ಕೊಪ್ಪಳದ ರಾಜಕಾಲುವೆ ಒತ್ತುವರಿ ತೆರವು. ಸ್ವಚ್ಛಗೊಳಿಸಿ, ಅನಾಹುತಗಳನ್ನು ತಪ್ಪಿಸಲು ಆಗ್ರಹಿಸಿ ಸಾಂಕೇತಿಕ ಪ್ರತಿಭಟನಾ ಧರಣಿ ನಡೆಸಿ ಮನವಿ
.
ಕೊಪ್ಪಳ : ನಗರದ ರಾಜಕಾಲುವೆ ಒತ್ತುವರಿ ತೆರವು ಹಾಗೂ ಗಿಡಗಂಟಿಗಳನ್ನು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಿ,ಮುಂಗಾರು ಮಳೆಯಿಂದಾಗಬಹುದಾದ ಅನಾಹುತಗಳನ್ನು ತಪ್ಪಿಸಲು ಆಗ್ರಹಿಸಿ ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ನಗರ ಸಭೆ ಮುಂದೆ ಸೋಮವಾರ ಸಾಂಕೇತಿಕ ಪ್ರತಿಭಟನಾ ಧರಣಿ ನಡೆಸಿ ನಗರ ಸಭೆಯ ಆಡಳಿತ ಅಧಿಕಾರಿಯಾದ ಜಿಲ್ಲಾಧಿಕಾರಿ ಸುರೇಶ್ ಬಿ.ಇಟ್ನಾಳ ಅವರಿಗೆ ಪ್ರಭಾರಿ ಪೌರಾಯುಕ್ತ ಮಂಜುನಾಥ ಗುಂಡೂರ್ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ಸಾಂಕೇತಿಕ ಪ್ರತಿಭಟನಾ ಧರಣಿಯಲ್ಲಿ ರಾಜಕಾಲುವೆ ಒತ್ತುವರಿ ತೆರವುಗೊಳಿಸದೆ ನಿರ್ಲಕ್ಷ್ಯ ಮಾಡಿರುವ ಮತ್ತು ನಗರದ ಎಲ್ಲಾ ಬಡಾವಣೆಗಳ ವಾರ್ಡುಗಳ ಚರಂಡಿಗಳನ್ನು ಸ್ವಚ್ಛಗೊಳಿಸಲು ನಿರಾಸಕ್ತಿ ತೋರಿರುವ ನಗರ ಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಘೋಷಣೆ ಕೇಳಿಬಂದಿತು. ಮಧ್ಯಾಹ್ನ ಸಲ್ಲಿಸಿದ ಮನವಿಯಲ್ಲಿ ಕೊಪ್ಪಳ ನಗರದ ಸಾರ್ವಜನಿಕರ ಹಿತದೃಷ್ಟಿಯಿಂದ ”ಜನಪರ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ” ವತಿಯಿಂದ ಈ ಮೂಲಕ ತಮ್ಮ ಗಮನ ಸೆಳೆಯಬಯಸುತ್ತೇವೆ. ಕೊಪ್ಪಳ ನಗರದ ವ್ಯಾಪ್ತಿಯಲ್ಲಿರುವ ಮುಖ್ಯ ರಾಜಕಾಲುವೆ ಸಂಪೂರ್ಣವಾಗಿ ಗಿಡಗಂಟಿಗಳಿಂದ. ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಮತ್ತು ಹೂಳಿನಿಂದ ತುಂಬಿಹೋಗಿದೆ. ಅಷ್ಟೇ ಅಲ್ಲದೆ, ಅನೇಕ ಕಡೆಗಳಲ್ಲಿ ರಾಜಕಾಲುವೆಯನ್ನು ಕಾನೂನುಬಾಹಿರವಾಗಿ ಆಕ್ರಮಿಸಿಕೊಂಡು ಅನಧಿಕೃತ ಕಟ್ಟಡಗಳನ್ನು ನಿರ್ಮಿಸಲಾಗಿದೆ.ಇದರಿಂದಾಗಿ ಮಳೆನೀರು ಸರಾಗವಾಗಿ ಹರಿದುಹೋಗಲು ಜಾಗವಿಲ್ಲದಂತಾಗಿದೆ. ಮುಂಗಾರು ಮಳೆ ಆರಂಭವಾಗುವ ಮುನ್ನವೇ ಇವುಗಳನ್ನು ಸ್ವಚ್ಛಗೊಳಿಸದಿದ್ದರೆ,ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಾರ್ವಜನಿಕರ ಆಸ್ತಿಪಾಸ್ತಿ ಹಾನಿ ಉಂಟು ಮಾಡುವುದು ಮತ್ತು ಜೀವಕ್ಕೆ ಸಂಚಕಾರ ಬರುವ ಭೀತಿ ಎದುರಾಗಿದೆ.