ಜೆಡಿಎಸ್ ಅಧ್ಯಯನ ತಂಡದ ಸದಸ್ಯರಾಗಿ ಸಿವಿಸಿ ನೇಮಕ

ಕೊಪ್ಪಳ: ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಅವರನ್ನು ಪಕ್ಷದ ನೆರೆ ಮತ್ತು ಬರ ಅಧ್ಯಯನ ತಂಡದ ಸದಸ್ಯರನ್ನಾಗಿ ಪಕ್ಷದ ರಾಜ್ಯಾಧ್ಯಕ್ಷರಾದ ಹೆಚ್ ಡಿ ಕುಮಾರಸ್ವಾಮಿ ನೇಮಕ ಮಾಡಿದ್ದಾರೆ.
ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗಗಳಿಗೆ ಮಾಜಿ ಸಚಿವ ಬಂಡೆಪ್ಪ ಕಾಶಂಪುರ್ ಅವರು ಅಧ್ಯಯನ ತಂಡದ ಅಧ್ಯಕ್ಷರಾಗಿದ್ದಾರೆ. ಈ ಭಾಗಗಳ ಅಧ್ಯಯನ ತಂಡದ ಸದಸ್ಯರಾಗಿ ಸಿ ವಿ ಚಂದ್ರಶೇಖರ್ ಕಾರ್ಯ ನಿರ್ವಹಿಸಲಿದ್ದಾರೆ. ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಹ ಈ ತಂಡದ ಸದಸ್ಯರಾಗಿದ್ದಾರೆ ಎಂದು ಪಕ್ಷದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಕೊಪ್ಪಳವು ಸೇರಿದಂತೆ ಕಲ್ಯಾಣ ಕರ್ನಾಟಕದ ಭಾಗದ ಬಹುತೇಕ ಜಿಲ್ಲೆಗಳು ತೀವ್ರ ಬರಗಾಲದ ಪರಿಸ್ಥಿತಿ ಎದುರಿಸುತ್ತಿವೆ.
ವಾಡಿಕೆ ಗಿಂತ ಸುಮಾರು 40% ಕ್ಕಿಂತಲೂ ಕಡಿಮೆ ಮಳೆಯಾಗಿದೆ. ಇದರಿಂದ ಏಕದಳ, ದ್ವಿದಳ ಹಾಗೂ ಇತರೆ ಬೆಳೆಗಳಿಗೆ ತೀವ್ರ ಹಾನಿಯಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಈ ಭಾಗಗಳ ತಂಡದ ಸದಸ್ಯರು ಶೀಘ್ರದಲ್ಲಿಯೇ ಸಭೆ ಸೇರಿ ಭೇಟಿಯ ವಿವರಗಳನ್ನು ಅಂತಿಮಗೊಳಿಸಲಿದ್ದಾರೆ ಎಂದು ಪ್ರಕಟಣೆ ಹೇಳಿದೆ.
ಕೊಪ್ಪಳ ತಾಲೂಕಿನ ಎಲ್ಲಾ ಭಾಗಗಳಿಗೆ ಭೇಟಿ ಕೊಟ್ಟು ಆಗಬಹುದಾದ ನಷ್ಟ ಮತ್ತು ಕೈಗೊಳ್ಳಬಹುದಾದ ಪರಿಹಾರ ಕಾಮಗಾರಿಗಳ ಕುರಿತು ಪ್ರತ್ಯೇಕ ವರದಿ ಸಲ್ಲಿಸಲಾಗುವುದು ಎಂದು ಸಿ ವಿ ಚಂದ್ರಶೇಖರ್ ತಿಳಿಸಿದ್ದಾರೆ.