ಡಾ.ಸಿದ್ಧನಗೌಡ ಪಾಟೀಲರಿಗೆ ಕೆಯುಡಬ್ಲೂಜೆ ಅಭಿನಂದನೆ
ಚಳವಳಿ ಬದ್ಧತೆಯನ್ನು ಹೆಚ್ಚಿಸಿದ ಪಾಟೀಲರು: ಕೇಸರಿ ಶ್ಲಾಘನೆ

ಬೆಂಗಳೂರು:
ರಾಜ್ಯ ಸರ್ಕಾರ ಕೊಡ ಮಾಡುವ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿರುವ, ಕೆಯುಡಬ್ಲೂಜೆ ಹಿರಿಯ ಸದಸ್ಯರು, ಹೊಸತು ಪತ್ರಿಕೆ ಸಂಪಾದಕರಾದ ಕಾಮ್ರೆಡ್ ಡಾ.ಸಿದ್ಧನಗೌಡ ಪಾಟೀಲ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ) ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕೆಯುಡಬ್ಲ್ಯೂಜೆ ವತಿಯಿಂದ ಆತ್ಮೀಯವಾಗಿ ಅಭಿನಂದಿಸಲಾಯಿತು.
ಕಳೆದ ನಾಲ್ಕು ದಶಕಗಳಿಂದಲೂ ಸಾರ್ವಜನಿಕ ಜೀವನದಲ್ಲಿರುವ ಡಾ.ಸಿದ್ಧನಗೌಡ ಪಾಟೀಲರು, ಒಬ್ಬ ಪತ್ರಕರ್ತರಾಗಿ, ಸಾಹಿತಿಯಾಗಿ, ಜನಪರ ಚಳವಳಿಗಾರರಾಗಿ ಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ಸದಾ ಕಾಪಿಟ್ಟುಕೊಂಡು ಬಂದಿರುವುದನ್ನು ಸಭೆಯಲ್ಲಿ ಶ್ಲಾಸಲಾಯಿತು.
ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಸಿನಿಮಾ ನಿರ್ದೇಶಕರಾದ ಕೇಸರಿ ಹರವು ಮಾತನಾಡಿ, ಬದ್ಧತೆಗೆ ಮತ್ತೊಂದು ಹೆಸರೇ ಸಿದ್ದನಗೌಡ ಪಾಟೀಲರು. ವಿದ್ಯಾರ್ಥಿ ಚಳವಳಿಯಿಂದ ಹಿಡಿದು, ಬಾಗೂರು ನವಿಲೆ ಸುರಂಗ ಸಂತ್ರಸ್ತರ ಚಳವಳಿ ಸೇರಿದಂತೆ ನೂರಾರು ಚಳವಳಿಯನ್ನು ಸಂಘಟಿಸಿದವರು, ಈಗಲೂ ಅಷ್ಟೇ ಸರಳವಾಗಿರುವುದು ವಿಶೇಷ. ಸಿದ್ದನಗೌಡ ಅವರಿಗೆ ಪ್ರಶಸ್ತಿ ನೀಡಿದ್ದರಿಂದ ಈ ಪ್ರಶಸ್ತಿ ಮೌಲ್ಯವೇ ಹೆಚ್ಚಾಗಿದೆ ಎಂದು ಹೇಳಿದರು.
ಹಿರಿಯ ಪತ್ರಕರ್ತರಾದ ಜಿ.ಎನ್.ಮೋಹನ್, ಮಾನವೀಯ ತುಡಿತ ಹೊಂದಿರುವ ಸಿದ್ದನಗೌಡರು, ಎಂದೂ ಸ್ವಾರ್ಥಿಯಾಗಲಿಲ್ಲ. ಜನಮುಖಿಯಾಗಿ ನಿಸ್ವಾರ್ಥದಿಂದಲೇ ಚಳವಳಿಗಾರರಾಗಿ ಉಳಿದವರು ಎಂದು ಶ್ಲಾಸಿದರು.
ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು. ಕೆಯುಡಬ್ಲ್ಯೂಜೆ ಉಪಾಧ್ಯಕ್ಷರಾದ ಎಚ್.ಬಿ.ಮದನಗೌಡ, ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಖಜಾಂಚಿ ವಾಸುದೇವ ಹೊಳ್ಳ, ಬೆಂಗಳೂರು ಘಟಕದ ಅಧ್ಯಕ್ಷ ಸೋಮಶೇಖರ ಗಾಂಧಿ ಮತ್ತು ಪದಾಧಿಕಾರಿಗಳು ಸೇರಿದಂತೆ ಗಣ್ಯರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಬೀದರ್ ಸಮ್ಮೇಳನಕ್ಕೆ ಕಾರಣಾಂತರದಿಂದ ಬರಲು ಸಾಧ್ಯವಾಗದಿದ್ದ ಈ ಸಂಜೆ ಪತ್ರಿಕೆಯ ಹಿರಿಯ ಪತ್ರಕರ್ತರಾದ ಜನಾರ್ಧನಚಾರಿ, ಹೊಸದಿಗಂತ ಪತ್ರಿಕೆಯ ನವ್ಯಜ್ಯೋತಿ ಅವರಿಗೆ ಕೆಯುಡಬ್ಲೂೃಜೆ ಪ್ರಶಸ್ತಿ ನೀಡಿ ಗೌರವಿಸಲಾಯಿತು