ಬೇಜವಾಬ್ದಾರಿ ಮತ್ತು ಉಡಾಫೆಯ ಪರಮಾವಧಿ – CV ಚಂದ್ರಶೇಖರ್
ಕನ್ನಡನೆಟ್ ನ್ಯೂಸ್
ಕೊಪ್ಪಳ: ಶಾಸಕ ರಾಘವೇಂದ್ರ ಹಿಟ್ನಾಳ್ ಕನಕಾಪುರದ ಮೆ. ಮುಕುಂದ ಸುಮಿ ಸ್ಪೆಷಲ್ ಸ್ಟೀಲ್ ಲಿಮಿಟೆಡ್ ಕಂಪನಿ ವಿಸ್ತರಣೆ ವಿಷಯದಲ್ಲಿ ಉಡಾಫೆಯಾಗಿ ಹಾಗೂ
ಬೇಜವಾಬ್ದಾರಿತನದಿಂದ ಸಾರ್ವಜನಿಕವಾಗಿ ಹೇಳಿಕೆ ನೀಡಿರುವುದು ಕ್ಷೇತ್ರದ ಮತದಾರರಿಗೆ ಮಾಡಿದ ಅವಮಾನ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಅಗಸ್ಟ್ 29 ರಂದು ಸಾರ್ವಜನಿಕ ಆಲಿಕೆ ಸಭೆ ಇರುವ ಕುರಿತು ಮಾಧ್ಯಮಗಳಲ್ಲಿ ಕಂಪನಿ ಪ್ರಕಟಣೆ ನೀಡಿದೆ. ಕನಕಾಪುರ ಹಾಗೂ ಗಿಣಿಗೇರಾ ಗ್ರಾಮದಲ್ಲಿ ಈ ಬಗ್ಗೆ ಒಂದು ತಿಂಗಳಿನಿಂದಲೂ ಚರ್ಚೆ ನಡೆದಿದೆ. ಈ ಕುರಿತು ನಾವು ಸೆಪ್ಟೆಂಬರ್ 20ರಂದುಪತ್ರಿಕಾ ಪ್ರಕಟಣೆ ನೀಡಿದೆವು.
ಸೆಪ್ಟಂಬರ್ 25ರಂದು ಪತ್ರಿಕಾಗೋಷ್ಠಿ ಕರೆದು ವಿಸ್ತರಣೆಯ ವಿರೋಧದ ಹೋರಾಟದ ನಾಯಕತ್ವವನ್ನು ಶಾಸಕರೇ ವಹಿಸಿಕೊಳ್ಳಬೇಕೆಂದು ಒತ್ತಾಯಿಸಿದೆವು. ಇದು ಮಾಧ್ಯಮಗಳಲ್ಲಿ ಸವಿಸ್ತಾರವಾಗಿ ಬಿತ್ತರಗೊಂಡಿದೆ. ವಿಷಯ ಕ್ಷೇತ್ರಾದ್ಯಂತ ಪ್ರತಿಯೊಬ್ಬರಿಗೂ ತಿಳಿದಿದೆ.ಆದರೂ ಸಭೆ ಇರುವುದು ತಮಗೆ ತಿಳಿದೇ ಇಲ್ಲ. ಯಾರೂ ತಮಗೆ ಆಹ್ವಾನವನ್ನೇ ನೀಡಿಲ್ಲ ಎಂದು ಸಾರ್ವಜನಿಕವಾಗಿ ಹೇಳಿದ್ದಾರೆ. ಇದಕ್ಕಿಂತಲೂ ಉಡಾಫೆಯಾದ ಮಾತು ಮತ್ತು ಬೇಜವಾಬ್ದಾರಿ ನಡೆಯನ್ನು ರಾಜಕೀಯ ಇತಿಹಾಸದಲ್ಲಿ ಕಾಣಲು ಸಾಧ್ಯವೇ ಇಲ್ಲ,” ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರದಲ್ಲಿ ಏನು ನಡೆಯುತ್ತದೆ ಎಂಬ ಕಲ್ಪನೆಯೇ ಇರದ ಹಾಗೂ ಅತ್ಯಂತ ಗಂಭೀರವಾದ ವಿಷಯದ ಕುರಿತು ಮಾಹಿತಿಯೇ ಇರದ ಇವರು ಶಾಸಕ ಸ್ಥಾನದಲ್ಲಿ ಮುಂದುವರೆಯುವ ನೈತಿಕ ಜವಾಬ್ದಾರಿ ಹಾಗೂ ಅರ್ಹತೆಯನ್ನೇ ಕಳೆದುಕೊಂಡಿದ್ದಾರೆ. ಸಮಸ್ಯೆ ಇರುವಲ್ಲಿ ಖುದ್ದಾಗಿ ಹೋಗಿ ಅದನ್ನು ಬಗೆಹರಿಸುವ ಜವಾಬ್ದಾರಿ ಶಾಸಕರದ್ದಲ್ಲವೇ? ಸಮಸ್ಯೆ ಬಗೆಹರಿಸಿ ಎಂದು ಆಹ್ವಾನ ನೀಡದೇ ಇದ್ದರೆ ಇವರು ಅದನ್ನು ಪರಿಹರಿಸಲು ಹೋಗುವುದೇ ಇಲ್ಲವೇ? ಸಮಸ್ಯೆ ಪರಿಹಾರಕ್ಕೆ ಆಗ್ರಹಿಸುತ್ತಾರೆಯೇ ಹೊರತು ಆಹ್ವಾನಿಸುವುದಿಲ್ಲ ಎಂಬುದು ಇವರಿಗೆ ತಿಳಿದಿಲ್ಲವೇ?
