ಬಡವರ ಬದುಕಿನ ಕಾಳಜಿ ಇರಲಿ: ಆಹಾರ ಆಯೋಗದ ಅಧ್ಯಕ್ಷ ಡಾ.ಹೆಚ್.ಕೃಷ್ಣ ಅವರಿಂದ ಅಧಿಕಾರಿಗಳಿಗೆ ಪಾಠ
ಅಧಿಕಾರಿಯಾಗಿ ಸೇವೆ ಮಾಡುವ ಅವಕಾಶ ಎಲ್ಲರಿಗು ಸಿಗುವುದಿಲ್ಲ. ಹಾಗಾಗಿ ತಾವು ಅಧಿಕಾರಿಗಳಾಗಿ ಇದನ್ನರಿತು ಜನಸೇವೆಯಲ್ಲಿ ತೊಡಗಬೇಕು. ಬಡವರ ಬದುಕಿನ ಬಗ್ಗೆ ತುಸು ಹೆಚ್ಚಿನ ಕಾಳಜಿ ಹೊಂದಬೇಕು ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ.ಹೆಚ್.ಕೃಷ್ಣ ಅವರು ಸಲಹೆ ಮಾಡಿದರು.ಯಾರೇ ವ್ಯಕ್ತಿ ಇರಲಿ. ಯಾರೂ ಸಹ ಹಸಿವಿನಿಂದ ಬಳಲಬಾರದು ಎಂಬುದನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ 2013 ಸ್ಪಷ್ಟಪಡಿಸುತ್ತದೆ. ಕಡು ಬಡವರು ಗರ್ಭಾಶಯದಿಂದಲೇ ಸರ್ಕಾರದ ಸೌಕರ್ಯ ಪಡೆಯಲು ಆರಂಭಿಸಿ ಜನಿಸಿದ ಬಳಿಕ ಬೇರೆ ಬೇರೆ ವಯೋಮಾನದಲ್ಲಿ ಸಹ ಸೌಕರ್ಯಕ್ಕೆ ಅರ್ಹರಾಗಿ ವೃದ್ಯಾಪ ವೇತನದವರೆಗೂ ಸೌಕರ್ಯ ಪಡೆಯುತ್ತಾರೆ. ಕೆಲವರು ಬಡತನದಲ್ಲಿ ಜನಿಸಿ ಬಳಿಕ ಆರ್ಥಿಕವಾಗಿ ಸಬಲರಾಗುತ್ತಾರೆ. ಇನ್ನು ಕೆಲವರು ಜನನದಿಂದ ಸಾಯುವವರೆಗೂ ಬಡತನ ಹೊದ್ದೆ ಬದುಕುತ್ತಾರೆ. ಅಂತಹ ಬಡ ವರ್ಗದ ಜನರ ಬಗ್ಗೆ ಅಧಿಕಾರಿಗಳು ಕಾಳಜಿ ಹೊಂದಬೇಕು. ನಮ್ಮ ಸುತ್ತಲು ಯಾರಾದರು ಬಡವರು ಕಾಣಿಸಿದರೆ ಅವರ ಬಗ್ಗೆ ಗಮನ ಹರಿಸಿ ಸರ್ಕಾರದಿಂದ ಅವರಿಗೆ ಸಿಗಬೇಕಾದ ಸೌಕರ್ಯ ತಲುಪಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಲಹೆ ಮಾಡಿದರು.
ಅಧಿಕಾರಿಗಳಿಗೆ ನಿರ್ದೇಶನ: ಆಯೋಗವು ಮೇ 19ರಂದೇ ಕೊಪ್ಪಳ ನಗರಕ್ಕೆ ಆಗಮಿಸಿ ವಿವಿಧೆಡೆ ಭೇಟಿ ಕೈಗೊಂಡಿದ್ದು, ಆಯಾ ಕಡೆಗೆ ಕಂಡು ಬರುವ ನೂನ್ಯತೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರುತ್ತೇವೆ. ಆಯಾ ಇಲಾಖೆಯ ಅಧಿಕಾರಿಗಳು ನ್ಯೂನತೆಗಳ ಬಗ್ಗೆ ತಿಂಗಳೊಳಗೆ ಜಿಲ್ಲಾಧಿಕಾರಿಗಳಿಗೆ ವರದಿ ಮಾಡಬೇಕು ಎಂದು ಅಧ್ಯಕ್ಷರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಬಿ ಇಟ್ನಾಳ, ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಸುಮಂತ್ ರಾವ್, ಮಾರುತಿ ಎಂ.ದೊಡ್ಡಲಿAಗಣ್ಣವರ, ಎ.ರೋಹಿಣಿ ಪ್ರಿಯ, ಕೆ.ಎಸ್.ವಿಜಯಲಕ್ಷ್ಮಿ ಮತ್ತು ಸದಸ್ಯ ಕಾರ್ಯದರ್ಶಿ ಸುಜಾತ ಡಿ ಹೊಸಮನಿ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.