ಮಾದಕ ವ್ಯಸನ ನಿರ್ಮೂಲನೆ ಇಂದಿನ ಅಗತ್ಯವಾಗಿದೆ – CV ಚಂದ್ರಶೇಖರ್

0

Get real time updates directly on you device, subscribe now.

‘

ಕೊಪ್ಪಳ: ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣವಾಗಿ ಹತ್ತಿಕ್ಕುವುದೇ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ತೋರಿಸುವ ನಿಜವಾದ ಗೌರವವಾಗಿದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಹೇಳಿದರು.

ಪಕ್ಷದ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿದರು.

“ಗಾಂಧಿ ಮತ್ತು ಶಾಸ್ತ್ರಿ ಅವರು ಮಧ್ಯಪಾನ ಮತ್ತು ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಯಿಂದಾಗುವ ಅನಾಹುತಗಳ ಕುರಿತು ಎಚ್ಚರಿಸುತ್ತಲೇ ಇದ್ದರು. ಇವು ದೇಶ ಕಟ್ಟಲು ಇರುವ ಬಹುದೊಡ್ಡ ಅಡೆತಡೆಗಳು ಎಂದು ಭಾವಿಸಿದ್ದರು. ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಅವರಿಬ್ಬರ ಉಳಿದ ಚಿಂತನೆಗಳಿಗಿಂತಲೂ ಪ್ರಮುಖವಾಗಿ ಮಾದಕ ಪದಾರ್ಥ ವಿರೋಧಿ ಚಿಂತನೆಯನ್ನು ಅನುಷ್ಠಾನಗೊಳಿಸುವುದು ಅನಿವಾರ್ಯವಾಗಿದೆ,” ಎಂದು ಹೇಳಿದರು.

ನಾಲ್ಕು ದಿನಗಳ ಹಿಂದೆ ಭಾರತೀಯ ಕರಾವಳಿ ಪಡೆ ದೇಶಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 3000 ಕೋಟಿ ರೂಪಾಯಿ ಮೌಲ್ಯದ ಮಾದಕ ಪದಾರ್ಥಗಳನ್ನು ವಶಪಡಿಸಿಕೊಂಡಿದೆ. ಕೊಪ್ಪಳ ಜಿಲ್ಲೆಯಲ್ಲಿ ಕಳೆದ 9 ತಿಂಗಳುಗಳಲ್ಲಿ ಗಾಂಜಾ ಮಾರಾಟದ 28 ಪ್ರಕರಣಗಳು ವರದಿಯಾಗಿ 33 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 3 ಲಕ್ಷ ರೂಪಾಯಿಗಿಂತಲೂ ಅಧಿಕ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇಂತಹ ಪ್ರಕರಣಗಳು ಪರಸ್ಥಿತಿಯ ಭೀಕರತೆಯನ್ನು ಸೂಚಿಸುತ್ತವೆ. ಪೊಲೀಸರ ಕಣ್ಣು ತಪ್ಪಿಸಿ ಅಕ್ರಮವಾಗಿ ಗಾಂಜಾ ಮಾರಾಟ ದೊಡ್ಡ ಪ್ರಮಾಣದಲ್ಲಿಯೇ ನಡೆಯುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೊಪ್ಪಳ ಗಾಂಜಾ ಕೇಂದ್ರವಾದರೂ ಅಚ್ಚರಿಪಡಬೇಕಿಲ್ಲ ಎಂದರು.

“ಸರಳತೆ, ಸತ್ಯ, ಧೂಮಪಾನ ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಯುವಕರನ್ನು ರಕ್ಷಿಸಬೇಕಿದೆ. ಕೇವಲ ಕಾನೂನಿನಿಂದಲೇ ವ್ಯವಸ್ಥೆಯನ್ನು ಸುಧಾರಿಸಲು ಸಾಧ್ಯವಿಲ್ಲ. ಆದ್ದರಿಂದ ಗಾಂಧಿ ಮತ್ತು ಶಾಸ್ತ್ರಿ ಅವರ ಜಯಂತಿಯನ್ನು ಇದರ ವಿರುದ್ಧ ಹೋರಾಡುವ ಶಪಥ ತೊಡಬೇಕಿದೆ,” ಎಂದು ಹೇಳಿದರು.

ಇಂದಿನ ಯುವ ಪೀಳಿಗೆ ಶಾಸ್ತ್ರೀಯವರ ಕುರಿತು ಸರಿಯಾಗಿ ತಿಳಿದುಕೊಂಡಿಲ್ಲ ಗಾಂಧಿಯವರು ಕುರಿತು ತಪ್ಪಾದ ಕಲ್ಪನೆಗಳನ್ನು ಹೊಂದಿದೆ. ಆದ್ದರಿಂದ ಐತಿಹಾಸಿಕ ಸಂಗತಿಗಳನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಂಡರೆ ಮಾತ್ರ ಈ ಇಬ್ಬರು ಧೀಮಂತ ನಾಯಕರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದರು.

