
ಕುಷ್ಟಗಿ : ಪಟ್ಠಣದ ಬೀದಿ ಬೀದಿಗಳಲ್ಲಿ ಚಿಣ್ಣರು, ಮಹಿಳೆಯರು, ಯುವಕರು ಕೈಯಲ್ಲಿ ಬಣ್ಣ ಹಿಡಿದು ಪರಸ್ಪರ ಎರಚಿ ಸಂಭ್ರಮಿಸುತಿದ್ದರೆ ಇತ್ತ ಕುಷ್ಟಗಿ ಗೆಳೆಯರ ಬಳಗ ಕೇಂದ್ರೀಯ ಬಸ್ ನಿಲ್ದಾಣ ಪಕ್ಕದ ಖಾಲಿ ಜಾಗೆಯಲ್ಲಿ ಆಯೋಜಿಸಿದ್ದ ಓಕುಳಿ ಕಾರ್ಯಕ್ರಮದಲ್ಲಿ ಚಿಣ್ಣರು, ಯುವಕರು, ಜನಪ್ರತಿನಿಧಿಗಳು ಹೀಗೆ ಸರ್ವರೂ ಭಾಗವಹಿಸಿ ಬಣ್ಣದಲ್ಲಿ ಮಿಂದು ವಿಭಿನ್ನವಾಗಿ ಬಣ್ಣದ ಓಕುಳಿ ಆಚರಿಸುತ್ತಿರುವುದು ವಿಶೇಷವಾಗಿ ಗಮನ ಸೆಳೆಯಿತು.
ಈ ವೊಂದು ಹಬ್ಬದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದ ಶಾಸಕ ದೊಡ್ಡನಗೌಡ ಎಚ್. ಪಾಟೀಲ್ ಅವರು ಮಾತನಾಡಿ, ಹೋಳಿ ಹುಣ್ಣಿಮೆಯ ಓಕುಳಿ ಹಬ್ಬವನ್ನು ಸನಾತನ ಕಾಲದಿಂದಲೂ ನಮ್ಮ ಹಿರಿಯರು ಆಚರಿಸಿಕೊಂಡು ಬಂದಿರುವ ಸಂಪ್ರದಾಯವಾಗಿದೆ. ಹಿರಿಯರು ಕಿರಿಯರು ಎಲ್ಲರೂ ಒಗ್ಗೂಡಿ ಓಕುಳಿ ಆಡುತಿದ್ದರು. ಇತ್ತೀಚೆಗೆ ರಾಸಾಯನಿಕ ಬಣ್ಣ, ಮೊಟ್ಟೆ ಬಳಕೆಯಿಂದಾಗಿ ಬಣ್ಢದಾಟದಿಂದ ಹಿರಿಯರು ಹಿಂದೆ ಸರಿದರು. ಆದರೆ, ಈ ಸನಾತನ ಸಂಪ್ರದಾಯವನ್ನು ನಮ್ಮ ಗೆಳೆಯರ ಬಳಗ ಎಲ್ಲರೊಂದಿಗೆ ಒಗ್ಗೂಡಿ ಈ ಬಾರಿ ವಿಶೇಷವಾಗಿ ಕಾರ್ಯಕ್ರಮ ಆಯೋಜಿಸುವ ಮೂಲಕ ಹಬ್ಬ ಆಚರಣೆಗೆ ಮುಂದಾಗಿರುವುದು ಸಂತಸತಂದಿದೆ. ಮುಂದಿನ ವರ್ಷ ಈ ಹಬ್ಬದ ಆಚರಣೆಯನ್ನು ಇನ್ನೂ ಅತ್ಯಂತ ವಿಜೃಂಭಣೆಯಿಂದ ಆಚರಿಸೋಣ ಎಂದು ಹೇಳಿದರು.
