ನಮ್ಮ ಬೆಳೆಗಳ ಭದ್ರತೆಗೆ ಸೂಕ್ತ ಮಾರುಕಟ್ಟೆ ಬೇಕು: ನಗರದ ಮಹದೇವಪ್ಪ

Kalaburagi Divisional Level Agricultural Conference and Seminar on Pomegranate Growers

Get real time updates directly on you device, subscribe now.

ಕಲಬುರಗಿ ವಿಭಾಗ ಮಟ್ಟದ ಕೃಷಿ ಸಮಾವೇಶ ಹಾಗೂ ದಾಳಿಂಬೆ ಬೆಳೆಗಾರರ ಕುರಿತು ವಿಚಾರ ಸಂಕಿರಣ 

Kalaburagi Divisional Level Agricultural Conference and Seminar on Pomegranate Growers

ಕೊಪ್ಪಳ  ): ರೈತರು ಬೆಳೆದ ಬೆಳೆಗಳಿಗೆ ಭದ್ರತೆ ಬೇಕಾದರೆ ಸೂಕ್ತ ಮಾರುಕಟ್ಟೆ ಬೇಕು ಹಾಗಾಗಿ ಯಾವ ಯಾವ ಬೆಳೆಗಳಿಗೆ ಎಲ್ಲಿ ಸೂಕ್ತ ಮಾರುಕಟ್ಟೆ ಇದೆ ಎನ್ನುವುದನ್ನು ರೈತರು ತಿಳಿದುಕೊಳ್ಳಬೇಕೆಂದು ಬೆಂಗಳೂರಿನ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷರಾದ ನಗರದ ಮಹದೇವಪ್ಪ ಹೇಳಿದರು.
ಅವರು ಸೋಮವಾರ ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಬೆಂಗಳೂರು, ಜಿಲ್ಲಾ ಕೃಷಿಕ ಸಮಾಜ, ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಲಬುರಗಿ ವಿಭಾಗ ಮಟ್ಟದ ಕೃಷಿ ಸಮಾವೇಶ ಹಾಗೂ ದಾಳಿಂಬೆ ಬೆಳೆಗಾರರ ಕುರಿತು  ವಿಚಾರ ಸಂಕಿರಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಈ ಭಾಗದಲ್ಲಿ ಹೆಚ್ಚಾಗಿ ಭತ್ತ ಬೆಳೆಯುತ್ತಾರೆ ಎನ್ನುವುದು ಗೊತ್ತಿತ್ತು. ಆದರೆ ಇಲ್ಲಿ ಮಾವು, ದಾಳಿಂಬೆ ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗಳನ್ನು ಬೆಳೆದು ರಾಷ್ಟ್ರಮಟ್ಟದಲ್ಲಿ ಗುರುತಿಸುವ ಕೆಲಸ ಮಾಡಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಒಂದೊಂದು ಬೆಳೆಯನ್ನು ಪರಿಚರಿಸಿ ಅದಕ್ಕೆ ಪ್ರೋತ್ಸಾಹ ನೀಡುವ ಕೆಲಸ ಮಾಡಬೇಕೆಂದು ನಾನು ಹೋದ ಕಡೆಯಲ್ಲ ಅಧಿಕಾರಿಗಳಿಗೆ ಹೇಳುತ್ತೇನೆ. ಕುವೆಂಪು ಅವರ ಕವಿ ವಾಣಿಯಂತೆ ರಾಜ್ಯಗಳು ಅಳಿಯಲಿ, ರಾಜ್ಯಗಳು ಉಳಿಯಲಿ ರೈತ ಬಿತ್ತುವ ಕಾಯಕ ಬಿಡುವುದಿಲ್ಲ ಎನ್ನುವಂತೆ ರೈತ ಯಾವಾಗಲೂ ತನ್ನ ಕೆಲಸವನ್ನು  ಮಾಡುತ್ತಲೇ ಇರುತ್ತಾನೆ. ರೈತರು  ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ಜವಾಬ್ದಾರಿ ಕೇಂದ್ರ ಸರಕಾರದ್ದಾಗಿದೆ. ಹಿಂದೆ ಮನಮೋಹನ್ ಸಿಂಗ್ ಸರಕಾರ ರೈತರ 74 ಸಾವಿರ ಕೋಟಿ ಸಾಲ ಮನ್ನಾ ಮಾಡಿತ್ತು. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ಉಚಿತವಾಗಿ ವಿದ್ಯುತ್ ಕೊಟ್ಟರು. ಅದರಿಂದ ಇಂದಿಗೂ ಹಳ್ಳಿಯಲ್ಲಿ ರೈತರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಈಗ ನಮ್ಮ ರೈತರಿಗೆ ಸೋಲಾರ್ ಪಂಪ್‌ಸೆಟ್ ಅಳವಡಿಸುವ ಕೆಲಸ ಆಗಬೇಕು. ನಮ್ಮದು ಹೆಚ್ಚು ಮಳೆಯಾಶ್ರಿತ ರಾಜ್ಯವಾಗಿದೆ. ರಾಜ್ಯ ಸರಕಾರ ಈ ಬಜೆಟ್‌ನಲ್ಲಿ 65 ಸಾವಿರ ಕೋಟಿ ರೂ. ಹಣವನ್ನು ಕೃಷಿಗೆ ನೀಡಿದೆ ಎಂದರು.
ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ಮಾತನಾಡಿ, 1950-60 ರ ದಶಕದಿಂದ ಕೃಷಿಕ ಸಮಾಜ ಸರಕಾರ ಮತ್ತು ರೈತರ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಿದೆ. ಕೃಷಿ, ತೋಟಗಾರಿಕೆ ಇಲಾಖೆ, ಪಶು ಇಲಾಖೆ ಸೇರಿದಂತೆ ಕೃಷಿ ವಿಶ್ವವಿದ್ಯಾಲಯಗಳ ಜೊತೆಗೆ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡುತ್ತಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಕುಕನೂರು, ಕುಷ್ಟಗಿ ಸೇರಿದಂತೆ ಇತರೆ ಕಡೆ ಒಣ ಭೂಮಿ ಇದೆ. 1 ಲಕ್ಷ ಎಕರೆ ಟ್ರೀ ಕವರ್ ಮಾಡಲು ಈ ಹಿಂದೆಯೇ ಐದು ವರ್ಷಗಳ ಯೋಜನೆ ಹಾಕಲಾಗಿದೆ. ಪ್ರಧಾನ ಮಂತ್ರಿ ಧನ-ಧಾನ್ಯ ಯೋಜನೆ ಅಡಿ ಬರುವ ಜಿಲ್ಲೆಗಳಲ್ಲಿ ನಮ್ಮ ಜಿಲ್ಲೆಯು ಒಂದು ಎಂದು ಹೇಳಿದರು.
ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಬೆಂಗಳೂರಿನ ಮಾಜಿ ಆಡಳಿತ ಅಧ್ಯಕ್ಷರು ಹಾಗೂ ಜಿಲ್ಲಾ ಕೃಷಿಕ ಸಮಾಜ ಕಲಬುರಗಿಯ ಅಧ್ಯಕ್ಷರಾದ ಡಾ. ಸಿದ್ರಾಮಪ್ಪ ಬಿ. ಪಾಟೀಲ ದಂಗಾಪೂರ ಅವರು ಮಾತನಾಡಿ, ಕೃಷಿ ನಮ್ಮ ದೇಶದ ಸಂಸ್ಕೃತಿ. ನಾವು ಕೃಷಿ ಜೊತೆಗೆ ಇತರೆ ಉಪ ಕಸುಬುಗಳನ್ನು ಮಾಡಬೇಕು. ನಮ್ಮಲ್ಲಿ ಹಲವಾರು ರೈತರು ಕರಿಬೇವು, ನುಗ್ಗೆ ಕಾಯಿ ಬೆಳೆದು ಕೋಟ್ಯಾಧೀಶರಾಗಿದ್ದಾರೆ ಎಂದು ಹೇಳಿದರು.
ಕೊಪ್ಪಳ ಕೃಷಿಕ ಸಮಾಜದ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನಗಳ ಅಳವಡಿಕೆ, ನೀರಿನ ಸಮರ್ಪಕ ಬಳಕೆ ಹಾಗೂ ಮಾರುಕಟ್ಟೆ ಅರಿವು ಇಂದಿನ ಕಾಲಘಟ್ಟದಲ್ಲಿ ಬಹಳ ಮುಖ್ಯವಾಗಿದೆ. ವಿಶೇಷವಾಗಿ ದಾಳಿಂಬೆ ಬೆಳೆಗಾರರು ವೈಜ್ಞಾನಿಕ ವಿಧಾನಗಳನ್ನು ಅನುಸರಿಸುವುದರಿಂದ ಉತ್ತಮ ಉತ್ಪಾದನೆ ಮತ್ತು ಹೆಚ್ಚಿನ ಆದಾಯವನ್ನು ಗಳಿಸಬಹುದು ಎಂದು ಹೇಳಿದರು.
ಸೊಲ್ಲಾಪೂರದ ರಾಷ್ಟ್ರೀಯ ದಾಳಿಂಬೆ ಸಂಶೋಧನಾ ಕೇಂದ್ರದ ತಜ್ಞರಾದ ಡಾ.ಮಂಜುನಾಥ ಎನ್. ಅವರು ಮಾತನಾಡಿ, ರೈತರು ತಮ್ಮ ಜಮೀನಿನಲ್ಲಿ ದಾಳಿಂಬೆ ಬೆಳೆಯುವ ಮುಂಚೆ ಸೂಕ್ತ ಮಣ್ಣು ಆಯ್ಕೆ ಮಾಡಬೇಕು. ಬೀಜ ಸಂಸ್ಕರಣೆ, ರೋಗ ಹಾಗೂ ಕೀಟ ನಿಯಂತ್ರಣ, ಹನಿ ನೀರಾವರಿ (ಡ್ರಿಪ್ ಇರಿಗೇಷನ್) ಬಳಕೆ, ಪೋಷಕಾಂಶಗಳ ಸಮತೋಲನದ ಬಗ್ಗೆ ಸಂಪೂರ್ಣ ತಿಳಿದಿರಬೇಕು, ದಾಳಿಂಬೆ ಬೆಳೆಗಳಲ್ಲಿ ಕಂಡುಬರುವ ಬ್ಯಾಕ್ಟೀರಿಯಲ್ ಬ್ಲೈಟ್‍ ಹಾಗೂ ಇತರೆ ರೋಗಗಳ ನಿಯಂತ್ರಣ ಕ್ರಮಗಳ ಕುರಿತು ಪ್ರಾಯೋಗಿಕ ಸಲಹೆಗಳನ್ನು ನೀಡಿದರು.
