ಈ ವರ್ಷದ ಬಜೆಟ್ ನಲ್ಲಿ ಕೊಪ್ಪಳದ ನಿರೀಕ್ಷೆಗಳು ಈಡೇರಲಿ- CV ಚಂದ್ರಶೇಖರ್

0

Get real time updates directly on you device, subscribe now.

ಕೊಪ್ಪಳ ಜಿಲ್ಲಾ ಕೇಂದ್ರವಾಗಿ 25 ವರ್ಷಗಳು ಸಂದಿವೆ. ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲಾ ರಂಗಗಳಲ್ಲಿ ಅಭಿವೃದ್ಧಿ ಶೂನ್ಯ. ಪ್ರತಿ ವರ್ಷ ಬಜೆಟ್ ನಲ್ಲಿ ನಾಮಕಾವಾಸ್ತೆ ಅನುದಾನ ನೀಡುವ ಪರಂಪರೆ ಬೆಳೆದು ಬಂದಿದೆ. ಇದು ಕೊನೆಯಾಗಬೇಕು.

Karnataka Budget Expectations…

ಪಕ್ಕದ ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ ಸುನಾಮಿಯಂತೆ ಹರಿಯುವ ಅನುದಾನ ಕೊಪ್ಪಳಕ್ಕೆ ಸಣ್ಣ ತೊರೆಯಂತೆ ಹರಿಯುತ್ತದೆ. ಈ ತಾರತಮ್ಯ ಏಕೆ? ಸ್ಥಳೀಯ ನಾಯಕತ್ವ ಕ್ರಿಯಾಶೀಲವಾಗಿದ್ದಾಗ ಮಾತ್ರ ಸರಕಾರಗಳಿಂದ ಹೆಚ್ಚಿನ ಅನುದಾನ ನಿರೀಕ್ಷಿಸಬಹುದು.

ಕಳೆದ ವರ್ಷ ಘೋಷಣೆಯಾದ ಅನುದಾನ ಎಷ್ಟು? ಬಿಡುಗಡೆಯಾದ ಅನುದಾನ ಎಷ್ಟು? ಉಳಿದ ಅನುದಾನ ಎಷ್ಟು? ಬಳಕೆಯಾದ ಅನುದಾನ ಯಾವ ರೀತಿ ಇತ್ತು? ಈ ಪ್ರಶ್ನೆಗಳಿಗೆ ಉತ್ತರವೇ ಇಲ್ಲ.

ಮಾರ್ಚ್ 6 ರಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಮಂಡಿಸಲಿರುವ ಬಜೆಟ್ ನಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಈ ಕೆಳಗಿನ ಆಶಯಗಳನ್ನು ಈಡೇರಿಸಲಿ:

ಕೊಪ್ಪಳ ವಿಧಾನಸಭಾ ಕ್ಷೇತ್ರದ ಮೂಲಭೂತ ಸೌಕರ್ಯಗಳು ಸಂಪೂರ್ಣವಾಗಿ ಹದಗೆಟ್ಟಿವೆ. ರಸ್ತೆಗಳು ಮಾಯವಾಗಿವೆ ಇಲ್ಲವೇ ಗುಂಡಿಗಳಿಂದ ತುಂಬಿವೆ. ಮೂಲಭೂತ ಸೌಕರ್ಯಗಳನ್ನು ಕನಿಷ್ಠ ಮಟ್ಟಕ್ಕೆ ಏರಿಸಬೇಕಾದ ಅಗತ್ಯವಿದೆ. ಇದಕ್ಕೆ ವಿಶೇಷ ಅನುದಾನ ಮೀಸಲಿಡಬೇಕು.

ಆರಂಭವಾಗಿ ಐದು ವರ್ಷಗಳಾಗುತ್ತಾ ಬಂದರೂ , ಕೊಪ್ಪಳ ವಿಶ್ವವಿದ್ಯಾಲಯ ಇನ್ನು ಐಸಿಯು ನಲ್ಲಿಯೇ ಇದೆ. ಸ್ವಂತ ಕಟ್ಟಡ, ವಿವಿಧ ವಿಭಾಗಗಳ ರಚನೆ, ಪೂರ್ಣಾವಧಿ ಪ್ರಾಧ್ಯಾಪಕರ ನೇಮಕ ಹಾಗೂ ಶೈಕ್ಷಣಿಕ ಮತ್ತು ಸಂಶೋಧನಾ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು. ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಮೀಸಲಿಡುವ ಮೂಲಕ ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಬಲ ತುಂಬಬೇಕು. ಇದು ಆಗದೇ ಇದ್ದರೆ ವಿಶ್ವವಿದ್ಯಾಲಯವನ್ನು ಮುಚ್ಚಬೇಕು.

