ಭಾವನೆಗೆಳಿಗೆ ಧಕ್ಕೆ ಬಾರದಂತೆ ಹಬ್ಬ ಆಚರಿಸಿ : ಸಿಪಿಐ ಹಿರೇಗೌಡರ

Get real time updates directly on you device, subscribe now.

ಹೋಳಿ, ಯುಗಾದಿ, ರಂಜಾನ್ ಹಬ್ಬ ಆಚರಣೆ ಶಾಂತಿ ಸಭೆ ಸಿಪಿಐ ವಿಶ್ವನಾಥ ಹಿರೇಗೌಡರ

Holi, Ugadi, Ramzan festival celebrations, peace meeting, CPI Vishwanath Hiregoudar




ಕುಷ್ಟಗಿ : ಹೋಳಿ ಹಬ್ಬ, ಯುಗಾದಿ ಹಬ್ಬ ಜೊತೆಗೆ ರಂಜಾನ್ ಹಬ್ಬ ಆಚರಣೆ ಒಟ್ಟಿಗೆ ಬಂದಿರುವದರಿಂದ ಓಕುಳಿ ಆಡುವ ಸಂದರ್ಭದಲ್ಲಿ ಯಾರ ಭಾವನೆಗು ಮತ್ತು ಗೌರವಕ್ಕೆ ಧಕ್ಕೆ ಬಾರದಹಾಗೆ ಒಬ್ಬರಿಗೊಬ್ಬರು ಸಹಕರಿಸಿಕೊಂಡು ಹಬ್ಬ ಆಚರಿಸಬೇಕು ಎಂದು ಸಿಪಿಐ ವಿಶ್ವನಾಥ ಹಿರೇಗೌಡರ ಹೇಳಿದರು.

ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಹೋಳಿ, ದಸರಾ, ರಂಜಾನ್ ಹಬ್ಬ ಆಚರಣೆಯ ಸಾರ್ವಜನಿಕ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಟ್ಟಣದಲ್ಲಿ ಮತ್ತು ಕೆಲ ಹಳ್ಳಿಗಳಲ್ಲಿ ನಡೆಸುವ ಕಾಮದಹನ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಉಸ್ತುವಾರಿ ವಹಿಸಿಕೊಂಡವರು ಪಾಲಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯುತ್ ತಂತಿಗಳು ಇತರೆ ಅನಾಹುತ ಸಂಭವಿಸುವ ಸ್ಥಳಗಳಲ್ಲಿ ಕಾಮದಹನ ನಡೆಸಬಾರದು. ತಮ್ಮ ಇಲಾಖೆ ಜೊತೆಗೆ ಸಂಬಂಧಿಸಿದ ಇಲಾಖೆಯ ಗಮನಕ್ಕೆ ತರಬೇಕು. ಪಟ್ಟಣದಲ್ಲಿ ಹೋಳಿ ಆಚರಣೆ ವೇಳೆ ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳಬೇಕು. ಸಂಭ್ರಮಾಚರಣೆಗೆ ತಮ್ಮ ಇಲಾಖೆ ಸಹಕರಿಸುತ್ತದೆ. ಯಾರಾದರೂ ಅತಿರೇಕ ಮಾಡಿದರೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಆಚರಿಸುವ ಯುಗಾದಿ ಹಬ್ಬದ ಓಕುಳಿ ಮತ್ತು ಹೋಳಿ ಹಬ್ಬದ ಓಕುಳಿ ನೆಪದಲ್ಲಿ ಯುವಕರು ರಸ್ತೆಗೆ ನಿಂತು ವಾಹನಗಳ ತಡೆದು ಹಣ ವಸೂಲಿ ಮಾಡುವವರ ಮೇಲೆ ಜೊತೆಗೆ ಮದ್ಯ ಸೇವಿಸಿ ಗಲಾಟೆ ಮಾಡುವವರ ಮೇಲೆ ಕ್ರಮ ಕೈಗೋಳ್ಳಲಾಗುವದು. ಈ ನಿಟ್ಟಿನಲ್ಲಿ ಗ್ರಾಮ ಸಭೆ ನಡೆಸಿ ಎಚ್ಚರಿಕೆ ನೀಡಲಾಗುವದು ಎಂದರು.

ಪಟ್ಟಣದ ಬಸವೇಶ್ವರ ವೃತ್ತದಿಂದ ವಾಲ್ಮೀಕಿ ವೃತ್ತದ ಎರಡೂ ಡಿವೈಡರ್ ರಸ್ತೆಯಲ್ಲಿ ಡಿಜೆ ಸಂಗೀತದೊಂದಿಗೆ ಹೋಳಿ ಹಬ್ಬದ ಓಕುಳಿ ಆಚರಣೆಗೆ ಪರವಾನಗಿ ಕೇಳಲಾಗಿದೆ. ಆದರೆ, ಆ ಪ್ರದೇಶದಲ್ಲಿ ನ್ಯಾಯಾಲಯವಿದ್ದು, ಕಲಾಪಗಳು ನಡೆಯುವುದರಿಂದ ತೊಂದರೆಯುಂಟಾಗಲಿದೆ. ಈ ಕುರಿತು ನ್ಯಾಯಾಧೀಶರು ನ್ಯಾಯಾಲಯದ ಕಾರ್ಯ ಕಲಾಪ ಆರಂಭಕ್ಕೂ ಮುನ್ನ ಮತ್ತು ಮುಕ್ತಾಯದ ನಂತರದ ಅವಧಿಯಲ್ಲಿ ಹೋಳಿ ಆಚರಿಸಲು ತಿಳಿಸಿದ್ದಾರೆ. ಹಾಗಾಗಿ ಬೇರೆಡೆ ಸ್ಥಳ ಆಯ್ಕೆ ಮಾಡಿಕೊಂಡು ಹೋಳಿ ಆಚರಿಸಿದರೆ ಸೂಕ್ತ ಈ ನಿಟ್ಟಿನಲ್ಲಿ ಆಯೋಜಕರು ನಿರ್ಧಾರ ತೆಗೆದುಕೊಂಡು ತಿಳಿಸಬೇಕು ಎಂದರು.

