ದಾವಣಗೆರೆ ಚುನಾವಣೆ: ಅಲ್ಪಸಂಖ್ಯಾತರ ಮೇಲಿನ ಕಾಂಗ್ರೆಸಿಗರ ರಾಜಕೀಯ ದಾಳಿ ಖಂಡನೆ

0

Get real time updates directly on you device, subscribe now.

ಕೊಪ್ಪಳ : ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ ರಾಜಕಾರಣ: ಅಲ್ಪಸಂಖ್ಯಾತರ ಮೇಲಿನ ಕಾಂಗ್ರೆಸಿಗರ ರಾಜಕೀಯ ದಾಳಿ ಖಂಡಿಸುತ್ತೇವೆ ಎಂದು ಎದ್ದೇಳು ಕರ್ನಾಟಕ ಹಾಗೂ ವಿವಿಧ ಸಂಘಟನೆಗಳು ಶುಕ್ರವಾರ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿವೆ.

ಸಭೆಯಲ್ಲಿ ಮಾತನಾಡಿದ ನಾಯಕರು ಕಾಂಗ್ರೆಸ್‌ ಹಿಡಿದಿರುವ ಅಧಃಪತನ ಹಾದಿಯ ಪ್ರತ್ಯಕ್ಷ ದರ್ಶನಕ್ಕೆ ಹಿಡಿದ ಕನ್ನಡಿಯಾಗಿದೆ.ಆತ್ಮಾವಲೋಕನಕ್ಕೆ ಸಿದ್ಧವಿಲ್ಲದ ಕಾಂಗ್ರೆಸ್ಸಿನಿಂದ ಅಲ್ಪಸಂಖ್ಯಾತರ ಭಾವನೆಗಳ ಮೇಲೆ ರಾಜಕೀಯ ಹಲ್ಲೆ ನಡೆದಿದೆ. ಜಾತ್ಯಾತೀತ ಮೌಲ್ಯಗಳಿಗೆ ತಿಲಾಂಜಲಿ–ಜಾತಿ ಮತ್ತು ಕುಟುಂಬ ರಾಜಕಾರಣಕ್ಕೆ ರತ್ನಗಂಬಳಿಯ ಸದಾ ಸ್ವಾಗತ.ದಾವಣಗೆರೆ ಉಪ ಚುನಾವಣೆಗೆ ಟಿಕೆಟ್‌ ನೀಡುವ ವಿಚಾರದಲ್ಲಿ ಕಾಂಗ್ರೆಸ್‌ ನಡೆದುಕೊಂಡ ರೀತಿ ಜಿಗುಪ್ಸೆ ಮೂಡಿಸಿದರೆ, ಅದು ಈಗ ತನ್ನದೇ ಪಕ್ಷದ ಅಲ್ಪಸಂಖ್ಯಾತ ಮುಖಂಡರ ಮೇಲೆ ತೆಗೆದುಕೊಳ್ಳುತ್ತಿರುವ ಸೇಡಿನ ಕ್ರಮಗಳು ಆಕ್ರೋಶ ಹುಟ್ಟಿಸುತ್ತಿವೆ. ಬಹಳ ನಿರಾಶೆ ಮೂಡಿಸಿದೆ. ಕರ್ನಾಟಕದ ನಾಗರೀಕ ಸಮಾಜದ ಪರವಾಗಿ KPCC ಹಾಗೂ AICC ನಡವಳಿಕೆ ಸುಧಾರಿಸಿ ಕೊಳ್ಳಬೇಕು. ಮಾತಿನಲ್ಲಿ ಜಾತ್ಯಾತೀತತೆ ಇದ್ದರೂ ಅದರ ನಡುವಳಿಕೆ ಕರ್ನಾಟಕ ಜಾತ್ಯಾತೀತ ಶಕ್ತಿಗಳನ್ನು ದುರ್ಬಲಗೊಳಿಸುವ ರೀತಿಯಲ್ಲಿ ಇದೆ ಎಂಬುದನ್ನು ನೇರ ಮಾತುಗಳಲ್ಲಿ ಹೇಳಲೇಬೇಕಾದ ಸಂದರ್ಭ ಎದುರಾಗಿದೆ.ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯ ಅತ್ಯಂತ ಹೆಚ್ಚಿನ ಜನಸಂಖ್ಯಾ ಬಾಹುಳ್ಯವಿದ್ದರೂ ಲಿಂಗಾಯತ ಸಮುದಾಯದ ಶಾಮನೂರು ಶಿವಶಂಕರಪ್ಪ ಅವರೇ ಕಳೆದ 30 ವರ್ಷಗಳಿಂದ ಕಾಂಗ್ರೆಸ್‌ ಶಾಸಕರಾಗಿ ಮುಂದುವರೆಯುತ್ತಾ ಬಂದಿದ್ದಾರೆ. ಅವರ ನಿಧನದ ನಂತರ ಈ ಕ್ಷೇತ್ರವನ್ನು ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತದೆ ಎಂಬ ಭರವಸೆಯನ್ನು ಕಾಂಗ್ರೆಸ್‌ ನಾಯಕತ್ವ ನೀಡಿತ್ತು, ಕೇವಲ ಮುಸ್ಲಿಂ ಮಾತ್ರವಲ್ಲ ಕುಟುಂಬ ರಾಜಕಾರಣವನ್ನು ವಿರೋಧಿಸುವ ಎಲ್ಲ ಜಾತ್ಯಾತೀತ ಶಕ್ತಿಗಳ ಬಯಕೆಯೂ ಆಗಿತ್ತು. ಆದರೆ ಕುಟುಂಬ, ಜಾತಿ ಹಾಗೂ ಹಣದ ಬಲದ ಮುಂದೆ ಕಾಂಗ್ರೆಸ್ಸಿನ ಹೈಕಮಾಂಡ್‌ ಹಾಗೂ ರಾಜ್ಯ ನಾಯಕತ್ವ ಮಂಡಿಯೂರಿದ ಬಗೆ ಎಲ್ಲರಿಗೂ ಜಿಗುಪ್ಸೆ ಮೂಡಿಸಿತ್ತು. ಕಾಂಗ್ರೆಸ್ಸಿನ ಹಸಿಹಸಿ ಅವಕಾಶವಾದಿ ನಿಲುವಿನಿಂದ ಬೇಸತ್ತು ಕೇವಲ ಮುಸ್ಲಿಂ ಸಮುದಾಯದ ಮುಖಂಡರು ಮಾತ್ರವಲ್ಲ ಯಾವ ಜಾತ್ಯಾತೀತ ಶಕ್ತಿಗಳು ಸಹ ಇಲ್ಲಿನ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲಿಲ್ಲ. ಎದ್ದೇಳು ಕರ್ನಾಟಕದ ವಿಚಾರಕ್ಕೆ ಬರುವುದಾದರೆ 2023 ರ ಚುನಾವಣೆಯಲ್ಲಿ ಕರ್ನಾಟಕದ ನಾಗರೀಕ ಸಂಘಟನೆಗಳ ಸಂಯುಕ್ತ ಶಕ್ತಿಯಾಗಿ ಎದ್ದೇಳು ಕರ್ನಾಟಕ ತನ್ನನ್ನು ಸಂಪೂರ್ಣವಾಗಿ ಸುರಿದುಕೊಂಡು ಕೆಲಸ ಮಾಡಿ ಸಂವಿಧಾನ ವಿರೋಧಿ ಬಿಜೆಪಿಯನ್ನು ಸೋಲಿಸುವುದರಲ್ಲಿ ಮಹತ್ವದ ಪಾತ್ರ ನಿರ್ವಹಿಸಿತ್ತು. 2025ರಲ್ಲಿ ನಡೆದ ಉಪ ಚುನಾವಣೆಗಳಲ್ಲೂ ಶಿಗ್ಗಾಂವಿ ಹಾಗೂ ಸಂಡೂರು ಕ್ಷೇತ್ರದಲ್ಲಿ ತನ್ನದೇ ರೀತಿಯಲ್ಲಿ ಸಕಾರಾತ್ಮಕ ಕೊಡುಗೆ ನೀಡಿತ್ತು. ಆದರೆ ಕಾಂಗ್ರೆಸ್‌ ನಡೆದುಕೊಂಡ ರೀತಿಯಿಂದಾಗಿ ನಾವು ಈ ಬಾರಿಯ ಉಪ ಚುನಾವಣೆಯಲ್ಲಿ ಮಧ್ಯ ಪ್ರವೇಶಿಸದೇ ಇರಲು ತೀರ್ಮಾನಿಸಿದೆವು. ಇದು ಎದ್ದೇಳು ಕರ್ನಾಟಕದ ಕತೆ ಮಾತ್ರವಲ್ಲ ಬಹುಪಾಲು ಜನಪರ ಸಂಘಟನೆಗಳ ನಿಲುವು ಸಹ ಇದೇ ಆಗಿತ್ತು.