ಕನಕಗಿರಿ ತಾಲೂಕಿನಲ್ಲಿ ಎಸ್‌ಐಆರ್ ಪ್ರಕ್ರಿಯೆ ಯಶಸ್ವಿ: ಶೇ.91.02ರಷ್ಟು ಮತದಾರರ ನಮೂನೆಗಳ ಡಿಜಿಟಲೀಕರಣ ಪೂರ್ಣ ಚಂದ್ರಶೇಖರ್ ಗಾಳಿ

ಕನಕಗಿರಿ: 2026ರ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಕನಕಗಿರಿ ತಾಲೂಕಿನಲ್ಲಿ ಕೊನೆಯ ಹಂತ ತಲುಪಿದ್ದು, ಶೇ.91.02ರಷ್ಟು ಎನ್ಯುಮರೇಷನ್ ನಮೂನೆಗಳ ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದೆ ಎಂದು ಕನಕಗಿರಿ ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ತಹಶೀಲ್ದಾರ್ ಚಂದ್ರಶೇಖರ ಗಾಳಿ ತಿಳಿಸಿದ್ದಾರೆ.
ತಾಲೂಕು ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಎಸ್‌ಐಆರ್ ಪ್ರಕ್ರಿಯೆಯ ವಿವರಗಳನ್ನು ನೀಡಿದರು. ಕನಕಗಿರಿ ತಾಲೂಕಿನಲ್ಲಿ ಒಟ್ಟು 94 ಮತಗಟ್ಟೆಗಳಿದ್ದು, 17 ಮತಗಟ್ಟೆಗಳು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಗೂ 77 ಮತಗಟ್ಟೆಗಳು ಗ್ರಾಮೀಣ ಪ್ರದೇಶದಲ್ಲಿವೆ. ಒಟ್ಟು 79,679 ನೋಂದಾಯಿತ ಮತದಾರರಿದ್ದು, ಎಲ್ಲ ಮತದಾರರಿಗೂ ಶೇ.100ರಷ್ಟು ಎನ್ಯುಮರೇಷನ್ ಫಾರ್ಮ್‌ಗಳನ್ನು ತಲುಪಿಸಲಾಗಿತ್ತು.
ಈ ಪೈಕಿ 72,504 ಫಾರ್ಮ್‌ಗಳು ವಾಪಸ್ ಬಂದಿದ್ದು, ಅವುಗಳ ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದೆ. ಶೇ.91.02ರಷ್ಟು ಸಾಧನೆಯೊಂದಿಗೆ ಕನಕಗಿರಿ ತಾಲೂಕು ಕೊಪ್ಪಳ ಜಿಲ್ಲೆಯಲ್ಲೇ ಮುಂಚೂಣಿಯಲ್ಲಿದೆ ಎಂದು ತಹಶೀಲ್ದಾರ್ ತಿಳಿಸಿದರು.
7,175 ಮತದಾರರು ASDDO ವರ್ಗದಲ್ಲಿ
ಎಸ್‌ಐಆರ್ ಪರಿಶೀಲನೆಯಲ್ಲಿ ಒಟ್ಟು 7,175 ಮತದಾರರು ASDDO ವರ್ಗಕ್ಕೆ ಸೇರಿದ್ದಾರೆ. ಇದರಲ್ಲಿ 133 ಮಂದಿ ಅನುಪಸ್ಥಿತರಾಗಿದ್ದು, 3,856 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, 1,464 ಮಂದಿ ಮೃತಪಟ್ಟವರು ಹಾಗೂ 1,722 ಮಂದಿ ನಕಲಿ ಅಥವಾ ಎರಡೆರಡು ಹೆಸರು ಹೊಂದಿರುವವರು ಎಂದು ಗುರುತಿಸಲಾಗಿದೆ.
ಮತದಾರರು ಆತಂಕಪಡುವ ಅಗತ್ಯವಿಲ್ಲ
ASDDO ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾದ ಮಾತ್ರಕ್ಕೆ ಮತದಾರರ ಹೆಸರು ಅಂತಿಮವಾಗಿ ರದ್ದಾಗಿದೆ ಎಂದರ್ಥವಲ್ಲ ಎಂದು ತಹಶೀಲ್ದಾರ್ ಸ್ಪಷ್ಟಪಡಿಸಿದರು. ಪರಿಶೀಲನೆ ಸಂದರ್ಭದಲ್ಲಿ ಸ್ಥಳದಲ್ಲಿ ಲಭ್ಯವಿಲ್ಲದ ಮತದಾರರನ್ನು ತಾತ್ಕಾಲಿಕವಾಗಿ ಈ ವರ್ಗಕ್ಕೆ ಸೇರಿಸಲಾಗಿದೆ.
ತಮ್ಮ ಹೆಸರು ಪಟ್ಟಿಯಲ್ಲಿ ಇಲ್ಲದಿರುವುದು ಕಂಡುಬಂದರೆ ಸಂಬಂಧಿಸಿದ ಮತದಾರರು ಆಗಸ್ಟ್ 17ರೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಫಾರ್ಮ್-6 ಸಲ್ಲಿಸಿ ಹೆಸರು ಮರುಸೇರ್ಪಡೆಗೆ ಅವಕಾಶ ಪಡೆಯಬಹುದು ಎಂದು ಅವರು ತಿಳಿಸಿದರು.
ಆಗಸ್ಟ್ 24, 2026ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿರುತ್ತದೆ. ಆಕ್ಷೇಪಣೆಗಳು ಹಾಗೂ ವಿಚಾರಣೆಗಳ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಕ್ಟೋಬರ್ 27, 2026ರಂದು ಎಸ್‌ಐಆರ್-2026ರ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಚಂದ್ರಶೇಖರ ಗಾಳಿ ಹೇಳಿದರು.
ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿತಿಗಳಿಗೆ ಈಗಾಗಲೇ ASDDO ಪಟ್ಟಿಯನ್ನು ಒದಗಿಸಲಾಗಿದೆ. ಸಾರ್ವಜನಿಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಿಕೊಂಡು, ಅಗತ್ಯವಿದ್ದಲ್ಲಿ ನಿಗದಿತ ಅವಧಿಯೊಳಗೆ ದಾಖಲೆಗಳನ್ನು ಸಲ್ಲಿಸಬೇಕು. ಎಸ್‌ಐಆರ್ ಜಾಗೃತಿ ಮತ್ತು ಪರಿಶೀಲನಾ ಪ್ರಕ್ರಿಯೆಗೆ ಸಾರ್ವಜನಿಕರು ಹಾಗೂ ಮಾಧ್ಯಮದವರು ಸಹಕಾರ ನೀಡಬೇಕು ಎಂದು ತಹಶೀಲ್ದಾರ್ ಮನವಿ ಮಾಡಿದರು.