​ಮಹಿಳಾ ಮೀಸಲಾತಿ ಹೆಸರಿನಲ್ಲಿ ಬಿಜೆಪಿ ರಾಜಕೀಯ – ಬಯ್ಯಾಪೂರ

Get real time updates directly on you device, subscribe now.

 

 

ಮಹಿಳಾ ಮೀಸಲಾತಿ‌ ಬಿಲ್ ಇಂದೇ ಜಾರಿಗೆ ಬಿಜೆಪಿ ಸಿದ್ದವಿಲ್ಲ ಜ್ಯೋತಿ ಆಕ್ರೋಶ

​ಕುಷ್ಟಗಿ: ಮಹಿಳಾ ಮೀಸಲಾತಿ ಕಾನೂನು ಮತ್ತು ಕ್ಷೇತ್ರ ಪುನರ್ ವಿಂಗಡಣೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರದ ಎನ್‌ಡಿಎ ಸರ್ಕಾರವು ಕೇವಲ ರಾಜಕೀಯ ಲಾಭಕ್ಕಾಗಿ ಈ ವಿಷಯವನ್ನು ಬಳಸಿಕೊಳ್ಳುತ್ತಿದೆ ಹೊರತು ಅವರಿಗೆ ಮಹಿಳಾ ಮೀಸಲು ಬೇಕೇ ಇಲ್ಲ ಎಂದು ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಶ್ರೀಮತಿ ಜ್ಯೋತಿ ಎಂ. ಗೊಂಡಬಾಳ ಅವರು ಆಕ್ರೋಶ ವ್ಯಕ್ತಪಡಿಸಿದರು.

ಅವರು ಕುಷ್ಟಗಿ ಪಟ್ಟಣದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಮತ್ತು ಕುಷ್ಟಗಿ ಬ್ಲಾಕ್‌ ಮಹಿಳಾ ಕಾಂಗ್ರೆಸ್ ಆಶ್ರಯದಲ್ಲಿ ಮಹಿಳಾ ಬಿಲ್ ಜಾರಿಗೆ ಆಗ್ರಹಿಸಿ ರೇಣುಕಾಚಾರ್ಯ ಮಂಗಲ ಭವನದಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿ ಮಾತನಾಡಿದರು.

ಪ್ರತಿಭಟನೆ ನೇತೃತ್ವವಹಿಸಿ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಕಾನೂನನ್ನು ಜಾರಿಗೆ ತರುವ ಪ್ರಾಮಾಣಿಕ ಉದ್ದೇಶ ಸರ್ಕಾರಕ್ಕಿದ್ದರೆ, ಅದಕ್ಕೆ ಕ್ಷೇತ್ರ ಪುನರ್ ವಿಂಗಡಣೆಯ ವಿಷಯವನ್ನು ಜೋಡಿಸುವ ಅಗತ್ಯವಿರಲಿಲ್ಲ. ಶೇ. 33ರಷ್ಟು ಮೀಸಲಾತಿ ನೀಡುವ ಮಾತು ಕೇವಲ ರಾಜಕೀಯ ಗಿಮಿಕ್ ಆಗಿದ್ದು, 2023ರಲ್ಲಿ ಇಂಡಿಯಾ ಮೈತ್ರಿಕೂಟದ ಎಲ್ಲಾ ಪಕ್ಷಗಳು ಮಹಿಳಾ ಮೀಸಲಾತಿಗೆ ಸಂಪೂರ್ಣ ಒಪ್ಪಿಗೆ ಸೂಚಿಸಿದ್ದರೂ, ಅದನ್ನು ಜಾರಿಗೆ ತರದೆ ಕ್ಷೇತ್ರ ಪುನರ್ ವಿಂಗಡಣೆಯನ್ನು ಮುಂದಿಟ್ಟಿರುವುದು ಬಿಜೆಪಿಯ ರಾಜಕೀಯ ಷಡ್ಯಂತ್ರವಾಗಿದೆ ಎಂದು ದೂರಿದರು.

​ಅವೈಜ್ಞಾನಿಕ ವಿಂಗಡಣೆ: 2011ರ ಜನಗಣತಿ ಅಂಕಿ-ಅಂಶಗಳ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಮಾಡುವುದು ಅವೈಜ್ಞಾನಿಕವಾಗಿದ್ದು, ಹೊಸ ಜನಗಣತಿ ಮಾಹಿತಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಬೇಕು, ಈಗಾಗಲೇ 15 ವರ್ಷ ಮುಗಿದಿದ್ದು, ಹೊಸ ಜನಗಣತಿ ಬಂದ ನಂತರವೇ ಪುನರ್ ವಿಂಗಡಣೆ ಪ್ರಕ್ರಿಯೆ ಆಗಬೇಕು ಎಂದರು.

