ಸಾಹಿತ್ಯಕ್ಕೆ ಭಾಷೆ ಮಾತ್ರವಲ್ಲ ರಾಜಕೀಯ ಪ್ರಜ್ಞೆ -ಗ್ರಹಿಕೆ ಮುಖ್ಯ-ಡಾ.ರಂಗನಾಥ ಕಂಟನಕುಂಟೆ

0

Get real time updates directly on you device, subscribe now.

ಪ್ರಜಾಸತ್ತೆಯ ಮೇಲಿನ ದಾಳಿ: ಸೃಜನಶೀಲ ಸ್ಪಂದನೆ

ಹುಬ್ಬಳ್ಳಿ (ನರಗುಂದ-ನವಲಗುಂದ ರೈತ ಬಂಡಾಯ ವೇದಿಕೆ) ಮೇ.17:
ಕಾವ್ಯಕ್ಕೆ,ಸಾಹಿತ್ಯಕ್ಕೆ ಕೇವಲ ಭಾಷೆ ಮಾತ್ರ ಮುಖ್ಯವಲ್ಲ.ಅದು ರಾಜಕೀಯ ಪ್ರಜ್ಞೆ,ಗ್ರಹಿಕೆ, ಕಾಣ್ಕೆ ಒಳಗೊಳ್ಳದೇ ಹೋದರೆ ಅದು ವಿಚಾರಗಳನ್ನು ಹುಟ್ಟಿಸಲಾರದು.ಫ್ಯಾಸಿಸಂನ ಕರಾಳತೆ,ಆಕ್ರಮಣಶೀಲತೆಯ ಆಯಾಮಗಳನ್ನು ಹಿಡಿದಿಡುವ ಪಟ್ಟುಗಳನ್ನು ನಮ್ಮ ಕವಿಗಳು ಇನ್ನೂ ಕರಾರುವಾಕ್ಕಾಗಿ ರೂಢಿಸಿಕೊಳ್ಳಬೇಕಾಗಿದೆ.ಕಾವ್ಯಕ್ಕಿಂತ ವಿಚಾರ ಸಾಹಿತ್ಯ ಕನ್ನಡದ ಕವಿಗಳು, ಸಾಹಿತಿಗಳನ್ನು ಹೆಚ್ಚು ಆವರಿಸಬೇಕು ಎಂದು ಸಾಹಿತಿ,ಪ್ರಾಧ್ಯಾಪಕ
ರಂಗನಾಥ ಕಂಟನಕುಂಟೆ ಅಭಿಪ್ರಾಯ ಪಟ್ಟರು.

ಇಲ್ಲಿನ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಮೇ ಸಾಹಿತ್ಯ ಮೇಳದ “ಪ್ರಜಾಸತ್ತೆಯ ಮೇಲಿನ ದಾಳಿ:ಸೃಜನಶೀಲ ಸ್ಪಂದನೆ ” ಗೋಷ್ಠಿಯಲ್ಲಿ ಅವರು ಸಾಹಿತ್ಯ ಸೃಜನೆ ಕುರಿತು ಮಾತನಾಡಿದರು,ಕನ್ನಡದ ಸಾಹಿತ್ಯ ಜಗತ್ತು ವರ್ತಮಾನದ ಬಿಕ್ಕಟ್ಟು, ದುರಿತ ಕಾಲದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ದಾಳಿಯಾಗಿ ಸರ್ವಾಧಿಕಾರಿ ವ್ಯವಸ್ಥೆ ರೂಪುಗೊಳ್ಳುತ್ತಿರುವ ಸಮಯದಲ್ಲಿ ಸಾಹಿತ್ಯ ಜಗತ್ತು ಅದಕ್ಕೆ ಹೇಗೆ ಪ್ರತಿಕ್ರಿಯೆ ನೀಡುತ್ತಿದೆ ಎಂಬುದು ಮುಖ್ಯ.ಮೇ ಸಾಹಿತ್ಯ ಮೇಳದಂತಹ ಅನೇಕ ಸಾಹಿತ್ಯ ಪರಂಪರೆ ಅದು ಕನ್ನಡದ ವಿವೇಕವನ್ನು ,ಜನರನ್ನು ಎಚ್ಚರದಲ್ಲಿ ಇಡುವ ಕಾರ್ಯ ಮಾಡುತ್ತಿವೆ.