“ಯುವಕರು ಗ್ರಾಮೀಣ ಪ್ರದೇಶದಲ್ಲಿ ನೆಲೆ ನಿಂತು ಸಾಂಪ್ರದಾಯಿಕ ಉದ್ಯೋಗಗಳಿಗೆ ಕೌಶಲ್ಯವನ್ನು ತುಂಬಿದರೆ ಆ ಇಬ್ಬರೂ ಧೀಮಂತ ನಾಯಕರು ಕಂಡ
ಗ್ರಾಮೀಣ ಭಾರತದ ಸರ್ವೋದಯದ ಕನಸು ನನಸಾಗಲು ಸಾಧ್ಯ,” ಎಂದರು.

ಜಾಗತೀಕರಣ ತಂದಿಟ್ಟ ಸಮಸ್ಯೆಗಳಿಗೆ ಗಾಂಧಿ ಚಿಂತನೆಯಲ್ಲಿ ಉತ್ತರಗಳಿವೆ ಎಂದು ತಾಲೂಕು ಎಸ್ ಸಿ ಅಧ್ಯಕ್ಷ ಸುರೇಶ್ ದದಗಲ್ ಹೇಳಿದರು.

ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ಗಾಂಧಿ ಮತ್ತು ಶಾಸ್ತ್ರಿ ಅವರು ಒತ್ತು ಕೊಟ್ಟಿದ್ದರು. ಕೃಷಿ ಆಧಾರಿತ ವ್ಯವಸ್ಥೆಯನ್ನು ಬಲಪಡಿಸಿದರೆ ದೇಶ ಮುನ್ನಡೆಯಲು ಸಾಧ್ಯ ಎಂದು ಜಿಲ್ಲಾ ಉಪಾಧ್ಯಕ್ಷ ಮೂರ್ತ್ಯೆಪ್ಪ ಹಿಟ್ನಾಳ ಹೇಳಿದರು.

ಸ್ವಾತಂತ್ರ್ಯ ಚಳವಳಿಗೆ ನಾಯಕತ್ವ ವಹಿಸಿ ಗಾಂಧೀಜಿ ರೂಪಿಸಿದ ಹೋರಾಟಗಳು ಮತ್ತು ಕ್ಲಿಷ್ಟ ಪರಿಸ್ಥಿತಿಯಲ್ಲಿ ದೇಶವನ್ನು ಮುನ್ನಡೆಸಿದ ಶಾಸ್ತ್ರಿ ಅವರ ಧೀಮಂತ ನಾಯಕತ್ವದ ಕುರಿತು ಸಂಸ್ಕೃತಿ ಘಟಕದ ಜಿಲ್ಲಾಧ್ಯಕ್ಷ ಮಂಜುನಾಥ ಸೊರಟೂರ ಮಾತನಾಡಿದರು.

ಜಿಲ್ಲಾ ಓಬಿಸಿ ಅಧ್ಯಕ್ಷ ಕರಿಯಪ್ಪ ಹಾಲವರ್ತಿ ಹಾಗೂ ಜಿಲ್ಲಾ ಖಜಾಂಚಿ ಮೌನೇಶ್ ಕಿನ್ನಾಳ ಮಾತನಾಡಿದರು.

ಜಿಲ್ಲಾ ಕೈಗಾರಿಕಾ ಅಧ್ಯಕ್ಷ ಮಾರುತಿ ಗೌಡ ಪೊಲೀಸ್ ಪಾಟೀಲ್, ನಗರ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ, ನಗರ ಘಟಕದ ಉಪಾಧ್ಯಕ್ಷ ಗಂಗಾಧರ್ ವಸ್ತ್ರದ್, ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲ ಮೇದಾರ,
ಮಹಿಳಾ ಘಟಕದ ಓಬಿಸಿ ಅಧ್ಯಕ್ಷೆ ಭಾಗ್ಯಶ್ರೀ ಐಹೊಳೆ,
ನಗರ ಘಟಕದ ಕಾನೂನು ಅಧ್ಯಕ್ಷ ಬಸವರಾಜ್ ಎಸ್,
ಪಕ್ಷದ ಹಿರಿಯ ಮುಖಂಡರಾದ ವಸಂತ ಹಟ್ಟಿ ಮತ್ತು ಪ್ರಶಾಂತ
ಹಾಜರಿದ್ದರು.

ಶೀರ್ಷಿಕೆ: ಜೆಡಿಎಸ್ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ
ಆಚರಿಸಲಾಯಿತು.

Get real time updates directly on you device, subscribe now.

Leave A Reply

Your email address will not be published.

error: Content is protected !!