ಅಪೆಡಾ ಮಾರುಕಟ್ಟೆ ತಜ್ಞೆ ಡಾ. ಪೂಜಾ ಡಿ.ಕೆ ಅವರು ಮಾತನಾಡಿ, ಅಪೆಡಾದ ನಿಗದಿತ ಉತ್ಪನ್ನಗಳ ಕುರಿತು ಮತ್ತು ರೈತರು ಬೆಳೆದ ಬೆಳೆಯನ್ನು ಹೊರ ದೇಶಗಳಿಗೆ ಯಾವ ರೀತಿ ರಫ್ತು ಮಾಡಬಹುದು ಮತ್ತು ಬೇರೆ ಬೇರೆ ದೇಶಗಳಿಗೆ ರಫ್ತು ಮಾಡುವ ನೋಂದಣಿ ಪ್ರಕ್ರಿಯೆಯ ಕುರಿತು ರೈತರಿಗೆ ತಿಳಿಸಿದರು.
ಬೆಂಗಳೂರಿನ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಮಾಜಿ ಅಧ್ಯಕ್ಷರಾದ ವಡಗೂರು ಡಿ.ಎಲ್.ನಾಗರಾಜ, ಬಾಳಪ್ಪ ಬೆಳಕೋಡ, ತಿಮ್ಮಣ್ಣ ಚೌಡಿ, ಮಂಜುನಾಥಗೌಡ ಎಸ್.ಆರ್ ಅವರು ಮಾತನಾಡಿದರು.
ಕೊಪ್ಪಳ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಜಿ.ಡಿ. ಕೃಷ್ಣಮೂರ್ತಿ ಹಾಗೂ ಕೊಪ್ಪಳ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ಕೃಷ್ಣ ಉಕ್ಕುಂದ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಬೀದರ್‌ನ ಕೃಷಿಕ ಸಮಾಜದ ರಾಜ್ಯ ನಿರ್ದೇಶಕ ವಿಶ್ವನಾಥ ಪಾಟೀಲ್, ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರರು ಹಾಗೂ ಬಳ್ಳಾರಿಯ ಕೃಷಿಕ ಸಮಾಜದ ಅಧ್ಯಕ್ಷ ಪಿ.ಗಾದೆಪ್ಪ ಓಬಣ್ಣ, ರಾಯಚೂರು ಕೃಷಿಕ ಸಮಾಜದ ರಾಜ್ಯ ನಿರ್ದೇಶಕ ವಿಜಯಕುಮಾರ ಎಸ್. ಪಾಟೀಲ್, ವಿಜಯನಗರ ಕೃಷಿಕ ಸಮಾಜದ ಅಧ್ಯಕ್ಷ ಕೆ.ರೇವಣಸಿದ್ದಪ್ಪ ಹನುಮಂತಪ್ಪ, ವಿಜಯನಗರ ಕೃಷಿಕ ಸಮಾಜದ ರಾಜ್ಯ ನಿರ್ದೇಶಕ ಎಂ.ಬಸವರಾಜ ಬಸಪ್ಪ, ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಯಂಕಣ್ಣ ಯರಾಸಿ, ಅಳವಂಡಿಯ ಕಾಯಕ ಫಾರ್ಮ್ ಮುಖ್ಯಸ್ಥ ವಿಶ್ವನಾಥ ಗದ್ದಿಕೇರಿ, ದಾಳಿಂಬೆ ಬೆಳೆ ಪರಿಣಿತರಾದ ರಾಮು ಚುಕ್ಕನಕಲ್ಲ, ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಮಾಜಿ ಅಧ್ಯಕ್ಷರಾದ  ಬಿ.ಕೆ.ಮಂಜುನಾಥಗೌಡ, ಸಿ.ಪಾಪಣ್ಣ, ಸೇರಿದಂತೆ ವಿವಿಧ ಜಿಲ್ಲೆಯ ರೈತ ಮುಖಂಡರು ಮತ್ತು ಕೊಪ್ಪಳ ಜಿಲ್ಲಾ ಕೃಷಿಕ ಸಮಾಜದ ಆಡಳಿತ ಮಂಡಳಿಯ ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಕುಕನೂರು, ಗಂಗಾವತಿ, ಕನಕಗಿರಿ, ಕಾರಟಗಿಯ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಕೃಷಿ ಇಲಾಖೆ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಸೇರಿದಂತೆ ರೈತರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!