ಪಿಎಸ್ಐ ಹನುಮಂತಪ್ಪ ತಳವಾರ ಮಾತನಾಡಿ, ಪಟ್ಟಣದಲ್ಲಿ ಕಳೆದ ವರ್ಷದ ಮಾಹಿತಿ ಪ್ರಕಾರ ದೊಡ್ಡವರು ಹಾಗೂ ಯುವಕರು ಸೇರಿ ಒಟ್ಟು ಹದಿನೆಂಟು ಕಡೆ ಕಾಮದಹನ ಮಾಡಲಾಗಿದೆ. ಈ ಬಾರಿಯು ಮಾಡುವ ಕುರಿತು ಪರವಾನಗಿ ಕೇಳಲಾಗಿದೆ. ಈ ಹಿಂದೆ ಅಹಿತಕರ ಘಟನೆಗಳು ನಡೆದಿದ್ದರೆ ಹೇಳಬೇಕು. ಕಾಮದಹನ ಸ್ಥಳದಲ್ಲಿ ವಿದ್ಯುತ್ ತಂತಿಗಳು ಇರುವುದನ್ನು ಜೆಸ್ಕಾಂ ಇಲಾಖೆ ಪರಿಶೀಲಿಸಬೇಕು. ಕಾಮದಹನ ಸಮಿತಿಯವರು ಸಂಬಂಧಿಸಿದ ಪುರಸಭೆ, ಜೆಸ್ಕಾಂ, ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಪೊಲೀಸ್ ಭದ್ರತೆ ಒದಗಿಸಲಾಗುತ್ತದೆ. ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಳೇಬಜಾರ ಕಾಮದಹನ ಕಮಿಟಿ ಪ್ರಮುಖ ಬಸವರಾಜ ಬುಡಕುಂಟಿ ಮಾತನಾಡಿ, ಹಬ್ಬ ಆಚರಣೆ ಉಸ್ತುವಾರಿ ವಹಿಸಿಕೊಂಡಿರುವ ಸಮಿತಿಯವರು ಓಕುಳಿ ಮೆರವಣಿಗೆಯನ್ನು ಹಳೇ ಊರಿನ ಬೀದಿಗಳಲ್ಲಿ ನಡೆಸಿದರೆ ಮಹಿಳೆಯರು, ಮಕ್ಕಳು ಓಕುಳಿಯ ಸಂಭ್ರಮವನ್ನು ಸವಿಯುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಆದೇ ರೀತಿ ಪ್ರಮುಖರಾದ ಕಲ್ಲೇಶ ತಾಳದ, ಶಶಿಧರ ಕವಲಿ ಇತರರು ಮಾತನಾಡಿ ಕಳೆದ ಎರಡ್ಮೂರು ವರ್ಷಗಳಿಂದ ಓಕುಳಿ ಹಬ್ಬವನ್ನು ಆಚರಿಸಿಲ್ಲ. ಈ ಬಾರಿ ಅದ್ಧೂರಿಯಾಗಿ ಆಚರಿಸಲಿದ್ದೇವೆ‌. ಆಚರಣೆಯಲ್ಲಿ ಹಾಲಿ ಮತ್ತು ಮಾಜಿ ಶಾಸಕರುಗಳು ಪಾಲ್ಗೊಳ್ಳಲಿದ್ದಾರೆ. ಪೊಲೀಸ್ ಇಲಾಖೆ ಅಧಿಕಾರಿಗಳು ಸಹಕರಿಸುವ ಜೊತೆಗೆ ಓಕುಳಿ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.

ಗ್ರಾಮೀಣ ಭಾಗದ ಕೆಲವರು ಅಕ್ರಮ ಮದ್ಯ ಮಾರಾಟ ತಡೆಗೆ ಕ್ಲಮಕೈಗೊಳ್ಳಲು ಮನವಿ ಮಾಡಿದರು, ಕೆಲವರು ಯುಗಾದಿ ಓಕುಳಿ ಸಂದರ್ಭದಲ್ಲಿ ಹಿರಿಯರ ಮಾತು ಕೇಳದ ಯುವಕರು ಪುಂಡಾಟ ಮೆರೆಯುತಾತಾರೆ. ಹಬ್ಬ ಆಚರಣೆಗೂ ಮುನ್ನ ಪೊಲೀಸ್ ಇಲಾಖೆ ಗ್ರಾಮ ಸಭೆ ನಡೆಸಿ ಶಾಂತಿಯುತ ಆಚರಿಸುವಂತೆ ಸೂಚನೆ ನೀಡಬೇಕು ಎಂದು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು.

ಸಭೆಯಲ್ಲಿ ಕಾಮದಹನ ಸಮಿತಿಗಳ ಪ್ರಮುಖರು, ಮುಖಂಡರು, ರಾಜಕೀಯ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರಮುಖರು, ಗ್ರಾಮೀಣ ಭಾಗದ ಹಿರಿಯರು, ಯುವಕರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!