ಕೊಪ್ಪಳಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬುದು ದಶಕಗಳ ಕೂಗು. ಕಳೆದ ಒಂದು ದಶಕದಲ್ಲಿ ಕೊಪ್ಪಳದ ಜನಸಂಖ್ಯೆ ಹೆಚ್ಚಾಗಿದೆ. ಆಸ್ಪತ್ರೆಗಳ ಸಂಖ್ಯೆಯು ಹೆಚ್ಚಾಗಿದೆ. ವಿರಳ ಮತ್ತು ಸಂಕೀರ್ಣ ರೋಗಗಳಿಗೆ ಚಿಕಿತ್ಸೆ ನೀಡುವ ಸೌಲಭ್ಯ ಇನ್ನೂ ಮರೀಚಿಕೆಯಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಯಾದರೆ ಮಾತ್ರ ಆರೋಗ್ಯ ಕ್ಷೇತ್ರಕ್ಕೆ ನವ ಮನ್ವಂತರ ಬರುತ್ತದೆ. ಆದ್ದರಿಂದ ಈ ಬೇಡಿಕೆಯನ್ನು ಈ ಬಜೆಟ್ ನಲ್ಲಿ ಈಡೇರಿಸಲೇಬೇಕು. ಮುಖ್ಯಮಂತ್ರಿ ಅವರು ಈ ಕುರಿತು ಘೋಷಣೆ ಮಾಡಿದ್ದಾರೆ. ಈ ಯೋಜನೆಗೆ ಅನುದಾನ ಕೊಟ್ಟು ಅದು ಅನುಷ್ಠಾನವಾಗುವಂತೆ ಕ್ರಮ ಕೈಗೊಳ್ಳಬೇಕು.

ರಾಜ್ಯ ಸರಕಾರ ಕೊಪ್ಪಳದ ನೀರಾವರಿ ಬೇಡಿಕೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಕೃಷ್ಣಾ ಮೇಲ್ದಂಡೆ ಅಥವಾ ತುಂಗಭದ್ರ ಜಲಾನಯನ ಪಾತ್ರ ಹಾಗೂ ಕೆರೆ ತುಂಬಿಸುವ ಯೋಜನೆಗಳನ್ನು ಬೃಹತ್ ಪ್ರಮಾಣದಲ್ಲಿ ಕೈಗೊಳ್ಳುವುದರಿಂದ ಈ ನಾಡು ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಈ ಯೋಜನೆಗಳಿಗಾಗಿಯೇ ವಿಶೇಷ ಅನುದಾನವನ್ನು ಮೀಸಲಿಡಬೇಕು.
ಕೊಪ್ಪಳ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಚರಂಡಿ ನೀರು ಹರಿಯಲು ಮತ್ತು ಸಂಗ್ರಹವಾಗಲು ವಿಶೇಷ ಯೋಜನೆ ರೂಪಿಸಬೇಕು. ಅಲ್ಲಿ ನೀರನ್ನು ಶುದ್ಧೀಕರಿಸಿದ ನಂತರ ಅದನ್ನು ಹಿರೇ ಹಳ್ಳಕ್ಕೆ ಬಿಡುವ ವ್ಯವಸ್ಥೆಯಾಗಬೇಕು. ಇದನ್ನು ವಿಶೇಷ ಯೋಜನೆ ಎಂದು ಪರಿಗಣಿಸಿ, ಸಮರೋಪಾದಿಯಲ್ಲಿ ಕೈಗೊಳ್ಳಲು ಹೆಚ್ಚಿನ ಅನುದಾನ ಮೀಸಲಿಡಬೇಕು.

ಕೊಪ್ಪಳದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ. ಖಾಲಿ ಇರುವ ಹುದ್ದೆಗಳನ್ನು ಹಾಗೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಮೀಸಲಿರುವ ಹುದ್ದೆಗಳನ್ನು ಈ ಕ್ಷಣಕ್ಕೆ ತುಂಬಬೇಕು. ಈ ಭಾಗದಲ್ಲಿ ಕೌಶಲ್ಯ ತರಬೇತಿ ಕೇಂದ್ರ ಸ್ಥಾಪನೆಯಾಗಬೇಕು. ಖಾಸಗಿ ಕೈಗಾರಿಕಾ ಘಟಕಗಳಲ್ಲಿ ಅರ್ಹ ಯುವಕರಿಗೆ ಉದ್ಯೋಗ ಸಿಗುವ ವಿಶೇಷ ಯೋಜನೆಯನ್ನು ಜಾರಿಗೊಳಿಸಬೇಕು. ಹೆಚ್ಚಿನ ಅನುದಾನ ನೀಡಿ ಇದನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು.

