ಗವಿಸಿದ್ಧೇಶ್ವರ ಶ್ರೀಗಳು ಚಾಲನೆ ನೀಡುತ್ತಿರುವುದು ಅತ್ಯಂತ ಅರ್ಥಪೂರ್ಣ -ಶಿವರಾಜ್ ತಂಗಡಗಿ
ನಾಡಿನ ಸಾಂಸ್ಕೃತಿಕ ವೈಭವದ ಪ್ರತೀಕವಾಗಿರುವ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿ ಕೊಪ್ಪಳದ ಶ್ರೀ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಯವರು ಉದ್ಘಾಟಿಸಲಿರುವುದು ಇಡೀ ಕಲ್ಯಾಣ ಕರ್ನಾಟಕದ ಜನತೆಗೆ ಹೆಮ್ಮೆಯ ಹಾಗೂ ಸಂತಸದ ಸಂಗತಿಯಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ಈ ಕುರಿತು ಪೋಸ್ಟ್ ಮಾಡಿರುವ ಅವರು
ಮೈಸೂರು ದಸರಾ ಕೇವಲ ರಾಜವೈಭವದ ಉತ್ಸವವಲ್ಲ; ಅದು ಕರ್ನಾಟಕದ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಮತ್ತು ಜನಜೀವನದ ಪ್ರತಿಬಿಂಬ. ಇಂತಹ ನಾಡಹಬ್ಬಕ್ಕೆ ಸಮಾಜಸೇವೆ ಹಾಗೂ ಮಾನವೀಯತೆಯ ಮೂಲಕ ಜನಮನ ಗೆದ್ದಿರುವ ಗವಿಸಿದ್ಧೇಶ್ವರ ಶ್ರೀಗಳು ಚಾಲನೆ ನೀಡುತ್ತಿರುವುದು ಅತ್ಯಂತ ಅರ್ಥಪೂರ್ಣವಾಗಿದೆ.
ಕೊಪ್ಪಳದ ಗವಿಮಠದ ಸೇವಾ ಪರಂಪರೆ ಇಂದು ರಾಜ್ಯದ ಗಡಿಗಳನ್ನು ಮೀರಿ ಜನಮಾನಸದಲ್ಲಿ ತನ್ನದೇ ಆದ ಸ್ಥಾನ ಪಡೆದಿದೆ. ಅಂತಹ ಪರಂಪರೆಯನ್ನು ಮುನ್ನಡೆಸುತ್ತಿರುವ ಗವಿಸಿದ್ಧೇಶ್ವರ ಶ್ರೀಗಳಿಗೆ ಮೈಸೂರು ದಸರಾ ಉದ್ಘಾಟನೆಯ ಗೌರವ ದೊರೆತಿರುವುದು ಕೊಪ್ಪಳ ಮಾತ್ರವಲ್ಲದೆ ಇಡೀ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜನತೆಗೆ ಸಂದ ಗೌರವ. ಗವಿಸಿದ್ಧೇಶ್ವರ ಶ್ರೀಗಳು ಧಾರ್ಮಿಕ ಕ್ಷೇತ್ರದ ಜೊತೆಗೆ ಶಿಕ್ಷಣ, ದಾಸೋಹ, ಆರೋಗ್ಯ, ಸಾಮಾಜಿಕ ಸೇವೆ ಹಾಗೂ ಮಾನವೀಯ ಮೌಲ್ಯಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿರುವ ಅಪರೂಪದ ಸಂತರು. ವಿಶೇಷವಾಗಿ ಬಡ ಹಾಗೂ ಗ್ರಾಮೀಣ ಮಕ್ಕಳಿಗೆ ಶಿಕ್ಷಣದ ಅವಕಾಶ ಕಲ್ಪಿಸುವಲ್ಲಿ ಗವಿಮಠದ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಗವಿಸಿದ್ಧೇಶ್ವರ ಶ್ರೀಗಳ ಅಮೃತಹಸ್ತದಿಂದ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯುತ್ತಿರುವುದು ನಾಡಿನ ಸಾಂಸ್ಕೃತಿಕ ಪರಂಪರೆಗೆ ಮತ್ತಷ್ಟು ಮೆರುಗು ನೀಡಲಿದೆ. ಇನ್ನು ಶ್ರೀಗಳನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಈ ಆಯ್ಕೆ ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
https://x.com/sstangadagi/status/2103147259722698974?s=20