ಮುಖಂಡ ದೊಡ್ಡಬಸನಗೌಡ ಪಾಟೀಲ ಬಯ್ಯಾಪೂರ ಮಾತನಾಡಿ, ನಮ್ಮ ಗೆಳೆಯರ ಬಳಗ ಈ ಹೋಳಿ ಹಬ್ಬವನ್ನು ವಿಶೇಷವಾಗಿ ಆಚರಿಸುವ ಮುಖಾಂತರ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಇದೇರೀತಿ ಎಲ್ಲಾ ಹಬ್ಬಗಳನ್ನು ಎಲ್ಲಾ ಸಮುದಾಯದವರೊಂದಿಗೆ ಒಟ್ಟಿಗೆ ಕೊಂಡೊಯ್ಯುವ ಗುಣ ನಮ್ಮ ಕುಷ್ಟಗಿಯವರಲ್ಲಿದೆ. ನಾವು ಎಲ್ಲವನ್ನೂ ಮರೆತು ಪಕ್ಷಾತೀತವಾಗಿ ಎಲ್ಲರೊಂದಿಗೆ ಒಗ್ಗೂಡಿ ಹಬ್ಬಗಳನ್ನು ಆಚರಿಸೋಣ ಎಂದು ಶುಭ ಕೋರಿದರು.
ಜಿ.ಪಂ. ಮಾಜಿ ಸದಸ್ಯ ಕೆ. ಮಹೇಶ, ಮುಖಂಡರಾದ ಉಮೇಶ ಮಂಗಳೂರು, ದುಬೈ ಉದ್ಯಮಿ ಗುಣಶೀಲ ಶೆಟ್ಟಿ ಮಾತನಾಡಿ ಹಬ್ಬದ ಶುಭಕಾಮನೆ ತಿಳಿಸಿದರು. ಬಸವರಾಜ ಎನ್. ಪಾಟೀಲ ನವಲಹಳ್ಳಿ ಕಲ್ಲೇಶ ತಾಳದ, ನಾಗರಾಜ ಮೇಲಿನಮನಿ, ಶಶಿಧರ ಕವಲಿ ಇತರರು ಇದ್ದರು.
ನಂತರ ನಡೆದ ಡಿಜೆ ಸಂಗೀತಕ್ಕೆ ಎಲ್ಲರೂ ಯುವಕರೊಂದಿಗೆ ಹೆಜ್ಜೆ ಹಾಕುತ್ತ ಪರಸ್ಪರ ಬಣ್ಣ ಎರಚಾಡಿ ಸಂಭ್ರಮಿಸಿದರೆ ಇತ್ತ ಪೊಲೀಸರು ಭದ್ರತೆ ಜೊತೆಗೆ ಚಿಣ್ಣರ ಜೊತೆಗೆ ಓಕುಳಿ ಆಚರಿಸಿದ್ದು ಗಮನ ಸೆಳೆಯಿತು.
ಬಣ್ಣದ ಓಕುಳಿ ಆಚರಣೆಯನ್ನು ಬಸವೇಶ್ವರ ವೃತ್ತದಲ್ಲಿ ಆಚರಿಸಬೇಕು ಎಂಬ ಉದ್ಧೇಶ ಹೊಂದಿದ್ದ ಗೆಳೆಯರ ಬಳಗಕ್ಕೆ ಆರಂಭವಾಗುವ ನ್ಯಾಯಾಲಯ ಕಲಾಪಗಳಗೆ ಶಬ್ಧಮಾಲಿನ್ಯ ಉಂಟಾಗುತ್ತದೆ ಎಂಬ ಕಾರಣಕ್ಕೆ ಪರವಾನಗಿ ಸಿಗದ ಹಿನ್ನೆಲೆ ಪೊಲೀಸ್ ಇಲಾಖೆ ಅಧಿಕಾರಿಗಳು ಬೇರೆಡೆ ಸ್ಥಳ ಹುಡುಕಿ ಹಬ್ಬ ಆಚರಣೆ ಮಾಡುವಂತೆ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಕೇಂದ್ರೀಯ ಬಸ್ ನಿಲ್ದಾಣ ಪಕ್ಕದ ಖಾಲಿ ಜಾಗೆಯಲ್ಲಿ ಗೆಳೆಯರ ಬಳಗ ರಂಗಿನ ಓಕುಳಿ ಕಾರ್ಯಕ್ರಮ ನಡೆಸಿತು.
Comments are closed.