ದಾವಣಗೆರೆಯ ಜಾತ್ಯಾತೀತ ಶಕ್ತಿಗಳ ಮುಂದೆ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮುಂದೆ ದೊಡ್ಡ ಇಕ್ಕಟ್ಟು ಸೃಷ್ಟಿಯಾಗಿತ್ತು. ಕಾಂಗ್ರೆಸ್ಸಿನ ನಿಲುವನ್ನಂತೂ ಯಾರೂ ಒಪ್ಪುವ ಮಾತೇ ಇರಲಿಲ್ಲ. ಆದರೆ ಕೆಲವರು ಕಾಂಗ್ರೆಸ್ಸನ್ನು ಬೈದುಕೊಂಡು ಕಾಂಗ್ರೆಸ್ಸಿಗೇ ಮತ ಹಾಕಿದರು. ಕೆಲವರು ಕೋಮುವಾದಿಗಳನ್ನು ಮುಂದೆ ನೋಡಿಕೊಳ್ಳೋಣ, ಈ ಬಾರಿ ಕಾಂಗ್ರೆಸ್ಸಿಗೆ ಪಾಠ ಕಲಿಸಲೇಬೇಕು ಎಂದು ಇತರೆ ಅಬ್ಯಾರ್ಥಿಗಳಿಗೆ ಓಟು ಹಾಕಿದರು. ಕೆಲವರು ಓಟು ಮಾಡಲಿಕ್ಕೇ ಹೋಗಲಿಲ್ಲ. ಫಲಿತಾಂಶ ಏನೇ ಬರಬಹುದು, ಅಲ್ಪ ಅಂತರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಹಣ ಬಲದ ಮೇಲೆ ಗೆದ್ದರೂ ಗೆಲ್ಲಬಹುದು, ಆದರೆ ಕಾಂಗ್ರೆಸ್‌ ನೈತಿಕವಾಗಿ ಸೋತಾಗಿದೆ.ಕಾಂಗ್ರೆಸ್ಸಿನ ಈ ನೈತಿಕ ಸೋಲಿನ ಹೊಣೆ ಹೊರಬೇಕಾಗಿರುವುದು ಯಾರು ? ನಿಸ್ಸಂಶಯವಾಗಿ ಕಾಂಗ್ರೆಸ್ಸಿನ ಹೈಕಮಾಂಡ್‌, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು. ಕಾಂಗ್ರೆಸ್ಸಿನ ಈ ಸ್ಥಿತಿಗೆ ಕಾರಣವಾಗಿರುವ ಈ ನಾಯಕರು ಆತ್ಮಾವಲೋಕನ ಮಾಡಿಕೊಳ್ಳುವ ಬದಲು ನೊಂದಿದ್ದ ದಾವಣಗೆರೆಯ ಅಲ್ಪಸಂಖ್ಯಾತ ಸಮುದಾಯದ ಭಾವನೆಗಳಿಗೆ ಸ್ಪಂದಿಸಿದ ಅಲ್ಪಸಂಖ್ಯಾತ ಸಮುದಾಯದ ಆದರೆ ಜಾತ್ಯಾತೀತ ನಿಲುವಿಗೆ ಮತ್ತು ಕಾಂಗ್ರೆಸ್ಸಿಗೆ ಬದ್ಧವಾಗಿದ್ದ ನಾಯಕರ ತಲೆದಂಡಕ್ಕೆ ಹೊರಟಿರುವುದು ಅಕ್ಷಮ್ಯ ಅಪರಾಧ. ಇದನ್ನು ಎದ್ದೇಳು ಕರ್ನಾಟಕ ತೀವ್ರ ರೀತಿಯಲ್ಲಿ ಖಂಡಿಸುತ್ತದೆ.ದಾವಣಗೆರೆಯ ಈ ಬಲಾಢ್ಯ ಕುಟುಂಬದವರು ಜಾತಿ ಕಾರಣಕ್ಕೆ ಬಿಜೆಪಿಯ ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಬಹಿರಂಗವಾಗಿ ಕರೆ ಕೊಟ್ಟಾಗಲೂ ಯಾವುದೇ ಕ್ರಮ ತೆಗೆದುಕೊಳ್ಳದೆ ತೆಪ್ಪಗಿದ್ದ ಕಾಂಗ್ರೆಸ್‌ ಮುಖಂಡರು ಈಗ ಇಲ್ಲದ ಕಾರಣ ಹುಡುಕಿ ಅಲ್ಪಸಂಖ್ಯಾತ ಮುಖಂಡರನ್ನು ದಮನಿಸಲು, ಅಲ್ಪಸಂಖ್ಯಾತ ಮುಖಂಡರ ನಡುವೆ ಒಡಕು ತರಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡಿನ ವಿಚಾರವಾಗಿದೆ.