ಚಿಂತಕ ಶಿವಸುಂದರ್ ಮಾತನಾಡಿ,ಪ್ರಜಾಪ್ರಭುತ್ವ ಎಂದರೆ ಮನುಷ್ಯ ,ಮನುಷ್ಯ ನಡುವಿನ‌ ಸಂಬಂಧ, ಪ್ರಜಾಸತ್ತೆಯ ಮೇಲೆ ದಾಳಿ ಎಂದರೆ ಅದು ಮನುಷ್ಯ ಸಂಬಂಧಗಳ ಮೇಲಿನ ದಾಳಿಯೇ ಆಗಿದೆ.ಜನರ ಮನದಲ್ಲಿ ಇದ್ದ ಬುದ್ಧ,ಅಂಬೇಡ್ಕರ್, ಗಾಂಧೀಜಿ ವಿಚಾರಗಳ ಮೇಲೆ ದಾಳಿ ಮಾಡಿ, ಅಲ್ಲಿ ಸಾವರ್ಕರ್,ಗೋಳ್ವಾಲ್ಕರ್ ವಿಚಾರಗಳನ್ನು ತುಂಬುವ ಮೂಲಕ ತಾಂತ್ರಿಕವಾಗಿ ಚುನಾವಣೆಗಳಲ್ಲಿ ಜಯ ಸಾಧಿಸುವ ಪರಿಪಾಠ ಪ್ರಾರಂಭವಾಗಿದೆ.ಫ್ಯಾಸಿಸಂ ಎಂದರೆ ಬ್ರಾಹ್ಮಣ್ಯ ಮತ್ತು ಬಂಡವಾಳಶಾಹಿಯಾಗಿದೆ ಎಂದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಬಹಳ ಹಿಂದೆಯೇ ಹೇಳಿದ್ದಾರೆ. ಬ್ರಾಹ್ಮಣ್ಯ ಮತ್ತು ಬಂಡವಾಳಶಾಹಿ ಮನಸ್ಸು ಫ್ಯಾಸಿಸ್ಟರಲ್ಲಿ ಮಾತ್ರವಲ್ಲ ಅದರ ಬೀಜಾಂಶ ನಮ್ಮೆಲ್ಲರಲ್ಲಿಯೂ ಇರುತ್ತದೆ.ನಮ್ಮಲ್ಲಿರುವ ಈ ದುಷ್ಟತನದ ಅಂಶವನ್ನು ವ್ಯವಸ್ಥಿತವಾಗಿ ಕಳೆದ ನೂರು ವರ್ಷಗಳಿಂದ ಪೋಷಿಸಿಕೊಂಡು ಬರಲಾಗುತ್ತಿದೆ.ಅನೇಕ ಸೋಲು,ಏಳು ಬೀಳುಗಳನ್ನು ಕಂಡು ಇಂದು ಜನತೆಯ ಸಹಮತಿಯನ್ನು ಪಡೆಯುವ ಹಂತಕ್ಕೆ ,ಜನರ ಮನೋಭಾವದ ಬೆಂಬಲ ಪಡೆಯುವ ಹಂತಕ್ಕೆ ಬೆಳೆದು ನಿಂತಿದ್ದಾರೆ.ಇಂತಹ ಫ್ಯಾಸಿಸಂ ವಿಚಾರಗಳನ್ನು ಪೋಷಿಸುವ ಸುಮಾರು 25 ಕ್ಕೂ ಹೆಚ್ಚು ಸಿನೆಮಾಗಳು ಬಾಲಿವುಡ್‌ನ‌ಲ್ಲಿ ನಿರ್ಮಾಣವಾಗಿ,ತೆರೆ ಕಂಡಿವೆ.ಅವರಿಗೆ ಬಾಕ್ಸ್ ಆಫೀಸ್ ಸೋಲು,ಗೆಲುವು ಮುಖ್ಯವಲ್ಲ ಜನರ ಕಿವಿಗಳಿಗೆ ವಿಚಾರಗಳನ್ನು ದಾಟಿಸುವುದೇ ಆಗಿದೆ.ಆವರಿಗೆ ಐದು ವರ್ಷದ ಚುನಾವಣೆ ಅಧಿಕಾರ ಅವರ ಗುರಿ‌ ಅಲ್ಲವೇ ಅಲ್ಲ. ಸಮಾಜವನ್ನು ಶಾಶ್ವತವಾಗಿ ಆಳಲು ಬೇಕಾದ ಕಾಲಾಳುಗಳನ್ನು ಎಲ್ಲೆಡೆ ಸೃಷ್ಟಿಸಿದ್ದಾರೆ. ಬ್ರಾಹ್ಮಣ ಹಿನ್ನೆಲೆಯಿಂದ ಬಂದಿರುವ ನನಗೂ ಬ್ರಾಹ್ಮಣ್ಯದ ನೆಲೆಗಳನ್ನು ಸದಾ ಮೀರುವ ಛಲ ಬೇಕು ಎಂದರು.

ಸಿಕಂದರ್ ಮೀರಾನಾಯಕ್, ಎಂ.ಎಂ. ಹೆಬ್ಬಾಳ, ಡಿ.ಎಂ. ಬಡಿಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ.ರಾಮಚಂದ್ರ ಹಂಸನೂರ ಕಾರ್ಯಕ್ರಮ ಸಂಯೋಜಿಸಿದರು.

Get real time updates directly on you device, subscribe now.

Leave A Reply

Your email address will not be published.

error: Content is protected !!