ರಾಜ್ಯದ ಎಲ್ಲಾ ಭಾಗಗಳಿಗೆ ವಿಮಾನ ನಿಲ್ದಾಣ ಸೌಕರ್ಯ ಸಿಕ್ಕಿದೆ. ಈ ವಿಷಯದಲ್ಲಿ ರಾಜ್ಯ ಸರಕಾರ ಕೊಪ್ಪಳಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ವಿಮಾನ ನಿಲ್ದಾಣ ಸ್ಥಾಪನೆಯ ವಿಷಯದಲ್ಲಿ ಆರಂಭಿಕ ಹಂತದ ಅನುದಾನವನ್ನು ಬಿಡುಗಡೆ ಮಾಡಿ ಯೋಜನೆಗೆ ಚಾಲನೆ ನೀಡಬೇಕು.

ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಎಸ್ಐ ಆಸ್ಪತ್ರೆಯನ್ನು ಪ್ರತ್ಯೇಕಿಸಿ ಹೆಚ್ಚಿನ ಅನುದಾನ ನೀಡಿ ಶೀಘ್ರದಲ್ಲಿಯೇ ಸ್ವತಂತ್ರವಾಗಿ ಕಾರ್ಯ ಆರಂಭ ಮಾಡುವಂತೆ ನೋಡಿಕೊಳ್ಳಬೇಕು.

ಬೆಂಗಳೂರಿನಲ್ಲಿರುವ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಸ್ವತಂತ್ರ ಘಟಕವನ್ನು ಕೊಪ್ಪಳ ಜಿಲ್ಲೆಗೆ ಘೋಷಿಸಿ ಅದು ಜಿಲ್ಲಾ ಕೇಂದ್ರದಲ್ಲಿ ಕಾರ್ಯ ಆರಂಭವಾಗುವಂತೆ ಯೋಜನೆ ರೂಪಿಸಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು.

ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಬೃಹತ್ ಮತ್ತು ಸುಸಜ್ಜಿತ ಶೀತಲೀಕರಣ ಘಟಕ ಸ್ಥಾಪನೆಯಾಗಬೇಕು. ಇದರಿಂದ ತೋಟಗಾರಿಕಾ ಕೃಷಿಯಲ್ಲಿ ನಿರತರಾಗಿರುವ ರೈತರಿಗೆ ಅನುಕೂಲವಾಗುತ್ತದೆ.

ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ನಿರ್ವಹಣೆಗೊಳ್ಳುತ್ತಿರುವ ಬಹುತೇಕ ಕಟ್ಟಡಗಳು ಶಿಥಿಲಗೊಂಡಿವೆ. ಅವುಗಳ ಜೀರ್ಣೋದ್ಧಾರಕ್ಕೆ ಹೆಚ್ಚಿನ ಅನುದಾನ ಬಿಡುಗಡೆಯಾಗಬೇಕು.

ಕೊಪ್ಪಳದಲ್ಲಿರುವ ವಿಜ್ಞಾನ ಉಪ ಕೇಂದ್ರ ಆರಂಭಗೊಂಡರೂ ಸಶಕ್ತಗೊಂಡಿಲ್ಲ. ಅಲ್ಲಿ ಹೆಚ್ಚಿನ ಮಾದರಿಗಳು ಮತ್ತು ಚಟುವಟಿಕೆಗಳು ನಡೆಯಲು ಹೆಚ್ಚಿನ ಅನುದಾನ ಮೀಸಲಿಡಬೇಕು.

ಮಹಿಳಾ ಸಬಲೀಕರಣಕ್ಕೆ ಮತ್ತು ಯುವ ಜನಾಂಗದ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ಘೋಷಿಸಿ ಆ ಯೋಜನೆಗಳಲ್ಲಿ ಕೊಪ್ಪಳಕ್ಕೆ ಹೆಚ್ಚಿನ ಮಹತ್ವ ನೀಡಬೇಕು.

ಕಳೆದ ಎರಡು ದಶಕಗಳಿಂದ ಕೊಪ್ಪಳದ ಪರಿಸರಕ್ಕೆ ಹಾನಿ ಮಾಡಿರುವ ಕೈಗಾರಿಕೆಗಳ ಒಟ್ಟಾರೆ ಪರಸ್ಥಿತಿಯನ್ನು ಅಧ್ಯಯನ ಮಾಡಲು ಉನ್ನತಮಟ್ಟದ ಸಮಿತಿ ರಚಿಸಿ ಅನುದಾನ ಮೀಸಲಿಡಬೇಕು. ಪರಿಸರಕ್ಕೆ ಆಗಿರುವ ಹಾನಿ ತಡೆಯಲು ವಿಶೇಷ ಯೋಜನೆ ರೂಪಿಸಿ ವಿಶೇಷ ಅನುದಾನ ಮೀಸಲಿಡಬೇಕು. -ಸಿ ವಿ ಚಂದ್ರಶೇಖರ್

(ಲೇಖಕರು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯರು, ಕೊಪ್ಪಳ ವಿಧಾನಸಭಾ ಕ್ಷೇತ್ರ)

Get real time updates directly on you device, subscribe now.

Leave A Reply

Your email address will not be published.

error: Content is protected !!