ಕೊಪ್ಪಳ ವಿಶ್ವವಿದ್ಯಾಲಯವು ಜನಸಾಮಾನ್ಯರ ನೋವಿಗೆ ಸ್ಪಂದಿಸಲಿದೆ: ಕುಲಪತಿ ಪ್ರೊ.ಬಿ.ಕೆ.ರವಿ

Get real time updates directly on you device, subscribe now.

 ಬಲಿಷ್ಟ ದೇಶ ನಿರ್ಮಾಣ ಮಾಡುವಲ್ಲಿ ವಿಶ್ವ ವಿದ್ಯಾಲಯಗಳ ಪಾತ್ರ ಮಹತ್ವದ್ದಾಗಿದೆ. ಕೊಪ್ಪಳ ವಿಶ್ವ ವಿದ್ಯಾಲಯವು ಜನಸಾಮಾನ್ಯರ ನೋವಿಗೆ ಸ್ಪಂದಿಸಲಿದೆ ಎಂದು ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಅವರು ಹೇಳಿದರು.
ಕೊಪ್ಪಳ ಜಿಲ್ಲಾ ರಜತ ಮಹೋತ್ಸವ ಪ್ರಯುಕ್ತ ಕೊಪ್ಪಳ ವಿಶ್ವವಿದ್ಯಾಲಯದಿಂದ ನಗರದ ಸಾಹಿತ್ಯ ಭವನದಲ್ಲಿ ಸೆ.26ರಂದು ಹಮ್ಮಿಕೊಂಡಿದ್ದ ಕೊಪ್ಪಳ ಜಿಲ್ಲಾ ಪ್ರಗತಿಪಥ-ಅವಲೋಕನ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಪ್ಪಳವು ಜಿಲ್ಲೆಯಾಗಿ 25 ವರ್ಷಗಳ ರಜತ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಕೊಪ್ಪಳ ವಿಶ್ವವಿದ್ಯಾಲಯ ಸ್ಥಾಪನೆಯಾಗಿದ್ದು ಸಂತಷದ ವಿಷಯ. ಸಮಾನತೆ ಸಂದೇಶ ಸಾರಿದ ಜಗಜ್ಯೋತಿ ಬಸವಣ್ಣನವರ ಆಶಯದಡಿ ಕೊಪ್ಪಳ ವಿಶ್ವಾವಿದ್ಯಾಲಯವು ಸ್ಥಾಪನೆಯಾಗಿದ್ದು ಒಂದು ಐತಿಹಾಸಿಕ ಸಾಧನೆಯಾಗಿದೆ ಎಂದರು.
ಬರಿ ಪದವಿ ಕೊಡುವುದಷ್ಟೇ ಶಿಕ್ಷಣ ಸಂಸ್ಥೆಗಳ ಕೆಲಸವಲ್ಲ; ಜನ ಸಾಮಾನ್ಯರ ಕಣ್ಣೀರನ್ನೊರೆಸುವ ಕಾರ್ಯವನ್ನು ಮಾಡಬೇಕು. ಈ ಕಾರ್ಯವನ್ನು ಕೊಪ್ಪಳ ವಿಶ್ವ ವಿದ್ಯಾಲಯ ಮಾಡಲಿದೆ. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಮಟ್ಟದ ಶಿಕ್ಷಣ ಪಡೆಯಲು ವಿಶ್ವವಿದ್ಯಾಲಯಗಳು ಅವಕಾಶ ಕಲ್ಪಿಸುತ್ತವೆ. ಕೊಪ್ಪಳ ವಿಶ್ವವಿದ್ಯಾಲಯದಿಂದ ಕಲ್ಯಾಣ ಕರ್ನಾಟಕ ಭಾಗವು ಮತ್ತಷ್ಟು ಅಭಿವೃದ್ಧಿ ಹೊಂದಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ವಿಧಾನ ಪರಿಷತ್ ಶಾಸಕರಾದ ಹೇಮಲತಾ ನಾಯಕ ಅವರು ಮಾತನಾಡಿ, ಕೊಪ್ಪಳವು ಪ್ರಾಚೀನ ಕಾಲದಲ್ಲಿ ಬೌದ್ಧ, ಜೈನ ಧರ್ಮಗಳ ವಾಸಸ್ಥಳವಾಗಿತ್ತು. ತರವಾಯ ಶೈವ, ವೀರಶೈವ ಧರ್ಮಗಳ ಬೀಡಾಯಿತು. ಕ್ರಿ.ಪೂ 3ನೇ ಶತಮಾನದಷ್ಟು ಪ್ರಾಚೀನ ಇತಿಹಾಸ ಕೊಪ್ಪಳಕ್ಕಿದೆ. ಸುಂದರವಾದ ವರ್ಣರಂಜಿತ ಚಿತ್ರಗಳು, ಅಶೋಕನ ಶೀಲಾಶಾಸನಗಳು ಇಲ್ಲಿವೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಆನೆಗೊಂದಿ, ಅಂಜನಾದ್ರಿ ಬೆಟ್ಟ, ಕನಕಗಿರಿ, ಹೇಮಗುಡ್ಡ, ಹಿರೇಜಂತಕಲ್, ಕುಕನೂರು, ಹುಲಿಗಿ, ತುಂಗಭದ್ರ ಡ್ಯಾಂ, ಶ್ರೀ ಗವಿಸಿದ್ಧೇಶ್ವರ ಮಠ, ಇಟಗಿ ಹೀಗೆ ಜಿಲ್ಲೆಯಲ್ಲಿ ಅನೇಕ ಐತಿಹಾಸಿಕ ಸ್ಥಳಗಳು ಇವೆ. ಕೊಪ್ಪಳ ಜಿಲ್ಲೆಗಾಗಿ ನಡೆದ ಹೋರಾಟ ಅವಿಸ್ಮರಣೀಯವಾಗಿದೆ. ಈ ಹೋರಾಟದಲ್ಲಿ ಮಹಿಳೆಯರ ಪಾತ್ರವು ಸಹ ಅಷ್ಟೇ ಪ್ರಮುಖವಾಗಿದೆ ಎಂದು ತಿಳಿಸಿದರು.
ಹಿರಿಯ ಚಿಂತಕರು, ಸಾಹಿತಿಗಳಾದ ಹೆಚ್.ಎಸ್.ಪಾಟೀಲ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಪ್ರಭಾರ ಕುಲಸಚಿವರಾದ ಪ್ರೊ.ಕೆ.ವಿ ಪ್ರಸಾದ್, ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಿಶ್ರಾಂತ ಕುಲ ಸಚಿವರಾದ ಹೆಚ್.ಡಿ.ಪಾಟೀಲ, ಕೊಪ್ಪಳ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ.ಮನೋಜ್ ಡೊಳ್ಳಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳಾದ ಡಿ.ಮಂಜುನಾಥ, ಕೊಪ್ಪಳದ ಹಿರಿಯ ಸಾಹಿತಿಗಳಾದ ಪ್ರೊ. ಅಲ್ಲಮಪ್ರಭು ಬೆಟ್ಟದೂರ, ಲೇಖಕಿ ಸಾವಿತ್ರಿ ಮುಜಮದಾರ, ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಶರಣಬಸಪ್ಪ ಬಿಳೆಯಲಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!