ಈ ಕುರಿತು ಕಳೆದ 4 ಮೇ 2026 ರಂದು ಸೋಮವಾರ ಕೊಪ್ಪಳದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಖುದ್ದಾಗಿ ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳೊಂದಿಗೆ ಭೇಟಿ ಮಾಡಿ, ಮಳೆಯಿಂದ ಆಗಬಹುದಾದ ಅನಾಹುತಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗಿತ್ತು. ಆದರೂ ಎರಡು ವಾರಗಳು ಕಳೆದರೂ ನಗರಸಭೆಯಾಗಲಿ ಅಥವಾ ನಗರ ಸಭೆಯ ಆಡಳಿತ ಅಧಿಕಾರಿ ಆಗಿರುವ ಜಿಲ್ಲಾಧಿಕಾರಿಗಳಾಗಲಿ ಈ ನಿಟ್ಟಿನಲ್ಲಿ ಯಾವುದೇ ಸೂಕ್ತ ಕ್ರಮ ಕೈಗೊಳ್ಳದಿರುವುದು ಅತ್ಯಂತ ಖೇದಕರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.ಮಳೆ ಬರುವ ತುರ್ತು ಪರಿಸ್ಥಿತಿಗಳಲ್ಲೂ ಬೇಜವಾಬ್ದಾರಿ ಮತ್ತು ಕರ್ತವ್ಯ ಲೋಪವೇಸಗಿದ ಅಧಿಕಾರಿಗಳಿಗೆ ತಕ್ಷಣ ಅಮಾನತುಗೊಳಿಸುವಂತಹ ಕಠಿಣ ಕ್ರಮ ಕೈಗೊಳ್ಳಬೇಕು.
ಸಂಘಟನೆಗಳ ಪ್ರಮುಖ ಬೇಡಿಕೆಗಳು:
ತಕ್ಷಣದ ಸ್ವಚ್ಛತೆ: ಮುಂಗಾರು ಮಳೆ ಆರಂಭವಾಗುವ ಮುನ್ನವೇ ಯುದ್ಧೋಪಾದಿಯಲ್ಲಿ ರಾಜಕಾಲುವೆ ಆಕ್ರಮಿಸಿಕೊಂಡು ಕಟ್ಟಲಾಗಿರುವ ಎಲ್ಲಾ ಅನಧಿಕೃತ ಕಟ್ಟಡಗಳನ್ನು ಗುರುತಿಸಿ ತಕ್ಷಣ ತೆರವುಗೊಳಿಸಿಬೇಕು. ರಾಜಕಾಲುವೆಯಲ್ಲಿ ಬೆಳೆದಿರುವ ಗಿಡಗಂಟಿಗಳನ್ನು. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹಾಗೂ ಹೂಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು.
ನಗರದ ಎಲ್ಲಾ ಬಡಾವಣೆಗಳ ಚರಂಡಿಗಳಲ್ಲಿಯ ಗಿಡಗಂಟಿಗಳು ಹಾಗೂ ತುಂಬಿದ ಹೂಳು ತೆಗೆಯುವ ಕಾರ್ಯ ತುರ್ತಾಗಿ ನಡೆಸಬೇಕು.
ಶಾಶ್ವತ ಪರಿಹಾರ: ಮಳೆ ನೀರು ಸರಾಗವಾಗಿ ಹರಿದುಹೋಗಲು ಇಡೀ ರಾಜಕಾಲುವೆಯನ್ನು ನವೀಕರಣಗೊಳಿಸುವ ಕಾಮಗಾರಿ ನಡೆಸಬೇಕು. ತಾಸಿಗೂ ಹೆಚ್ಚು ಸಮಯ ಮಳೆ ಆದರೂ ರಾಜಕಾಲುವೆ ಯಿಂದ ನಗರದಲ್ಲಿ ಕೃತಕ ಪ್ರವಾಹ ಉಂಟಾಗುತ್ತಿದ್ದು. ಶಾಶ್ವತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು.ಅಧಿಕಾರಿಗಳ ನಿರಾಸಕ್ತಿ ಮತ್ತು ವಿಳಂಬ ನೀತಿಯನ್ನು ಖಂಡಿಸಿ,ದಿನಾಂಕ 18 ಮೇ 2026 ರಂದು ಸೋಮವಾರ ನಗರಸಭೆಯ ಮುಂಭಾಗದಲ್ಲಿ ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಒಗ್ಗೂಡಿ ಸಾಂಕೇತಿಕ ಪ್ರತಿಭಟನಾ ಧರಣಿ ನಡೆಸಲಾಗಿದ್ದು.ಇನ್ನಾದರೂ ನಗರಸಭೆ ಮತ್ತು ಜಿಲ್ಲಾಡಳಿತವು ಎಚ್ಚೆತ್ತುಕೊಂಡು ತಕ್ಷಣವೇ ಸ್ವಚ್ಛತಾ ಕಾರ್ಯ ಆರಂಭಿಸಬೇಕು. ಈಗೆನಾದರೂ ಮಳೆ ಬಂದು ರಾಜಕಾಲುವೆಯ ಅಥವಾ ಚರಂಡಿಗಳ ನೀರು ಮನೆಗಳಿಗೆ ನುಗ್ಗಿ ನಷ್ಟ ಸಂಭವಿಸಿದರೆ ಅದಕ್ಕೆ ನಗರ ಸಭೆ ಮತ್ತು ಜಿಲ್ಲಾಡಳಿತವೇ ಹೊಣೆ ಹೊತ್ತು ತಕ್ಕ ಪರಿಹಾರ ನೀಡಬೇಕು.
