ಶಿಕ್ಷಕ ಶರಣಪ್ಪ ಹಕ್ಕಂಡಿಯವರ ಶಿಕ್ಷಣ ಕ್ಷೇತ್ರದ ಸಾಧನೆಗೆ ಕಿಷ್ಕಿಂಧಸಿರಿ ಪ್ರಶಸ್ತಿ

ಮಕ್ಕಳ ಮನಗೆದ್ದ ಶಿಕ್ಷಕ, ಸಮಾಜದ ಮಾದರಿ:
ಹಿರೇಬೆಣಕಲ್ ಮೋರೇರ ಗುಡ್ಡದ ಸಾಂಸ್ಕೃತಿಕ ಸಂಭ್ರಮ-೨೦೨೬:
sharanappa-hakkandi-teacher-morer-utsava-gangavati
ಕೇವಲ ಎರಡು ಕೊಠಡಿಗಳಿಂದ ಆರಂಭವಾದ ಸರಕಾರಿ ಶಾಲೆಯೊಂದು ಇಂದು ಮಕ್ಕಳ ಕಲಿಕೆಗೆ ಮಾದರಿಯಾಗಿ ಬೆಳೆದಿದ್ದರೆ, ಅದರ ಹಿಂದೆ ಅವಿರತ ಶ್ರಮ ವಹಿಸಿದ ಶಿಕ್ಷಕರೊಬ್ಬರ ಕಠಿಣ ಪರಿಶ್ರಮವಿದೆ. ಗಂಗಾವತಿ ನಗರದ ಹೃದಯ ಭಾಗದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ವಿರುಪಾಪುರದ ಶಿಕ್ಷಕ ಶರಣಪ್ಪ ಹಕ್ಕಂಡಿ ಅವರ ಸೇವೆಯಿಂದಾಗಿ ಇಂದು ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಮೆರುಗು ಪಡೆದುಕೊಂಡಿದೆ.
ಶಾಲೆಯ ಬೆಳವಣಿಗೆಗೆ ನಿರಂತರ ಶ್ರಮ:
೧೯೯೮ರಲ್ಲಿ ಕೇವಲ ಬೆರಳೆಣಿಕೆಯಷ್ಟು ಮಕ್ಕಳು ಮತ್ತು ಒಂದೇ ಒಂದು ಕೊಠಡಿಯನ್ನು ಹೊಂದಿದ್ದ ಈ ಶಾಲೆಗೆ ೨೦೦೩ರಲ್ಲಿ ವರ್ಗಾವಣೆಯಾಗಿ ಬಂದ ಹಕ್ಕಂಡಿ, ಸ್ಥಳೀಯ ಸಮಸ್ಯೆಗಳನ್ನು ಅರಿತು ಶಿಕ್ಷಣದ ಗುಣಾತ್ಮಕ ಬದಲಾವಣೆಗೆ ಶ್ರಮಿಸಿದರು. ಇವರ ಪ್ರಯತ್ನದಿಂದಾಗಿ ಇಂದು ಶಾಲೆಯಲ್ಲಿ ಎರಡು ಹೆಚ್ಚುವರಿ ಕೊಠಡಿಗಳು ನಿರ್ಮಾಣಗೊಂಡು, ಮಕ್ಕಳಿಗೆ ತರಗತಿವಾರು ಬೋಧನೆಗೆ ಅನುಕೂಲವಾಗಿದೆ. ಅಲ್ಲದೆ, ಕಲ್ಲುಬಂಡೆಗಳಿAದ ತುಂಬಿದ್ದ ಮೈದಾನವನ್ನು ಸ್ಥಳೀಯ ಜನಪ್ರತಿನಿಧಿಗಳು, ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಜೆ.ಸಿ.ಬಿ. ಮೂಲಕ ಸಮತಟ್ಟು ಮಾಡಿಸಿ, ವಿದ್ಯಾರ್ಥಿಗಳಿಗೆ ಕ್ರೀಡೆಗಳ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ.