ಕಾಂಗ್ರೆಸ್‌ ಇದೇ ಧೋರಣೆಯನ್ನು ಮುಂದುವರಿಸಿದರೆ ಮುಂದಿನ ಚುನಾವಣೆಯಲ್ಲಿ ಎದ್ದೇಳು ಕರ್ನಾಟಕವನ್ನೂ ಒಳಗೊಂಡಂತೆ ಎಲ್ಲಾ ಜನಪರ ಶಕ್ತಿಗಳ ಬೆಂಬಲ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಬಯಸುತ್ತೇವೆ.ದಾವಣಗೆರೆ ವಿದ್ಯಮಾನ ಬರಲಿರುವ 2028 ರ ಚುನಾವಣೆಗೆ ಮುನ್ನದ ಎಚ್ಚರಿಕೆ ಗಂಟೆಯಾಗಿದೆ. ಅಲ್ಪಸಂಖ್ಯಾತರನ್ನು, ದಲಿತರನ್ನು, ಜಾತ್ಯಾತೀತ ಜನತೆಯನ್ನು, ಪ್ರಗತಿಪರ ಶಕ್ತಿಯನ್ನು ಟೇಕನ್‌ ಫಾರ್‌ ಗ್ರ್ಯಾಂಟೆಡ್‌ ಮಾಡಿಕೊಳ್ಳಬೇಡಿ ಎಂದು ದಾವಣಗೆರೆ ಹೇಳುತ್ತಿದೆ. ಕಾಂಗ್ರೆಸ್‌ ನಾಯಕತ್ವ ಈಗಾದರೂ ತನ್ನ ತಪ್ಪನ್ನು ನೋಡಿಕೊಂಡು ಆಗಿರುವ ಅನಾಹುತವನ್ನು ಸರಿಪಡಿಸುವ ದಿಕ್ಕಿನಲ್ಲಿ ಹೆಜ್ಜೆ ಇಡಬೇಕು.ಇದು ಕಾಂಗ್ರೆಸಿನ ಮುಸ್ಲಿಮ್ ವಿರೋಧಿ ಧೋರಣೆಗಳನ್ನು ಕೊಪ್ಪಳದ ಪ್ರಗತಿಪರ ಸಂಘಟನೆಗಳು ಖಂಡಿಸುತ್ತವೆ.ಮುಂಬರುವ ದಿನಗಳಲ್ಲಾದರೂ ಕಾಂಗ್ರೆಸ್ ತನ್ನ ನಿಲುವುಗಳನ್ನು ಬದಲಾಯಿಸಿಕೊಂಡು ಪ್ರಗತಿಯತ್ತ ಆಲೋಚಿಸುವುದು ಒಳಿತು. ಕಾಂಗ್ರೆಸಿನ ಮುಸ್ಲಿಮ್ ವಿರೋಧಿ ಧೋರಣೆಯು ಕೇವಲ ದಾವಣಗೆರೆಗೆ ಅಷ್ಟೇ ಸೀಮಿತವಾಗಿ ಉಳಿದಿಲ್ಲ. ಕೊಪ್ಪಳವು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಇದೇ ವಾತಾವರಣ ಇದೆ ಅನ್ನುವುದನ್ನು ಕಾಂಗ್ರೆಸ್ ಹೈಕಮಾಂಡ್ ಬೇಗ ಅರಿತಷ್ಟು ಒಳ್ಳೆಯದು ಎಂದು ಎದ್ದೇಳು ಕರ್ನಾಟಕ ಹಾಗೂ ಕೊಪ್ಪಳದ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಸವರಾಜ್ ಶೀಲವಂತರ್. ಕರ್ನಾಟಕ ಮುಸ್ಲಿಮ್ ಜಮಾಅತ್ ಮಾಜಿ ಜಿಲ್ಲಾ ಸಂಚಾಲಕ ಮೌಲಾನಾ ಮೊಹಮ್ಮದ್ ಅಬುಲ್ ಹಸನ್ ಖಾಝಿ.ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ. ಗಫಾರ್. ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣವರ್. ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಅಧ್ಯಕ್ಷ ಆದಿಲ್ ಪಟೇಲ್.ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಸಂಚಾಲಕ ತುಕಾರಾಮ್ ಪಾತ್ರೋಟಿ.ದಲಿತ ಸಂಘಟನೆಯ ಮುಖಂಡ ಗವಿಸಿದ್ದಪ್ಪ ಹಲಗಿ ಕುಣಿಕೆರಿ. ಪೇಂಟರ್ ಕಾರ್ಮಿಕರ ಸಂಘದ ಅಧ್ಯಕ್ಷ ರಜಾಕ್ ಪೇಂಟರ್. ಖಜಾಂಚಿ ಆಸಿಫ್ ಕಿಲ್ಲೆದಾರ್.ಇಂತ್ಯಾಝ್ ಎಮ್. ಪಲ್ಟನ್.ಕೊಳಚೆ ನಿರ್ಮೂಲನಾ ವೇದಿಕೆ ಜಿಲ್ಲಾ ಸಂಚಾಲಕ ಮಖಬೂಲ್ ರಾಯಚೂರು.ಶಿವಪ್ಪ ಹಡಪದ್.ಭಾಗ್ಯನಗರದ ಕಟ್ಟಡ ಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷ ದೇವಪ್ಪ ಎಸ್.ಕಟ್ಟಿಮನಿ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!