗೊಂದಿ, ಆನೆಗುಂದಿ, ಹಿರೇಜಂತಗಲ್ ಇತಿಹಾಸ- ವಾಸ್ತುಶಿಲ್ಪ ಕಲೆ, ಗಂಗಾವತಿ ತಾಲ್ಲೂಕು ದರ್ಶನ, ಗಂಗಾವತಿ ತಾಲ್ಲೂಕಿನ ಗ್ಯಾಸೆಟಿಯರ್, ಯಲಬುರ್ಗಾ ತಾಲ್ಲೂಕಿನ ಗ್ಯಾಸೆಟಿಯರ್, ಕಲ್ಯಾಣ ಕರ್ನಾಟಕ: ಪ್ರಾಗಿತಿಹಾಸ ಮತ್ತು ಆದಿಮ ಸಂಸ್ಕೃತಿ, ಕೃಷ್ಣದೇವರಾಯ ಸಮಾಧಿ ಹಾಗೂ ಕೆಂಪೇಗೌಡ ಬಂಧನದಲ್ಲಿದ್ದ ಸೆರೆಮನೆ ಮುಂತಾದ ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ. ಈ ಎಲ್ಲಾ ಕೃತಿಗಳು ನನ್ನ ಮನೆಯ ಗ್ರಂಥಾಲಯದಲ್ಲಿವೆ ಮತ್ತು ಮುಖ್ಯವಾಗಿ ಇದರಲ್ಲಿನ ಬಹುತೇಕ ಕೃತಿಗಳು ನನ್ನ ಅಧ್ಯಯನಕ್ಕಷ್ಟೇ ಅಲ್ಲದೇ ಜಿಲ್ಲೆಯ ಇತಿಹಾಸ, ಸಂಸ್ಕೃತಿ ಮತ್ತು ಪುರಾತತ್ವ ಅಧ್ಯಯನÀ ಮಾಡುವವರಿಗೆ ಮುಖ್ಯ ಆಕರ ಗ್ರಂಥಗಳಾಗಿವೆ. ಅಷ್ಟೇ ಅಲ್ಲದೇ ಡಾ.ಶರಣಬಸಪ್ಪ ಕೋಲ್ಕಾರ್ರವರು ಹೇಗೆ ನನ್ನ ಅಧ್ಯಯನಕ್ಕೆ ಮಾರ್ಗದರ್ಶಕರೋ ಹಾಗೆಯೇ ಅವರ ಕೃತಿಗಳೂ ಸಹ ನನ್ನ ಬರವಣಿಗೆಗೆ ಅಷ್ಟೇ ಮಹತ್ವದವುಗಳಾಗಿವೆ. ಈ ಗ್ರಂಥಗಳಲ್ಲಿ ಕೆಲವುಗಳನ್ನು ನಾನು ಪರಿಚಯಮಾಡಿ ಪತ್ರಿಕೆಗಳಿಗೆ ಕಳುಹಿಸಿದ್ದೇನೆ. ಅವು ಕೊಪ್ಪಳ ಜಿಲ್ಲೆಯ ಇತಿಹಾಸ, ಸಂಸ್ಕೃತಿ, ಕಲೆ ಮತ್ತು ವಾಸ್ತುಶಿಲ್ಪವನ್ನು ಪರಿಚಯಿಸುತ್ತವೆ. ಅದಕ್ಕಾಗಿಯೇ ಡಾ.ಕೋಲ್ಕಾರ್ರ ಕೃತಿಗಳು ನನ್ನ ಅಧ್ಯಯನದ ಅಗತ್ಯ ಆಕರ ಗ್ರಂಥಗಳಾಗಿವೆ. ಹೀಗಾಗಿ ಅವರನ್ನು ‘ನನ್ನ ಮಾರ್ಗದರ್ಶಕ’ರೆಂದು ಭಾವಿಸಿದ್ದೇನೆ.
ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್
ಹಿರಿಯ ಶ್ರೇಣಿ ಕನ್ನಡ ಉಪನ್ಯಾಸಕರು
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ-583231
ಮೊ ಸಂ : 9448570340
E-mail skotnekal@gmail