ನಗರ ಸಭೆ ಸಕಾಲಕ್ಕೆ ಕ್ರಿಯಾಶೀಲಗೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಸಾರ್ವಜನಿಕರನ್ನು ಒಟ್ಟುಗೂಡಿಸಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ ಎಂದು ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ.ಗಫಾರ್.ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖ್ಯ ಸಂಚಾಲಕ ಬಸವರಾಜ್ ಶೀಲವಂತರ್.ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣವರ್.ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ತುಕಾರಾಮ್ ಪಾತ್ರೋಟಿ.ಕರ್ನಾಟಕ ಮಾದಿಗ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಮುದುಕಪ್ಪ ಹೊಸಮನಿ.ದಲಿತ ಸಂಘರ್ಷ ಸಮಿತಿ(ದಾದಾ ಸಾಹೇಬ್ ಡಾ: ಎನ್. ಮೂರ್ತಿ ಸ್ಥಾಪಿತ)ರಾಜ್ಯ ಕಾರ್ಯದರ್ಶಿ ರಾಮಣ್ಣ ಕಂದಾರಿ.ರಾಜ್ಯ ಹಿರಿಯ ಮುಖಂಡ ಡಾ: ಬಿ. ಜ್ಞಾನ ಸುಂದರ. ಕೊಳಚೆ ನಿರ್ಮೂಲನಾ ವೇದಿಕೆಯ ಸಂಚಾಲಕ ಮೊಹಮ್ಮದ್ ಗೌಸ್ ನೀಲಿ.ಕರ್ನಾಟಕ ಪ್ರಜಾ ಶಕ್ತಿ ಸಮಿತಿಯ ಜಿಲ್ಲಾ ಖಜಾಂಚಿ ಮುದ್ದುರಾಜ್ ಚನ್ನದಾಸರ್.ಗಾಳೆಪ್ಪ ಮುಂಗೋಲಿ.ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಆದಿಲ್ ಪಟೇಲ್. ಶ್ರೀಕಾಂತ್ ಹೆಚ್.ಹೊಸಮನಿ. ಇಂತ್ಯಾಝ್ ಪಾಷಾ ಎಮ್.ಪಲ್ಟನ್.ಯುವ ನ್ಯಾಯವಾದಿ ಬಸವರಾಜ.ಶೇಖರ್ ದೊಡ್ಡಮನಿ.ಅನೂಪ್ ಗೌಡ. ಕಟ್ಟಡ ಕಾರ್ಮಿಕ ಸಂಘಟನೆಯ ಮುಖಂಡ ಚಾಂದ್ ಪಾಷಾ ಗಂಗಾವತಿ.ಗಾಳೆಪ್ಪ ಪೂಜಾರ. ಸಿದ್ದಲಿಂಗಪ್ಪ(ಮುತ್ತು) ಡಿ.ಹಡಪದ್ ಮುಂತಾದವರು ತಿಳಿಸಿದರು.
ಮನವಿ ಸ್ವೀಕರಿಸಿದ ಪ್ರಭಾರಿ ಪೌರಾಯುಕ್ತ ಮಂಜುನಾಥ ಗುಂಡೂರ್ ಮಾತನಾಡಿ ರಾಜಕಾಲುವೆ ಸ್ವಚ್ಛಗೊಳಿಸಲು ಮತ್ತು ನಗರದ ಚರಂಡಿಗಳನ್ನು ಸ್ವಚ್ಛಗೊಳಿಸಲು ಮೂರು ತಂಡಗಳನ್ನು ರಚಿಸಲಾಗಿದ್ದು ಸ್ವಚ್ಛತಾ ಕಾರ್ಯ ನಡೆಯುತ್ತದೆ.ರಾಜಕಾಲುವೆ ಒತ್ತುವರಿಯನ್ನು ಗುರುತಿಸಲು ಮತ್ತು ತೆರವು ಕಾರ್ಯಾಚರಣೆ ನಡೆಸಲು ಶೀಘ್ರದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ಹೇಳಿದರು.