​ದಕ್ಷಿಣ ಭಾರತಕ್ಕೆ ಅನ್ಯಾಯ: ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ವಿಂಗಡಣೆಯಾದರೆ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಸ್ಥಾನಗಳು ದೊರೆತು, ದಕ್ಷಿಣ ಭಾರತದ ರಾಜ್ಯಗಳಿಗೆ ಭಾರಿ ಅನ್ಯಾಯವಾಗಲಿದೆ. ಇದರ ಪರಿಣಾಮವಾಗಿ ಒಬಿಸಿ ಹಾಗೂ ಎಸ್ಸಿ, ಎಸ್ಟಿ ಮಹಿಳೆಯರು ಕೂಡ ಅವಕಾಶದಿಂದ ವಂಚಿತರಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷವು ಯಾವತ್ತಿಗೂ ಮಹಿಳೆಯರು, ರೈತರು ಹಾಗೂ ಬಡವರ ಪರವಾಗಿದ್ದು, ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಬಿಜೆಪಿ ಮೊದಲಿನಿಂದಲೂ ಮಹಿಳಾ ವಿರೋಧಿ ಧೋರಣೆ ತಳೆದಿದೆ.

​ಬಿಜೆಪಿ ಪಕ್ಷಕ್ಕೆ ಮಹಿಳೆಯರ ಮೇಲೆ ನಿಜವಾದ ಕಾಳಜಿ ಇದ್ದರೆ ಮೊದಲು ಕ್ಷೇತ್ರ ವಿಂಗಡಣೆ ಎಂಬ ಶರತ್ತನ್ನು ಬಿಟ್ಟು ತಕ್ಷಣವೇ ಮಹಿಳಾ ಮೀಸಲಾತಿ ಕಾನೂನನ್ನು ಜಾರಿಗೆ ತರಲಿ, ಬೇಕಾದರೆ 50% ಮೀಸಲು ಕೊಡಲಿ ಎಂದು ಅವರು ಸವಾಲು ಹಾಕಿದರು.

ಮಾಜಿ ಸಚಿವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಮರೇಗೌಡ ಬಯ್ಯಾಪೂರ ಮಾತನಾಡಿ, ಅಂದಿನ ಪ್ರಧಾನ ಮಂತ್ರಿಗಳಾದ ದಿ. ರಾಜೀವ್ ಗಾಂಧಿ ಅವರು 73-74 ನೇ ತಿದ್ದುಪಡಿಗೆ ಮುನ್ನುಡಿ ಬರೆಯುವ ಮೂಲಕ ಎಲ್ಲಾ ಸ್ಥಳಿಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡಿದ್ದರಿಂದ ಇಂದು ಸ್ಥಳಿಯ ಸಂಸ್ಥೆಗಳಲ್ಲಿ ಶೇ. 50% ಮಹಿಳಾ ಮೀಸಲು ಇದೆ. ಮನುವಾದಿ ಬಿಜೆಪಿ ಮಹಿಳೆಯರನ್ನು ಸದಾ ಹತ್ತಿಡುತ್ತಾ, ನಾಟಕ ಮಾಡುತ್ತಾ ಬಂದಿದೆ. ಕಾಂಗ್ರೆಸ್ 16 ವರ್ಷ ಮಹಿಳಾ ಪ್ರಧಾನಿಯನ್ನು ಕೊಟ್ಟಿದೆ. ಇಂದೇ ಮೋದಿ ಅವರು ರಾಜಿನಾಮೆ ಕೊಟ್ಟು ತಮ್ಮ ಸ್ಥಾನಕ್ಕೆ ಮಹಿಳೆಯನ್ನು ಕೂಡಿಸಲಿ, ಆರ್.ಎಸ್.ಎಸ್. ಅಂತಹ ಸಲಹೆ‌ ಕೊಡಲಿ. ದೇಶದ ಮಹಿಳೆಯರು ಇಂದು ಜಾಗೃತರಾಗಿದ್ದಾರೆ, ಕಾಂಗ್ರೆಸ್ ಸದಾ ಮಹಿಳೆಯರ ಪರ ಎಂದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಮಾಲತಿ ನಾಯಕ, ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಆಯೇಷಾ ಖಾನಂ, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಯಶೋದ‌ ಮರಡಿ, ಬ್ಲಾಕ್ ಅಧ್ಯಕ್ಷೆ ನಿರ್ಮಲಾ‌ ಕರಡಿ, ದಿಶಾ ಸಮಿತಿ ಸದಸ್ಯ ದೊಡ್ಡಬಸನಗೌಡ ಬಯ್ಯಾಪೂರ, ಮುಖಂಡರುಗಳಾದ ರೇಣುಕಾ‌ ಪುರದ, ಶೋಭಾ ಪುರ್ತಗೇರಿ, ಉಮಾ ಪಾಟೀಲ್, ಅನ್ನಪೂರ್ಣಮ್ಮ ಹನುಮಸಾಗರ, ಬ್ಲಾಕ್ ಅಧ್ಯಕ್ಷ ಚಂದ್ರಶೇಖರ ನಾಲತ್ವಾಡ, ಮೊಯನುದ್ದಿನ್‌ ಮುಲ್ಲಾ, ಗ್ಯಾರಂಟಿ ಅಧ್ಯಕ್ಷ ಫಾರೂಖ್ ಡಲಾಯತ್, ಈರಣ್ಣ ಬದಾಮಿ, ಉಮೇಶ ಮಂಗಳೂರು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!