ಅಕ್ಷರ ದಾಸೋಹದಿಂದ ಮಕ್ಕಳ ಹಸಿವು ನೀಗಿಸಿದ ಶಿಕ್ಷಕ:
೨೦೦೩ರಲ್ಲಿ ಈ ಶಾಲೆಗೆ ಆಗಮಿಸಿದಾಗ ಅಕ್ಷರ ದಾಸೋಹ ಯೋಜನೆ ಅನುಷ್ಠಾನದಲ್ಲಿರಲಿಲ್ಲ. ೨೦೦೪ರಲ್ಲಿ ಅಡುಗೆದಾರರ ನೇಮಕಾತಿ ಪ್ರಕ್ರಿಯೆ ನಡೆಸಿ, ಮಕ್ಕಳ ಜ್ಞಾನ ದಾಹದ ಜೊತೆಗೆ ಹಸಿವನ್ನೂ ನೀಗಿಸಿದ ಹೆಗ್ಗಳಿಕೆ ಹಕ್ಕಂಡಿ ಅವರದು.
ಕರೋನಾ ಸಂದರ್ಭದಲ್ಲೂ ಕಲಿಕೆಗೆ ಆದ್ಯತೆ:
ಕರೋನಾ ಎರಡನೇ ಅಲೆಯಿಂದಾಗಿ ಶಾಲೆಗಳು ಮುಚ್ಚಿದ್ದಾಗ್ಯೂ ವಿದ್ಯಾರ್ಥಿಗಳು ಓದು-ಬರಹದಿಂದ ವಂಚಿತರಾಗಬಾರದೆAಬ ಉದ್ದೇಶದಿಂದ ಅಂದಿನ ಸ್ಥಳೀಯ ಶಾಸಕರಾಗಿದ್ದ ಪರಣ್ಣ ಮುನವಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಗೌಡ ಪಾಟೀಲ್ ಹಾಗೂ ಶಿಕ್ಷಣ ಸಮನ್ವಯಾಧಿಕಾರಿ ವೀರಭದ್ರಪ್ಪ ಗೊಂಡಬಾಳ ಅವರ ಮಾರ್ಗದರ್ಶನದಲ್ಲಿ ಶಾಲೆಯ ಪ್ರತಿ ಮಗುವಿಗೆ ರೋಲಿಂಗ್ ಬ್ಲಾಕ್ ಬೋರ್ಡ್, ನೋಟ್ ಪುಸ್ತಕ ಸೇರಿದಂತೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ಮಕ್ಕಳು ಮನೆಯಲ್ಲೇ ಲೆಕ್ಕಗಳನ್ನು ಬಿಡಿಸಿ, ಪದಗಳನ್ನು ಬರೆದು ಶಿಕ್ಷಕರ ವಾಟ್ಸಾಪ್ ಗುಂಪಿಗೆ ಹಂಚಿಕೊAಡು ಮಕ್ಕಳ ಕಲಿಕೆಗೆ ಶ್ರಮಿಸಿದ್ದರು
ಸಂಘಟನಾ ಚತುರ ಹಾಗೂ ಮಾನವೀಯತೆಯ ಮೂರ್ತಿ:
ಕಳೆದ ಒಂದೂವರೆ ದಶಕದಿಂದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದಲ್ಲಿ ಖಜಾಂಚಿ, ನಿರ್ದೇಶಕ ಹಾಗೂ ನೌಕರ ಸಂಘದ ನಾಮನಿರ್ದೇಶಿತ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಹಕ್ಕಂಡಿ, ಶಿಕ್ಷಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಾರೆ. ಶಿಕ್ಷಕರು ಅಕಾಲಿಕ ಮರಣ ಹೊಂದಿದಾಗ ಅವರ ಕುಟುಂಬದೊAದಿಗೆ ನಿಂತು ಅಂತ್ಯಕ್ರಿಯೆಯಲ್ಲೂ ಪಾಲ್ಗೊಳ್ಳುವ ಮೂಲಕ ಮಾನವೀಯತೆಯ ಸೆಲೆಯಾಗಿದ್ದಾರೆ. ಕರೋನಾ ಸಂದರ್ಭದಲ್ಲಿ ತೊಂದರೆಗೀಡಾದ ಶಿಕ್ಷಕರ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿ, ಸಾಂತ್ವನ ತುಂಬಿದ್ದಾರೆ.