ಕನಕಾಪುರ ಕೊಪ್ಪಳ ಕ್ಷೇತ್ರದಲ್ಲಿ ಇಲ್ಲವೇ? ಈ ಜವಾಬ್ದಾರಿಯನ್ನು ಕೇಂದ್ರ ಸರಕಾರಕ್ಕೆ ವರ್ಗಾಯಿಸುವ ಮೂಲಕ
ಇವರು ಜನರನ್ನು ದಾರಿ ತಪ್ಪಿಸಿತ್ತಿಲ್ಲವೆ? ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
“ಕಳೆದ ಒಂದು ವರ್ಷದಿಂದಲೂ ಬಲ್ದೋಟ ಕಾರ್ಖಾನೆ ವಿಸ್ತರಣೆ ಬೇಡ ಎಂದು ಪ್ರತಿಭಟನೆ ನಡೆಯುತ್ತಿದೆ. ಅದನ್ನು ಬಗೆಹರಿಸಿ ಎಂದು ಶಾಸಕರ ಸಮ್ಮುಖದಲ್ಲಿಯೇ ಆಗ್ರಹಿಸಲಾಗಿದೆ.
ಗವಿಸಿದ್ದೇಶ್ವರ ಸ್ವಾಮೀಜಿಯವರು ಉದ್ದೇಶಿತ ವಿಸ್ತರಣೆಗೆ ತಡೆ ಆದೇಶ ತನ್ನಿ ಎಂದು ಇವರ ಸಮ್ಮುಖದಲ್ಲಿಯೇ ಇವರಿಗೆ ಜವಾಬ್ದಾರಿ ವಹಿಸಿದ್ದಾರೆ. ಇಫ್ಟೆಲ್ಲಾ ಆದರೂ ಈ ವಿಷಯದಲ್ಲಿ ಇವರು ಇಲ್ಲಿಯ ತನಕ ಮಾಡಿದ್ದಾದರೂ ಏನು?
ಕನಕಾಪುರದಲ್ಲಿ ಕಂಪನಿ ವಿಸ್ತರಣೆಗೊಂಡು ಆ ಭಾಗ ನರಕವಾದರೆ ಅದರ ನೇರ ಹೊಣೆಗಾರರು ಶಾಸಕರೇ ಎಂಬುದು ಅವರ ಗಮನದಲ್ಲಿರಬೇಕು,” ಎಂದು ಹೇಳಿದ್ದಾರೆ.
ವಿಸ್ತರಣೆ ಬೇಡ ಎಂದು ಪತ್ರ ಬರೆಯುತ್ತಾರಂತೆ. ಯಾರಿಗೆ ಬರೆಯುತ್ತಾರೆ? ಏನೆಂದು ಬರೆಯುತ್ತಾರೆ? ಯಾವಾಗ ಬರೆಯುತ್ತಾರೆ? ಸಭೆಗೆ ಹಾಜರಾಗಿ ವಿರೋಧ ವ್ಯಕ್ತಪಡಿಸದ ಇವರು ಪತ್ರ ಬರೆಯುತ್ತಾರೆ ಎಂದರೆ ನಂಬಬೇಕೆ? ಎಂದು ಪ್ರಶ್ನಿಸಿದ್ದಾರೆ.
“ಬರಗಾಲದಿಂದ ಆಗಿರುವ ಹಾನಿಯನ್ನು ವೀಕ್ಷಿಸಲು ಬನ್ನಿ ಎಂದು ಜನರು ಇವರನ್ನು ಆಹ್ವಾನಿಸಿದ್ದರಲ್ಲ? ವಿಧಾನಸಭೆಯಲ್ಲಿ ಮಾತನಾಡಿ ಎಂದು ನಾವೆಲ್ಲ ಆಹ್ವಾನಿಸಿದ್ದೆವಲ್ಲ? ರಸ್ತೆ ಸುಧಾರಿಸಿ ಎಂದು ಕ್ಷೇತ್ರದ ಜನರೇ ಆಹ್ವಾನಿಸಿದ್ದರಲ್ಲ? ಆಗಲ್ಲ ಇವರು ಏನು ಮಾಡುತ್ತಿದ್ದರು? ಇವರ ಬೇಜವಾಬ್ದಾರಿ ಮತ್ತು ಉಡಾಫೆಗೆ ಜನರು ಪಾಠ ಕಲಿಸುವ ದಿನಗಳು ಹತ್ತಿರದಲ್ಲಿಯೇ ಇವೆ,” ಎಂದು ಹೇಳಿದ್ದಾರೆ.