ಪ್ರಶಸ್ತಿಗಳ ಗರಿ:
ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಶಿಕ್ಷಕರ ಸಮ್ಮೇಳನದಲ್ಲಿ ‘ಸೇವಾ ಸ್ಪೂರ್ತಿ’ ಪ್ರಶಸ್ತಿಯನ್ನೂ ಅವರು ಸ್ವೀಕರಿಸಿದ್ದಾರೆ. ಇದೇ ವೇಳೆ, ಶಾಲೆಗೆ ಸುಮಾರು ಎರಡು ಕೋಟಿ ರೂಪಾಯಿ ಮೌಲ್ಯದ ಒಂದು ಎಕರೆ ಆಸ್ತಿಯನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆ ಹೆಮ್ಮೆಯ ಸಂಗತಿ:
ಇವರ ಮಾರ್ಗದರ್ಶನದಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಶಿಕ್ಷಕರು, ಲೋಕಾಯುಕ್ತ ಇಲಾಖೆಯಲ್ಲಿ ವಿಜ್ಞಾನಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ, ವಿದ್ಯಾರ್ಥಿನಿ ಪ್ರತಿಮಾ ‘ಕಲರ್ಸ್ ಕನ್ನಡ’ ವಾಹಿನಿಯ ‘ಮುದ್ದು ಸೊಸೆ’ ಧಾರಾವಾಹಿಯಲ್ಲಿ ಮುಖ್ಯ ನಾಯಕಿಯಾಗಿ ಅಭಿನಯಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆಯಾಗಿದೆ ,
ಪ್ರಸ್ತುತ ಗಂಗಾವತಿಯ ವಿರುಪಾಪುರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಭಾರಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೂ ಸರಕಾರಿ ನಾಕರರ ಸಂಘದ ಗಂಗಾವತಿ ತಾಲೂಕ ಘಟಕದ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿದ್ದಾರೆ.
೨೯ವರ್ಷ ಸೇವೆಯಲ್ಲಿ ನಿರತರಾದ ಶರಣಪ್ಪರವರು ಮೂಲತ ಕೊಪ್ಪಳ ಜಿಲ್ಲೆಯ ಅಳವಂಡಿಯವರು ಇಂತಹ ಸಾಧಕರನ್ನು ಗುರುತಿಸಲು ಸೂಚನೆಗಳ ಮೇರೆಗೆ
ಇವರ ಸಾಧನೆ ಸೇವೆಯನ್ನು ಪರಿಗಣಿಸಿ ಹಿರೇಬೆಣಕಲ್ ಮೋರೇರ ಗುಡ್ಡದ ಸಾಂಸ್ಕೃತಿಕ ಸಂಭ್ರಮ-೨೦೨೬ ಕಾರ್ಯಕ್ರಮದಲ್ಲಿ ಶರಣಪ್ಪ ಹಕ್ಕಂಡಿ ಅವರಿಗೆ ರಾಜ್ಯಮಟ್ಟದ ‘ಕಿಷ್ಕಿಂಧಸಿರಿ’ ಪ್ರಶಸ್ತಿಯನ್ನು ದಿ.೧೭ ಮೇ ೨೦೨೬ರಂದು ಸನ್ಮಾನಿಸಿ ಗೌರವಿಸಿ ಪ್ರದಾನ ಮಾಡಲಾಗುವುದು ಎಂದು ಪರಿಸರ ಸೇವಾ ಟ್ರಸ್ಟ್ ಅಧ್ಯಕ್ಷ ಮಂಜುನಾಥ ಗುಡ್ಲಾನೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.